ಬಾಲಿವುಡ್‍ನ ರಾಖಿ ಸಾವಂತ್ ಸಿನಿಮಾಗಳಿಗಿಂತ, ನಟನೆಗಿಂತ ಹೆಚ್ಚಾಗಿ ವಿವಾದಗಳ ಮೂಲಕವೇ ಖ್ಯಾತಿ ಪಡೆದುಕೊಂಡವರು. ಈಗ ಮತ್ತೊಂದು ವಿವಾದದ ಮೂಲಕವೇ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ರಾಖಿ ಸಾವಂತ್, ಮೈಸೂರಿನ ಹುಡುಗ ಆದಿಲ್ ಎಂಬುವವರ ಜೊತೆ ಪ್ರೀತಿಗೆ ಬಿದ್ದಿದ್ದರು. ಇಬ್ಬರೂ ಜೊತೆ ಜೊತೆಯಾಗಿ ಓಡಾಡಿದ್ದು ಸುದ್ದಿಯೂ ಆಗಿತ್ತು. ಈಗ ಅದೇ ಆದಿಲ್ ಜೊತೆ ರಾಖಿ ಸಾವಂತ್ ಮದುವೆಯಾಗಿದ್ದಾರಂತೆ. ಗುಟ್ಟಾಗಿ ನಡೆದ ನಿಖಾದಲ್ಲಿ ರಾಖಿ ಸಾವಂತ್ ಧರ್ಮವನ್ನೂ ಬದಲಿಸಿಕೊಂಡು ಫಾತಿಮಾ ಎಂದು ಹೆಸರು ಬದಲಿಸಿಕೊಂಡಿದ್ದರಂತೆ. ಆದರೆ ಈಗ ಆದಿಲ್ ತಮ್ಮಿಬ್ಬರ ಮದುವೆಯನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ ರಾಖಿ ಸಾವಂತ್.
2022ರಲ್ಲಿ ನಾವಿಬ್ಬರೂ ಮದುವೆಯಾದೆವು. ನಿಖಾಗಾಗಿ ಇಸ್ಲಾಂಗೆ ಮತಾಂತರವಾದೆ. ಫಾತಿಮಾ ಎಂದು ಹೆಸರು ಬದಲಿಸಿಕೊಂಡೆ. ಜುಲೈನಲ್ಲೇ ಮದುವೆಯಾಯಿತು. ಈ ಮದುವೆ ಬಗ್ಗೆ ತಿಳಿದರೆ ನನ್ನ ತಂಗಿಗೆ ಗಂಡು ಸಿಕ್ಕಲ್ಲ ಎಂದು ಹೇಳಿದರು. ಈಗ ನೋಡಿದರೆ ಮದುವೆಯೇ ಆಗಿಲ್ಲ. ರಾಖಿ ಸಾವಂತ್ ನನ್ನ ಪತ್ನಿಯೇ ಅಲ್ಲ ಎನ್ನುತ್ತಿದ್ದಾನೆ ಎಂದಿರೋ ರಾಖಿ ಸಾವಂತ್, ಮದುವೆ ನೋಂದಣಿ ಪತ್ರ ಹಾಗೂ ಇಬ್ಬರೂ ಹಾರ ಬದಲಿಸಿಕೊಂಡಿರೋ ಫೋಟೋ ಬಹಿರಂಗ ಪಡಿಸಿದ್ದಾರೆ.
ರಾಖಿ ಸಾವಂತ್ ಅಲಿಯಾಸ್ ಫಾತಿಮಾ ಅವರನ್ನು ಮದುವೆಯಾಗಿದ್ದಾರೆ ಎನ್ನಲಾದ ಆದಿಲ್ ಖಾನ್ ದುರ್ರಾನಿ ಮೈಸೂರಿನವರು. ಶ್ರೀಮಂತ. ಪ್ರೀತಿಸುವ ವೇಳೆ ರಾಖಿಗೆ ದುಬೈನಲ್ಲಿ ಫ್ಲಾಟ್, ಬಂಗಾರದ ಫೋನ್ ಸೇರಿದಂತೆ ಹಲವು ಐಷಾರಾಮಿ ಉಡುಗೊರೆ ನೀಡಿದ್ದವರು. ಇನ್ನು ರಾಖಿಗೆ ಮದುವೆ ಮತ್ತು ಮೋಸದ ಅನುಭವ ಹೊಸದೇನಲ್ಲ. ಈ ಹಿಂದೆ ರಿತೇಶ್ ಎಂಬುವವರ ಜೊತೆ ಮದುವೆಯಾಗಿದ್ದರು. ಆ ನಂತರ ರಿತೇಶ್ ಅವರಿಗೆ ಮೊದಲೇ ಮದುವೆಯಾಗಿದ್ದು ನನಗೆ ಗೊತ್ತಿರಲಿಲ್ಲ ಎಂದು ದಾಂಪತ್ಯ ಜೀವನದಿಂದ ಹೊರ ಬಂದಿದ್ದರು.