ಮಲೆನಾಡಿನ ಕಥೆಗಳು ಜನರಿಗೆ ಇತ್ತೀಚೆಗೆ ಹೆಚ್ಚು ಹೆಚ್ಚು ಇಷ್ಟವಾಗುತ್ತಿವೆ. ಆ ಹಾದಿಯಲ್ಲಿ ಮಲೆನಾಡಿನ ಅಪರೂಪದ ಕಥೆಯೊಂದನ್ನು ಸಿದ್ಧ ಮಾಡಿಟ್ಟುಕೊಂಡು ಬಂದಿದೆ ಬಾಲಾಜಿ ಫೋಟೋ ಸ್ಟುಡಿಯೋಸ್. ಇದು ಶಿರಸಿ, ಹೊನ್ನಾವರ ಭಾಗದಲ್ಲಿ ನಡೆಯುವ ಕಥೆ. ಒಬ್ಬ ಫೋಟೋಗ್ರಾಫರ್, ಆತನ ಫೋಟೋ ಸ್ಟುಡಿಯೋ ನಡುವಿನ ಸಂಬಂಧದ ಕಥೆ. ಒಂದು ಚೆಂದದ ಲವ್ ಸ್ಟೋರಿಯೂ ಅಲ್ಲಿದೆ. ಕಿರುತೆರೆಯಲ್ಲಿ ಸಂಚಲನ ಮೂಡಿಸಿದ್ದ ರಾಜೇಶ್ ಧ್ರುವ, ರವಿ ಸಾಲಿಯಾನ್, ರಾಧಿಕಾ ಅಚ್ಯುತ್ ರಾವ್, ಸಂಪತ್ ಜೆ.ರಾಮ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಶುಭಲಕ್ಷ್ಮಿ, ಬಿಗ್ ಬಾಸ್ ಖ್ಯಾತಿಯ ನಕುಲ್, ರಕ್ಷಿತ್, ರವಿ ಮೂರೂರು, ಶಿಶಿರ್.. ಹೀಗೆ ಚಿತ್ರದಲ್ಲಿ ದೊಡ್ಡ ತಾರಾಗಣವೇ ಇದೆ. ನಟಿಸುವವರಲ್ಲಿ ಬಹುತೇಕರು ಕಿರುತೆರೆಯಲ್ಲಿ ಹೆಸರು ಮಾಡಿರುವ ಕಲಾವಿದರು.
ಚಿತ್ರದ ಹಾಡುಗಳು ಇತ್ತೀಚೆಗೆ ಬಿಡುಗಡೆಯಾದವರು. ನಟ ವಿಜಯ್ ರಾಘವೇಂದ್ರ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್ ಕಶ್ಯಪ್ ಹಾಡು ರಿಲೀಸ್ ಮಾಡಿ ಚಿತ್ರಕ್ಕೆ ಶುಭ ಹಾರೈಸಿದರು. ಛಾಯಾಗ್ರಾಹಕರಾಗಿರುವ ಅಶೋಕ್ ಕಶ್ಯಪ್ ಅವರಿಗೆ ಸಹಜವಾಗಿಯೇ ಚಿತ್ರದ ಫ್ರೇಮು, ಕ್ಯಾಮೆರಾವರ್ಕ್ ಇಷ್ಟವಾಯಿತು. ಇದೇ ತಂಡದ ಜೊತೆ ಕೆಲಸ ಮಾಡುವ ಆಸೆಯಿದೆ ಎಂದು ಬಯಕೆ ತೋಡಿಕೊಂಡರು ವಿಜಯ್ ರಾಘವೇಂದ್ರ.
ಸೃಜನ ಪ್ರೊಡಕ್ಷನ್ಸ್ ಬ್ಯಾನರಿನಲ್ಲಿ ವೆಂಕಟೇಶ್ವರ ರಾವ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಒಂದೊಳ್ಳೆ ಸಿನಿಮಾ ಮಾಡಿದ ತೃಪ್ತಿಯಿದೆ ಎಂದು ಖುಷಿಯಿಂದ ಹೇಳಕೊಂಡರು ವೆಂಕಟೇಶ್ವರ ರಾವ್. ನಿರ್ದೇಶಕ ರಾಜೇಶ್ ಧ್ರುವ ಚಿತ್ರದ ಚಿತ್ರೀಕರಣದ ಕಷ್ಟಗಳನ್ನು ಹೇಳಿಕೊಳ್ಳುತ್ತಲೇ ಅಂತಿಮ ಫಲಿತಾಂಶ ಬಂದಾಗ ಆಗುವ ಖುಷಿಯೇ ಬೇರೆ ಎಂದು ಅನುಭವ ಹಂಚಿಕೊಂಡರು. ಅಭಿಷೇಕ್ ಶಿರಸಿ ಪಲ, ಪೃಥ್ವಿಕಾಂತ್ ಪನ್ನಿ ಕಥೆ, ಚಿತ್ರಕಥೆಯಿದ್ದು ಅಜಿತ್ ಬೊಪ್ಪನಳ್ಳಿ ಸಂಭಾಷಣೆಯಿದೆ. ಶ್ರೀರಾಮ್ ಗಂಧರ್ವ ಸಂಗೀತ ನಿರ್ದೇಶನವಿದ್ದು, ಬಾಲಾಜಿ ಸ್ಟುಡಿಯೋಗೆ ಮನೋಜ್ ಸಿನಿ ಸ್ಟುಡಿಯೋ ಛಾಯಾಗ್ರಹಣವಿದೆ.