ಒಂದು ಅನಾಥ ಆನೆ ಮರಿಯ ಆರೈಕೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ದಕ್ಷಿಣ ಭಾರತೀಯ ದಂಪತಿಯ ಕಥೆ ಇದು. ಬೊಮ್ಮನ್ ಮತ್ತು ಬೆಳ್ಳಿ ಎಂಬ ದಂಪತಿಯ ಆರೈಕೆಯಲ್ಲಿ ಬೆಳೆದ ರಘು ಎಂಬ ಅನಾಥ ಆನೆಯ ಕಥೆಯೇ ಎಲಿಫಂಟರ್ ವಿಸ್ಪರರ್ಸ್. ಈ ಕಥೆಯ ನಿರ್ದೇಶನ ಮಾಡಿರುವ ಕಾರ್ತಿಕಿ ಗೊನ್ಸಾಲ್ವೆಸ್ ಅವರು ಮೂಲತಃ ತಮಿಳುನಾಡಿನ ಊಟಿಯವರು. ಡಾಕ್ಯುಮೆಂಟರಿ ಫಿಲ್ಮ್ ಮೇಕರ್ ಆಗಿರುವ ಕಾರ್ತಿಕಿ, ಉತ್ತಮ ಫೋಟೋಗ್ರಾಫರ್ ಕೂಡ ಹೌದು. ಈ ಹಿಂದೆ ಕ್ಯಾಮೆರಾ ಅಪರೇಟರ್ ಆಗಿ ಅನಿಮಲ್ ಪ್ಲಾನೆಟ್ ಮತ್ತು ಡಿಸ್ಕವರಿ ಚಾನೆಲ್ಗಳಿಗೆ ಕಾರ್ತಿಕಿ ಕೆಲಸ ಮಾಡಿದ್ದಾರೆ. ಇದೀಗ 41 ನಿಮಿಷಗಳ ‘ದಿ ಎಲಿಫೆಂಟ್ ವಿಸ್ಪರರ್ಸ್’ ಮೂಲಕ ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಆ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾರೆ.
ಬೆಸ್ಟ್ ಡಾಕ್ಯುಮೆಂಟರಿ ಶಾರ್ಟ್' ವಿಭಾಗದಲ್ಲಿ 'ದಿ ಎಲಿಫೆಂಟ್ ವಿಸ್ಪರರ್ಸ್' ಡಾಕ್ಯುಮೆಂಟರಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿದ್ದು, ಡಾಕ್ಯುಮೆಂಟರಿಯನ್ನು ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶನ ಮಾಡಿದ್ದಾರೆ. ಈ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದ ಭಾರತದ ಮೊದಲ ಡಾಕ್ಯುಮೆಂಟರಿ ಎಂಬ ಖ್ಯಾತಿಗೂ 'ದಿ ಎಲಿಫೆಂಟ್ ವಿಸ್ಪರರ್ಸ್' ಪಾತ್ರವಾಗಿದೆ. ಈ ಸಾಕ್ಷ್ಯಚಿತ್ರವು ಆನೆ ಮತ್ತು ಆ ದಂಪತಿ ನಡುವೆ ಬೆಳೆಯುವ ಬಾಂಧವ್ಯವನ್ನು ಮಾತ್ರವಲ್ಲದೆ ಅವರ ಸುತ್ತಮುತ್ತಲಿನ ನೈಸರ್ಗಿಕ ಸೌಂದರ್ಯ ವರ್ಣಿಸುವ ಕಥೆ.
ಈ ಸಾಕ್ಷ್ಯಚಿತ್ರ ಆಸ್ಕರ್ ಗೆದ್ದ ಸಂಭ್ರಮದಲ್ಲಿಯೇ ಮಾತನಾಡಿರುವ ಬೆಳ್ಳಿ, ಆನೆ ಆರೈಕೆ ಮಾಡುವುದು ಸುಲಭದ ಕೆಲಸವಲ್ಲ. ಕಷ್ಟಪಡಬೇಕು. ಆದರೆ ಆನೆಯ ಪ್ರೀತಿಯ ಮುಂದೆ ನನ್ನ ಕಷ್ಟ ಏನೂ ಅಲ್ಲ. ನನಗೆ ಆನೆಯ ಪ್ರೀತಿಯೇ ಮಿಗಿಲು.ಈಗ ಶಿಬಿರಕ್ಕೆ ಆಗಮಿಸುವ ಪ್ರವಾಸಿಗರು ಬಂದು ಮಾತನಾಡಿಸುತ್ತಾರೆ. ನಿಮ್ಮ ಚಿತ್ರ ನೋಡಿದ್ದೇವೆ ಎನ್ನುತ್ತಿದ್ದಾರೆ. ಬಹುತೇಕರು ಆನೆಯ ಫೋಟೋ ತೆಗೆಯುವ ಬದಲು ನನ್ನ ಜೊತೆ ನಿಂತು ಫೋಟೋ ತೆಗೆಯುತ್ತಿದ್ದಾರೆ. ಇದೀಗ ಚಿತ್ರ ಆಸ್ಕರ್ ಪ್ರಶಸ್ತಿ ಗೆದ್ದಿರುವುದು ಅತೀವ ಹೆಮ್ಮೆ ಎನಿಸುತ್ತಿದೆ ಎಂದಿದ್ದಾರೆ ಬೆಳ್ಳಿ.