ಕನ್ನಡಿಗರ ಕ್ರೇಜಿ ಸ್ಟಾರ್ ವಿ.ರವಿಚಂದ್ರನ್ ಅವರಿಗೆ ಬೆಂಗಳೂರು ವಿವಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ರವಿಚಂದ್ರನ್ ಕೇವಲ ನಟರಲ್ಲ, ನಿರ್ದೇಶಕ, ನಿರ್ಮಾಪಕ, ಸಂಕಲನಕಾರ, ಛಾಯಾಗ್ರಾಹಕ, ಕೊರಿಯೋಗ್ರಾಫರ್, ಸಂಗೀತ ನಿರ್ದೇಶಕ, ಗೀತೆ ಸಾಹಿತಿ.. ಹೀಗೆ ಒಂದು ಸಿನಿಮಾದ ಯಾವ ಯಾವ ವಿಭಾಗಗಳಲ್ಲಿ ಕೆಲಸ ಮಾಡಲು ಅವಕಾಶವಿದೆಯೋ.. ಅವೆಲ್ಲ ಕ್ಷೇತ್ರಗಳಲ್ಲೂ ಸಾಧನೆ ಬರೆದಿರುವ ಕನಸುಗಾರ.
ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ಕೋಟಿ ಬಜೆಟ್‍ನಲ್ಲಿ ಸಿನಿಮಾ ಮಾಡಿ ಕರ್ನಾಟಕದ ಮಾರುಕಟ್ಟೆ ಎಷ್ಟಿದೆ ಎಂದು ತೋರಿಸಿಕೊಟ್ಟ ಪ್ರೇಮಲೋಕದ ರಣಧೀರ. ಸಿನಿಮಾ ಬಗ್ಗೆ ಆಸಕ್ತಿ ಇರುವವರಿಗೆ ರವಿಚಂದ್ರನ್ ವೃತ್ತಿ ಜೀವನವೇ ಒಂದು ಪಠ್ಯಪುಸ್ತಕವಿದ್ದಂತೆ. ಈ ಹಿಂದೆ ಖಾಸಗಿ ವಿವಿಯಿಂದ ಗೌರವ ಡಾಕ್ಟರೇಟ್ ಸ್ವೀಕರಿಸಿದ್ದ ರವಿಚಂದ್ರನ್ ಅವರಿಗೆ ಈಗ ಬೆಂಗಳೂರು ವಿವಿ ಗೌರವ ಡಾಕ್ಟರೇಟ್ ನೀಡುತ್ತಿದೆ.
ಏಪ್ರಿಲ್ 11ರಂದು ನಡೆಯಲಿರೋ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಸಮಾರಂಭ ನಡೆಯಲಿದೆ. ಚಿತ್ರರಂಗಕ್ಕೆ ನಾನು ನೀಡಿದ ಕೊಡುಗೆಯನ್ನು ಗೌರವಿಸುತ್ತಿರುವ ಗೌರವ ಡಾಕ್ಟರೇಟ್‍ನ್ನು ವಿನೀತನಾಗಿ ಸ್ವೀಕರಿಸುತ್ತಿದ್ದೇನೆ. ಹೃದಯ ತುಂಬಿ ಬಂದಿದೆ ಎಂದಿದ್ದಾರೆ ರವಿಚಂದ್ರನ್. ಚಿತ್ರರಂಗದ ಹಲವು ಗಣ್ಯರು ಡಾ.ರವಿಚಂದ್ರನ್ ಅವರಿಗೆ ಶುಭ ಕೋರಿದ್ದಾರೆ.
ಚಿತ್ರರಂಗದಲ್ಲಿ ಈ ರೀತಿ ಗೌರವ ಡಾಕ್ಟರೇಟ್ ಪಡೆದ ಮೊದಲಿಗರು ಡಾ.ರಾಜಕುಮಾರ್. ನಂತರ ಡಾ.ವಿಷ್ಣುವರ್ಧನ್, ಡಾ.ಅಂಬರೀಷ್, ಡಾ.ಶಿವರಾಜಕುಮಾರ್, ಡಾ.ಪುನೀತ್ ರಾಜಕುಮಾರ್.. ಮೊದಲಾದವರು ಈ ಗೌರವ ಸ್ವೀಕರಿಸಿದ್ದಾರೆ. ನಟಿ ಡಾ. ಜಯಮಾಲಾ, ಸಂಗೀತ ನಿರ್ದೇಶಕ ಡಾ.ಹಂಸಲೇಖ ಸೇರಿದಂತೆ ಕೆಲವರು ಅಧ್ಯಯನ ಮಾಡಿ ಪಿಹೆಚ್‍ಡಿ ಪದವಿ ಪೂರೈಸಿಯೇ ಡಾಕ್ಟರ್ ಆಗಿದ್ದಾರೆ.