ತುನಿಷಾ ಶರ್ಮಾ. ಈ ಹೆಸರೀಗ ದೇಶದಾದ್ಯಂತ ಸುದ್ದಿಯಲ್ಲಿದೆ. ಸೋನಿ ಟಿವಿ ಶೋ ಭಾರತ್ ಕಾ ವೀರ್ ಪುತ್ರ - ಮಹಾರಾಣಾ ಪ್ರತಾಪ್ ಮೂಲಕ ನಟನೆಗೆ ಕಾಲಿಟ್ಟ ಬಾಲನಟಿ ತುನಿಶಾ ಶರ್ಮ. ಹಲವು ಹಿಂದಿ ಚಿತ್ರಗಳಲ್ಲಿ ಬಾಲನಟಿಯಾಗಿದ್ದ ತುನಿಶಾ ಶರ್ಮ, ಸೀರಿಯಲ್ ಹಾಗೂ ಟಿವಿ ಶೋಗಳಲ್ಲಿ ನಟಿಸುತ್ತಿದ್ದರು. ಇತ್ತೀಚೆಗೆ ಮುಂಬೈನಲ್ಲಿ ಶೂಟಿಂಗ್ ಸೆಟ್‍ನಲ್ಲಿರುವಾಗಲೇ ಟಾಯ್ಲೆಟ್ ರೂಮಿನಿಲ್ಲಿ ಸತ್ತು ಬಿದ್ದಿದ್ದರು. ತುನಿಶಾ ಪ್ರಕರಣ ಮೇಲ್ನೋಟಕ್ಕೆ ಆತ್ಮಹತ್ಯೆ ಎನ್ನಲಾಗಿದೆ. ಆದರೆ ಚಿತ್ರ ವಿಚಿತ್ರ ಶಂಕೆ ಮೂಡಿದ್ದು, ದೇಶದಾದ್ಯಂತ ಸಂಚಲನ ಸೃಷ್ಟಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯೊಂದಿಗೆ ಸಹನಟನಾಗಿ ನಟಿಸುತ್ತಿದ್ದ ಶೀಜಾನ್ ಮೊಹಮ್ಮದ್ ಖಾನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಕೇಳಿ ಬಂದಿದೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸೈ ಅಲ್ಲಿ ಶೂಟಿಂಗ್ ವೇಳೆಯೇ ಶೌಚಾಲಯಕ್ಕೆ ತೆರಳಿದ ನಟಿ ತುನಿಷಾ ಶರ್ಮಾ ಶರ್ಮಾ ಅಲ್ಲೇ ಸಾವಿಗೆ ಶರಣಾಗಿದ್ದರು. ಈ ಕುರಿತು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಟ ಶೀಜಾನ್ ಮೊಹಮ್ಮದ್ ಖಾನ್ನನ್ನು ಬಂಧಿಸಿದ್ದಾರೆ. ನ್ಯಾಯಾಲಯ ಮೊಹಮ್ಮದ್ ಖಾನ್ನನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ಮತ್ತೊಬ್ಬ ಸಹ ನಟ ಪಾರ್ಥ್ ಜುಟ್ಶಿ ಅವರನ್ನು ಕೂಡ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ತುನಿಶಾ ಹಾಗೂ ಶೀಜಾನ್ ಮಧ್ಯೆ ರಿಲೇಷನ್ ಶಿಪ್ ಇತ್ತು. 15 ದಿನಗಳ ಹಿಂದೆ ಬ್ರೇಕಪ್ ಆಗಿತ್ತು. ಆದರೆ ತುನಿಶಾಗೆ ಬ್ರೇಕಪ್ ಇಷ್ಟವಿರಲಿಲ್ಲ. ಹೀಗಾಗಿಯೇ ಮಾನಸಿಕ ಒತ್ತಡಕ್ಕೊಳಗಾಗಿ ತುನಿಶಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವುದು ಆರೋಪ. ಮತ್ತೊಬ್ಬ ನಟ ಪಾರ್ಥ, ಈ ಘಟನೆ ನಡೆದಾಗ ಸೆಟ್ಟಿನಲ್ಲಿ ಇರಲಿಲ್ಲವಂತೆ. ಆದರೆ ತುನಿಶಾ ಮತ್ತು ಶೀಜಾನ್ ನಡುವಿನ ರಿಲೇಷನ್‍ಶಿಪ್ ಈತನಿಗೂ ಗೊತ್ತಿತ್ತು ಎನ್ನಲಾಗಿದೆ. ಆದರೆ ಅದು ಆಕೆಯ ಪರ್ಸನಲ್ ಎಂದು ಸುಮ್ಮನಿದ್ದೆ ಎಂದು ಪೊಲೀಸರ ಎದುರು ಹೇಳಿಕೆ ನೀಡಿದ್ದಾರೆಂಬ ಮಾಹಿತಿಯೂ ಇದೆ. ತುನಿಶಾಗೆ 20 ವರ್ಷ. ಟಾಯ್ಲೆಟ್ಟಿನಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಸೀರಿಯಲ್ ತಂಡ ಒಟ್ಟಾರೆ 14 ಜನರನ್ನು ವಿಚಾರಣೆಗೆ ಒಳಪಡಿಸಿದ್ದು, ಶೀಜಾನ್‍ನ್ನು ಮಾತ್ರ ಅರೆಸ್ಟ್ ಮಾಡಿದ್ದಾರೆ. ತುನಿಶಾ ತಾಯಿ ಕೂಡಾ ಶೀಜಾನ್ ವಿರುದ್ಧ ದೂರು ನೀಡಿದ್ದಾರೆ.
ಪ್ರಕರಣದ ಬಗ್ಗೆ ರಾಜಕೀಯ ಹೇಳಿಕೆಗಳೂ ಹೊರಬಿದ್ದಿವೆ. ಈ ಘಟನೆ ಬಗ್ಗೆ ಲವ್ ಜಿಹಾದ್ ಆಂಗಲ್‍ನಲ್ಲೂ ತನಿಖೆಯಾಗಬೇಕು ಎಂದು ಮಹಾರಾಷ್ಟ್ರ ಬಿಜೆಪಿಯ ಕೆಲ ನಾಯಕರು ಹೇಳಿಕೆ ನೀಡಿದ್ದಾರೆ.