ಸೂರ್ಯಕಾಂತಿ ನಾನು.. ನನ್ನ ಸೂರ್ಯ ನೀನು..
ನೀ ಎತ್ತಾಗೋದ್ರೂ.. ಅತ್ತಾಕಡೆ ತಿರುಗ್ತೀನಿ ನಾನು..
ಹೊಂಗೆ ನೆರಳಂಗೆ ನಿನ್ನ ಪ್ರೀತಿ ಅಕ್ಕರೆ..
ನಿನ್ನ ಬಾಳಿನಲ್ಲಿ ನಾನು ಮಂಡ್ಯ ಸಕ್ಕರೆ..
ಹೂವ ಬಳ್ಳಿ ನಾನು ನಿನ್ನ ಸುತ್ತ ಹಬ್ಬಲೆ..
ಲೋಕ ನಾಚುವಂತೆ ನಿನ್ನ ನಾನು ತಬ್ಬಲೆ..
ಹೂ ಅನ್ನು.. ಉಹೂಂ ಅನ್ನಬ್ಯಾಡ..ಮಾಮ..
ಟಗರುಪಲ್ಯದ ಸೂರ್ಯಕಾಂತಿ ಹಾಡಿದು. ಮಾವನ ಮೇಲಿನ ಪ್ರೀತಿಯನ್ನು ಹೇಳೋ ಹಾಡಿನ ಲಿರಿಕಲ್ ವಿಡಿಯೋ ಬಿಟ್ಟಿದೆ ಟಗರುಪಲ್ಯ ಟೀಂ. ಸ್ವತಃ ಧನಂಜಯ ಅವರೇ ಕ್ಯಾಚಿ ಮ್ಯಾಚಿ ಪದಗಳನ್ನು ಪೊಣಿಸಿ ಸಾಹಿತ್ಯ ಬರೆದಿದ್ದು, ಮಾಧುರಿ ಶೇಷಾದ್ರಿ ಕಂಠ ಕುಣಿಸಿದ್ದು, ವಾಸುಕಿ ವೈಭವ್ ಟ್ಯೂನ್ ಹಾಕಿದ್ದಾರೆ. ಹಳ್ಳಿ ಸೊಗಡಿನ ಕಂಪು ಹೊಂದಿರುವ ಈ ಮೆಲೋಡಿ ಹಾಡಿಗೆ 'ಲವ್ಲಿ ಸ್ಟಾರ್' ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಹೆಜ್ಜೆ ಹಾಕಿದ್ದಾರೆ. ಲಂಗ ದಾವಣಿ ತೊಟ್ಟು ಪಕ್ಕಾ ಹಳ್ಳಿ ಹುಡುಗಿಯಾಗಿ ಮಿಂಚಿದ್ದಾರೆ.
ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ ‘ಟಗರು ಪಲ್ಯ’ ಚಿತ್ರಕ್ಕೆ ಉಮೇಶ್ ಕೆ ಕೃಪ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಮೂಲಕ ನಟಿಯಾಗಿ 'ನೆನಪಿರಲಿ' ಪ್ರೇಮ್ ಮಗಳು ಅಮೃತಾ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ನಾಗಭೂಷಣ್ 'ಟಗರು ಪಲ್ಯ'ದ ನಾಯಕ. ಈಗಾಗಲೇ ನಾಗಭೂಷಣ್ ಹಾಗೂ ಅಮೃತಾ ಅವರ ಕಾಂಬಿನೇಶನ್ ಭಾರೀ ಕುತೂಹಲವನ್ನು ಸೃಷ್ಟಿ ಮಾಡಿದೆ. ಹಿರಿಯ ಕಲಾವಿದರಾದ ರಂಗಾಯಣ ರಘು, ತಾರಾ, ಶರತ್ ಲೋಹಿತಾಶ್ವ ಸೇರಿದಂತೆ ದೊಡ್ಡ ಸ್ಟಾರ್ ಕಾಸ್ಟ್ ಚಿತ್ರಕ್ಕೆ ಸಾಥ್ ಕೊಟ್ಟಿದೆ.