ನಾಟ್ಟು ನಾಟ್ಟು.. ಎಂದು ಹಾಡಿ ಕುಣಿದು ರಂಗೇರಿಸಿದ್ದವರು ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜ. ಆರ್.ಆರ್.ಆರ್. ಚಿತ್ರದಲ್ಲಿನ ಹಾಡಿನಲ್ಲಿ ಈ ಹಾಡು ಮತ್ತು ನೃತ್ಯಕ್ಕೆ ಬ್ರಿಟಿಷರು ಸೋತು ಸುಸ್ತಾಗುತ್ತಾರೆ. ಹಾಡಿನಂತೆಯೇ ವಾಸ್ತವದಲ್ಲೂ ಆಗಿದೆ. ನಾಟ್ಟು ನಾಟ್ಟು ಹಾಡಿಗೆ ಗೋಲ್ಡನ್ ಗ್ಲೋಬ್ ಅವಾರ್ಡ್ ಸಿಕ್ಕಿದೆ. ಎಂ.ಎಂ.ಕೀರವಾಣಿ ಅವರಿಗೆ ಹಾಡಿನ ಈ ಸಂಗೀತಕ್ಕಾಗಿ ಗೋಲ್ಡನ್ ಗ್ಲೋಬ್ ಅವಾರ್ಡ್ ಪ್ರಶಸ್ತಿ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ, ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ, ಚಂದ್ರಬಾಬು ನಾಯ್ಡು ಸೇರಿದಂತೆ ತೆಲುಗು ನಾಡಿನವರು ಹೆಮ್ಮೆಯಿಂದ ಕುಣಿದಾಡುತ್ತಿದ್ದಾರೆ. ತೆಲುಗು ಚಿತ್ರರಂಗದವರಂತೂ ಇದು ನಮ್ಮ ಹೆಮ್ಮೆ ಎಂದು ಎದೆಯುಬ್ಬಿಸುವಂತೆ ಮಾಡಿದ್ದಾರೆ ರಾಜಮೌಳಿ. ಇದು ಭಾರತೀಯ ಚಿತ್ರರಂಗದ ಹೆಮ್ಮೆಯೂ ಹೌದು. ಯಶ್, ಹೊಂಬಾಳೆ ಸೇರಿದಂತೆ ಇಡೀ ಇಂಡಿಯನ್ ಫಿಲ್ಮ್ ಇಂಡಸ್ಟ್ರಿ ನಾಟ್ಟು ನಾಟ್ಟು ಸಾಧನೆಯನ್ನು ಸಂಭ್ರಮಿಸಿದೆ. ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಪ್ರಶಸ್ತಿ ಗೆದ್ದ ಭಾರತೀಯ ಚಿತ್ರ ಆರ್.ಆರ್.ಆರ್.
ಈ ಹಾಡಿಗೆ ಸಂಗೀತ ಸಂಯೋಜಿಸಿದ್ದು ಕೀರವಾಣಿ. ಸಾಹಿತ್ಯ ಬರೆದಿದ್ದು ಚಂದ್ರಬೋಸ್. ಹಾಡನ್ನು ಹಾಡಿದ್ದು ಕಾಲಭೈರವ ಮತ್ತು ರಾಹುಲ್ ಸಿಪ್ಲಿಗಂಜ್. ಕಾಲಭೈವರ ಕೀರವಾಣಿಯವರ ಮಗ. ನಿರ್ದೇಶಕ ರಾಜಮೌಳಿ ಪರಸ್ಪರ ಸಹೋದರರಾಗಬೇಕು. ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದವರ ಹೆಸರು ಪ್ರೇಮ್ ರಕ್ಷಿತ್.
ಗೋಲ್ಡನ್ ಗ್ಲೋಬ್ ಪ್ರಶಸ್ತಿ ಅಂತಾರಾಷ್ಟ್ರೀಯ ಮಟ್ಟದ ಶ್ರೇಷ್ಟ ಪ್ರಶಸ್ತಿಗಳಲ್ಲೊಂದು. ಪ್ರತೀ ವರ್ಷ ಆಸ್ಕರ್ ಘೋಷಣೆಗೆ ಮುನ್ನ ಗೋಲ್ಡನ್ ಗ್ಲೋಬ್ ಘೋಷಣೆಯಾಗುತ್ತದೆ. ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗೆದ್ದ ಚಿತ್ರಗಳ ಬಗ್ಗೆ ಆಸ್ಕರ್ ಜ್ಯೂರಿಗಳಲ್ಲಿ ವಿಶೇಷ ಪ್ರೀತಿಯೂ ಇರುತ್ತದೆ. ಇದನ್ನು ಆಸ್ಕರ್ ನಂತರದ ಪ್ರತಿಷ್ಠಿತ ಪ್ರಶಸ್ತಿ ಎಂದೇ ಗುರುತಿಸುತ್ತದೆ ವಿಶ್ವ ಚಿತ್ರರಂಗ. ಭಾರತೀಯ ಸಾಹಿತ್ಯ ಲೋಕದಲ್ಲಿ ಜ್ಞಾನಪೀಠ ಹಾಗೂ ಸರಸ್ವತಿ ಸಮ್ಮಾನ್ ಪ್ರಶಸ್ತಿಗಳು ಹೇಗೆ ಮಾನ್ಯತೆ ಪಡೆದಿವೆಯೋ, ಹಾಗೆಯೇ ವಿಶ್ವ ಚಿತ್ರರಂಗದಲ್ಲಿ ಆಸ್ಕರ್ ಮತ್ತು ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ಮನ್ನಣೆಯಿದೆ.