ಭರ್ಜರಿ. ಧ್ರುವ ಸರ್ಜಾ ಅವರಿಗೆ ಹ್ಯಾಟ್ರಿಕ್ ಹಿಟ್ ಕೊಟ್ಟ ಸಿನಿಮಾ. 100 ದಿನ ಪೂರೈಸಿರುವ ಚಿತ್ರದ ಕಲಾವಿರದರು, ತಂತ್ರಜ್ಞರು ಸಿನಿಮಾ ಹಿಟ್ ಆದ ಖುಷಿಯಲ್ಲಿದ್ದರೂ, ಆ ಸಂಭ್ರಮ ಅವರ ಮುಖದಲ್ಲಿಲ್ಲ. ಕಾರಣ, ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ್. ನಿರ್ಮಾಪಕರು ಈ ಚಿತ್ರತಂಡದ ಕಲಾವಿದರು, ತಂತ್ರಜ್ಞರಿಗೂ ಸರಿಯಾಗಿ ಸಂಭಾವನೆ ಕೊಟ್ಟಿಲ್ಲ.
ಈ ಚಿತ್ರತಂಡದ ಕಲಾವಿದರು, ತಂತ್ರಜ್ಞರಿಗೂ ಅನ್ನೋಕೆ ಕಾರಣವೂ ಇದೆ. ಇದೇ ಕನಕಪುರ ಶ್ರೀನಿವಾಸ್, ದನಕಾಯೋನು ಚಿತ್ರಕ್ಕೂ ನಿರ್ಮಾಪಕರಾಗಿದ್ದವರು. ಆ ಚಿತ್ರವೂ ಹಿಟ್ ಆಗಿತ್ತು. ಆ ಚಿತ್ರದ ನಿರ್ದೇಶಕ, ತಂತ್ರಜ್ಞರಿಗೂ ಶ್ರೀನಿವಾಸ್ ಸಂಭಾವನೆ ಕೊಟ್ಟಿರಲಿಲ್ಲ. ಭರ್ಜರಿ ಚಿತ್ರದ ಬಿಡುಗಡೆ ವೇಳೆ ಕೋರ್ಟ್ ಮೆಟ್ಟಿಲೇರುವ ಸೂಚನೆ ನಿಡಿದ್ದ ನಿರ್ದೇಶಕ ಯೋಗರಾಜ್ ಭಟ್, ಭರ್ಜರಿ ಸಿನಿಮಾ ಬಿಡುಗಡೆಗೆ ತೊಡಕಾಗದಿರಲಿ ಎಂದು ಸುಮ್ಮನಾಗಿದ್ದರು. ಶ್ರೀನಿವಾಸ್ ಕೂಡಾ ಮತ್ತೊಮ್ಮೆ ಸಂಭಾವನೆ ಕೊಡುವ ಭರವಸೆ ಕೊಟ್ಟಿದ್ದರು. ಆದರೆ ಆ ಭರವಸೆ ಮತ್ತೊಮ್ಮೆ ಸುಳ್ಳಾಗಿತ್ತು. ಯೋಗರಾಜ್ ಭಟ್ಟರಿಗೆ ಕೊಟ್ಟಿದ್ದ ಚೆಕ್ಕು, ಮತ್ತೊಮ್ಮೆ ಬೌನ್ಸ್ ಆಗಿತ್ತು. ಹೀಗಾಗಿ ಯೋಗರಾಜ್ ಭಟ್, ಕೋರ್ಟ್ ಮೆಟ್ಟಿಲೇರಿದ್ದಾರೆ.
ಈಗ ಮತ್ತೊಮ್ಮೆ ಅದೇ ನಿರ್ಮಾಪಕರ ವಿರುದ್ಧ ಭರ್ಜರಿ ಚಿತ್ರತಂಡದ ಕಲಾವಿದರು ತಂತ್ರಜ್ಞರಿಂದಲೂ ಆರೋಪ ಕೇಳಿಬಂದಿದೆ. ಸ್ವತಃ ಧ್ರುವ ಸರ್ಜಾ ಇದನ್ನು ಒಪ್ಪಿಕೊಂಡಿದ್ದಾರೆ. ನಾವೇನೋ ರಾಜಿಗೆ ಬರಬಹುದು. ಸುಮ್ಮನಾಗಬಹುದು. ಆದರೆ, ನಿರ್ಮಾಪಕರೂ ಇದನ್ನು ಅರ್ಥ ಮಾಡಿಕೊಳ್ಳಬೇಕು. ಸಿನಿಮಾಗೆ ಕೆಲಸ ಮಾಡಿದವರಿಗೆ ಕೊಡಬೇಕಾದ ಸಂಭಾವನೆ ಕೊಡುವುದು ಮುಖ್ಯ ಎಂದಿದ್ದಾರೆ ಧ್ರುವ ಸರ್ಜಾ.
ಹೀಗಾಗಿ ಸಿನಿಮಾ ಶತದಿನೋತ್ಸವ ಆಚರಿಸಿದ್ದರೂ ಅದನ್ನು ಸಂಭ್ರಮಿಸುವ ಸ್ಥಿತಿಯಲ್ಲಿ ಚಿತ್ರತಂಡ ಇಲ್ಲ. ಕನಕಪುರ ಶ್ರೀನಿವಾಸ್ ಹೀಗೇಕೆ ಮಾಡ್ತಾರೋ ಅರ್ಥವಾಗಲ್ಲ.