ಒಂದು ಸಿನಿಮಾ ಶುರುವಾಗುವುದು, ಅಡ್ಡಿ ಆತಂಕಗಳು ಎದುರಾಗುವುದು ಹೊಸದೇನಲ್ಲ. ಆದರೆ ಕರಿಹೈದ ಕೊರಗಜ್ಜ ಚಿತ್ರಕ್ಕೆ ಅಡ್ಡಿಗಳ ಸರಮಾಲೆಯೇ ಎದುರಾಗಿದೆಯಂತೆ. ಸಿನಿಮಾದ ಚಿತ್ರೀಕರಣಕ್ಕೆ ಹಲವು ಬಗೆಯ ಅಡೆ-ತಡೆಗಳಾದ್ದರಿಂದ ಚಿತ್ರತಂಡವು ಗುಳಿಗನ ಮೊರೆ ಹೋಗಿದೆ. ಗುಳಿಗ ದೈವಕ್ಕೆ ಗುಡಿಯನ್ನೇ ಕಟ್ಟಿ ಹರಕೆ ತೀರಿಸಿದೆ.
ಚಿತ್ರೀಕರಣದ ಆರಂಭಕ್ಕೂ ಮೊದಲು ಪುತ್ತೂರಿನಲ್ಲಿ ಸೆಟ್ ವಿರ್ಮಾಣದ ವೇಳೆ. ಸೆಟ್ ಕೆಲಸಗಾರರು ಸೆಟ್ ನಿರ್ಮಾಣದ ವೇಳೆ ಯಾವುದೋ ಆವೇಶ ಬಂದಂತವರಾಗಿ ಅಲ್ಲಲ್ಲೇ ಮೂರ್ಛೆ ಹೋಗತೊಡಗಿದರು. ಸ್ಥಳಿಯರು ಅರಶಿನ ನೀರನ್ನು ಪ್ರೋಕ್ಷಿಸಿ , ಕೆಲವರನ್ನು ಅಲ್ಲಿನ ಆಸ್ಪತ್ರೆಗೂ ಸೇರಿಸಲಾಯಿತು. ನಂತರ ಆ ಪ್ರದೇಶದಲ್ಲಿ ಯಾರೂ ಸೆಟ್ ಕೆಲಸ ಮಾಡಲು ಮುಂದೆ ಬರಲಿಲ್ಲ. ಸೆಟ್ ಹಾಕಲಿದ್ದ ಆ ಜಾಗವು ಕರಾವಳಿಯ ಉಗ್ರ ರೂಪದ ದೈವ “ಗುಳಿಗ”ನ ಸ್ಥಳ ವೆಂದು ಸ್ಥಳಿಯರು ತಿಳಿಸಿದರು. ದೈವದ ಮೇಲಿನ ಗೌರವ-ಭಕ್ತಿಯಿಂದ ಪುತ್ತೂರಿನಿಂದ ಬೆಳ್ತಂಗಡಿಯ ಅರಣ್ಯ ಪ್ರದೇಶದಲ್ಲಿ ಸೆಟ್ ಕೆಲಸವನ್ನು ಸ್ಥಳಾಂತರ ಗೊಳಿಸಲಾಯಿತು ಎನ್ನುವುದು ಚಿತ್ರತಂಡದ ಮಾತು.
ಗುಳಿಗ ದೈವದ ಪಾತ್ರವನ್ನು ಕೊರಿಯೋಗ್ರಾಫರ್ ಸಂದೀಪ್ ಸೋಪರ್ಕರ್ ನಿರ್ವಹಿಸುತ್ತಿದ್ದಾರೆ. ಮಂಗಳೂರಿನ ಸೋಮೆಶ್ವರ ಸಮುದ್ರ ಕಿನಾರೆಯಲ್ಲಿ ಗುಳಿಗ ದೈವದ ಚಿತ್ರೀಕರಣವನ್ನು ನಡೆಸುತ್ತಿದ್ದಾಗಲೂ, ತಂಡಕ್ಕೆ ಹಲವಾರು ರೀತಿಯ ಅಡೆತಡೆಗಳು ಎದುರಾದವಂತೆ. ಹಿರಿಯರಲ್ಲಿ ವಿಚಾರಿಸಿದಾಗ ನಿರ್ದೇಶಕ ಸುಧೀರ್ ಅತ್ತಾವರ್ ರವರ ಹಿರಿಯರಿದ್ದ ಮನೆಯಲ್ಲಿ ಗುಳಿಗ ದೈವದ ಸಾನಿಧ್ಯವಿದ್ದು , ಹಲವಾರು ವರ್ಷಗಳಿಂದ ಆ ಮನೆಯಲ್ಲಿ ಯಾರೂ ವಾಸವಿಲ್ಲ. ಪಾಳು ಬಿದ್ದಕಾರಣ ದೈವಕ್ಕೆ ಪೂಜೆ ಪುರಸ್ಕಾರಗಳು ನಡೆಯದಿರುವ ವಿಚಾರ ಬೆಳಕಿಗೆ ಬಂತು. ಹೀಗಾಗಿ
ನಿರ್ದೇಶಕರು ದೈವಕ್ಕೆ ಗುಡಿ ನಿರ್ಮಾಣ ಮಾಡುವ ಕಾರ್ಯಕ್ಕೆ ಮುಂದಾಗಿ, ಚಿತ್ರದ ಎಡಿಟಿಂಗ್ ಕೆಲಸ ಮುಗಿದ ಕೂಡಲೇ, ದೈವಸ್ಥಾನದ ಕಾರ್ಯ ಮುಗಿಸಿ, ಗುಳಿಗ ಹಾಗೂ ಕಲ್ಲುರ್ಟಿ ದೈವಗಳಿಗೆ ಅದ್ದೂರಿಯ ಕೋಲ ಸೇವೆಯನ್ನು ನಡೆಸಿದ್ದಾರೆ.
ಹಿರಿಯ ನಟಿ ಭವ್ಯ, ನಿರ್ಮಾಪಕರಾದ ತ್ರಿವಿಕ್ರಮ ಸಾಫಲ್ಯ, ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ, ಕಲಾವಿದರಾದ ಭರತ್ ಸೂರ್ಯ, ರಿತಿಕ ಹಾಗೂ ಹಲವು ತಂತ್ರಜ್ಞರುಕೋಲಸೇವೆಯಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಚಿತ್ರತಂಡವು ಚಿತ್ರೀಕರಣ ಮುಗಿದ ಕೂಡಲೇ ಕೊರಗಜ್ಜನಿಗೂ ಕೋಲಸೇವೆಯನ್ನು ಅದ್ದೂರಿಯಾಗಿ ನೆರವೇರಿಸಿತು. ಕೊರಗಜ್ಜ ಸಿನಿಮಾ ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.