` kashmir files, - chitraloka.com | Kannada Movie News, Reviews | Image

kashmir files,

 • 2022ರಲ್ಲಿ ಅತೀ ಹೆಚ್ಚು ಲಾಭ ಮಾಡಿದ ಸಿನಿಮಾ ಯಾವುದು?

  2022ರಲ್ಲಿ ಅತೀ ಹೆಚ್ಚು ಲಾಭ ಮಾಡಿದ ಸಿನಿಮಾ ಯಾವುದು?

  ವರ್ಷದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಕೆಜಿಎಫ್ ಚಾಪ್ಟರ್ 2. ನಂತರದ ಸ್ಥಾನದಲ್ಲಿರೋದು ಆರ್.ಆರ್.ಆರ್. ನಂತರದ ಸ್ಥಾನದಲ್ಲಿ ಪುಷ್ಪ ಚಿತ್ರವಿದೆ. ಮುಂದಿನ ಲಿಸ್ಟಿನಲ್ಲಿ ಹಿಂದಿಯ ಭೂಲ್‍ಬುಲಯ್ಯ, ತಮಿಳಿನ ವಿಕ್ರಂ.. ಹೀಗೆ ಇನ್ನೂ ಹಲವು ಚಿತ್ರಗಳಿವೆ. ಆದರೆ.. ಈಗ ಹೇಳ್ತಿರೋದು ಬೇರೆಯದೇ ಸ್ಟೋರಿ. ಇದು ಹಾಕಿದ ಬಂಡವಾಳ ಮತ್ತು ಪಡೆದ ಲಾಭ ಎರಡನ್ನೂ ಲೆಕ್ಕ ಹಾಕಿ, ಎಷ್ಟು ಪಟ್ಟು ಲಾಭ ಬಂತು ಅನ್ನೋ ಸ್ಟೋರಿ.

  ಹಾಗೆ ನೋಡಿದರೆ ಕೆಜಿಎಫ್ ಚಾಪ್ಟರ್ 2, ಆರ್.ಆರ್.ಆರ್. ಹಾಗೂ ಪುಷ್ಪ ಚಿತ್ರಗಳು ದೊಡ್ಡ ಮಟ್ಟದ ಲಾಭ ಮಾಡಿದರೂ.. ಹಾಕಿದ್ದ ಬಂಡವಾಳವೂ ಅಷ್ಟೇ ಹೆಚ್ಚು. ಹೀಗಾಗಿ ಈ ಲೆಕ್ಕಾಚಾರ ಬೇರೆಯದೇ ಇದೆ.

  ಕಡಿಮೆ ಬಂಡವಾಳದಲ್ಲಿ ನಿರ್ಮಿಸಿ ಅತೀ ಹೆಚ್ಚು ಲಾಭ ಮಾಡಿದ ಚಿತ್ರಗಳ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿರೋದು ಕಾಶ್ಮೀರ್ ಫೈಲ್ಸ್.  ಏಕೆಂದರೆ ಈ ಚಿತ್ರಕ್ಕೆ ಹಾಕಿದ್ದ ಬಂಡವಾಳ ಕೇವಲ 20 ಕೋಟಿ. ಆದರೆ ಸಿನಿಮಾ ಗಳಿಸಿದ್ದು 350 ಕೋಟಿ. ಅಲ್ಲಿಗೆ 17 ಪಟ್ಟು ಹೆಚ್ಚು ಲಾಭ. ತೆರಿಗೆ ವಿನಾಯಿತಿ ಪಡೆದ ಚಿತ್ರವಾದ ಕಾರಣ ಟಿಕೆಟ್ ದರ ಹೆಚ್ಚಿಸಲು ಸಾಧ್ಯವಿರಲಿಲ್ಲ. ಹೀಗಿದ್ದರೂ ಅತೀ ಹೆಚ್ಚು ಲಾಭ ಪಡೆದ ಚಿತ್ರ ಕಾಶ್ಮೀರ್ ಫೈಲ್ಸ್. ಜೊತೆಗೆ ಚಿತ್ರಕ್ಕೆ ಹಿಂದೂಗಳಲ್ಲಿ ವ್ಯಕ್ತವಾದ ಜಾಗೃತಿ ಹಾಗೂ ಈ ಇತಿಹಾಸವನ್ನು ಮುಚ್ಚಿಡಲಾಗಿತ್ತು ಎಂಬ ವಿಷಯಗಳು ಚಿತ್ರಕ್ಕೆ ದೊಡ್ಡ ಮಟ್ಟದ ಮಾರ್ಕೆಟ್ ಸೃಷ್ಟಿಸಿದವು.

  ನಂ.2 ಸ್ಥಾನದಲ್ಲಿರೋದು ಕೆಜಿಎಫ್ ಚಾಪ್ಟರ್ 2. ಚಿತ್ರಕ್ಕೆ ತೊಡಗಿಸಿದ್ದ ಬಂಡವಾಳವೂ ಹೆಚ್ಚು. ಆದರೆ ಚಿತ್ರ ಹಿಮಾಲಯದೆತ್ತರಕ್ಕೆ ಬಾಕ್ಸಾಫೀಸ್ ಕಲೆಕ್ಷನ್ ತೋರಿಸಿದ ಕಾರಣ ಸಿನಿಮಾ ಲಾಭದ ಲೆಕ್ಕದಲ್ಲಿ ನಂ.2 ಸ್ಥಾನದಲ್ಲಿದೆ. 100 ಕೋಟಿ ಬಜೆಟ್‍ನಲ್ಲಿ ಸಿದ್ಧವಾದ ಚಿತ್ರ 1250 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿತು.

  ನಂ.3 ಸ್ಥಾನದಲ್ಲಿರೋದು ಮಲಯಾಳಂ ಸಿನಿಮಾ ಹೃದಯಂ. 7 ಕೋಟಿಯಲ್ಲಿ ತಯಾರಾದ ಸಿನಿಮಾ ಗಳಿಸಿದ್ದು 54 ಕೋಟಿ.

  4ನೇ ಸ್ಥಾನದಲ್ಲಿ ಮತ್ತೊಮ್ಮೆ ಕನ್ನಡ ಸಿನಿಮಾನೇ ಇದೆ. 777 ಚಾರ್ಲಿ ಸಿನಿಮಾ 20 ಕೋಟಿಯಲ್ಲಿ ತಯಾರಾದ ಸಿನಿಮಾ. ಗಳಿಸಿದ್ದು ಹತ್ತಿರ ಹತ್ತಿರ 150 ಕೋಟಿ.

  ಈಗ ವಿಕ್ರಾಂತ್ ರೋಣ ಹಿಟ್ ಆಗಿದೆ. ಈ ಚಿತ್ರವೂ ಇದೇ ಲಿಸ್ಟಿಗೆ ಸೇರಲಿದೆಯಾ..? ವೇಯ್ಟ್ ಮಾಡಬೇಕು. ವಿಕ್ರಾಂತ್ ರೋಣನ ವಿಕ್ಟರಿ ಈಗಿನ್ನೂ ಶುರುವಾಗಿದೆ.

 • ಕಾಶ್ಮೀರಿ ಪಂಡಿತರ ಚಿತ್ರವನ್ನು ಬೇಕೆಂತಲೇ ಕಡೆಗಣಿಸಿದ ಫಿಲಂಫೇರ್

  ಕಾಶ್ಮೀರಿ ಪಂಡಿತರ ಚಿತ್ರವನ್ನು ಬೇಕೆಂತಲೇ ಕಡೆಗಣಿಸಿದ ಫಿಲಂಫೇರ್

  ಫಿಲಂಫೇರ್. ಈ ಚಿತ್ರಪ್ರಶಸ್ತಿಗೊಂದು ಮಾನ್ಯತೆ ಇದೆ. ಘನತೆ ಇದೆ. ಪ್ರಖ್ಯಾತಿಯೂ ಇದೆ. ಕುಖ್ಯಾತಿಯೂ ಇದೆ. ಟೈಮ್ಸ್ ಗ್ರೂಪ್‍ನ ಈ ಪ್ರಶಸ್ತಿಯನ್ನು ಪಡೆದವರು ದಿ ಬೆಸ್ಟ್ ಎನ್ನುವ ತೀರ್ಮಾನವಿತ್ತು. ಆದರೆ ಇತ್ತೀಚೆಗೆ ಅದೂ ಹೋಗುತ್ತಿದೆ. ಹಲವು ವಿವಾದಗಳಿವೆಯಾದರೂ ಈ ಬಾರಿ ವಿವಾದವಾಗಿರುವುದು ಕಾಶ್ಮೀರ್ ಫೈಲ್ಸ್ ಚಿತ್ರದ ಬಗ್ಗೆ.

  ಬಾಲಿವುಡ್‍ನಲ್ಲಿ ಕಳೆದ ವರ್ಷದ ಸೂಪರ್ ಹಿಟ್ ಚಿತ್ರಗಲ್ಲಿ ಒಂದು ಕಾಶ್ಮೀರ್ ಫೈಲ್ಸ್. ಬಾಕ್ಸಾಫೀಸ್‍ನಲ್ಲಿ ನಂ.1 ಚಿತ್ರ ಕಾಶ್ಮೀರ್ ಫೈಲ್ಸ್. ಕಾಶ್ಮೀರದ ಭಯೋತ್ಪಾದಕರ ಕಥೆಗಳನ್ನೇ ನೋಡುತ್ತಿದ್ದ ಭಾರತೀಯರಿಗೆ, ಕಾಶ್ಮೀರಿಗಳು ಭಾರತ ಬಿಟ್ಟು ಬಂದಿದ್ದೇಕೆ ಎಂಬ ಚಿತ್ರವನ್ನು ತೆಗೆದುಕೊಟ್ಟಿದ್ದು ಕಾಶ್ಮೀರ್ ಫೈಲ್ಸ್. ಭಯೋತ್ಪಾದಕರೊಳಗಿನ ಹೃದಯದೊಳಗಿನ ಪ್ರೀತಿಯನ್ನು ಹುಡುಕಾಡಿ ತೋರಿಸುತ್ತಿದ್ದವರಿಗೆ ಕಾಶ್ಮೀರಿ ಪಂಡಿತರ ಹೃದಯ ರೋದನವನ್ನೂ ತೆಗೆದಿಟ್ಟ ಚಿತ್ರ ಕಾಶ್ಮೀರ್ ಫೈಲ್ಸ್. ಎಲ್ಲಕ್ಕಿಂತ ಹೆಚ್ಚು ಕಾಶ್ಮೀರಿ ಪಂಡಿತರ ಬದುಕಿನ ಕಥೆಯನ್ನು ಅಷ್ಟೇ ವಾಸ್ತವಿಕವಾಗಿ ತೆಗೆದಿಟ್ಟ ಸಿನಿಮಾ ಕಾಶ್ಮೀರ್ ಫೈಲ್ಸ್.

  ಈ ಚಿತ್ರಕ್ಕೆ ಬಾಲಿವುಡ್‍ನ ಚಿತ್ರದ ಪ್ರಚಾರ ವೇದಿಕೆಗಳಲ್ಲಿ ಪ್ರಚಾರ ಸಿಗಲಿಲ್ಲ. ಕಪಿಲ್ ಶರ್ಮಾ ಶೋ ಸೇರಿದಂತೆ ಬಾಲಿವುಡ್‍ನ ವೇದಿಕೆಗಲ್ಲಿ ಚಿತ್ರಕ್ಕೆ ಶೋ ಕೊಡಲಿಲ್ಲ. ಆರಂಭದಲ್ಲಿ ಈ ಚಿತ್ರಕ್ಕೆ ಸಿಕ್ಕಿದ್ದು ದೇಶದಾದ್ಯಂತ 200ರಿಂದ 300 ಶೋಗಳು ಮಾತ್ರ. ಕೆಲವು ಪತ್ರಿಕೆಗಳು ಚಿತ್ರವನ್ನು ಪ್ರಚಾರ ಮಾಡಲಿಲ್ಲ. ಅದೆಲ್ಲವನ್ನೂ ಮೀರಿ ಕಾಶ್ಮೀರ್ ಫೈಲ್ಸ್ ಗೆದ್ದಾದ ಮೇಲೆ ಚಿತ್ರಕ್ಕೆ ರಾಜಕೀಯ ಪ್ರಚಾರವೂ ಸಿಕ್ಕಿತು. ಕರ್ನಾಟಕವೂ ಸೇರಿದಂತೆ ವಿವಿದ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ತೆರಿಗೆ ವಿನಾಯಿತಿಯೂ ಸಿಕ್ಕಿತು. ಇದೂವರೆಗೆ ಅತೀ ಹೆಚ್ಚು ಲಾಭ ಮಾಡಿದ ಚಿತ್ರಗಳಲ್ಲಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ನಂ.1 ಸ್ಥಾನವಿದೆ.

  ಆದರೆ ಚಿತ್ರವನ್ನು ಫಿಲಂಫೇರ್ ವೇದಿಕೆಯಿಂದ ಹೊರಗಿಡಲಾಗಿದೆ. ಬಾಲಿವುಡ್ ಇದನ್ನು ಸಂಭ್ರಮಿಸಿಲ್ಲ. ಚಿತ್ರದ ಬಗ್ಗೆ ಕೆಲವು ನಟ, ನಿರ್ದೇಶಕರು ಲೇವಡಿ ಮಾಡಿ ಮಾತನಾಡಿದ್ದಾರೆ. ಜೊತೆಗೆ ಫಿಲಂಫೇರ್  ಪ್ರಶಸ್ತಿ ಆಯ್ಕೆಗೂ ಪರಿಗಣಿಸಿಲ್ಲ. ಜೊತೆಗೆ ಚಿತ್ರವನ್ನು ಯಾವುದೇ ಪ್ರಶಸ್ತಿಗೂ ಆಯ್ಕೆ ಮಾಡಿಲ್ಲ. ಇದು ವಿವಾದವನ್ನೂ ಹುಟ್ಟುಹಾಕಿದೆ. ಆದರೆ ಫಿಲಂಫೇರ್ ಎಂದಿನಂತೆ.. ಟೀಕಾಕಾರಿಗೆಲ್ಲ ಡೋಂಟ್ ಕೇರ್ ಉತ್ತರ.