ಈ ಅಂಬರೀಷ್ ಬಗ್ಗೆ ಏನ್ ಬೇಕಾದರೂ ಬರೆದುಕೊಳ್ಳಿ, ಹೇಳಿಕೊಳ್ಳಿ..ಜನಕ್ಕೆ ಅಂಬರೀಷ್ ಏನಂತ ಗೊತ್ತು. ಆದರೆ, ಸಣ್ಣ ಸಣ್ಣ ಹುಡುಗರ ಬಗ್ಗೆ ಇಲ್ಲಸಲ್ಲದ್ದನ್ನೆಲ್ಲ ಬರೆಯಬೇಡಿ. ಇದು ಅಂಬರೀಷ್ ಅವರ ಮಾತು ಮತ್ತು ನೋವು.
ಅವರ ನೋವಿಗೆ ಕಾರಣವಿದೆ. ಇತ್ತೀಚೆಗೆ ಆದಿಕೇಶವಲು ಅವರ ಮೊಮ್ಮಗ ಗೀತಾ ವಿಷ್ಣು, ಕುಡಿದ ಅಮಲಿನಲ್ಲಿ ಅಪಘಾತ ಮಾಡಿದ್ದ. ಅಷ್ಟೇ ಆಗಿದ್ದರೆ ಅದು ಸುದ್ದಿಯಾಗುತ್ತಿರಲಿಲ್ಲ. ಬದಲಿಗೆ ಆತನ ಕಾರ್‍ನಲ್ಲಿ ಸ್ಯಾಂಡಲ್‍ವುಡ್‍ನ ಒಬ್ಬ ನಟಿ ಹಾಗೂ ಇಬ್ಬರು ಸ್ಟಾರ್‍ನಟರು ಇದ್ದರಂತೆ ಎಂಬ ಸುದ್ದಿ ಹಬ್ಬಿತು. ಅದಕ್ಕೆ ತಕ್ಕಂತೆ ಆತನ ಕಾರ್‍ನಲ್ಲಿ ಗಾಂಜಾ ಕೂಡಾ ಸಿಕ್ಕಿತು.
ಸಾರ್ವಜನಿಕ ಸುದ್ದಿ ವಾಹಿನಿಗಳಂತೂ ನೇರವಾಗಿ ಪ್ರಜ್ವಲ್ ದೇವರಾಜ್ ಮತ್ತು ದಿಗಂತ್ ಹೆಸರನ್ನು ಬ್ರೇಕಿಂಗ್ ನ್ಯೂಸ್‍ನಲ್ಲಿ ಬಿಟ್ಟವು. ವಿಚಾರವೇನೆಂದರೆ, ಪ್ರಜ್ವಲ್ ಆಗಲೀ, ದಿಗಂತ್ ಆಗಲೀ ಇಬ್ಬರೂ ಬೆಂಗಳೂರಿನಲ್ಲೇ ಇರಲಿಲ್ಲ. ಇಬ್ಬರೂ ನಟರು ಆ ಸುದ್ದಿ ವಾಹಿನಿಗೆ ಉಪ್ಪಿನಕಾಯಿ ಹಾಕಿದರು. ನಂತರ ತೇಲಿ ಬಂದ ಹೆಸರೇ ಅಭಿಷೇಕ್ ಅಂಬರೀಷ್ ಅವರದ್ದು.
ಅಂಬರೀಷ್ ಮತ್ತು ಸುಮಲತಾ ಬೇಸರಗೊಂಡಿರುವುದು ಇದೇ ಕಾರಣಕ್ಕೆ. ವಾಸ್ತವ ಏನೆಂದರೆ, ಅಭಿಷೇಕ್ ಕಳೆದ ತಿಂಗಳಿಂದ ಇಂಡಿಯಾದಲ್ಲೇ ಇಲ್ಲ. ಮಾರ್ಷಲ್ ಆಟ್ರ್ಸ್ ಕಲಿಯುತ್ತಿರುವ ಅಭಿಷೇಕ್, ಥೈಲ್ಯಾಂಡ್‍ನಲ್ಲೇ ಇದ್ದಾರೆ. ಅವರ ಜೊತೆ ತೆಲುಗು ಚಿತ್ರರಂಗದ ಮಂಚು ಮನೋಜ್ ಕೂಡಾ ಇದ್ದಾರೆ.
ಹೀಗೆ ದೇಶದಲ್ಲೇ ಇಲ್ಲದ ವ್ಯಕ್ತಿ, ಅಪಘಾತ ಸ್ಥಳಕ್ಕೆ ಬರುವುದಾದರೂ ಹೇಗೆ..? ಕಾಮನ್‍ಸೆನ್ಸ್ ಬೇಡವಾ..? ಕನಿಷ್ಠ ಸುದ್ದಿ ಹಾಕುವ ಮುನ್ನ ಒಂದು ಫೋನ್ ಮಾಡಿ ಸ್ಪಷ್ಟೀಕರಣ ಕೇಳೊಕಾಗಲ್ಲವಾ..? ಆಗ ಸಮಸ್ಯೆಗಳೇ ಇರೋದಿಲ್ಲವಲ್ಲಾ..? ಇದು ಅಂಬರೀಷ್ ಮತ್ತು ಸುಮಲತಾ ಅಂಬರೀಷ್ ಕೇಳುತ್ತಿರುವ ಪ್ರಶ್ನೆ.
ಸುದ್ದಿ ಎಂದ ಮೇಲೆ ಇಂಥವು ಬರ್ತವೆ. ಹೋಗ್ತವೆ. ಆದರೆ, ಒಬ್ಬ ಸೆಲಬ್ರಿಟಿಯ ಬಗ್ಗೆ ಸುದ್ದಿ ಬಂದಾಗ, ಫೋನ್ ಮಾಡಿ, ವಿವರ ಕೇಳೋಕೂ ಆಗಲ್ಲ ಎಂದರೆ ಹೇಗೆ..? ಅಂಬರೀಷ್ ಕೇಳೋದ್ರಲ್ಲಿ ಅರ್ಥವಿದೆ.