ಕೇರಳ ಸ್ಟೋರಿ. ಕಾಶ್ಮೀರ್ ಫೈಲ್ಸ್ ನಂತರ ಅಂತಹುದೇ ವಿವಾದಾತ್ಮಕ ಕಥೆ ಹೊತ್ತು ಬಂದಿರುವ ಚಿತ್ರ. ಕೇರಳದಲ್ಲಿ ಹಲವು ಯುವತಿಯರು ಬಲವಂತವಾಗಿ, ಸಂಚಿನಿಂದ ಮತಾಂತರವಾಗಿ, ಐಸಿಸ್, ಅಲ್‍ಕೈದಾ ಸೇರುತ್ತಿದ್ದಾರೆ ಎಂಬ ಹಿನ್ನೆಲೆಯಲ್ಲಿ ಸತ್ಯಘಟನೆಗಳನ್ನಾಧರಿಸಿ ತೆಗೆದಿರುವ ಸಿನಿಮಾ. ಈ ಸಿನಿಮಾ ಮೇ 5ರಂದು ರಿಲೀಸ್ ಆಗುತ್ತಿದೆ.
ಸುದಿಪ್ತೋ ಸೇನ್ ನಿರ್ದೇಶನದ ಕೇರಳ ಸ್ಟೋರಿಗೆ ಎ ಸರ್ಟಿಫಿಕೇಟ್ ಸಿಕ್ಕಿದೆ. ಕೇವಲ ವಯಸ್ಕರಷ್ಟೆ ಸಿನಿಮಾ ನೋಡಬಹುದಾಗಿದೆ. ಸಿನಿಮಾದಲ್ಲಿದ್ದ ಬರೋಬ್ಬರಿ 10 ದೃಶ್ಯಗಳಿಗೆ ಸೆನ್ಸಾರ್ ಮಂಡಳಿಯು ಕತ್ತರಿ ಹಾಕಿಸಿದೆ. ಮಾಜಿ ಸಿಎಂ ಒಬ್ಬರ ಸಂದರ್ಶನದ ದೃಶ್ಯಗಳು ಸಹ ಇದರಲ್ಲಿ ಸೇರಿವೆ ಹಾಗೂ ಸಚಿವರೊಬ್ಬರು ಕೇರಳವನ್ನು ಮುಸ್ಲಿಂ ಬಾಹುಳ್ಯದ ಕ್ಷೇತ್ರವನ್ನಾಗಿ ಮಾಡುತ್ತೇವೆ ಎಂದು ಹೇಳಿದ್ದ ಸಂಭಾಷಣೆಗಳನ್ನು ಸಹ ತೆಗೆದು ಹಾಕಲಾಗಿದೆ.
ಇವುಗಳ ಜೊತೆಗೆ ಹಿಂದು ದೇವರುಗಳ ಬಗ್ಗೆ ಮುಸ್ಲಿಂ ಪಾತ್ರಗಳ ಕೈಯಲ್ಲಿ ಹೇಳಿಸಿದ್ದ ಸಂಭಾಷಣೆಗಳು, ಕಮ್ಯುನಿಸ್ಟ್ ಪಕ್ಷದವರ ಬಗ್ಗೆ ಆರೋಪದ ಮಾದರಿಯ ಸಂಭಾಷಣೆಗಳುಳ್ಳ ದೃಶ್ಯಗಳನ್ನು ಸಹ ಸೆನ್ಸಾರ್ ಮಂಡಳಿಯು ಡಿಲೀಟ್ ಮಾಡಿಸಿದೆ.
ಈ ನಡುವೆ ಸಿನಿಮಾ ಬಗ್ಗೆ ಟ್ವೀಟ್ ಮಾಡಿದ್ದ ನಿರ್ದೇಶಕ ಸುದಿಪ್ತೊ ಸೇನ್
ನೀವು ಸಾಕ್ಷರತೆಯಲ್ಲಿ ನಂಬರ್ 1, ಶಿಕ್ಷಣವು ಸಹಿಷ್ಣುತೆಯನ್ನು ಕಲಿಸುತ್ತದೆ. ದಯವಿಟ್ಟು ದಿ ಕೇರಳ ಸ್ಟೋರಿ ಸಿನಿಮಾ ನೋಡಿ. ನಿಮಗೆ ಇಷ್ಟವಾಗದೇ ಇದ್ದರೆ ಆ ನಂತರ ನಾವು ಚರ್ಚಿಸೋಣ. ಈ ಸಿನಿಮಾಕ್ಕಾಗಿ ನಾವು ಏಳು ವರ್ಷಗಳ ಕಾಲ ಕೇರಳದಲ್ಲಿ ಕೆಲಸ ಮಾಡಿದ್ದೇವೆ. ನಾವೂ ಸಹ ನಿಮ್ಮವರೇ, ನಾವೂ ಸಹ ಭಾರತೀಯರೆ ಎಂದಿದ್ದಾರೆ.
ಸಿನಿಮಾದ ಟ್ರೈಲರ್ನಲ್ಲಿ ಕೇರಳದ 32,000 ಯುವತಿಯರನ್ನು ಮತಾಂತರ ಮಾಡಲಾಗಿದೆ ಎಂಬ ಸಂಭಾಷಣೆ ಹಾಗೂ ಟೆಕ್ಸ್ಟ್ ಇದೆ. ಇದರ ಬಗ್ಗೆ ತೀವ್ರ ತಕರಾರು ಎದ್ದಿದ್ದು ಮುಸ್ಲಿಂ ಯೂಥ್ ಲೀಗ್ ಸಂಘಟನೆಯು, ಕೇರಳದ 32,000 ಯುವತಿಯರು ಐಎಸ್ ಸೇರಿದ್ದಾರೆ ಎಂಬುದನ್ನು ಸಾಬೀತುಪಡಿಸಿದರೆ 1 ಕೋಟಿ ಬಹುಮಾನ ನೀಡುತ್ತೇವೆ ಎಂದು ನಿರ್ದೇಶಕ ಸುದಿಪ್ತೊ ಸೇನ್ ಗೆ ಸವಾಲು ಎಸೆದಿದೆ.
ಇದಕ್ಕೆ ಪ್ರತಿಯಾಗಿ ಕೇರಳದ ಯುವತಿಯರನ್ನು ಬಲವಂತವಾಗಿ ಮತಾಂತರ ಮಾಡಿಲ್ಲ. ಅವರನ್ನು ಉಗ್ರರ ಸಂಘಟನೆಗೆ ಸೇರಿಸಿಲ್ಲ ಎನ್ನುವುದು ಸುಳ್ಳು ಎಂದು ಸಾಬೀತು ಮಾಡಿದರೆ 10 ಕೋಟಿ ನೀಡುತ್ತೇವೆ ಎಂದು ಆರ್.ಎಸ್.ಎಸ್.ಮುಖಂಡರು ಚಾಲೆಂಜ್ ಹಾಕಿದ್ದಾರೆ. ಈ ಸಿನಿಮಾ ಮೇ 5ರಂದು ಹಿಂದಿ, ಮಲಯಾಳಂ, ತೆಲುಗು, ತಮಿಳಿನಲ್ಲಿ ಬರುತ್ತಿದೆ. ಆದರೆ ಕನ್ನಡದಲ್ಲಿ ಈ ಚಿತ್ರ ಡಬ್ ಆಗಿಲ್ಲ.
ಮತ್ತೊಂದೆಡೆ ಚಿತ್ರದ ಬಿಡುಗಡೆಯನ್ನು ನಿಷೇಧ ಮಾಡುವಂತೆ ಒತ್ತಾಯಿಸಿ ಸುಪ್ರೀಂಕೋರ್ಟಿನಲ್ಲಿ ಕೆಲವು ಸಂಘಟನೆಗಳು ಅರ್ಜಿ ಸಲ್ಲಿಸಿದ್ದವು. ಈಗಾಗಲೇ ಚಿತ್ರ ಸೆನ್ಸಾರ್ ಆಗಿದೆ. ನೀವು ಬ್ಯಾನ್ ಮಾಡುವ ಬಗ್ಗೆ ಏನೇ ಇದ್ದರೂ ಮೊದಲು ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿ ಎಂದು ಹೇಳಿರುವ ಸುಪ್ರೀಂಕೋರ್ಟ್ ಅರ್ಜಿ ವಿಚಾರಣೆ ನಡೆಸಲು ನಿರಾಕರಿಸಿದೆ. ಹಾಗಂತ ಕೇರಳ ಸ್ಟೋರಿ ಬಿಡುಗಡೆಗೆ ಹಾದಿ ಮುಕ್ತವಾಗಿಯೇನೂ ಇಲ್ಲ. ಕೇರಳ ಹೈಕೋರ್ಟಿನ ಮೊರೆ ಹೋಗಲು ಅವಕಾಶವೂ ಇದೆ.