ಹೊಸ ಪಯಣ. ಶಾಂತಿ ಮತ್ತು ನೆಮ್ಮದಿಯ ಜೀವನಕ್ಕೆ ನಿಮ್ಮ ಆಶೀರ್ವಾದ ಇರಲಿ. ಒಂದು ಪವಿತ್ರ ಬಂಧ. ಎರಡು ಮನಸ್ಸುಗಳು, ಏಳು ಹೆಜ್ಜೆಗಳು, ನಿಮ್ಮ ಆಶೀರ್ವಾದವನ್ನು ಕೋರಿ. ನಿಮ್ಮ ಪವಿತ್ರಾ ನರೇಶ್
ಹೀಗೊಂದು ಟ್ವೀಟ್ ಮಾಡುವ ಮೂಲಕ ತಮ್ಮ ಮದುವೆಯನ್ನು ಜಗತ್ತಿಗೆ ಸಾರಿದ್ದಾರೆ ಪವಿತ್ರಾ ಲೋಕೇಶ್. ಇವರ ಮದುವೆ ವಿಡಿಯೋ ಕ್ಷಣಮಾತ್ರದಲ್ಲಿ ವೈರಲ್ ಆಗಿದೆ. ದಂಪತಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ನರೇಶ್ ಹಾಗೂ ಪವಿತ್ರಾ ಹೈದರಾಬಾದ್ನಲ್ಲಿ ಮದುವೆ ಆಗಿದ್ದಾರೆ ಎನ್ನಲಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಪವಿತ್ರಾ ಲೋಕೇಶ್ ಅವರನ್ನು ಸಂಪ್ರದಾಯಬದ್ಧವಾಗಿ ಮದುವೆ ಮಾಡಿಕೊಂಡಿದ್ದಾರೆ ನರೇಶ್. ಸಪ್ತಪದಿ ತುಳಿಯುವುದರಿಂದ ಹಿಡಿದ ಮದುವೆಯಲ್ಲಿ ಮಾಡಬಹುದಾದ ಎಲ್ಲ ಸಂಪ್ರದಾಯಗಳನ್ನು ಮಾಡಿದ್ದಾರೆ. ಆ ಕ್ಷಣಗಳನ್ನು ವಿಡಿಯೋ ಮಾಡಿ, ಪೋಸ್ಟ್ ಮಾಡಿದ್ದಾರೆ.
ಪವಿತ್ರಾ ಲೋಕೇಶ್ ಅವರಿಗೆ ಇದು ಮೊದಲನೇ ಮದುವೆ. ಸುಚೇಂದ್ರ ಪ್ರಸಾದ್ ಅವರ ಜೊತೆ ಮದುವೆ ಆಗಿರಲಿಲ್ಲ. ಲಿನ್ ಇನ್ ಟುಗೆದರ್`ನಲ್ಲಿದ್ದರು. ಆದರೆ ನರೇಶ್ ಅವರಿಗೆ ಇದು 4ನೇ ಮದುವೆ. ನರೇಶ್ ಅವರು ಈ ಮೊದಲು ಮೂರು ಮದುವೆ ಆಗಿದ್ದರು. ಮೂರನೇ ಪತ್ನಿ ರಮ್ಯಾ ರಘುಪತಿ ಜೊತೆ ಅವರಿಂದ ಇನ್ನೂ ವಿಚ್ಚೇದನ ಪಡೆದಿಲ್ಲ. ರಮ್ಯಾ ರಘುಪತಿ ಹಾಗೂ ನರೇಶ್ ಪ್ರೀತಿಸಿ ಮದುವೆ ಆದವರು. ಈ ದಂಪತಿಗೆ ಓರ್ವ ಮಗನಿದ್ದಾನೆ. ಮಗನಿಗೋಸ್ಕರ ನಾನು ಎಲ್ಲವನ್ನೂ ಸಹಿಸಿಕೊಂಡಿದ್ದೀನಿ. ಪತಿ ಜೊತೆ ಇರ್ತೀನಿ. ನಾನು ಏನೇ ಮಾಡಿದರೂ ಅವರಿಗೆ ವಿಚ್ಛೇದನ ಕೊಡಲ್ಲ ಎಂದು ಹೇಳಿದ್ದರು ರಮ್ಯ.
ಕಾನೂನು ಸಮಸ್ಯೆ ಎದುರಾಗಲಿದೆಯಾ?
ಮದುವೆ ಆಗಿ, ಅದನ್ನು ನೋಂದಣಿ ಮಾಡಿಸಿದ ನಂತರ ಹೆಣ್ಣು/ಗಂಡು ಬೇರೆ ಮದುವೆ ಆಗಬೇಕು ಎಂದರೆ ವಿಚ್ಛೇದನ ನೀಡಲೇಬೇಕು. ಕಾನೂನಾತ್ಮಕವಾಗಿ ಬೇರೆ ಆದ ಬಳಿಕವೇ ಗಂಡು/ಹೆಣ್ಣು ಬೇರೆ ಮದುವೆ ಆಗಬಹುದು. ವಿಚ್ಛೇದನ ಪಡೆಯದೇ ಬೇರೆ ಮದುವೆ ಆದರೆ, ಅದನ್ನು ಮದುವೆ ಎಂದು ಪರಿಗಣಿಸಲು ಕಾನೂನಿಂದ ಸಾಧ್ಯವಿಲ್ಲ. ನರೇಶ್ ಅವರು ಮೂರನೇ ಪತ್ನಿಯಿಂದ ವಿಚ್ಛೇದನ ಪಡೆಯದೇ ಈಗ 4ನೇ ಮದುವೆ ಆಗಿದ್ದಾರೆ. ಈ ಮದುವೆಗೆ ಕಾನೂನಿನ ಮಾನ್ಯತೆ ಇರುವುದಿಲ್ಲ. ಈ ಸಂಬಂಧ ರಮ್ಯಾ ಅವರು ಮಾತ್ರ ದೂರು ಕೊಡಬಹುದು. ಬೇರೆಯವರು ದೂರು ನೀಡಿದರೆ ಆ ದೂರಿಗೂ ಮಾನ್ಯತೆ ಇಲ್ಲ ಎನ್ನಲಾಗಿದೆ. ದೂರು ನೀಡಿದರೆ ನರೇಶ್ ಮತ್ತು ಪವಿತ್ರಾ ಇಬ್ಬರೂ ಅಪರಾಧ ಎಸಗಿದಂತೆ ಆಗುತ್ತದೆ.
ಈ ಮದುವೆ ವಿರುದ್ಧ ರಮ್ಯಾ ಕೋರ್ಟಿಗೆ ಹೋದರೆ, ಅದು ಸಿನಿಮಾಗಾಗಿ ತಗೆದಿರುವ ದೃಶ್ಯವೆಂದು ಹೇಳಿ ಬಚಾವ್ ಆಗಬಹುದು. ರಮ್ಯಾ ಸುಮ್ಮನಾದರೆ ಅದನ್ನೇ ಮದುವೆ ಎಂದು ಅಂದುಕೊಳ್ಳಬಹುದು ಎನ್ನುವ ಮಾತುಗಳು ಕೂಡ ತೆಲುಗು ಸಿನಿಮಾ ರಂಗದಲ್ಲಿ ಹರಿದಾಡುತ್ತಿದೆ.