ಗೀತಾ. ಗಣೇಶ್ ಅಭಿನಯದ ಜನ ಮೆಚ್ಚುಗೆ ಪಡೆದಿರುವ ಈ ಚಿತ್ರಕ್ಕೆ ಪ್ರೇಕ್ಷಕ ಬಹುಪರಾಕ್ ಎಂದಿದ್ದಾನೆ. ಚಿತ್ರದ ಕಥೆ, ಗೋಕಾಕ್ ಕನ್ನಡ ಚಳವಳಿ, ಆ ಕಥೆಯನ್ನು ನವಿರಾದ ಪ್ರೇಮಕಥೆಯೊಂದಿಗೆ ಹೇಳಿರುವ ರೀತಿ, ನಿರ್ದೇಶಕ ವಿಜಯ್ ನಾಗೇಂದ್ರ ಅವರ ಪ್ರತಿಭೆಯೂ ಪ್ರೇಕ್ಷಕರಿಗೆ ಇಷ್ಟವಾಗಿದೆ. ತಮ್ಮ ಸಿನಿಮಾ ವಿಭಿನ್ನವಾಗಿದೆ ಎಂದು ಹೆಮ್ಮೆಯಿಂದ ಬೀಗುತ್ತಿದ್ದ ನಿರ್ಮಾಪಕ ಸೈಯದ್ ಸಲಾಂ ಅವರಿಗೆ ಅವರ ಪತ್ನಿ ಕೇಳಿರುವ ಆ ಒಂದು ಪ್ರಶ್ನೆ ಶಾಕ್ ಕೊಟ್ಟಿದೆ. ಹೌದಲ್ವಾ.. ನನಗ್ಯಾಕೆ ಇದು ಮೊದಲೇ ಹೊಳೀಲಿಲ್ಲ ಎಂದು ಯೋಚಿಸುವಂತೆ ಮಾಡಿದೆ.
ಇಷ್ಟಕ್ಕೂ ಸೈಯದ್ ಸಲಾಂ ಅವರ ಪತ್ನಿ ಸೈಯದ್ ಹಸೀನಾ ಸಲಾಂ ಕೇಳಿದ ಪ್ರಶ್ನೆ ಕುತೂಹಲಕಾರಿಯಾಗಿದೆ.
`ಅದೇಕೆ ನೀವು ನಿಮ್ಮ ಮೂರು ಚಿತ್ರಗಳಲ್ಲಿ ಒಂದೇ ಕಥೆಯನ್ನು ಹೇಳಿದ್ದೀರಿ. ಬೇರೆ ಕಥೆ ಹೇಳಬಾರದೆ' ಎಂದಿದ್ದಾರೆ. ಅದು ಹೇಗೆ ಎಂದವರಿಗೆ ಹಸೀನಾ ಅವರು ಕೊಟ್ಟಿರುವ ವಿವರಣೆ ಶಾಕ್ ಕೊಟ್ಟಿದೆ.
ಸೈಯದ್ ಸಲಾಂ ಅವರ ಮೊದಲ ಸಿನಿಮಾ ಲೈಫು ಇಷ್ಟೇನೇ. ಆ ಚಿತ್ರದಲ್ಲಿ ಹೀರೋ ದಿಗಂತ್‍ಗೆ ಲವ್ ಮೇಲೆ ಲವ್ವುಗಳಾಗುತ್ತವೆ. ಕೊನೆಗೆ
ಹೀರೋ ಮದುವೆಯಾಗುವುದು 6ನೇ ಗರ್ಲ್ ಫ್ರೆಂಡ್ ಜೊತೆ.
ಇನ್ನು 2ನೇ ಸಿನಿಮಾ ಮುಗುಳುನಗೆ. ಆ ಚಿತ್ರದಲ್ಲಿ ಗಣೇಶ್ ಮೂವರನ್ನು ಲವ್ ಮಾಡ್ತಾರೆ. ಅವರೆಲ್ಲರನ್ನೂ ಬಿಟ್ಟು.. ಮದುವೆಯಾಗುವುದು ನಾಲ್ಕನೇ ಗೆಳತಿ ಅಮೂಲ್ಯರನ್ನು.
ಈಗ ನೋಡಿದರೆ.. ಗೀತಾದಲ್ಲಿ ಕೂಡಾ ಹಾಗೆಯೇ ಆಗಿದೆ. ಮೂವರು ಹೀರೋಯಿನ್ಸ್. ಪ್ರೀತಿ ಒಬ್ಬರ ಜೊತೆಗೆ.. ಮದುವೆ.. ???
ಸೈಯದ್ ಸಲಾಂ ನಿರ್ಮಾಪಕರಾದರೂ ಒಳ್ಳೆಯ ಸಾಹಿತ್ಯ ಪ್ರೇಮಿ. ಕಥೆ, ಕಾದಂಬರಿ ಇಷ್ಟಪಡುವವರು. ಮನೆಯಲ್ಲೇ ಒಂದು ಲೈಬ್ರರಿ ಇಟ್ಟುಕೊಂಡಿರುವ ಸೈಯದ್ ಸಲಾಂ ಅವರಿಗೆ, ತಮಗೆ ಹೊಳೆಯದ ಈ ಹೋಲಿಕೆ ತಮ್ಮ ಪತ್ನಿಗೆ ಹೊಳೆದಿದ್ದು ನೋಡಿ ಖುಷಿಗೊಂಡಿದ್ದಾರೆ. ನನ್ನ ಚಿತ್ರಗಳ ಹೀರೋಯಿನ್ಸ್ ಎಷ್ಟೇ ಇರಲಿ, ನನಗೆ ನೀನೊಬ್ಬಳೇ ನಾಯಕಿ ಎಂದು ಪತ್ನಿಗೆ ಹೇಳಿದರಾ..? ಹೇಳಿರ್ತಾರೆ ಬಿಡಿ...