` dhruva sarja, - chitraloka.com | Kannada Movie News, Reviews | Image

dhruva sarja,

  • ಧ್ರುವಾರ್ಜುನ ಪ್ರೇಮ್ ಸಂಗಮ

    ಧ್ರುವಾರ್ಜುನ ಪ್ರೇಮ್ ಸಂಗಮ

    ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೊಸ ಚಿತ್ರವನ್ನು ಜೋಗಿ ಪ್ರೇಮ್ ಡೈರೆಕ್ಟ್ ಮಾಡುತ್ತಿದ್ದಾರೆ. ಆ ಚಿತ್ರ ಸೆಟ್ಟೇರಿದ್ದು, ಚಿತ್ರದ ಒಂದೊಂದೇ ವಿಷಯವನ್ನು ಹಂತ ಹಂತವಾಗಿ ಹೊರ ಬಿಡುತ್ತಿದ್ದಾರೆ ಪ್ರೇಮ್. ಆ ತಂಡಕ್ಕೀಗ ಅರ್ಜುನ್ ಜನ್ಯಾ ಸೇರಿಕೊಂಡಿದ್ದಾರೆ.

    ಪ್ರೇಮ್ ಮತ್ತು ಅರ್ಜುನ್ ಜನ್ಯಾ ಕಾಂಬಿನೇಷನ್ನಿನ 3ನೇ ಸಿನಿಮಾ ಇದು. ಈ ಮೊದಲು ಇದೇ ಜೋಡಿ ದಿ ವಿಲನ್ ಮತ್ತು ಏಕ್ ಲವ್ ಯಾದಲ್ಲಿ ಮೋಡಿಯನ್ನೇ ಸೃಷ್ಟಿಸಿತ್ತು. ಎರಡೂ ಚಿತ್ರಗಳ ಎಲ್ಲ ಹಾಡುಗಳೂ ಸೂಪರ್ ಹಿಟ್ ಆಗಿದ್ದವು. ಈಗ ಮತ್ತೊಮ್ಮೆ ಈ ಜೋಡಿ ಒಂದಾಗಿದೆ. ಅರ್ಜುನ್ ಜನ್ಯಾ ಹುಟ್ಟುಹಬ್ಬದ ದಿನವೇ ಪ್ರೇಮ್ ಈ ಸುದ್ದಿ ಘೋಷಿಸಿದ್ದಾರೆ. ಹೊಸ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಪಕರು.

  • ನ.೨೪ಕ್ಕೆ ಧ್ರುವ ಕಲ್ಯಾಣ

    dhruva sarja tp wed prerna on nov 24th

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮದುವೆ ಮುಹೂರ್ತ ಫಿಕ್ಸ್ ಆಗಿದೆ. ಪೊಗರು ರಿಲೀಸ್ ಆಗುವ ಹೊತ್ತಿಗೆ ಧ್ರುವ ಸರ್ಜಾ ಫುಲ್ ಶರ್ಟ್ ಆಗಿರುತ್ತಾರೆ. ಹಾಫ್ ಶರ್ಟ್ ಆಗಿ ಪ್ರೇರಣಾ ಬಂದಿರುತ್ತಾರೆ. ನವೆಂಬರ್ ೨೪ಕ್ಕೆ ಧ್ರುವ ಸರ್ಜಾ, ಪ್ರೇರಣಾ ಮದುವೆ ಫಿಕ್ಸ್.

    ನವೆಂಬರ್ ೨೪ರ ಭಾನುವಾರ ಬೆಳಗ್ಗೆ ೭ ಗಂಟೆ ೧೫ನೇ ನಿಮಿಷದಿಂದ ೭ ಗಂಟೆ ೪೫ ನಿಮಿಷದವರೆಗೆ ಮುಹೂರ್ತ. ವೃಶ್ಚಿಕ ಲಗ್ನದಲ್ಲಿ ವಿವಾಹ ಮಹೋತ್ಸವ ನಡೆಯಲಿದೆ.

    ಜೆಪಿ ನಗರದ ೭ನೇ ಹಂತದಲ್ಲಿರುವ ಸಂಸ್ಕೃತಿ ಬೃಂದಾವನ ಕನ್ವೆನ್ಷನ್ ಹಾಲ್‌ನಲ್ಲಿ ವಿವಾಹ ಮಹೋತ್ಸವ ಸಮಾರಂಭ. ಅದೇ ದಿನ ಸಂಜೆ ೭.೩೦ರಿಂದ ಆರತಕ್ಷತೆ. ಹೋಗಿ.. ಹರಸಿ.. ಆಶೀರ್ವದಿಸಿ..

  • ನಾಯಿ, ನರಿ, ಕ್ರಿಮಿ, ಕೀಟ ಹೇಳಿದ್ದಕ್ಕೆಲ್ಲ ಡೋಂಟ್‍ಕೇರ್ - ಚೇತನ್‍ಗೆ ಧ್ರುವ ಚಾಲೆಂಜ್

    Dhruva Sarja, Chethan Image

    ಅರ್ಜುನ್ ಸರ್ಜಾ ವಿರುದ್ಧ ಕೇಳಿ ಬಂದಿರೋ ಆರೋಪಗಳಿಗೆ ಆರಂಭದ ದಿನದಿಂದಲೂ ಕೆಂಡಾಮಂಡಲವಾಗಿರುವ ನಟ ಧ್ರುವ ಸರ್ಜಾ, ಶೃತಿ ಹರಿಹರನ್ ಬೆಂಬಲಕ್ಕೆ ನಿಂತಿರುವ ಚೇತನ್‍ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಾಯಿ, ನರಿ, ಕ್ರಿಮಿ, ಕೀಟ ಹೇಳಿದ್ದಕ್ಕೆಲ್ಲ ಡೋಂಟ್‍ಕೇರ್. ನನ್ನ ಮಾವ ಏನು ಅನ್ನೋದು ನನಗೆ ಗೊತ್ತು ಎಂದಿದ್ದಾರೆ ಧ್ರುವ ಸರ್ಜಾ.

    ಹಾಗಾದರೆ, ನಾವು ನಾಯಿ, ನರಿ, ಕ್ರಿಮಿ, ಕೀಟಗಳಾ ಎಂದು ಪ್ರಶ್ನೆ ಹಾಕಿದ್ದಾರೆ ಚೇತನ್. ಅಲ್ಲದೆ ಏನು..? ನಿಮ್ಮ ಬಳಿ ಸತ್ಯ ಇದ್ದರೆ, ಸಾಕ್ಷಿ ಇದ್ದರೆ, ಈ ರೀತಿ ಪಬ್ಲಿಸಿಟಿ ಮಾಡ್ಕೊಂಡು ಇರುತ್ತಿರಲಿಲ್ಲ. ನಿಮ್ಮ ಹಿಂದೆ ಯಾರ್ಯಾರೆಲ್ಲ ಇದ್ದಾರೆ ಎನ್ನುವುದು ನನಗೆ ಗೊತ್ತು ಎಂದಿದ್ದಾರೆ ಧ್ರುವ ಸರ್ಜಾ.

    ಕಾನೂನಿನ ವ್ಯಾಪ್ತಿ ಮೀರಿ ಮಾತನಾಡುತ್ತಿದ್ದೀರಿ ಎಂಬ ಚೇತನ್ ಮಾತಿಗೆ, ನಿಮ್ಮ ಬಗ್ಗೆ ಮಾತ್ರ ಕಾನೂನು ರೀತಿ ನೋಡಬೇಕು ಎನ್ನುವವರು  ಬೇರೆಯವರ ಬಗ್ಗೆಯೂ ಕಾನೂನಿನ ರೀತಿಯಲ್ಲೇ ನೋಡಬೇಕಿತ್ತಲ್ವಾ..? ಈಗ ನಿಮ್ಮ ವಿರುದ್ಧ ಯಾರೋ ಒಬ್ಬ ಮಹಿಳೆ ಆರೋಪ ಮಾಡಿದ್ರೆ, ನೀವು ನಂಬ್ತೀರಾ.. ಎನ್ನುವುದು ಧ್ರುವ ಸರ್ಜಾ ಪ್ರಶ್ನೆ.

    ನಿಮ್ಮ ಫೈರ್ ಸಂಘಟನೆಗೆ ಶೃತಿ ಹರಿಹರನ್ 8 ತಿಂಗಳ ಹಿಂದೆಯೇ ಸದಸ್ಯೆಯಾಗಿದ್ದಾರೆ. ಹಾಗಿದ್ದರೆ 8 ತಿಂಗಳಿಂದ ಏನ್ ಮಾಡ್ತಾ ಇದ್ರಿ..? ನಿಮ್ಮ ಸಂಸ್ಥೆ ಕೂಡಾ ಕಾನೂನಿನ ಅಡಿಯಲ್ಲೇ ಬರುತ್ತೆ. ಆ ಸಂಸ್ಥೆಯಲ್ಲಿ ಹೆಣ್ಣು ಮಕ್ಕಳಿದ್ದಾರೆ. ಆ ಕಾರಣಕ್ಕಾಗಿ ಗೌರವ ನೀಡುತ್ತಿದ್ದೇನೆ. ಇಲ್ಲದೆ ಇರುವ ವಿವಾದ ಸೃಷ್ಟಿ ಮಾಡುತ್ತಿದ್ದೀರಿ ಎನ್ನುವುದು ಇಡೀ ಕರ್ನಾಟಕಕ್ಕೇ ಗೊತ್ತಿದೆ ಎಂದಿದ್ದಾರೆ ಧ್ರುವ ಸರ್ಜಾ.

    ಸಾ.ರಾ.ಗೋವಿಂದು ಕುರಿತು ಚೇತನ್ ಮಾಡಿರುವ ಟೀಕೆಗೆ, ಅವರ ವಿರುದ್ಧ ಟೀಕೆ ನಿನಗ್ಯಾವ ಅರ್ಹತೆ ಇದೆ ಎಂದು ಕೆಂಡಕಾರಿದ್ದಾರೆ ಧ್ರುವ ಸರ್ಜಾ.

  • ನಾಳೆ ಹಸಿರು ಚಪ್ಪರದಲ್ಲಿ ಧ್ರುವ ಸರ್ಜಾ ಎಂಗೇಜ್‍ಮೆಂಟ್

    praparations for dhruva's engagement begins

    ಸಪ್ತಪದಿ ತುಳಿದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಧ್ರುವ ಸರ್ಜಾ, ನಾಳೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ. ಬಾಲ್ಯದ ಗೆಳತಿ ಪ್ರೇರಣಾ ಅವರೊಂದಿಗೆ ಎಂಗೇಜ್‍ಮೆಂಟ್ ಮಾಡಿಕೊಳ್ಳಲಿದ್ದಾರೆ. ಪುಣ್ಯಕ್ಷೇತ್ರ ಶ್ರೀ ಧರ್ಮಗಿರಿ ದೇವಾಲಯದಲ್ಲಿ ಬೆಳಗ್ಗೆ 10 ಗಂಟೆಗೆ ಎಂಗೇಜ್‍ಮೆಂಟ್.

    ವಿಶೇಷವೆಂದರೆ ಪಕ್ಕಾ ಸಂಪ್ರದಾಯಸ್ಥ ಹುಡುಗನಾಗಿರುವ ಧ್ರುವ, ಮದುವೆಯ ಎಂಗೇಜ್‍ಮೆಂಟ್‍ನ್ನು ಹಸಿರು ಚಪ್ಪರದಲ್ಲಿಯೇ ಮಾಡಿಕೊಳ್ಳಲಿದ್ದಾರೆ. ಮದುವೆ ಚಪ್ಪರ ಹಾಕಿಸುತ್ತಿರುವುದು ಕಲಾ ನಿರ್ದೇಶಕ ಅರುಣ್ ಸಾಗರ್. ಚಿತ್ರರಂಗದ ಸ್ಟಾರ್‍ಗಳೆಲ್ಲ ಈ ನಿಶ್ಚಿತಾರ್ಥಕ್ಕೆ ಆಗಮಿಸಿ ನೂತನ ವಧು-ವರರಿಗೆ ಶುಭ ಹಾರೈಸಲಿದ್ದಾರೆ.

  • ಪುಟಾಣಿಗಳಿದ್ದಾಗ ಧ್ರುವ ಪ್ರೇರಣಾ ಬಣ್ಣದ ಹೋಳಿ.. ಈಗ ಪ್ರೇಮದ ಹೋಳಿ

    dhruva sarja remembers his childhood memories with his lad love

    ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್ ಪ್ರೀತಿ, ನಿಶ್ಚಿತಾರ್ಥದ ಹಂತಕ್ಕೆ ಬಂದು ನಿಂತಿದೆ. ಟೀಚರ್ ಪ್ರೀತಿಯ ಬಲೆಯಲ್ಲಿ ಬಿದ್ದಿರುವ ಧ್ರುವ ಸರ್ಜಾ ಮತ್ತು ಆ್ಯಕ್ಟರ್ ಪ್ರೀತಿಗೆ ಮರುಳಾದ ಪ್ರೇರಣಾ.. ಇಬ್ಬರು ಬಾಲ್ಯ ಸ್ನೇಹಿತರು. ಒಟ್ಟಿಗೇ ಆಡುತ್ತಾ ಬೆಳೆದವರು. ಅದಕ್ಕೆ ಒಂದು ಪುಟ್ಟ ಸಾಕ್ಷಿಯನ್ನು ಸ್ವತಃ ಧ್ರುವ ಅವರೇ ಬಹಿರಂಗಪಡಿಸಿದ್ದಾರೆ.

    ವಿಡಿಯೋ ಒಂದನ್ನು ತಮ್ಮ ಪೇಜ್‍ನಲ್ಲಿ ಹಾಕಿದ್ದಾರೆ ಧ್ರುವ. ಆ ವಿಡಿಯೋದಲ್ಲಿ ಮುಖಕ್ಕೆ ನೇರಳೆ ಬಣ್ಣ ಹಚ್ಚಿಕೊಂಡು ನಗುತ್ತಿರುವ ಹುಡುಗ, ಹುಡುಗಿಯೇ ಧ್ರುವ ಮತ್ತು ಪ್ರೇರಣಾ. ನಿಶ್ಚಿತಾರ್ಥದ ಉಂಗುರವನ್ನೂ ಖರೀದಿಸಿರುವ ಜೋಡಿ ಮದುವೆಗೆ ರೆಡಿಯಾಗುತ್ತಿದೆ. ಅಂದಹಾಗೆ ಇದು 1997ನೇ ಇಸವಿಯ ಮಾರ್ಚ್ 24ರಂದು ತೆಗೆದಿದ್ದ ಫೋಟೋ ಅಂತೆ.

  • ಪೊಗರಿಗೆ 13 ಕತ್ತರಿ, ಡೈಲಾಗ್ಸ್ ಮ್ಯೂಟ್

    ಪೊಗರಿಗೆ 13 ಕತ್ತರಿ, ಡೈಲಾಗ್ಸ್ ಮ್ಯೂಟ್

    ಬ್ರಾಹ್ಮಣ ಸಮುದಾಯ ಮತ್ತು ಸಂಘಟನೆಗಳ ಒತ್ತಾಯಕ್ಕೆ ಪೊಗರು ಚಿತ್ರ ತಂಡ ಮಣಿದಿದೆ. ಚಿತ್ರದ ನಿರ್ದೇಶಕ ನಂದಕಿಶೋರ್ ಕ್ಷಮೆಯಾಚನೆಗೂ ಬಗ್ಗದ ಬ್ರಾಹ್ಮಣ ಸಂಘಟನೆಗಳು ಚಿತ್ರದಲ್ಲಿ 13 ದೃಶ್ಯಗಳಿಗೆ ಕತ್ತರಿ ಹಾಕಲು ಆಗ್ರಹಿಸಿದ್ದಾರೆ.

    ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಕಚೇರಿಗೇ ಹೋಗಿ ನಂದಕಿಶೋರ್ ಕ್ಷಮೆ ಕೇಳಿದರೂ ಬ್ರಾಹ್ಮಣ ಸಮುದಾಯದವರ ಆಕ್ರೋಶ ಕಡಿಮೆಯಾಗಿರಲಿಲ್ಲ. ತಾರ್ಕಿಕ ಅಂತ್ಯ ಕಾಣಿಸುವ ಸಲುವಾಗಿ ಫಿಲಂ ಚೇಂಬರ್‍ನಲ್ಲಿ ದೊಡ್ಡ ಸಭೆಯೇ ನಡೆಯಿತು. ಮಂತ್ರಾಲಯ ಮಠದ ಸುಭುದೇಂದ್ರ ತೀರ್ಥ ಸ್ವಾಮೀಜಿ, ಪೆಜಾವರ ಮಠದ ವಿಶ್ವ ಪ್ರಸನ್ನ ತೀರ್ಥರು, ರಾಘವೇಶ್ವರ ಭಾರತಿ ಸ್ವಾಮೀಜಿ... ಹೀಗೆ ದೊಡ್ಡ ದೊಡ್ಡವರೇ ಧ್ವನಿಯೆತ್ತಿದಾಗ ಪೊಗರು ಚಿತ್ರತಂಡವೇ ಹೆಜ್ಜೆ ಹಿಂದಿಟ್ಟಿತು.

    ಈಗ ಒಟ್ಟು 13 ಕಟ್‍ಗಳಿಗೆ ಚಿತ್ರತಂಡ ಒಪ್ಪಿದ್ದು, ಹೊಸದಾಗಿ ಸೆನ್ಸಾರ್ ಮಾಡಿಸಿ ಚಿತ್ರವನ್ನು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಅಷ್ಟೇ ಅಲ್ಲ, ಕೆಲವು ಸಂಭಾಷಣೆಗಳನ್ನು ಮ್ಯೂಟ್ ಮಾಡಲೂ ಚಿತ್ರತಂಡ ಒಪ್ಪಿದೆ.

  • ಪೊಗರು : ಮತ್ತೊಂದು ಪೋಸ್ಟರ್ ಬಂತು..

    pogaru new poster rleased

    ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ನಟಿಸುತ್ತಿರುವ, ಬಿ.ಕೆ.ಗಂಗಾಧರ್ ನಿರ್ಮಾಣದ ಪೊಗರು ಚಿತ್ರದ ಮತ್ತೊಂದು ಪೋಸ್ಟರ್ ರಿಲೀಸ್ ಆಗಿದೆ. ಖಳನೊಬ್ಬನ ಕುತ್ತಿಗೆ ಹಿಡಿದು ನಿಂತಿರುವ ಧ್ರುವ ಸರ್ಜಾ ಲುಕ್ಕಿಗೆ ಅಭಿಮಾನಿಗಳೇನೋ ಫುಲ್ ಫಿದಾ. ಆದರೆ, ಅವರದ್ದೆಲ್ಲ ಒಂದೇ ಪ್ರಶ್ನೆ. ಸಿನಿಮಾ ರಿಲೀಸ್ ಯಾವಾಗ ಸರ್ ಅನ್ನೋದು..

    ಏಕೆಂದರೆ, ಒನ್ಸ್ ಎಗೇಯ್ನ್ ಪೊಗರು ಚಿತ್ರ ಕೂಡಾ ಧ್ರುವ ಅವರ ಹಿಂದಿನ ಅದ್ಧೂರಿ, ಬಹದ್ದೂರ್, ಭರ್ಜರಿ ಚಿತ್ರಗಳಂತೆಯೇ ಎರಡು ವರ್ಷ ಪೂರೈಸುತ್ತಿದೆ. ನಂದಕಿಶೋರ್ ನಿರ್ದೇಶನದ ಪೊಗರು ಚಿತ್ರಕ್ಕೆ ಇನ್ನೂ ಹಲವು ದಿನಗಳ ಶೂಟಿಂಗ್ ಬಾಕಿಯಿದೆ. ಜೂನ್ 30ರಿಂದ ಮತ್ತೊಂದು ಹಂತದ ಶೂಟಿಂಗ್ ಹೈದರಾಬಾದ್‍ನಲ್ಲಿ ಶುರುವಾಗಲಿದೆ. 

  • ಪೊಗರು ಡಬ್ಬಿಂಗ್ ಶುರು

    pogaru image

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದ ಡಬ್ಬಿಂಗ್ ಕಾರ್ಯ ಶುರುವಾಗಿದೆ. ಸುಮಾರು 2 ವರ್ಷಗಳಿಂದ ಪ್ರೊಡಕ್ಷನ್ ಹಂತದಲ್ಲಿರೋ ಪೊಗರು, ಮಾರ್ಚನಲ್ಲಿ ಬರುವುದು ಪಕ್ಕಾ ಆಗಿದೆ. ಧ್ರುವ ಸರ್ಜಾ ಅಬ್ಬಾಯಿ ನಾಯ್ಡು ಸ್ಟುಡಿಯೋದಲ್ಲಿ ಡಬ್ಬಿಂಗ್ ಮಾಡುತ್ತಿದ್ದಾರೆ.

    ಐಟಿ ರೇಡ್‍ನಿಂದಾಗಿ ರಶ್ಮಿಕಾ ಮಂದಣ್ಣ ಡೇಟ್ಸ್ ಕ್ಲಾಶ್ ಆಗಿದ್ದು, ರಶ್ಮಿಕಾ ಡಬ್ಬಿಂಗ್ ನಿಧಾನವಾಗಿ ನಡೆಯಲಿದೆ. ನಂದಕಿಶೋರ್ ನಿರ್ದೇಶನದ ಚಿತ್ರಕ್ಕೆ ಬಿ.ಕೆ.ಗಂಗಾಧರ್ ನಿರ್ಮಾಪಕ. 

  • ಪೊಗರು ಡಿ.25ಕ್ಕಾ.. ಜನವರಿ 1ಕ್ಕಾ..

    pogaru to release on

    ಧ್ರುವ ಸರ್ಜಾ ಅಭಿನಯದ ಪೊಗರು ರಿಲೀಸ್ ಯಾವಾಗ..? ಚಿತ್ರತಂಡ ಎರಡು ಡೇಟ್ ಹೇಳುತ್ತಿದೆ. ಮೊದಲನೆಯದ್ದು ಡಿಸೆಂಬರ್ 25. ಇನ್ನೊಂದು ಜನವರಿ 1.

    ಸ್ಟಾರ್ ಸಿನಿಮಾ ರಿಲೀಸ್ ಆಗದೇ ಹೋದರೆ ಥಿಯೇಟರು ಭರ್ತಿಯಾಗಲ್ಲ. ಅದು ಮತ್ತೊಮ್ಮೆ ಸಾಬೀತಾಗಿದೆ. ಹೀಗಾಗಿ ಪೊಗರು ರಿಲೀಸ್ ಆಗಲಿ ಎನ್ನುವ ನಿರೀಕ್ಷೆಯೇನೋ ಇದೆ. ಇನ್ನು 20 ದಿನಗಳಲ್ಲಿ ಮೊದಲ ಪ್ರತಿ ಹೊರಬರಲಿದ್ದು, ರಿಲೀಸ್‍ಗೂ ಡೇಟ್ ಫಿಕ್ಸ್ ಮಾಡಿದೆ ಚಿತ್ರತಂಡ.

    ಎರಡು ಡೇಟ್ಸ್ ಹಿಂದೆ ಕಾರಣವೂ ಇದೆ. ಸದ್ಯಕ್ಕೆ ಥಿಯೇಟರಿನಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರವೇ ಅವಕಾಶವಿದೆ. ಸ್ಟಾರ್ ಸಿನಿಮಾಗಳಿಗೆ ಇದು ಸಾಕಾಗಲ್ಲ. ಆದರೆ ಜನವರಿ ಹೊತ್ತಿಗೆ ಪರಿಸ್ಥಿತಿ ಸುಧಾರಿಸಿ, ಶೇ.100ರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ಸಿಗಬಹುದು ಎಂಬ ನಿರೀಕ್ಷೆ ಚಿತ್ರತಂಡದ್ದು. ಆ ರೀತಿಯ ಸುಳಿವು ಸಿಕ್ಕರೆ ಜನವರಿ 1ಕ್ಕೆ ರಿಲೀಸ್.

    ಅಕಸ್ಮಾತ್.. ಯಾವುದೇ ಬದಲಾವಣೆ ಆಗಲ್ಲ ಎಂದು ಅನ್ನಿಸಿದ್ರೆ ಡಿ.25ಕ್ಕೇ ರಿಲೀಸ್ ಮಾಡೋ ಪ್ಲಾನ್ ಚಿತ್ರತಂಡದ್ದು. ಧ್ರುವ, ರಶ್ಮಿಕಾ ಮಂದಣ್ಣ ಪ್ರಧಾನ ಪಾತ್ರದಲ್ಲಿರೋ ಚಿತ್ರಕ್ಕೆ ನಂದಕಿಶೋರ್ ಡೈರೆಕ್ಟರ್. ರಾಘವೇಂದ್ರ ರಾಜ್‍ಕುಮಾರ್, ಧನಂಜಯ್, ರವಿಶಂಕರ್, ಮಯೂರಿ ಕೂಡಾ ನಟಿಸಿರುವ ಚಿತ್ರಕ್ಕೆ ಬಿ.ಕೆ.ಗಂಗಾಧರ್ ನಿರ್ಮಾಪಕ.

  • ಪೊಗರು ನಿಂತಿಲ್ಲ.. ಚಿತ್ರ ರೀಮೇಕ್ ಅಲ್ಲ

    pogaru doubts cleared

    ಪೊಗರು. ಧ್ರುವ ಸರ್ಜಾ ಅಭಿನಯದ ಸಿನಿಮಾ. ಚಿತ್ರದ ಕುರಿತು ಎದ್ದಿರುವ ಹಲವಾರು ಸುದ್ದಿಗಳಿಗೆ, ಅನುಮಾನಗಳಿಗೆ ನಿರ್ಮಾಪಕ ಬಿ.ಕೆ. ಗಂಗಾಧರ್ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಚಿತ್ರದ ಕಥೆ, ಶೂಟಿಂಗ್ ಕುರಿತು ಎದ್ದಿರುವ ಎಲ್ಲ ಅನುಮಾನಗಳಿಗೂ ಫುಲ್‍ಸ್ಟಾಪ್ ಇಟ್ಟಿದ್ದಾರೆ.

    ಚಿತ್ರದ ಕಥೆ ಪಕ್ಕಾ ಆಗಿದೆ. ಕಥೆ ಆಯ್ಕೆ ಆಗಿಲ್ಲ ಅನ್ನೋದು ಸುಳ್ಳು. ಕಥೆ ಸಿದ್ದವಾದ ಮೇಲೆಯೇ ನಾನು ಚಿತ್ರ ನಿರ್ಮಾಣಕ್ಕೆ ಒಪ್ಪಿಕೊಂಡಿದ್ದು ಎಂದಿದ್ದಾರೆ ಗಂಗಾಧರ್. ನವೆಂಬರ್‍ನಲ್ಲಿ ಚಿತ್ರದ ಫೋಟೋಶೂಟ್ ನಡೆಯಲಿದ್ದು, ಚಿತ್ರೀಕರಣ ಶುರುವಾಗುವ ಹೊತ್ತಿಗೆ ಮೊದಲ ಟೀಸರ್ ಬಿಡುಗಡೆ ಮಾಡುತ್ತೇವೆ. ಬಹುತೇಕ ನವೆಂಬರ್‍ನಲ್ಲೇ ಚಿತ್ರದ ಚಿತ್ರೀಕರಣ ಶುರುವಾಗಲಿದೆ ಎಂದಿದ್ದಾರೆ ಗಂಗಾಧರ್.

    ನಂದಕಿಶೋರ್ ನಿರ್ದೇಶನದ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದು, ವೈದಿ ಕ್ಯಾಮೆರಾ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸತತವಾಗಿ ಗೆದ್ದ ಹೀರೋಗೆ ಸಿನಿಮಾ ಮಾಡುವಾಗ ಕೆಲವು ಎಚ್ಚರಿಕೆ ತೆಗೆದುಕೊಳ್ಳಬೇಕಾಗುತ್ತೆ. ಅವೆಲ್ಲವನ್ನೂ ಮಾಡಿಕೊಂಡಿದ್ದೇವೆ. ಪೊಗರು ಚಿತ್ರಕ್ಕೆ ಯಾವುದೇ ಕಂಟಕ ಇಲ್ಲ. ಪೊಗರು ಮುಗಿಯುವವರೆಗೆ ಬೇರೆ ಯಾವುದೇ ಚಿತ್ರ ಮಾಡುವುದಿಲ್ಲ ಎಂದಿದ್ದಾರೆ ಗಂಗಾಧರ್.

  • ಪೊಗರು ಸೆಟ್ಟಲ್ಲಿ ರಶ್ಮಿಕಾ ಬರ್ತ್ ಡೇ

    rashmika's birthday celebrations in pogaru set

    ಕಿರಿಕ್ ಪಾರ್ಟಿಯ ಸಾನ್ವಿ ಅಲಿಯಾಸ್ ರಶ್ಮಿಕಾ, ಈಗ ಸೌಥ್ ಇಂಡಿಯಾ ಕ್ರಶ್. ಪಡ್ಡೆ ರಸಿಕರ ಡಾರ್ಲಿಂಗ್. ಕನಸಲ್ಲೂ ಅಲೆಲೆಲೆಲೆ ಎನ್ನಿಸುವ ಸುಂದರಿ, ಈಗಷ್ಟೇ 22 ಮುಗಿಸಿ, 23ಕ್ಕೆ ಕಾಲಿಟ್ಟಿದ್ದಾರೆ. ಹಾಗೆ ಹುಟ್ಟುಹಬ್ಬ ಸಂಭ್ರಮಿಸುವ ವೇಳೆಯಲ್ಲಿ ಅವರು ಇದ್ದುದು ಪೊಗರು ಚಿತ್ರದ ಸೆಟ್ಟಿನಲ್ಲಿ.

    ಧ್ರುವ ಸರ್ಜಾ ಅವರಿಗೆ ಟೀಚರ್ ಆಗಿ ನಟಿಸುತ್ತಿರುವ ರಶ್ಮಿಕಾ ಅವರಿಗೆ, ನಿರ್ದೇಶಕ ನಂದಕಿಶೋರ್ ಸೇರಿದಂತೆ ಇಡೀ ಚಿತ್ರತಂಡ ಹುಟ್ಟುಹಬ್ಬ ಶುಭಾಶಯ ಕೋರಿ ಸಂಭ್ರಮಿಸಿದೆ. ಸೆಟ್‍ನಲ್ಲೇ ಕೇಕ್ ಕಟ್ ಮಾಡಿ ಖುಷಿ ಪಟ್ಟಿದ್ದಾರೆ ರಶ್ಮಿಕಾ ಮಂದಣ್ಣ.

  • ಪೊಗರು ಸೆಟ್ಟಿನಲ್ಲಿ ಬೆಂಕಿ ; ಸುದ್ದಿ ನಿಜಾನಾ..? ಸುಳ್ಳಾ..?

    news behind pogaru set on fire

    ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಅಭಿನಯದ ಪೊಗರು ಚಿತ್ರದ ಚಿತ್ರೀಕರಣ ಸೆಟ್ಟಿನಲ್ಲಿ ಬೆಂಕಿ ಬಿದ್ದಿದೆ. ಅಗ್ನಿ ಅವಘಡದಲ್ಲಿ ಧ್ರುವ ಸರ್ಜಾ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ ಎಂಬ ಸುದ್ದಿ ಇದ್ದಕ್ಕಿದ್ದಂತೆ ಹಬ್ಬಿದೆ. ಪೊಗರು ಶೂಟಿಂಗ್ ಹೈದರಾಬಾದ್‍ನಲ್ಲಿ ನಡೆಯುತ್ತಿದ್ದು, ಕ್ಲೈಮಾಕ್ಸ್ ಶೂಟಿಂಗ್ ಮಾಡುತ್ತಿದ್ದಾರೆ ನಿರ್ದೇಶಕ ನಂದಕಿಶೋರ್.

    ಚಿತ್ರದ ಬಗ್ಗೆ ಹಬ್ಬಿದ ಈ ಸುದ್ದಿಯೆಲ್ಲ ಸುಳ್ಳು ಎಂದು ಸ್ಪ್ಟಪಡಿಸಿದೆ ಚಿತ್ರತಂಡ. ಹರಿದಾಡುತ್ತಿರುವ ಫೋಟೋ ಕೂಡಾ ಶೂಟಿಂಗ್‍ನದ್ದೇ. ಸೀನ್‍ನಲ್ಲಿ ಬಾಂಬ್ ಸ್ಫೋಟಿಸುವ ದೃಶ್ಯದ ಫೋಟೋ. ಅಷ್ಟೇ ಹೊರತು ಚಿತ್ರೀಕರಣದಲ್ಲಿ ಯಾವುದೇ ಅನಾಹುತ, ಅವಘಡ, ಆಕಸ್ಮಿಕ ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದೆ ಪೊಗರು ಟೀಂ.

  • ಪೊಗರು.. ಅದೇನ್ ಖದರ್ ಗುರೂ..

    pogaru dialogue trailer is super hit

    ಇವತ್ತು.. ನಾಳೆ.. ನಾಳಿದ್ದು.. ಎಂದೆಲ್ಲ ನಿರೀಕ್ಷೆ ಹುಟ್ಟಿಸಿಯೇ ವರ್ಷ ಕಳೆದಿದ್ದ ಪೊಗರು ಚಿತ್ರದ ಭರ್ಜರಿ ಟ್ರೇಲರ್ ಹೊರಬಿದ್ದಿದೆ. ತಡೆದ ಮಳೆ ಜಡಿದು ಬಂತು ಅನ್ನೋ ಹಾಗೆ ಪೊಗರು ಟ್ರೇಲರಿನಲ್ಲಿ ಡೈಲಾಗುಗಳ ಸುರಿಮಳೆಯೇ ಇದೆ. ಪಂಚು, ಪವರ್ರು ಮಿಸ್ಸಾಗಿಲ್ಲ.

    ಅಡ್ರೆಸ್ ತಿಳ್ಕೊಂಡು ಹೋಗಿ ಸರ್ವಿಸ್ ಮಾಡೋಕೆ ಕೊರಿಯರ್ ಬಾಯ್ ಅಂದ್ಕೊಂಡ್ಯಾ.. ಫೈಟರ್.. ಹೊಡೆದ್ರೆ ಯಾವನೂ ಅಡ್ರೆಸ್ ಇರಲ್ಲ. ಹೋಗಿ ಅವನಿಗೆ ನನ್ನ ಅಡ್ರೆಸ್ ಹೇಳು...

    ಮಕ್ಳಾ ಸಿಂಪಲ್ಲಾಗಿ ಮೂರು ಹೊಡೆದಿದ್ದಕ್ಕೇ ಸೀರಿಯಸ್ ಆಗಿದ್ದೀರ. ಸೀರಿಯಸ್ಸಾಗಿ ಹೊಡೆದ್ರೆ ಸೀದಾ ಸುಡುಗಾಡೇ..

    ವ್ಹೋ... ಇಂಗ್ಲಿಷಾ.. ಮಾತೃಭಾಷೆ ಬಿಟ್ಟೋರೂ.. ಮೂರೂ ಬಿಟ್ಟೋರು..

    ಹೀಗೆ.. ಒಂದೊಂದು ಡೈಲಾಗಿನಲ್ಲೂ ಒಂದೊಂದು ಅವತಾರ ತೋರಿಸಿದ್ದಾರೆ ಧ್ರುವಾ. ಉದ್ದನೆಯ ಕೂದಲು, ಗಡ್ಡದಲ್ಲಿ ಲುಕ್ಕು ರಗಡ್ಡಾಗಿದೆ. ನಂದಕಿಶೋರ್ ನಿರ್ದೇಶನದ ಚಿತ್ರದಲ್ಲಿ ಧ್ರುವ ಸರ್ಜಾಗೆ ರಶ್ಮಿಕಾ ಮಂದಣ್ಣ ನಾಯಕಿ. ಕಿರಿಕ್ ಪಾರ್ಟಿಯಲ್ಲಿ ದಪ್ಪನೆಯ ಕನ್ನಡಕದಲ್ಲಿ ಗಮನ ಸೆಳೆದಿದ್ದ ರಶ್ಮಿಕಾ, ಇಲ್ಲಿ ಮತ್ತೊಮ್ಮೆ ಕನ್ನಡಕಧಾರಿಣಿ.

    ಬಿ.ಕೆ.ಗಂಗಾಧರ್ ನಿರ್ಮಾಪಕರಾಗಿರುವ ಚಿತ್ರದಲ್ಲಿ ಡಾಲಿ ಧನಂಜಯ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಚಂದನ್ ಶೆಟ್ಟಿ ಸಂಗೀತವಿದೆ.

  • ಪೊಗರು'ನ ಕರಾಬು ಹಾಡಿಗೆ ಕೊರೋನಾ ಬ್ರೇಕ್

    pogaru's khabaru song release postponed

    ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟು ಹೊತ್ತಿಗೆ ಪೊಗರು ಚಿತ್ರದ ಕರಾಬು ಸಾಂಗ್ ರಿಲೀಸ್ ಆಗಬೇಕಿತ್ತು. ಆದರೆ ಅಭಿಮಾನಿಗಳ ನಿರೀಕ್ಷೆಗೆ ಕೊರೋನಾ ಬ್ರೇಕ್ ಹಾಕಿದೆ. ಅರೆ.. ಹಾಡು ರಿಲೀಸ್ ಆಗೋದು ಯೂಟ್ಯೂಬ್ ಚಾನೆಲ್ಲಲ್ಲಿ, ಅದಕ್ಕೇಕೆ ಬ್ರೇಕ್ ಹಾಕಬೇಕು ಅನ್ನೋ ಅಭಿಮಾನಿಗಳ ಪ್ರಶ್ನೆಗೆ ಧ್ರುವ ಸರ್ಜಾ ಕೊಟ್ಟಿರುವ ಉತ್ತರ ಅಷ್ಟೇ ಸಿಂಪಲ್.

    ಎಲ್ಲರೂ ಆತಂಕದಲ್ಲಿದ್ದಾರೆ. ಯುಗಾದಿಯ ಸಂಭ್ರಮವೂ ಇಲ್ಲ. ಎಲ್ಲರೂ ಆತಂಕದಲ್ಲಿರೋವಾಗ ನಮಗೆ ಸಂಭ್ರಮ ಬೇಕಾ ಅನ್ನೋದು ಧ್ರುವ ಸರ್ಜಾ ವಾದ.

    ಸ್ಸೋ.. ನಂದಕಿಶೋರ್ ನಿರ್ದೇಶನದ ಪೊಗರು ಚಿತ್ರದ ಹಾಡು ಇವತ್ತಿಲ್ಲ. ಮುಂದೆ.. ಕಾದು ನೊಡೋಣ.

  • ಪ್ರಥಮ್ ಕಾಟಕ್ಕೆ ಒಟ್ಟಿಗೇ ಬಂದ್ರು ಧ್ರುವ-ಪ್ರೇರಣಾ

    olle hudga pratham meets dhruva sarja and his fiancee

    ಒಳ್ಳೆಯ ಹುಡುಗ ಪ್ರಥಮ್ ಕಾಟ ಕೊಡೋದ್ರಲ್ಲಿ ಫೇಮಸ್. ಆದರೆ, ಅದ್ಯಾವತ್ತೂ ಪ್ರೀತಿಯಿಂದ ಆಗೋದ್ರಿಂದ ಎಂಥವರೂ ಕರಗುತ್ತಾರೆ. ಹಾಗೆ ಕರಗಿದವರಲ್ಲಿ ಧ್ರುವ ಸರ್ಜಾ ಮತ್ತು ಪ್ರೇರಣಾ ಜೋಡಿಯೂ ಇದೆ. ಧ್ರುವ-ಪ್ರೇರಣಾ ಲವ್ ಸ್ಟೋರಿ ಕೇಳಿದ ಮೇಲೆ ಪ್ರಥಮ್ ಸ್ವತಃ ಧ್ರುವ ಮನೆಗೆ ಹೋಗಿದ್ದಾರೆ. ಅವರನ್ನು ಪ್ರೀತಿಯಿಂದ ಒತ್ತಾಯ ಮಾಡಿ ಪ್ರೇರಣಾ ಮನೆಗೆ ಕರೆದುಕೊಂಡು ಹೋಗಿದ್ದಾರೆ.

    ಧ್ರುವ ಸರ್ಜಾ ಅವರನ್ನು ಮದುವೆಯಾಗುತ್ತಿರುವ ಪ್ರೇರಣಾ ಅಷ್ಟೇ ಅದೃಷ್ಟವಂತೆಯಲ್ಲ, ಅವರನ್ನು ಮದುವೆಯಾಗುತ್ತಿರುವ ಧ್ರುವಾ ಕೂಡಾ ಅದೃಷ್ಟವಂತ. ಮೀಡಿಯಾಗಳಿಂದ, ಪಬ್ಲಿಸಿಟಿಯಿಂದ ದೂರ ಇರುವ ಪ್ರೇರಣಾ, ನಿಜಕ್ಕೂ ಧ್ರುವ ಸರ್ಜಾಗೆ ಒಳ್ಳೆಯ ಸಂಗಾತಿ ಎಂದಿದ್ದಾರೆ. 

    ಪ್ರೇರಣಾ ಅವರ ಕುಟುಂಬಕ್ಕೆ ಧ್ರುವ ಬಗ್ಗೆ ಹೆಮ್ಮೆಯಿದೆ. ಅವರು ಅಳಿಯ ಅನ್ನೋದಕ್ಕಿಂತ ಹೆಚ್ಚಾಗಿ ಗೆಳೆಯರಂತಿದ್ದಾರೆ. ಇನ್ನು ಪ್ರೇರಣಾ ಅವರ ತಂದೆ, ಅರ್ಜುನ್ ಸರ್ಜಾರ ಬೆಸ್ಟ್ ಫ್ರೆಂಡ್ ಎಂದು ಪ್ರೀತಿಯಿಂದ ವಿಷಯ ತಿಳಿಸಿದ್ದಾರೆ.

  • ಪ್ರೀತಿಯ ಪತ್ನಿಗೆ ಧ್ರುವ ಕೊಟ್ಟ ಮೊದಲ ಉಡುಗೊರೆ

    dhruva sarja's first gift post wedding

    ಮದುವೆಯಾಗಿ ಕೆಲವೇ ದಿನಗಳಾಗಿವೆ. ಆದರೆ, ನಿಶ್ಚಿತಾರ್ಥವಾಗಿ ಒಂದು ವರ್ಷವಾಗಿದೆ. ಸಿನಿಮಾದಲ್ಲಿ ಹೀರೋಯಿನ್ನಿಗೆ ಅಂಗೈಯಲ್ಲೇ ಆಕಾಶ ತೋರಿಸುವ ನಟ, ರಿಯಲ್ ಲೈಫಲ್ಲಿ ಒಂದೊಳ್ಳೆ ಗಿಫ್ಟ್ ಕೊಡದಿದ್ರೆ ಹೇಗೆ..? ಈ ಬಾರಿ ಧ್ರುವ ಸರ್ಜಾ ಪತ್ನಿ ಪ್ರೇರಣಾಗೆ ಒಂದು ಚೆಂದದ ಉಡುಗೊರೆ ತಂದಿದ್ದಾರೆ. ಅದು ಕಪ್ಪು ಬಣ್ಣದ ಪೋರ್ಷೆ ಕಾರ್.

    ಒಂದೇ ದಿನ ಹಲವು ವಿಶೇಷತೆಗಳಿದ್ದಾಗ ನಿಮ್ಮೊಡನೆ ಹಂಚಿಕೊಳ್ಳೋ ಖುಷಿ. ಮೊದಲಿಗೆ ಇಷ್ಟ ದೇವರು ಹನುಮಜಯಂತಿ. ನನ್ನೆಲ್ಲ ಹಿತೈಷಿ, ಕನ್ನಡ ಬಂಧುಗಳಿಗೆ ಹನುಮದೇವರ ಕೃಪಾಶೀರ್ವಾದವಿರಲಿ. ಇಂದಿಗೆ ನಾವು ನಿಶ್ಚಿತಾರ್ಥವಾಗಿ 1 ವರ್ಷ. ಜೊತೆಗೆ ಹೊಸ ಅತಿಥಿಯಾಗಿ ಕಾರ್ ಆಗಮನ ಇನ್ನಷ್ಟು ಸಂಭ್ರಮ. ಆಂಜನೇಯನ ಆಶೀರ್ವಾದ, ನಿಮ್ಮೆಲ್ಲರ ಹಾರೈಕೆ ನಮಗೆ ಶ್ರೀರಕ್ಷೆ ಜೈ ಆಂಜನೇಯ.

    ಮದುವೆಯಾಗಿ ಬ್ರಹ್ಮಚರ್ಯ ಬಿಟ್ಟರೂ, ಈ ಆಂಜನೇಯನ ಭಕ್ತ ಆಂಜನೇಯನನ್ನು ಬಿಟ್ಟಿಲ್ಲ. ಧ್ರುವ ಪ್ರೇರಣಾ ದಂಪತಿಯ ಸಂಭ್ರಮ ಹೀಗೆಯೇ ನೂರ್ಕಾಲ ಇರಲಿ ಎನ್ನುವುದು ಅಭಿಮಾನಿಗಳ ಹಾರೈಕೆ.

  • ಪ್ರೇರಣಾ ಸರ್ಜಾಗೆ ಸೀಮಂತೋತ್ಸವ

    ಪ್ರೇರಣಾ ಸರ್ಜಾಗೆ ಸೀಮಂತೋತ್ಸವ

    ಧ್ರುವ ಸರ್ಜಾ ಅಪ್ಪನಾಗುತ್ತಿದ್ದಾರೆ. ಇತ್ತೀಚೆಗೆ ಪ್ರೇರಣಾ ಅವರ ಬೇಬಿ ಬಂಪ್ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದ ಧ್ರುವ, ತಮ್ಮ ಕುಟುಂಬಕ್ಕೆ ಹೊಸ ಸದಸ್ಯ ಬರುತ್ತಿದ್ದಾನೆ ಎನ್ನುವುದನ್ನು ಸಾರಿದ್ದರು. ಈಗ ಪ್ರೇರಣಾ ಸರ್ಜಾ ಅವರ ಸೀಮಂತ ಶಾಸ್ತ್ರವನ್ನೂ ಮುಗಿಸಿದ್ದಾರೆ.

    ಸರ್ಜಾ ಕುಟುಂಬದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಶುಭ ಕಾರ್ಯವಿದು. ಸಾಲು ಸಾಲು ನೋವುಗಳಲ್ಲೇ ಮುಳುಗಿದ್ದ ಕುಟುಂಬದಲ್ಲಿ ಪ್ರೇರಣಾ-ಧ್ರುವ ದಂಪತಿಯ ಮಡಿಲಲ್ಲಿ ಅರಳುತ್ತಿರುವ ಕೂಸು ಹೊಸ ಸಂಭ್ರಮ ತರಲಿದೆ.

  • ಫೆ.19ಕ್ಕೆ ಪೊಗರು ಕನ್‍ಫರ್ಮ್

    ಫೆ.19ಕ್ಕೆ ಪೊಗರು ಕನ್‍ಫರ್ಮ್

    ಲಾಕ್ ಡೌನ್ ಮುಗಿದು, ಥಿಯೇಟರ್ ಓಪನ್ ಆದ ನಂತರ ಯಾವ ಸ್ಟಾರ್ ಸಿನಿಮಾ ಮೊದಲು ರಿಲೀಸ್ ಆಗಲಿದೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ನ್ಯಾಷನಲ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಫಸ್ಟ್ ಮೂವಿಯಾಗಿ ಫೆಬ್ರವರಿ 19ಕ್ಕೆ ರಿಲೀಸ್ ಆಗುತ್ತಿದೆ.

    ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಪ್ರಧಾನ ಪಾತ್ರದಲ್ಲಿರೋ ಚಿತ್ರ, ರಿಲೀಸ್ ಆಗೋಕೆ ಹೆಚ್ಚೂ ಕಡಿಮೆ 4 ವರ್ಷ ತೆಗೆದುಕೊಂಡಿದೆ. ನಿರೀಕ್ಷೆ ಇಟ್ಟುಕೊಂಡೇ ಬಂದು ಸಿನಿಮಾ ನೋಡಿ ಎಂದಿರುವ ಧ್ರುವ ಸರ್ಜಾ, ಇದು ಕೇವಲ ಆ್ಯಕ್ಷನ್ ಸಿನಿಮಾ ಅಲ್ಲ, ಭಾವನಾತ್ಮಕ ದೃಶ್ಯಗಳೂ ಇವೆ ಎಂದಿದ್ದಾರೆ.

    ನಂದಕಿಶೋರ್ ನಿರ್ದೇಶನದ ಚಿತ್ರಕ್ಕೆ ಬಿ.ಕೆ. ಗಂಗಾಧರ್ ನಿರ್ಮಾಪಕ. ಕನ್ನಡ, ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದೆ. ಚಂದನ್ ಶೆಟ್ಟಿ ನಿರ್ದೇಶನದ ಹಾಡುಗಳು ಈಗಾಗಲೇ ಸೂಪರ್ ಹಿಟ್ ಸಾಲಿಗೆ ಸೇರಿವೆ.

  • ಬಚ್ಚನ್ ಫ್ಯಾಮಿಲಿ ಹಾದಿಯಲ್ಲಿ ಧ್ರುವ ಸರ್ಜಾ ಫ್ಯಾಮಿಲಿ

    dhruva sarja and his wife prerna tests positive for corona

    ಬಾಲಿವುಡ್‍ನಲ್ಲಿ ಅಮಿತಾಬ್ ಬಚ್ಚನ್ ಕುಟುಂಬಕ್ಕೆ ಕೊರೋನಾ ಸೋಂಕು ತಲ್ಲಣವನ್ನೇ ಸೃಷ್ಟಿಸಿದೆ. ಹಿಂದಿ ಚಿತ್ರರಂಗದ ದೊಡ್ಡಮನೆಯಲ್ಲಿ ಅಮಿತಾಭ್, ಅಭಿಷೇಕ್, ಐಶ್ವರ್ಯಾ ರೈ, ಆರಾಧ್ಯ ಬಚ್ಚನ್ ಎಲ್ಲರಿಗೂ ಕೋವಿಡ್ 19 ಸೋಂಕು ತಗುಲಿದೆ. ಚೈನೀಸ್ ವೈರಸ್ ತಟ್ಟದೆ ಬಚಾವ್ ಆಗಿರುವುದು ಜಯಾ ಬಚ್ಚನ್ ಮಾತ್ರ. ಈಗ ಇದೇ ಆತಂಕ ಸರ್ಜಾ ಫ್ಯಾಮಿಲಿಗೆ ಕಾಡ್ತಿದೆ.

    ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಸರ್ಜಾ ಇಬ್ಬರಿಗೂ ಕೋವಿಡ್ 19 ಪಾಸಿಟಿವ್ ರಿಪೋರ್ಟ್ ಬಂದಿದೆ. ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಗಿದೆ. ಐಸೋಲೇಷನ್‍ನಲ್ಲಿ ಇರಿಸಲಾಗುತ್ತಿದೆ. ನಮ್ಮೊಂದಿಗೆ ಸಂಪರ್ಕದಲ್ಲಿದ್ದವರು ದಯವಿಟ್ಟು ಟೆಸ್ಟ್ ಮಾಡಿಸಿಕೊಳ್ಳಿ ಎಂದು ಧ್ರುವ ಸರ್ಜಾ ಮನವಿ ಮಾಡಿಕೊಂಡಿದ್ದಾರೆ. ಗುಣಮುಖರಾಗಿ ಬನ್ನಿ ಧ್ರುವ ಮತ್ತು ಪ್ರೇರಣಾ. ಇದು ಚಿತ್ರಲೋಕದ ಹಾರೈಕೆ.  

  • ಬಂದೇ ಬರ್ತಾರೆ ರಶ್ಮಿಕಾ ಬಂದೇ ಬರ್ತಾರೆ..!

    ಬಂದೇ ಬರ್ತಾರೆ ರಶ್ಮಿಕಾ ಬಂದೇ ಬರ್ತಾರೆ..!

    ರಶ್ಮಿಕಾ ಮಂದಣ್ಣಗೆ ಕನ್ನಡದ ಪೊಗರು ಚಿತ್ರದ ಬಗ್ಗೆ ಇಂಟ್ರೆಸ್ಟ್ ಇಲ್ಲ. ಅವರ್ಯಾಕೆ ಪೊಗರು ಬಗ್ಗೆ ಪ್ರಮೋಟ್ ಮಾಡುತ್ತಿಲ್ಲ ಎಂಬ ಪ್ರಶ್ನೆಗೆ ಈಗ ಚಿತ್ರತಂಡವೇ ಉತ್ತರ ಕೊಟ್ಟಿದೆ.

    ಅಂತಹುದ್ದೇನಿಲ್ಲ. ರಶ್ಮಿಕಾ ಖಂಡಿತಾ ಪೊಗರು ಚಿತ್ರದ ಪ್ರಚಾರಕ್ಕೆ ಬರುತ್ತಾರೆ. ನಾವು ಅವರ ಜೊತೆ ಸಂಪರ್ಕದಲ್ಲಿದ್ದೇವೆ ಎಂದಿದ್ದಾರೆ ನಿರ್ದೇಶಕ ನಂದ ಕಿಶೋರ್.

    ಬಿ.ಕೆ.ಗಂಗಾಧರ್ ನಿರ್ಮಾಣದ ಪೊಗರು, ಫೆಬ್ರವರಿ 19ರಂದು ರಿಲೀಸ್ ಆಗುತ್ತಿದೆ. ಬಿಡುಗಡೆಗೆ ಮುನ್ನ ಒಂದಿಡೀ ತಿಂಗಳು ಚಿತ್ರದ ಪ್ರಚಾರವನ್ನು ಹೈ ಲೆವೆಲ್ಲಿನಲ್ಲಿಡಲು ಚಿತ್ರತಂಡ ಪ್ಲಾನ್ ಮಾಡಿದೆ. ಪೊಗರು ಕನ್ನಡದಲ್ಲಷ್ಟೇ ಅಲ್ಲ, ಹಿಂದಿ, ತಮಿಳು, ತೆಲುಗಿನಲ್ಲೂ ರಿಲೀಸ್ ಆಗುತ್ತಿದೆ.

    ಧ್ರುವ ಸರ್ಜಾ ನಾಯಕರಾಗಿರುವ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ.