` banaras, - chitraloka.com | Kannada Movie News, Reviews | Image

banaras,

 • ಜಮೀರ್ ಅಹ್ಮದ್ ಪುತ್ರನಿಗೆ ಬನಾರಸ್ ಅಗ್ನಿಪರೀಕ್ಷೆ

  zaid khan image

   

   

  ಬನಾರಸ್. ಈಗ ಥಿಯೇಟರಿನಲ್ಲಿದೆ. ಕನ್ನಡದಲ್ಲಿ ತಯಾರಾಗಿ ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿರೋ ಪ್ಯಾನ್ ಇಂಡಿಯಾ ಚಿತ್ರವಿದು. ಜಯತೀರ್ಥ ನಿರ್ದೇಶನದ ಚಿತ್ರದಲ್ಲಿ ಕಾಂಗ್ರೆಸ್ ಮುಖಂಡ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ಹೀರೋ. ಸೋನಲ್ ಮಂಥೆರೋ ನಾಯಕಿ. ಝೈದ್ ಖಾನ್ ಎಂಟ್ರಿ ಕೊಡುತ್ತಿರುವ ಚಿತ್ರದ ಮೇಲೆ ಭಾರಿ ನಿರೀಕ್ಷೆಯಂತೂ ಇದೆ.

  ಬನಾರಸ್ ಚಿತ್ರದಲ್ಲಿ ಲವ್ ಸ್ಟೋರಿ ಇದೆ. ಇದು ನನ್ನ ಅದೃಷ್ಟ ಪರೀಕ್ಷೆಯ ದಿನ. ಸಿನಿಮಾ ನೋಡಿ ಹೊರಬರುವ ಪ್ರೇಕ್ಷಕ ನನ್ನ ಹಣೆಬರಹ ಬರೆಯಲಿದ್ದಾನೆ ಎನ್ನುವ ಝೈದ್ ಖಾನ್ ಏನೋ ಮಾಡವ್ನೆ ಮಗಾ ಅಂದುಕೊಂಡು ಹೋದ್ರೆ ಸಾಕು ಅನ್ನೋ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

  ಬನಾರಸ್ ದೇಶಾದ್ಯಂತ 1000+ ಸ್ಕ್ರೀನ್‍ನಲ್ಲಿ ರಿಲೀಸ್ ಆಗುತ್ತಿದೆ. ಕರ್ನಾಟಕದಲ್ಲಿ 125 ಸ್ಕ್ರೀನ್, 50+ ಮಲ್ಟಿಪ್ಲೆಕ್ಸ್‍ಗಳಲ್ಲಿ ಶೋ ಇದ್ದರೆ ಉತ್ತರ ಭಾರತದಲ್ಲಿ ಹಿಂದಿ ವರ್ಷನ್ 500+ ಶೋಗಳನ್ನು ಕಾಣುತ್ತಿದೆ. ತೆಲುಗಿನಲ್ಲಿ 300, ತಮಿಳುನಲ್ಲಿ 250 ಮತ್ತು ಮಲಯಾಳಂನಲ್ಲಿ 150ಕ್ಕೂ ಹೆಚ್ಚು ಶೋ ಪ್ಲಾನ್ ಆಗಿದೆ.

  ನನ್ನ ಕನ್ನಡದಲ್ಲಿ ಮುಸ್ಲಿಂ ಶೈಲಿಯಿದೆ. ಹೀಗಾಗಿ ಚಿತ್ರಕ್ಕೆ ನಾನು ಡಬ್ ಮಾಡಲಿಲ್ಲ ಎಂದು ಪ್ರಾಮಾಣಿಕತೆಯಿಂದ ಒಪ್ಪಿಕೊಳ್ಳೋ ಝೈದ್ ಖಾನ್ ಮುಂಬೈನ ಅನುಪಮ್ ಖೇರ್ ಫಿಲ್ಮ್ ಇನ್ಸ್‍ಟಿಟ್ಯೂಟ್‍ನಲ್ಲಿ ಕಲಿತು ಬಂದವರು. ಹಿಂದಿಯಲ್ಲಿ ಕೆಲವು ಸಿನಿಮಾ, ವೆಬ್ ಸಿರೀಸ್ ಹಾಗೂ ಸೀರಿಯಲ್ಲುಗಳಿಗೆ ಆಫರ್ ಬಂದಿತ್ತು. ಆದರೆ ಕನ್ನಡದಲ್ಲಿಯೇ ಮೊದಲು ಮಾಡಬೇಕು ಎಂಬ ಕಾರಣಕ್ಕೆ  ಕನ್ನಡದಲ್ಲಿ ಬನಾರಸ್ ಮಾಡಿದೆ ಎಂದಿದ್ದಾರೆ ಝೈದ್ ಖಾನ್.

   

 • ಜಯತೀರ್ಥ ಮೆಚ್ಚಿದ ಝೈದ್ ಖಾನ್

  ಜಯತೀರ್ಥ ಮೆಚ್ಚಿದ ಝೈದ್ ಖಾನ್

  ಝೈದ್ ಖಾನ್ ನಟಿಸಿರೋ ಬನಾರಸ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಬಹುಶಃ ಸೆಪ್ಟೆಂಬರ್‍ನಲ್ಲಿ ಸಿನಿಮಾ ರಿಲೀಸ್ ಆಗಬಹುದು. ಝೈದ್ ಖಾನ್ ಅವರನ್ನು ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಲಾಂಚ್ ಮಾಡುತ್ತಿರೋದು ಖ್ಯಾತ ನಿರ್ದೇಶಕ ಜಯತೀರ್ಥ. ಒಲವೇ ಮಂದಾರ, ಟೋನಿ, ಬ್ಯೂಟಿಫುಲ್ ಮನಸುಗಳು, ಬೆಲ್`ಬಾಟಂ, ಬುಲೆಟ್ ಬಸ್ಯಾ.. ಹೀಗೆ ಒಂದಕ್ಕಿಂತ ಒಂದು ವಿಭಿನ್ನ ಕಥೆಗಳ ಚಿತ್ರಗಳನ್ನು ನಿರ್ದೇಶಿಸಿ ಬಾಕ್ಸಾಫೀಸ್‍ನಲ್ಲೂ ಗೆದ್ದಿರುವ ನಿರ್ದೇಶಕ ಜಯತೀರ್ಥ. ಈಗ ಬನಾರಸ್ ಮೂಲಕ ಬರುತ್ತಿದ್ದಾರೆ.

  ಅಂದಹಾಗೆ ಝೈದ್ ಖಾನ್, ಮಾಜಿ ಸಚಿವ ಜಮೀರ್ ಖಾನ್ ಅವರ ಮಗ. ಹೀಗಾಗಿ ಜಯತೀರ್ಥ ಅವರಿಗೂ ಒಂದು ಆತಂಕವಿತ್ತಂತೆ. ಶ್ರೀಮಂತಿಕೆ, ವರ್ಚಸ್ಸು ಎರಡೂ ಇರುವ ಹುಡುಗ. ಆಕ್ಟಿಂಗ್ ಹೇಗೆ ತೆಗೆಸಬೇಕೋ ಅನ್ನೋ ಆತಂಕವಿದ್ದದ್ದು ನಿಜ. ಆದರೆ ಝೈದ್ ಖಾನ್‍ರದ್ದು ಚಪ್ಪಲಿ ದೂರ ಇಟ್ಟು ಹತ್ತಿರ ಕೂರುವ ಸರಳ ಹುಡುಗ. ಆತನ ಸಿನಿಮಾ ಪ್ರೀತಿ ಇಷ್ಟವಾಯಿತು. ಖಂಡಿತಾ ಝೈದ್ ಖಾನ್ ಒಳ್ಳೆಯ ಕಲಾವಿದ ಆಗ್ತಾನೆ ಎಂದು ಮೆಚ್ಚಿಕೊಂಡಿದ್ದಾರೆ ಜಯತೀರ್ಥ.

  ನಟಿ ಸೋನಲ್ ಮಂಥೆರೋ ಕೂಡಾ ಇದೇ ಮಾತು ಹೇಳಿದ್ದಾರೆ. ಬನಾರಸ್ ಚಿತ್ರದ ಹಾಡು ಬಿಡುಗಡೆ ಮಾಡಿದ ನಂತರ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಚಿತ್ರತಂಡ ಬನಾರಸ್ ಚಿತ್ರದ ವಿಶೇಷತೆಗಳನ್ನೂ ಹಂಚಿಕೊಂಡಿದೆ.

  ನಾನು ಚಿತ್ರರಂಗಕ್ಕೆ ಬರೋದು ಮನೆಯವರಿಗೆ ಇಷ್ಟ ಇರಲಿಲ್ಲ. ಹೀಗಾಗಿ ನನಗೆ ಸಪೋರ್ಟ್ ಮಾಡಿದ್ದು ನಿರ್ಮಾಪಕ ತಿಲಕ್ ರಾಜ್ ಬಲ್ಲಾಳ್. ಮುಂಬೈನಲ್ಲಿ ನಟನೆಯ ಸ್ಕೂಲಿಗೆ ಸೇರಿಸಿದ್ದೂ ಅವರೇ. ನನ್ನ ಗಾಡ್‍ಫಾದರ್ ಕೂಡಾ ಅವರೇ ಎಂದರು ಝೈದ್ ಖಾನ್.

 • ದೇವಾಲಯ, ದರ್ಗಾ, ಚರ್ಚ್‍ಗೆ ಭೇಟಿ ನೀಡಿದ ಬನಾರಸ್ ಹೀರೋ

  banaras image

  ಬನಾರಸ್ ಮೂಲಕ ಹೀರೋ ಆಗುತ್ತಿರುವ ಕಾಂಗ್ರೆಸ್ ಮುಖಂಡ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ದೇವಾಲಯ, ದರ್ಗಾ, ಚರ್ಚ್‍ಗಳಿಗೆ ಭೇಟಿ ನೀಡಿರುವುದು ವಿಶೇಷ. ಕೋಲಾರಕ್ಕೆ ಚಿತ್ರದ ಪ್ರಚಾರಕ್ಕೆ ಆಗಮಿಸಿದ್ದ ಝೈದ್ ಖಾನ್, ಕೋಲಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದರು. ನಂತರ  ದರ್ಗಾ ಹಾಗೂ ಚರ್ಚ್ಗೆ ಭೇಟಿ ನೀಡಿ ಆಶೀರ್ವಾದ ಪಡೆದರು.

  ಕೋಲಾರದ ಹೊರವಲಯದ ಕೊಂಡರಾಜನಹಳ್ಳಿ ಗೇಟ್ನ ದರ್ಗಾ ಬಳಿ ನಟ ಝೈದ್ ಖಾಖ್ಗೆ ಅದ್ಧೂರಿ ಸ್ವಾಗತ ಸಿಕ್ಕಿತು. ಮಳೆಯಲ್ಲೇ ಕೋಲಾರ ನಗರದ ಹಲವು ಕಡೆ ಬೈಕ್ ರ್ಯಾಲಿ ಮೂಲಕ ಝೈದ್ ಖಾನ್ ರೌಂಡ್ಸ್ ಹಾಕಿದರು. ಮೊದಲಿಗೆ ಕ್ಲಾಕ್ ಟವರ್ ಬಳಿಯ ದರ್ಗಾಗೆ ನಟ ಝೈದ್ ಖಾನ್ ಭೇಟಿ ನೀಡಿದರು. ನಂತರ ಕೋಲಾರ ದೇಗುಲಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದರು. ಬಳಿಕ ಚರ್ಚ್ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಕೊನೆಯದಾಗಿ ಕೋಲಾರ ನಗರದ ಮಹಿಳಾ ಸಮಾಜ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಬನಾರಸ್ ಪ್ರೀ-ರಿಲೀಸ್ ಈವೆಂಟ್ನಲ್ಲಿ ಭಾಗಿಯಾದರು.

  ಬನಾರಸ್ ಚಿತ್ರದಲ್ಲಿ ಹಾಸ್ಯ, ಥ್ರಿಲ್ಲರ್ ಎಲ್ಲ ಅಂಶಗಳೂ ಇವೆ. ಸಮಾಜಕ್ಕೆ ಒಳ್ಳೆಯ ಸಂದೇಶವೂ ಇದೆ. ಪ್ರತಿಯೊಬ್ಬರೂ ಚಿತ್ರಮಂದಿರಕ್ಕೆ ಬಂದು ಸಿನಿಮಾವನ್ನ ಥಿಯೇಟರಿನಲ್ಲೇ ನೋಡಿ. ಹಾರೈಸಿ ಎಂದು ಝೈದ್ ಖಾನ್ ಮನವಿ ಮಾಡಿದರು. ಝೈದ್ ಖಾನ್ ಜೊತೆ ಕಾಂಗ್ರೆಸ್ ಮುಖಂಡರಾದ ಗೌಸಿ, ಜಿಲ್ಲಾ ಕಾಂಗ್ರೆಸ್ ಮೈನಾರಿಟಿ ವಿಭಾಗದ ಪ್ರಧಾನ ಕಾರ್ಯದರ್ಶಿ ಜಾವೀದ್ ಸಚಿನ್, ಮೈನಾರಿಟಿ ಯೂಥ್ ಪ್ರೆಸಿಡೆಂಟ್ ಮೊಹಮ್ಮದ್ ನೂರ್, ಯೂಥ್ ಕಾಂಗ್ರೆಸ್ನ ಸಾಧಿಕ್ ಪಾಷಾ, ಮುಖಂಡರಾದ ಮುಸ್ತಫಾ, ಆಫ್ರಿದ್, ಭರತ್ ರಾಯ್, ಯೂಥ್ ಕಾಂಗ್ರೆಸ್ ಅಧ್ಯಕ್ಷ ನವೀನ್, ಸೈಯದ್ ಗೋರು ಮಹಿಳಾ ಸಮಾಜ ಪ್ರಾಂಶುಪಾಲ ಮಂಜುನಾಥ್, ಮುಫೀದ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

  ಬನಾರಸ್ ಝೈದ್ ಖಾನ್ ನಟನೆಯ ಮೊದಲ ಚಿತ್ರ. ಸೋನಲ್ ಮಂಥೆರೋ ನಾಯಕಿ. ಜಯತೀರ್ಥ ನಿರ್ದೇಶನದ ಸಿನಿಮಾ ನಾಳೆ ರಿಲೀಸ್ ಆಗುತ್ತಿದೆ.

   

 • ನವೆಂಬರ್ 4ಕ್ಕೆ ಜಮೀರ್ ಪುತ್ರನ ಬನಾರಸ್ ದರ್ಶನ

  ನವೆಂಬರ್ 4ಕ್ಕೆ ಜಮೀರ್ ಪುತ್ರನ ಬನಾರಸ್ ದರ್ಶನ

  ಮಾಜಿ ಸಚಿವ.. ಕಾಂಗ್ರೆಸ್ಸಿನ ಫೈರ್ ಬ್ರಾಂಡ್ ಮುಸ್ಲಿಂ ನಾಯಕ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ಚಿತ್ರರಂಗ ಪ್ರವೇಶಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ನವೆಂಬರ್ 4ಕ್ಕೆ ಝೈದ್ ಖಾನ್ ಹೀರೋ ಆಗಿ ಎಂಟ್ರಿ ಕೊಡುತ್ತಿರೋ ಮೊದಲ ಚಿತ್ರ ಬನಾರಸ್ ಚಿತ್ರಮಂದಿರ ಪ್ರವೇಶಿಸಲಿದೆ. ಝೈದ್ ಖಾನ್ ಎದುರು ಸೋನಲ್ ಮಂಥೆರೋ ನಾಯಕಿಯಾಗಿ ನಟಿಸಿದ್ದಾರೆ. ಖ್ಯಾತ ನಿರ್ದೇಶಕ ಜಯತೀರ್ಥ ಬನಾರಸ್ ಚಿತ್ರದ ಹಿಂದಿನ ನಿಜವಾದ ಶಕ್ತಿ.

  ತಿಲಕ್ ರಾಜ್ ಬಲ್ಲಾಳ್ ನಿರ್ಮಾಣದ ಬನಾರಸ್ ಚಿತ್ರದ ಹಾಡುಗಳು ಈಗಾಗಲೇ ಅಲೆಯೆಬ್ಬಿಸಿವೆ. ಮಾಯಗಂಗೆ.. ಹಾಡಂತೂ ವಿಶೇಷವಾಗಿ ಕಾಶಿ ದರ್ಶನ ಮಾಡಿಸಿದೆ. ಜಯತೀರ್ಥ ನಿರ್ದೇಶನವಿರುವ ಕಾರಣ ವಿಭಿನ್ನ ಕಥೆ, ನಿರೂಪಣೆ ಇರಲಿದೆ ಎಂಬುದರಲ್ಲಿ ಅನುಮಾನವಿಲ್ಲ. ಬನಾರಸ್ ಕನ್ನಡವೂ ಸೇರಿದಂತೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಕೂಡಾ ರಿಲೀಸ್ ಆಗುತ್ತಿದೆ. 

 • ಬನಾರಸ್ ಚಿತ್ರದಲ್ಲಿ ನಟಿಸೋಕೇ ಬಿಟ್ಟಿಲ್ಲವಂತೆ..!

  sonal monterio image

  ಬನಾರಸ್ ಮೇಲೆ ನನಗೆ ಭಾರಿ ನಿರೀಕ್ಷೆಗಳಿವೆ. ನನ್ನದು ಧನಿ ಅನ್ನೋ ಹುಡುಗಿಯ ಪಾತ್ರ. ಗಾಯಕಿಯಾಗಬೇಕು ಎಂದು ಆಸೆಯಿಟ್ಟುಕೊಂಡಿರೋ ಹುಡುಗಿ. ಸಾಮಾನ್ಯವಾಗಿ ಎಲ್ಲ ನಿರ್ದೇಶಕರೂ ಸ್ಕ್ರಿಪ್ಟ್, ಡೈಲಾಗ್ ಕೊಟ್ಟು ಪ್ರಿಪೇರ್ ಆಗೋಕೆ ಹೇಳ್ತಾರೆ. ಆದರೆ ಜಯತೀರ್ಥ ಹಾಗಲ್ಲ. ನಟಿಸಬೇಡಿ ಎನ್ನುತ್ತಿದ್ದರು. ನೀವು ಹೇಗಿದ್ದೀರೋ.. ಹಾಗೆಯೇ ಇರಿ. ಓವರ್ ಆಕ್ಟಿಂಗ್ ಬೇಡ ಎನ್ನುತ್ತಿದ್ದರು... ಇದು ಜಯತೀರ್ಥ ಬಗ್ಗೆ ಸೋನಲ್ ಮಂಥೆರೋ ಹೇಳಿರೋ ಮಾತು.
  ಸೋನಲ್ ಅವರಿಗೆ ಇದು ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಕ್ಯಾಮೆರಾ ಮುಂದೆ ರಿಯಲ್ ಆಗಿರಿ ಎಂದರೆ ಸಹಜವಾಗಿ ನಟಿಸಬಹುದು. ಸ್ವಲ್ಪ ಉತ್ಪ್ರೇಕ್ಷೆ ಇರಲಿ ಎಂದರೆ ನಟಿಸುವುದು ಕಷ್ಟ ಎನ್ನುವ ಸೋನಲ್ ಅವರಿಗೆ ಫಸ್ಟ್ ಪ್ಯಾನ್ ಇಂಡಿಯಾ ಎಂಬ ಟೆನ್ಷನ್ನೂ ಇದೆ.
  ಜಯತೀರ್ಥ ಟೈಂ ವೇಸ್ಟ್ ಮಾಡಲ್ಲ. ಹಾಗಂತ ಬ್ಯುಸಿ ಇದ್ದಾರೆ ಅನ್ನೋದನ್ನೂ ತೋರಿಸಿಕೊಳ್ಳಲ್ಲ. ಕೆಲಸ ಮಾತ್ರ ಆಗ್ತಾ ಇರುತ್ತೆ. ಅವರ ತಾಳ್ಮೆ ದೊಡ್ಡದು. ಸಂಜೆಯ ಹೊತ್ತಿಗೆ ಚಿತ್ರದ ಪ್ಲಾನ್ ಪ್ರಕಾರ ಎಲ್ಲ ಕೆಲಸವೂ ಮುಗಿದಿರುತ್ತೆ. ಸಂಜೆ ಹೊತ್ತಿಗೆ ಫ್ರೀ ಇರ್ತಾ ಇದ್ರು. ನಾನೂ ಅವರ ಜೊತೆ ಕಾಶಿ ಸುತ್ತುತ್ತಿದ್ದೆ. ವಾರಾಣಸಿಯಲ್ಲಿ ಅದೆಷ್ಟು ಸ್ವೀಟ್ ತಿಂದಿದ್ದೇವೋ.. ವೆರೈಟಿ ವೆರೈಟಿ ಸ್ವೀಟ್ಸ್ ಎನ್ನುತ್ತಾ ಕಾಶಿಗೇ ಜಾರುತ್ತಾರೆ. ಇವತ್ತು ಸಿನಿಮಾ ರಿಲೀಸ್. ಪ್ರೇಕ್ಷಕರೂ ಕೂಡಾ ಬನಾರಸ್‍ಗೆ ಜಾರಬೇಕು.

 • ಬನಾರಸ್ ನೋಡಿ ಮೆಚ್ಚಿಕೊಂಡ ಸಿದ್ದರಾಮಯ್ಯ

  ಬನಾರಸ್ ನೋಡಿ ಮೆಚ್ಚಿಕೊಂಡ ಸಿದ್ದರಾಮಯ್ಯ

  ಇದೇ ವಾರ ರಿಲೀಸ್ ಆಗಿ ಅದ್ಧೂರಿ ಪ್ರದರ್ಶನ ಕಾಣುತ್ತಿರುವ ಸಿನಿಮಾ ಬನಾರಸ್. ಜಯತೀರ್ಥ ನಿರ್ದೇಶನದ ಚಿತ್ರ ಮೊದಲ ದಿನವೇ ಭರ್ಜರಿ 3 ಕೋಟಿ ಗಳಿಕೆ ಮಾಡಿತ್ತು. ಚಿತ್ರತಂಡವೇ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿತ್ತು. ಆಕ್ಟಿಂಗ್‍ನಲ್ಲಿ ಭರವಸೆ ಹುಟ್ಟಿಸಿದ್ದ ಝೈದ್ ಖಾನ್ ಬಗ್ಗೆ ಚಿತ್ರರಂಗದವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಚಿತ್ರರಂಗಕ್ಕೆ ವೆಲ್‍ಕಂ ಎಂದು ಸ್ವಾಗತ ಕೋರಿದ್ದರು. ಝೈದ್ ಖಾನ್, ಆಶಿಕಾ ರಂಗನಾಥ್ ಅಭಿನಯ, ಜಯತೀರ್ಥ ನಿರ್ದೇಶನ ಮೆಚ್ಚುಗೆ ಗಳಿಸಿತ್ತು. ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಕೂಡಾ ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಇತ್ತೀಚೆಗೆ ನಾನು ಸಿನಿಮಾ ನೋಡುತ್ತಿಲ್ಲ. ಜಮೀರ್ ಮಗ ಮಾಡಿದ್ದಾನೆ ಎಂದು ಹೇಳಿ ಕರೆದುತಂದರು. ಜಮೀರ್  ಮಗ ಝೈದ್ ಖಾನ್ ನಟನೆ ನೋಡಿದರೆ ಹೊಸಬ ಅನ್ನಿಸಲ್ಲ. ಆಶಿಕಾ ರಂಗನಾಥ್ ನಿಜಕ್ಕೂ ಚೆನ್ನಾಗಿ ಮಾಡಿದ್ದಾರೆ. ಜಯತೀರ್ಥ ಕಥೆಯನ್ನು ಹೇಳುವ ರೀತಿ, ಡೈರೆಕ್ಷನ್ ಸೊಗಸಾಗಿ ಮೂಡಿ ಬಂದಿದೆ. ಟೋಟಲ್ಲಿ ಇಟ್ಸ್ ಎ ಗುಡ್ ಮೂವಿ ಎಂದಿದ್ದಾರೆ ಸಿದ್ದು. ಸಿದ್ದು ಅವರ ಜೊತೆ ಜಮೀರ್ ಅಹ್ಮದ್ ಕೂಡಾ ಸಿನಿಮಾ ನೋಡಿ ಮಗನಿಗೆ ಶಹಬ್ಬಾಸ್ ಹೇಳಿದರು. ಅಪ್ಪ ಬಂದು ನನ್ನ ಸಿನಿಮಾ ನೋಡಿರುವುದು ಹಾಗೂ ಮೆಚ್ಚಿಕೊಂಡಿರೋದು ಸಿನಿಮಾ ನೂರು ಕೋಟಿ ಮಾಡಿದಷ್ಟೇ ಖುಷಿ ತಂದಿದೆ ಎಂದರು ಝೈದ್ ಖಾನ್. ಇಂದಿನಿಂದ ಝೈದ್ ಖಾನ್ ಸೇರಿದಂತೆ ಇಡೀ ಚಿತ್ರತಂಡ ರಾಜ್ಯಾದ್ಯಂತ ಪ್ರವಾಸ ಮಾಡಲಿದೆ. ಮೂಲಗಳ ಪ್ರಕಾರ ಚಿತ್ರ 10 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿದೆ. 

 • ಬನಾರಸ್ ಮೊದಲ ಹಾಡು ಬಂತು : ಹೇಗೆ ನಟಿಸಿದ್ದಾರೆ ಜಮೀರ್ ಪುತ್ರ?

  ಬನಾರಸ್ ಮೊದಲ ಹಾಡು ಬಂತು : ಹೇಗೆ ನಟಿಸಿದ್ದಾರೆ ಜಮೀರ್ ಪುತ್ರ?

  ಮಾಯಗಂಗೆ.. ಮಾಯಗಂಗೆ.. ಮೌನಿಯಾದಳೇ..

  ಪವಿತ್ರ ಗಂಗಾನದಿಯ ತಟದ ಮೇಲೆ ಅರಳುವ ಪ್ರೀತಿ.. ನಾಯಕಿ ಪ್ರೀತಿ ಹೇಳುತ್ತಿದ್ದಂತೆ ಗಂಗೆಯಲ್ಲಿ ಮುಳುಗೇಳುವ ನಾಯಕ.. ಅಜನೀಶ್ ಲೋಕನಾಥ್ ಸಂಗೀತ ಗುಂಗು ಹಿಡಿಸೋಕೆ ಶುರು ಮಾಡಿದರೆ, ನಾಗೇಂದ್ರ ಪ್ರಸಾದ್ ಸಾಹಿತ್ಯ ಮೋಡಿ ಮಾಡುತ್ತದೆ. ಅರ್ಮಾನ್ ಮಲಿಕ್ ಕಂಠಸಿರಿಗೆ ತಕ್ಕಂತೆ ನಟಿಸಿರುವುದು ಝೈದ್ ಖಾನ್. ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಬರುತ್ತಿದ್ದಾರೆ. ಚೆಂದವಾಗಿ ಕಾಣಿಸುತ್ತಾರೆ. ಚೆನ್ನಾಗಿ ನಟಿಸಿದ್ದಾರೆ ಅನ್ನೋ ಭರವಸೆ ಈ ಹಾಡಿನಲ್ಲಿ ಸಿಗುತ್ತದೆ. ಅಫ್‍ಕೋರ್ಸ್.. ನಿರ್ದೇಶಕರಾಗಿರೋದು ಜಯತೀರ್ಥ.

  ತಿಲಕ್ ರಾಜ್ ಬಲ್ಲಾಳ್ ನಿರ್ಮಾಣದ ಚಿತ್ರ ನ್ಯಾಷನಲ್ ಖಾನ್ ಪ್ರೊಡಕ್ಷನ್ಸ್ ಬ್ಯಾನರ್‍ನಲ್ಲಿ ತೆರೆಗೆ ಬರುತ್ತಿದೆ. ಝೈದ್ ಖಾನ್ ಎದುರು ನಾಯಕಿಯಾಗಿ ನಟಿಸಿರುವುದು ಶೃಂಗಾರದ ಹೊಗೆ ಮರದಲ್ಲಿ ಹೂ ಬಿಡುವಂತೆ ಮಾಡಿದ ಸೋನಲ್ ಮಂಥೆರೋ. ಅಚ್ಯುತ್ ಕುಮಾರ್, ಸುಜಯ್ ಶಾಸ್ತ್ರಿ, ದೇವರಾಜ್, ಸಪ್ನಾ ರಾಜ್.. ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಇದೂ ಕೂಡಾ ಹಲವು ಭಾಷೆಗಳಲ್ಲಿ ರಿಲೀಸ್ ಆಗುತ್ತಿರೋ ಪ್ಯಾನ್ ಇಂಡಿಯಾ ಸಿನಿಮಾ.

 • ಮಾಯಗಂಗೆಯ ಬನಾರಸ್`ನಿಂದ ಎಲ್ಲ ಟ್ರೋಲು..

  ಮಾಯಗಂಗೆಯ ಬನಾರಸ್`ನಿಂದ ಎಲ್ಲ ಟ್ರೋಲು..

  ಬನಾರಸ್ ಚಿತ್ರದ ಮೂಲಕ ಕನ್ನಡಿಗರಿಗೆ ತಲುಪಿದ ಮೊದಲ ಹಾಡು ಮಾಯಗಂಗೆ. ಆ ಹಾಡಿನ ಮೂಲಕ ಬೇರೆಯದೇ ಮಜಲು ತೋರಿಸಿದ್ದ ಬನಾರಸ್ ಸಿನಿಮಾ ಈಗ ಎರಡನೇ ಹಾಡಿನ ಲಿರಿಕಲ್ ವಿಡಿಯೋವನ್ನು ರಿಲೀಸ್ ಮಾಡಿದೆ. ಟ್ರೋಲ್ ಸಾಂಗ್‍ನಲ್ಲಿ ನಮ್ಮ ತಪ್ಪು ನಮಗೆ ಕಾಣಲ್ಲ ಎನ್ನುವ ಅರ್ಥದಲ್ಲಿ ಏನೇ ಮಾಡಿದರೂ ಟ್ರೋಲ್ ಗ್ಯಾರಂಟಿ ಅನ್ನೋ ಟಪ್ಪಾಂಗುಚ್ಚಿ ಸ್ಟೈಲ್ ಹಾಡಿದೆ.

  ಈ ಹಾಡಿನ ವಿಶೇಷತೆಯೆಂದರೆ ಹಾಡನ್ನು ಬರೆದಿರೋದು ಡಾ.ವಿ.ನಾಗೇಂದ್ರ ಪ್ರಸಾದ್. ಎಲ್ಲ ಟ್ರೋಲು.. ಎಲ್ಲ ಟ್ರೋಲು. ಸಿಕ್ಕಾಪಟ್ಟೆ ಕೊಲೆಸ್ಟ್ರಾಲು.. ಹಾಡನ್ನು ಯುಗಳಗೀತೆಗಳ ಮಾಧುರ್ಯ ಭರಿತ ಹಾಡುಗಳ ಕವಿ ಎಂದೇ ಹೆಸರಾಗಿರೋ ನಾಗೇಂದ್ರ ಪ್ರಸಾದ್ ಬರೆದಿದ್ದರೆ, ಅಜನೀಶ್ ಲೋಕನಾಥ್ ಅವರೇ ಸಂಗೀತ ನೀಡಿ ಹಾಡನ್ನೂ ಹಾಡಿದ್ದಾರೆ.

  ಜಯತೀರ್ಥ ನಿರ್ದೇಶನದ ಚಿತ್ರದಲ್ಲಿ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ಹೀರೋ ಆಗಿದ್ದರೆ, ಸೋನಲ್ ಮಂಥೆರೋ ನಾಯಕಿ. ದೇವರಾಜ್, ಸುಜಯ್ ಶಾಸ್ತ್ರಿ, ಅಚ್ಯುತ್ ಕುಮಾರ್.. ಮೊದಲಾದವರು ನಟಿಸಿರೋ ಸಿನಿಮಾ ಬನಾರಸ್. ರಾಜ್ಯೋತ್ಸವದ ಸಂದರ್ಭದಲ್ಲಿ ನವೆಂಬರ್ 4ಕ್ಕೆ ಬಿಡುಗಡೆಯಾಗಲಿರೋ ಚಿತ್ರಕ್ಕೆ ತಿಲಕ್ ರಾಜ್ ಬಲ್ಲಾಳ್ ನಿರ್ಮಾಪಕ. ಮುಝುಮಿಲ್ ಅಹ್ಮದ್ ಖಾನ್ ಸಹ ನಿರ್ಮಾಪಕ.

 • ವಯಸ್ಸಿದ್ದಾಗಲೇ ಕಾಶಿಗೆ ಹೋಗಿ ಬನ್ನಿ : ಬನಾರಸ್ ಹೀರೋಯಿನ್ ಸೋನಲ್ ಮಂಥೆರೋ

  banaras image

  ಬನಾರಸ್. ಇನ್ನೇನು ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿರೋ ಕನ್ನಡದ ಮತ್ತೊಂದು ಪ್ಯಾನ್ ಇಂಡಿಯ ಸಿನಿಮಾ. ಟೈಂ ಮೆಷಿನ್ ಮತ್ತು ಲವ್ ಸ್ಟೋರಿಯ ಮಧ್ಯೆ ಹಿಂದೂಗಳ ಪುಣ್ಯಕ್ಷೇತ್ರ ಬನಾರಸ್‍ನಲ್ಲಿ ನಡೆಯೋ ವಿಭಿನ್ನ ಪ್ರೇಮಕಥೆ. ಹೀರೋ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ಆದರೆ ಹೀರೋಯಿನ್ ಪಂಚತಂತ್ರದ ಶೃಂಗಾರದ ಹೊಂಗೇಮರ ಸೋನಲ್ ಮಂಥೆರೋ. ಬೆಲ್‍ಬಾಟಂ, ಬುಲೆಟ್ ಬಸ್ಯಾ, ಒಲವೇ ಮಂದಾರ, ಬ್ಯೂಟಿಫುಲ್ ಮನಸುಗಳು, ಟೋನಿ.. ಹೀಗೆ ಒಂದಕ್ಕಿಂತ ಒಂದು ವಿಭಿನ್ನ ಚಿತ್ರಗಳನ್ನು ಕೊಟ್ಟಿರುವ ಜಯತೀರ್ಥ ಮತ್ತೊಂದು ವಿಭಿನ್ನ ಕಥೆಯೊಂದಿಗೆ ಚಿತ್ರಪ್ರೇಮಿಗಳ ಮುಂದೆ ಬರುತ್ತಿದ್ದಾರೆ.

  ಎಲ್ಲರೂ ಕಾಶಿಗೆ ವಯಸ್ಸಾದ ಮೇಲೆ ಹೋಗಿ ಬರಬೇಕು ಎನ್ನುತ್ತಾರೆ. ಸಾಯುವ ಮುನ್ನ ಕಾಶಿ ದರ್ಶನ ಮಾಡಬೇಕು ಎನ್ನುತ್ತಾರೆ. ಆದರೆ ನನ್ನ ಪ್ರಕಾರ ಯೌವನದಲ್ಲಿದ್ದಾಗಲೇ ಕಾಶಿಗೆ ಹೋಗಬೇಕು. ಕಾಶಿಯ ಜೀವನ ನಮ್ಮ ಬದುಕನ್ನು ಬದಲಿಸುತ್ತದೆ ಎನ್ನುತ್ತಾರೆ ನಾಯಕಿ ಸೋನಲ್. ಬನಾರಸ್ ಚಿತ್ರೀಕರಣಕ್ಕಾಗಿ 40 ದಿನ ಕಾಶಿಯಲ್ಲೇ ಇದ್ದ ಸೋನಲ್ ಇದು ನನ್ನ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಕಥೆ ಪ್ರಾದೇಶಿಕತೆಯನ್ನೂ ಮೀರಿ ಎಲ್ಲರಿಗೂ ಅನ್ವಯವಾಗುವಂತದ್ದು ಎನ್ನುವುದನ್ನು ಮರೆಯೋದಿಲ್ಲ.

  ಚಿತ್ರದಲ್ಲಿ ನನ್ನದು ಧನಿ ಅನ್ನೋ ಹುಡುಗಿಯ ಪಾತ್ರ. ರಿಯಾಲಿಟಿ ಶೋಗಳಲ್ಲಿ ಹಾಡುವ ಕನಸು ಹೊತ್ತ, ಸಿಂಗರ್ ಆಗುವ ಕನಸು ಕಾಣುವ ಹುಡುಗಿ. ಚಿತ್ರದಲ್ಲಿ ನನ್ನ ಮತ್ತು ಝೈದ್ ಮಧ್ಯೆ ಭಾವನಾತ್ಮಕ ದೃಶ್ಯಗಳಿಗೆ. ಚಿತ್ರದಲ್ಲೊಂದು ಸಂದೇಶವೂ ಇದೆ ಎನ್ನುವ ಸೋನಲ್ ಝೈದ್ ಖಾನ್ ಅವರಿಗೆ ಇದು ಮೊದಲ ಚಿತ್ರ ಎನ್ನಿಸುವುದಿಲ್ಲ. ತರಬೇತಿ ಪಡೆದು ಬಂದಿದ್ದಾರೆ. ಮೊದ ಮೊದಲ ಅವರ ಪೊಲಿಟಿಕಲ್ ಬ್ಯಾಕ್‍ಗ್ರೌಂಡ್‍ನಿಂದಾಗಿ ಬೆರೆಯಲು ಕಷ್ಟವಾಯಿತಾದರೂ ಸಿನಿಮಾ ಮುಗಿಯುವ ಹೊತ್ತಿಗೆ ಕ್ಲೋಸ್ ಫ್ರೆಂಡ್ಸ್ ಆಗಿದ್ದೆವು ಎನ್ನುತ್ತಾರೆ ಸೋನಲ್.

 • ವೆಲ್‍ಕಂ ಟು ಬನಾರಸ್ : ಟೈಂ ಟ್ರಾವೆಲಿಂಗ್ ಲವ್ ಸ್ಟೋರಿ

  ಜಯತೀರ್ಥ ಚಿತ್ರ ಎಂದಾಕ್ಷಣ ಕಣ್ಣ ಮುಂದೆ ಬರುವ ಚಿತ್ರಗಳ ಹೆಸರುಗಳಿಂದಲೇ ಬನಾರಸ್ ಮೇಲೆ ನಿರೀಕ್ಷೆಯಿತ್ತು. ನಿರೀಕ್ಷೆ ಹುಸಿ ಮಾಡದಂತೆ ವಿಭಿನ್ನ ಕಥೆಯೊಂದಿಗೇ ಟ್ರೇಲರ್ ಹೊರಬಿಟ್ಟಿದ್ದಾರೆ ಜಯತೀರ್ಥ. ಬನಾರಸ್ ಚಿತ್ರದ ಟ್ರೇಲರ್ ನೋಡಿದವರಿಗೆ ಇದು ಬರಿಯ ಹೊಸ ಮುಖಗಳ ಪ್ರೇಮಕಥೆ ಅಲ್ಲ. ಅಲ್ಲೊಂದು ನಿಗೂಢ ಲೋಕಕ್ಕೆ ಕರೆದುಕೊಂಡು ಹೋಗುವ ಟೈಂ ಟ್ರಾವೆಲ್ ಸ್ಟೋರಿಯೂ ಇದೆ. ಬನಾರಸ್ ಎಂದು ಹಿಂದೂಗಳ ಪವಿತ್ರ ಕ್ಷೇತ್ರ.. ಅಲ್ಲೊಬ್ಬಳು ಚೆಲುವೆ.. ಅವಳಿಗೆ ಮರುಳಾಗುವ ಚೆಲುವ.. ಮಧ್ಯೆ ಟೈಂ ಟ್ರಾವೆಲ್ ಸ್ಟೋರಿ.. ಅದು ಲವ್ ಕಮ್ ಕ್ರೈಂ ಕವ್ ಸೈಂಟಿಫಿಕ್ ಕಂ ಥ್ರಿಲ್ಲರ್ ಸ್ಟೋರಿ.

  ಹೊಸ ಮುಖವಾದ ಝೈದ್ ಖಾನ್ ಹೊಸಬರು ಎನ್ನಿಸಲ್ಲ ಎನ್ನಿಸುವಂತೆ ಕಾಣಿಸುತ್ತಾರೆ. ಸೋನಲ್ ಮಂಥೆರೋ ಅಭಿನಯ ಮತ್ತು ಸೌಂದರ್ಯ ಎರಡರಲ್ಲೂ ಕಂಗೊಳಿಸಿದ್ದಾರೆ. ಅಚ್ಯುತ್, ದೇವರಾಜ್, ಸುಜಯ್ ಶಾಸ್ತ್ರಿ, ಸಪ್ನಾ ರಾಜ್, ಬರ್ಕತ್ ಅಲಿ.. ಎಲ್ಲರೂ ಹುಬ್ಬೇರಿಸುವಂತೆ ನಟಿಸಿದ್ದಾರೆ.

  ಚಿತ್ರದ ಟ್ರೇಲರ್ ರಿಲೀಸ್ ಮಾಡಿದ್ದು ವಿ.ರವಿಚಂದ್ರನ್ ಮತ್ತು ಅರ್ಬಾಜ್ ಖಾನ್. ನಂತರ ಮಾತನಾಡಿದ ಅರ್ಬಾಜ್ ಖಾನ್ ಅಪ್ಪುರನ್ನು ನೆನಪಿಸಿಕೊಂಡರು. ನಿರ್ದೇಶಕ ಜಯತೀರ್ಥ ಅವರಿಗೆ ಧನ್ಯವಾದ ಹೇಳಿದ ಝೈದ್ ಖಾನ್ ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ ಎಂದು ವಿನೀತರಾದರು. ಇದು ನನ್ನ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಎಂದು ಥ್ರಿಲ್ಲಾದರು ಸೋನಲ್. ಸಿನಿಮಾ ನವೆಂಬರ್‍ನಲ್ಲಿ ರಿಲೀಸ್ ಆಗುತ್ತಿದೆ.

 • ಸತ್ತವರ ಫೋಟೋ ತೆಗೆಯೋದೇ ಇವನ ಕಾಯಕ

  sujay shastri image

  ಆತ ಫೋಟೋಗ್ರಾಫರ್. ಆತ ಫೋಟೋ ತೆಗೆಯುತ್ತಾನೆ. ಅದೇ ಅವನ ವೃತ್ತಿ. ಆದರೆ ಬದುಕಿರುವವರ ಫೋಟೋ ತೆಗೆಯುವುದಿಲ್ಲ. ಕೇವಲ ಸತ್ತವರ ಫೋಟೋ ತೆಗೆಯುತ್ತಾನೆ. ಅದೇ ಆತನ ವೃತ್ತಿ. ಬನಾರಸ್ ಚಿತ್ರದ ಫೋಟೋಗ್ರಾಫರ್ ಕಥೆಯಿದು. ಜಯತೀರ್ಥ ಕಲ್ಪನೆಯ ಪಾತ್ರವೇನಲ್ಲ. ಕಾಶಿಯಲ್ಲಿ ಅಂತಹವರು ಅನೇಕರಿದ್ದಾರೆ. ಆ ಘಟನೆಯನ್ನೇ ತಮ್ಮ ಚಿತ್ರದ ಕಥೆಯಲ್ಲಿ ಅಳವಡಿಸಿಕೊಂಡಿದ್ದಾರೆ ಜಯತೀರ್ಥ.

  ಹೆಣಗಳ ಫೋಟೋಗ್ರಾಫರ್ ಪಾತ್ರದಲ್ಲಿ ನಟಿಸಿರುವುದು ನಿರ್ದೇಶಕರೂ ಆಗಿರುವ ಸುಜಯ್ ಶಾಸ್ತ್ರಿ. ಕಲಾವಿದನಾದನಿಗೆ ಜೀವನದಲ್ಲೊಮ್ಮೆ ಇಂತಹ ಅವಕಾಶಗಳು ಸಿಗುತ್ತವೆ. ಅಂತಹ ಪಾತ್ರ ನನ್ನದು. ಚಾಲೆಂಜಿಂಗ್ ಆಗಿತ್ತು. ಶೂಟಿಂಗ್ ವೇಳೆ ಯಾವ ಫೋಟೋಗ್ರಾಫರ್ ಪಾತ್ರ ಮಾಡುತ್ತಿದ್ದೆನೋ.. ಆ ವ್ಯಕ್ತಿಯೇ ಎದುರಾದ. ಹೆಣಗಳ ಫೋಟೋಗ್ರಾಫರ್. ಆತನಿಗೆ ನಾನು ನಿನ್ನ ಪಾತ್ರವನ್ನೇ ನಾನು ನಟಿಸುತ್ತಿದ್ದೇನೆ ಎಂದೆ. ಆತ ನಕ್ಕ. ಅಷ್ಟೆ ಎಂದು ಬನಾರಸ್ ಚಿತ್ರದ ತಮ್ಮ ಪಾತ್ರವನ್ನು ವಿವರಿಸುತ್ತಾರೆ ಸುಜಯ್ ಶಾಸ್ತ್ರಿ.

  ಬನಾರಸ್ ಬೇರೆಯದೇ ಅನುಭವ ಕೊಡುವ ಸಿನಿಮಾ. ದಿನವೂ 20-30 ಹೆಣಗಳ ಮಧ್ಯೆ ಇದ್ದು ನಟಿಸಬೇಕಿತ್ತು. ಇದೊಂದು ವಿಚಿತ್ರ ಅನುಭವ ಎನ್ನುತ್ತಾರೆ ಸುಜಯ್ ಶಾಸ್ತ್ರಿ. ಝೈದ್ ಖಾನ್-ಸೋನಲ್ ಮಂಥೆರೋ ಪ್ರಧಾನ ಪಾತ್ರದಲ್ಲಿರುವ ಸಿನಿಮಾ ಬನಾರಸ್‍ಗೆ ಜಯತೀರ್ಥ ನಿರ್ದೇಶನವಿದೆ.

   

 • ಹೆಣ್ಣು ಹಡೆಯಲು ಬ್ಯಾಡ.. : ಜಾನಪದ ಹಾಡಿನ ಗುಂಗು ಹತ್ತಿಸಿದ ಬನಾರಸ್..!

  banaras movie image

  ಹೆಣ್ಣು ಹಡೆಯಲು ಬ್ಯಾಡ..

  ಹೆರವರಿಗೆ ಕೊಡಬ್ಯಾಡ..

  ಹೆಣ್ಣು ಹೋಗುವಾಗ ಅಳಬ್ಯಾಡ..

  ಹೆಣ್ಣು ಹೋಗುವಾಗ ಅಳಬ್ಯಾಡ ಹಡೆದವ್ವ..

  ಸಿಟ್ಟಾಗಿ ಶಿವನ ಬೈಬ್ಯಾಡ..

  ಹೀಗೆ ಶುರುವಾಗುವ ಹಾಡು ಬೇರೆಯದೇ ಲೋಕಕ್ಕೆ ಕೊಂಡೊಯ್ಯುತ್ತದೆ. ಮತ್ತು ಅದು ನಮ್ಮದೇ ಲೋಕ ಎನ್ನುವುದು ಈ ಹಾಡಿನ ವಿಶಿಷ್ಟತೆ. ತಾಯಿ ಮತ್ತು ಮಗಳ ಬಾಂಧವ್ಯವನ್ನು.. ಹೆಣ್ಣು ಮಕ್ಕಳನ್ನು ಹಡೆದ ಮೇಲೆ ಅನುಭವಿಸುವ ನೋವು, ತಳಮಳಗಳನ್ನೆಲ್ಲ ಹಾಡಿನಲ್ಲಿ ತಂದಿಟ್ಟಿರೋ ಈ ಜನಪದ ಗೀತೆ ಇರೋದು ಬನಾರಸ್ ಚಿತ್ರದಲ್ಲಿ.

  ಜನಪದ ಗೀತೆಯನ್ನೇ ಯಥಾವತ್ತಾಗಿ ಬಳಸಿಕೊಂಡು ವ್ಹಾವ್ ಎನ್ನುವಂತೆ ಮಾಡಿದ್ದಾರೆ ನಿರ್ದೇಶಕ ಜಯತೀರ್ಥ. ಆ ಜನಪದ ಗೀತೆಯನ್ನು ಅಷ್ಟೇ ಚೆಂದವಾಗಿ ಹೃದಯಕ್ಕೆ ಮುಟ್ಟುವಂತೆ ಹಾಡಿರುವುದು ಹರ್ಷಿಕಾ ದೇವನಾಥ್. ಜನಪದ ಸಂಗೀತವನ್ನೇ ಬಳಸಿಕೊಂಡಿರೋ ಅಜನೀಶ್ ಲೋಕನಾಥ್, ಅದನ್ನು ಪುಟ್ಟ ಪುಟ್ಟ ಕಾರ್ಟೂನುಗಳಲ್ಲಿ ತೋರಿಸಿರೋ ಜಯತೀರ್ಥ ಕೇಳುಗರನ್ನು ಬಾಲ್ಯಕ್ಕೆ ಕೊಂಡೊಯ್ಯುತ್ತಾರೆ. ಅಂದಹಾಗೆ ಇದು ಜಮೀರ್ ಖಾನ್ ಅವರ ಪುತ್ರ ಝೈದ್ ಖಾನ್ ಮತ್ತು ಸೋನಲ್ ಮಂಥೆರೋ ನಟಿಸಿರೋ ಬನಾರಸ್ ಚಿತ್ರದ ಹಾಡು. ಸಿನಿಮಾ ಸಿದ್ಧವಾಗಿದೆ.

  ಝೈದ್-ಸೋನಲ್ ಪ್ರಧಾನ ಪಾತ್ರದಲ್ಲಿರೋ ಚಿತ್ರದಲ್ಲಿ ದೇವರಾಜ್, ಅಚ್ಯುತ್ ಕುಮಾರ್, ಸುಜಯ್ ಶಾಸ್ತ್ರಿ, ಸಪ್ನಾ ರಾಜ್, ಭರತ್ ಅಲಿ ಮೊದಲಾದವರು ನಟಿಸಿದ್ದಾರೆ. ತಿಲಕ್ ರಾಜ್ ಬಲ್ಲಾಳ್ ಮತ್ತು ಮುಝಮಿಲ್ ಅಹ್ಮದ್ ಖಾನ್ ನಿರ್ಮಿಸಿರುವ ಚಿತ್ರ ಬನಾರಸ್ ರಿಲೀಸ್ ಆಗುವುದಕ್ಕೆ ಸಿದ್ಧವಾಗಿದೆ.