ಜಾಕ್ವೆಲಿನ್ ಫರ್ನಾಂಡಿಸ್. ಈ ಬಾಲಿವುಡ್ ಚೆಲುವೆ ಕನ್ನಡಿಗರಿಗೆ ಪರಿಚಿತರಾಗಿದ್ದು... ಮನೆ ಮಾತಾಗಿದ್ದು.. ಥಿಯೇಟರಿನಲ್ಲಿ ಹವಾ ಎಬ್ಬಿಸಿರುವ ವಿಕ್ರಾಂತ್ ರೋಣ ಚಿತ್ರದಿಂದ. ಸುದೀಪ್ ಜೊತೆ ರಾರಾ ರಕ್ಕಮ್ಮ ಹಾಡು ಹಿಟ್ ಆಗಿದ್ದೇ ತಡ, ಜಾಕ್ವೆಲಿನ್ ಫರ್ನಾಂಡಿಸ್ ದೊಡ್ಡ ಸ್ಟಾರ್ ಆಗಿಬಿಟ್ಟರು. ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಇಮ್ರಾನ್ ಹಶ್ಮಿ ಮೊದಲಾದವರ ಜೊತೆ ನಟಿಸಿದಾಗಲೂ ಸಿಗದ ಸ್ಟಾರ್`ಡಮ್ ರಕ್ಕಮ್ಮ ಹಾಡಿನಿಂದ ಸಿಕ್ಕಿತ್ತು. ಆದರೆ ಈಗ ಅದೇ ಜಾಕ್ವೆಲಿನ್ ಫರ್ನಾಂಡಿಸ್ ಜೈಲಿಗೆ ಹೋಗುತ್ತಾರೇನೋ ಎಂಬ ಆತಂಕ ಸೃಷ್ಟಿಯಾಗಿದೆ. ಅದಕ್ಕೆ ಕಾರಣ ಜಾರಿ ನಿರ್ದೇಶನಾಲಯದಲ್ಲಿರೋ ಉದ್ಯಮಿಯೊಬ್ಬರ ವಂಚನೆ ಕೇಸ್.
ಉದ್ಯಮಿ ಸುಖೇಶ್ ಎಂಬುವವರು ಮನಿ ಲಾಂಡ್ರಿಂಗ್ ಹಾಗೂ ವಂಚನೆ ಆರೋಪ ಎದುರಿಸುತ್ತಿದ್ದಾರೆ. ಅವರಿಂದ ಜಾಕ್ವೆಲಿನ್ 5.71 ಕೋಟಿ ಮೌಲ್ಯದ ಉಡುಗೊರೆ ಪಡೆದಿದ್ದರು ಹಾಗೂ ಅದು ಅಕ್ರಮ ಎಂದು ಅವರಿಗೆ ಗೊತ್ತಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಆ ಕೇಸ್‍ನಲ್ಲಿ ಜಾಕ್ವೆಲಿನ್ ಅವರನ್ನು ಸಾಕ್ಷಿಯನ್ನಾಗಿ ವಿಚಾರಣೆ ನಡೆಸಲಾಗಿತ್ತು. ಆದರೆ ಈಗ ಜಾಕ್ವೆಲಿನ್ ಅವರನ್ನು ಆರೋಪಿ ಮಾಡಿ ಇಡಿ ಚಾರ್ಜ್‍ಶೀಟ್ ಸಲ್ಲಿಸಿದೆ.
52 ಲಕ್ಷ ಮೌಲ್ಯದ ಮನೆ, 9 ಲಕ್ಷ ರೂ.ಗಳ ಪರ್ಷಿಯನ್ ಬೆಕ್ಕು ಸೇರಿದಂತೆ 5.71 ಕೋಟಿ ರೂ. ಮೊತ್ತದ ಗಿಫ್ಟ್ ಪಡೆದಿದ್ದಾರೆ. ಅಲ್ಲದೆ ಅವರ ಮನೆಯವರು 1 ಕೋಟಿ ಮೌಲ್ಯದ ಗಿಫ್ಟ್ ಪಡೆದಿದ್ದಾರೆ. ಪಡೆದ ಉಡುಗೊರೆಗಳ ಪಟ್ಟಿಯಲ್ಲಿ ಲಕ್ಷ ಲಕ್ಷ ಮೌಲ್ಯದ ಜಾಕೆಟ್ಸ್, ಡ್ರೆಸ್, ಕೂಪರ್ ಕಾರುಗಳೂ ಇವೆ. ಇದೆಲ್ಲವನ್ನೂ ಜಾಕ್ವೆಲಿನ್, ಸುಖೇಶ್ ಅವರ ಮನಿಲಾಂಡ್ರಿಮಗ್‍ಗೆ ಸಹಾಯ ಮಾಡಿದ್ದಕ್ಕಾಗಿ ಪಡೆದ ಹಣ ಎನ್ನುವ ಆರೋಪವಿದ್ದು, ವಿಚಾರಣೆ ನಡೆಯಬೇಕಿದೆ.
ಕೇಸಿನಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಆರೋಪಿಯಾಗಿದ್ದಾರೆ. ದಿ.ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್, ಸೈಫ್ ಅಲಿ ಖಾನ್ ಮಗಳು ಸಾರಾ ಅಲಿ ಖಾನ್ ಅವರಿಗೂ ಈತ ಗಿಫ್ಟ್ ಕೊಟ್ಟಿದ್ದ ಎನ್ನಲಾಗಿತ್ತು. ಅವರೂ ಆರೋಪಿಯಗ್ತಾರಾ ಅಥವಾ ಸಾಕ್ಷಿಯಾಗಿಯೇ ಉಳಿದುಕೊಳ್ತಾರಾ..? ಕಾದು ನೋಡಬೇಕು.