ತೋತಾಪುರಿ ಚಿತ್ರದ ಸೀಕ್ವೆಲ್, ಸಿನಿಮಾ ಘೋಷಣೆಯಾದಾಗಲೇ ಫಿಕ್ಸ್ ಆಗಿತ್ತು. ಎರಡೂ ಭಾಗಗಳನ್ನು ಚಿತ್ರೀಕರಣ ಮಾಡಿದ್ದ ತೋತಾಪುರಿ ಟೀಂ, ಹೆಚ್ಚೂಕಡಿಮೆ ಒಂದು ವರ್ಷದ ನಂತರ ತೋತಾಪುರಿ 2 ಸೀಕ್ವೆಲ್ ರಿಲೀಸ್ ಮಾಡೋಕೆ ರೆಡಿಯಾಗಿದೆ. ಸೀಕ್ವೆಲ್`ನಲ್ಲಿ ಜಗ್ಗೇಶ್-ಆದಿತಿ ಪ್ರಭುದೇವ ಜೊತೆಗೆ ಡಾಲಿ ಧನಂಜಯ್, ಸುಮನ್ ರಂಗನಾಥ್ ಪಾತ್ರಗಳೂ ದೊಡ್ಡ ಮಟ್ಟದಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳಲಿರುವುದು ವಿಶೇಷ.
2022ರ ಸೆಪ್ಟೆಂಬರ್ನಲ್ಲಿ ‘ತೋತಾಪುರಿ 1’ ಸಿನಿಮಾ ತೆರೆಕಂಡಿತ್ತು. ಆ ಸಿನಿಮಾದ ‘ಬಾಗ್ಲು ತೆಗಿ ಮೇರಿ ಜಾನ್..’ ಗೀತೆ ಬಹಳ ವೈರಲ್ ಆಗಿತ್ತು. ಇತ್ತೀಚೆಗಷ್ಟೇ ‘ತೋತಾಪುರಿ 2’ ಸಿನಿಮಾದ ಮೊದಲ ಸಾಂಗ್ ಬಿಡುಗಡೆ ಮಾಡಲಾಗಿದೆ. ಹೃದಯಶಿವ ಅವರು ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ‘ಮೊದಲ ಮಳೆ ಮನದೊಳಗೆ…’ ಎಂದು ಈ ಹಾಡಿಗೆ ಜನಮೆಚ್ಚುಗೆ ಸಿಗುತ್ತಿದೆ. ಇದರಲ್ಲಿ ಧನಂಜಯ್ ಮತ್ತು ಸುಮನ್ ರಂಗನಾಥ್ ಕಾಣಿಸಿಕೊಂಡಿದ್ದಾರೆ. ಸಂಜಿತ್ ಹೆಗಡೆ ಅವರ ಕಂಠದಲ್ಲಿ ಈ ಗೀತೆ ಮೂಡಿಬಂದಿದೆ.
ಇನ್ನು ಸಿನಿಮಾ ಆಗಸ್ಟ್ 11ಕ್ಕೆ ರಿಲೀಸ್ ಆಗಲಿದ್ದು, ಆ ಡೇಟ್ ಸಂಚಲನ ಸೃಷ್ಟಿಸಿದೆ. ಯಾಕೆಂದರೆ ಆಗಸ್ಟ್ 10ರಂದು ರಜನಿಕಾಂತ್, ಶಿವಣ್ಣ, ತಮನ್ನಾ ಅಭಿನಯದ ಜೈಲರ್ ರಿಲೀಸ್ ಆಗುತ್ತಿದೆ. ಈ ಸಿನಿಮಾ ಆಗಸ್ಟ್ 10ರಂದು ಬಿಡುಗಡೆ ಆಗಲಿದೆ ಎಂದು ಘೋಷಣೆ ಆದ ಬಳಿಕ ಇದರ ಎದುರು ಬರಲು ಕನ್ನಡದ ಯಾವುದೇ ಸಿನಿಮಾಗಳು ಸಿದ್ಧವಿರಲಿಲ್ಲ. ಆದರೆ, ಈಗ ‘ಜೈಲರ್’ ಎದುರು ಪೈಪೋಟಿ ನೀಡಲು ‘ತೋತಾಪುರಿ 2’ ಸಿನಿಮಾ ಸಜ್ಜಾಗಿದೆ. ವಿಜಯೇಂದ್ರ ಪ್ರಸಾದ್ ಅವರ ಚೇಷ್ಟೆ ಈ ಚಿತ್ರದಲ್ಲಿಯೂ ಕಂಟಿನ್ಯೂ ಆಗಲಿದೆ.