ಮದುವೆಗಾಗಿ ತಹತಹಿಸುತ್ತಿರೋ ಸೂರಿಗೆ ಶಾರದಾ ಸಿಗ್ತಾಳೆ. ಮದುವೆ ಫಿಕ್ಸ್ ಆಗುತ್ತೆ. ಲಗ್ನಪತ್ರಿಕೆ ಹಂಚಿ ಆಗಿರುತ್ತೆ. ಛತ್ರ ಬುಕ್ ಆಗಿರುತ್ತೆ. ಮದುವೆಗೆ ಇನ್ನೇನು.... ಇನ್ನೊಂದೇ ವಾರ.. ಮದುವೆ ಬೇಡ ಅಂತಾಳೆ ವಧು ಶಾರದಾ. ನೇರವಾಗಿ ಮದುವೆಯಾಗಬೇಕಿದ್ದ ಸೂರಿಯ ಮನೆಗೇ ಬಂದು, ಆತನ ಅಪ್ಪನ ಎದುರೇ ಕುಳಿತು ಮದುವೆಗೆ ನೋ ಅಂತಾಳೆ. ಮುಂದೇನು..? ಅವಳ್ಯಾಕೆ ಮದುವೆಗೆ ನೋ ಎಂದಳು? ಅದನ್ನೆಲ್ಲ ತಿಳಿಯೋಕೆ ಮೇ 20ರವರೆಗೆ ಕಾಯಬೇಕು. ಸಕುಟುಂಬ ಸಮೇತ ಚಿತ್ರದ ಕಥೆಯೇ ಅದು. ಟ್ರೇಲರ್‍ನಲ್ಲೇ ಕುತೂಹಲ ಮೂಡಿಸಿದ್ದಾರೆ ನಿರ್ದೇಶಕ ರಾಹುಲ್.
ಈ ಚಿತ್ರದ ನಿರ್ಮಾಣಕ್ಕೆ ರಕ್ಷಿತ್ ಶೆಟ್ಟಿ ಕೈಜೋಡಿಸಿದ್ದಾರೆ. ಪರಂವಾ ಸ್ಟುಡಿಯೋಸ್‍ನ ಸಕುಟುಂಬ ಸಮೇತ ಚಿತ್ರದ ನಿರ್ಮಾಣಕ್ಕೆ ಜಿ.ಎಸ್.ಗುಪ್ತಾ ಅವರೂ ನಿರ್ಮಾಪಕರೇ. ರಾಹುಲ್ ಪಿ.ಕೆ. ಈ ಚಿತ್ರದ ನಿರ್ದೇಶಕ. ನಿರ್ದೇಶಕರಾಗಿ ಮೊದಲ ಅನುಭವ.
ನನಗೆ ರಾಹುಲ್ ಉಳಿದವರು ಕಂಡಂತೆ ದಿನಗಳಿಂದಲೂ ಗೊತ್ತು. ಅವರು ಅಸಿಸ್ಟೆಂಡ್ ಡೈರೆಕ್ಟರ್ ಆಗಿದ್ದ ದಿನಗಳಿಂದಲೂ ಗೊತ್ತು. ಚಿತ್ರವನ್ನು ನಾನು ನೋಡಿದ್ದೇನೆ. ಈಗಾಗಲೇ ಚಿತ್ರದ ಒಟಿಟಿ ಮತ್ತು ಸ್ಯಾಟಲೈಟ್ ಹಕ್ಕುಗಳು ಮಾರಾಟವಾಗಿದ್ದು, ಬಂಡವಾಳ ವಾಪಸ್ ಬಂದಾಗಿದೆ. ನಿರ್ದೇಶಕರು ಚಿತ್ರವನ್ನ ನಾವು ನಿರೀಕ್ಷಿಸಿದ್ದಕ್ಕಿಂತ ಬೇಗನೇ ತೆರೆಗೆ ತರುತ್ತಿದ್ದಾರೆ ಎಂದು ಖುಷಿ ಹಂಚಿಕೊಂಡಿದ್ದು ರಕ್ಷಿತ್ ಶೆಟ್ಟಿ.
ಸಿರಿ ರವಿಕುಮಾರ್ ನಾಯಕಿಯಾಗಿದ್ದರೆ, ಭರತ್ ಈ ಚಿತ್ರದ ಮೂಲಕ ಹೀರೋ ಆಗಿದ್ದಾರೆ. ಅಚ್ಯುತ್ ಕುಮಾರ್, ಕೃಷ್ಣಾ ಹೆಬ್ಬಾಳೆ, ಪುಷ್ಪ ಬೆಳವಾಡಿ, ರೇಖಾ ಕೂಡ್ಲಿಗಿ.. ಸೇರಿದಂತೆ ಬೃಹತ್ ತಾರಾಗಣವೇ ಚಿತ್ರದಲ್ಲಿದೆ. ಮಿದುನ್ ಮುಕುಂದನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.