ಡಾಲಿ ಧನಂಜಯ ಅವರಿಗೆ ಆಗಸ್ಟ್ 23 ಹುಟ್ಟುಹಬ್ಬದ ದಿನ. ಹುಟ್ಟುಹಬ್ಬದ ದಿನ ಊರಲ್ಲಿರಲ್ಲ, ಮನೆಯಲ್ಲಿರಲ್ಲ ಎಂದು ಮೊದಲೇ ಹೇಳಿದ್ದ ಡಾಲಿ ಅಭಿಮಾನಿಗಳಿಗೆ ಹಿತವಾದ ಶಾಕ್`ಗಳನ್ನಂತೂ ಕೊಟ್ಟಿದ್ದಾರೆ. ಒಂದೊಂದು ಶಾಕ್‍ಗಳೂ ಅಭಿಮಾನಿಗಳ ಖುಷಿ ಹೆಚ್ಚಿಸಿರುವುದು ವಿಶೇಷ.
ಕೆಆರ್‍ಜಿ ಸ್ಟುಡಿಯೋಸ್ ಮೂಲಕ ನಿರ್ಮಾಣವಾಗುತ್ತಿರುವ ಉತ್ತರಕಾಂಡ ಚಿತ್ರಕ್ಕೆ ಹೀರೋ ಡಾಲಿ ಧನಂಜಯ. ರೋಹಿತ್ ಪದಕಿ ನಿರ್ದೇಶನದಲ್ಲಿ ಸಿನಿಮಾ ಘೋಷಣೆಯಾಗಿತ್ತಾದರೂ ಹೀರೋ ಯಾರು ಅನ್ನೋ ಸಸ್ಪೆನ್ಸ್ ಹಾಗೆಯೇ ಇತ್ತು. ಉತ್ತರದ ದರೋಡೆಕೋರರ ಕಥೆಯನ್ನಾಧರಿಸಿದ ಚಿತ್ರದ ಪೋಸ್ಟರ್ ಹೊರಬಿದ್ದಿದ್ದು ಡಾಲಿ ರಗಡ್ ಲುಕ್`ನಲ್ಲಿ ಮಿಂಚಿದ್ದಾರೆ. ಇನ್ ಮ್ಯಾಲಿಂದ ಪುಲ್ ಗುದ್ದಾಂ ಗುದ್ದಿ ಅನ್ನೋ ಟ್ಯಾಗ್‍ಲೈನ್ ಕೊಟ್ಟು ಪೋಸ್ಟರ್ ಬಿಟ್ಟಿದ್ದಾರೆ ಕಾರ್ತಿಕ್ ಗೌಡ ಮತ್ತು ಯೋಗಿ ಬಿ.ರಾಜ್ ಜೋಡಿ.
ಇದೇ ಕಾರ್ತಿಕ್ ಗೌಡ ನಿರ್ಮಾಣದ ಹೊಯ್ಸಳ ಚಿತ್ರದಲ್ಲೂ ಡಾಲಿ ಹೀರೋ. ಆ ಚಿತ್ರದ ಇನ್ನೊಂದು ಪೋಸ್ಟರ್ ರಿಲೀಸ್ ಆಗಿದ್ದು ಅಭಿಮಾನಿಗಳಿಗೆ ಮಜಾ ಕೊಟ್ಟಿದೆ.
ಹೆಡ್ ಬುಷ್ ಚಿತ್ರ ಸ್ವತಃ ಡಾಲಿ ಧನಂಜಯ ನಿರ್ಮಾಣದ ಸಿನಿಮಾ. ರಾಮ್ಕೋ ಸೋಮಣ್ಣ ಜೊತೆ ನಿರ್ಮಾಣವಾಗುತ್ತಿರೋ ಚಿತ್ರಕ್ಕೆ ಶೂನ್ಯ ಡೈರೆಕ್ಟರ್. ಡಾಲಿ ಧನಂಜಯ್, ಪಾಯಲ್ ರಜಪೂತ್, ವಸಿಷ್ಠ ಸಿಂಹ, ಲೂಸ್ ಮಾದ ಯೋಗಿ ಹೀಗೆ ಬಹುದೊಡ್ಡ ತಾರಾಗಣದ ಚಿತ್ರವಿದು. ಅಗ್ನಿ ಶ್ರೀಧರ್ ಅವರದ್ದೇ ಕಥೆ ಮತ್ತು ಚಿತ್ರಕಥೆ. ಈ ಹೆಡ್ ಬುಷ್ ಚಿತ್ರದ ರೌಡಿಗಳು ನಾವು ರೌಡಿಗಳು ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಡಾಲಿ ಡಾನ್ ಜಯರಾಜ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಇನ್ನು ಡಾಲಿ ಲಿಸ್ಟಿನಲ್ಲಿ ಹಲವು ಚಿತ್ರಗಳಿಗೆ. ಬಿಡುವೇ ಇಲ್ಲದಂತೆ ನಟಿಸುತ್ತಿರೋ, ನಿರ್ಮಾಣದಲ್ಲೂ ತೊಡಗಿಸಿಕೊಂಡಿರುವ ಡಾಲಿ ಧನಂಜಯ್ ಇನ್ನು ಮುಂದೆ ಹೊಸಬರಿಗೆ ಪ್ರೋತ್ಸಾಹ ನೀಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಡಾಲಿ ಧನಂಜಯ್ ಈಗಾಗಲೇ ತಮ್ಮ ಬಡವ ರಾಸ್ಕಲ್ ಸೇರಿದಂತೆ ಇನ್ನಿತರ ಚಿತ್ರಗಳಲ್ಲಿ ಹೊಸಬರಿಗೆ ಅವಕಾಶ ಕೊಟ್ಟಿದ್ದಾರೆ. ಈಗ ಅದನ್ನು ಘೋಷಣೆ ಮಾಡಿಕೊಂಡು ಪ್ರತಿಜ್ಞೆ ಮಾಡಿದ್ದಾರೆ. ಇನ್ನು ಮುಂದೆ ವರ್ಷಕ್ಕೆ 2 ಸಿನಿಮಾ ನಿರ್ಮಾಣ ಮಾಡುವ ಹಾಗೂ ಅದರಲ್ಲಿ ಒಂದು ಚಿತ್ರವನ್ನು ಹೊಸಬರಿಗಾಗಿಯೇ ಮೀಸಲಿಡುವ ನಿರ್ಧಾರ ತೆಗೆದುಕೊಂಡಿದ್ದಾರೆ ಡಾಲಿ ಧನಂಜಯ.