ಆಗಸ್ಟ್ ತಿಂಗಳು ಸ್ಯಾಂಡಲ್‍ವುಡ್‍ನ ಪೈಪೋಟಿಯ ತಿಂಗಳಾಗುವ ಎಲ್ಲ ಲಕ್ಷಣಗಳೂ ಗೋಚರವಾಗುತ್ತಿವೆ. 2019ರ ಸೆಮಿಫೈನಲ್ ತಿಂಗಳು ಆಗಸ್ಟ್ ಆದರೆ ಅಚ್ಚರಿಯಿಲ್ಲ. ಏಕೆ ಗೊತ್ತೇ.. ಕನ್ನಡ ಚಿತ್ರರಂಗದ ಸ್ಟಾರ್ ನಟರ ಚಿತ್ರಗಳು ಅದೇ ತಿಂಗಳು ರಿಲೀಸ್ ಆಗುತ್ತಿವೆ.
ವರಮಹಾಲಕ್ಷ್ಮಿ ಹಬ್ಬಕ್ಕೆ ಸುದೀಪ್ ಅಭಿನಯದ ಕೃಷ್ಣ ನಿರ್ದೇಶನದ ಪೈಲ್ವಾನ್ ತೆರೆಗೆ ಬರುತ್ತಿದೆ.
ಅದೇ ತಿಂಗಳು ರಕ್ಷಿತ್ ಶೆಟ್ಟಿ ಅಭಿನಯದ ಪುಷ್ಕರ್ ಮಲ್ಲಿಕಾರ್ಜುನಯ್ಯ, ಪ್ರಕಾಶ್ ಗೌಡ ನಿರ್ಮಾಣದ ಅವನೇ ಶ್ರೀಮನ್ನಾರಾಯಣ ಚಿತ್ರವೂ ರಿಲೀಸ್ ಆಗುತ್ತಿದೆ.
ಪೈಲ್ವಾನ್ 9 ಭಾಷೆಗಳಲ್ಲಿ ರಿಲೀಸ್ ಆದರೆ, ಅವನೇ ಶ್ರೀಮನ್ನಾರಾಯಣ 5 ಭಾಷೆಗಳಲ್ಲಿ ರಿಲೀಸ್ ಆಗಲಿದೆ.
ಈ ಇಬ್ಬರದ್ದಷ್ಟೇ ಅಲ್ಲ, ಆಗಸ್ಟ್ ಹೊತ್ತಿಗೆ ಶಿವರಾಜ್ ಕುಮಾರ್ ಅಭಿನಯದ ಆನಂದ್ ಕೂಡಾ ರಿಲೀಸ್ ಆಗಲಿದೆ. ದ್ವಾರಕೀಶ್ ಬ್ಯಾನರ್‍ನಲ್ಲಿ ಇದೇ ಮೊದಲ ಬಾರಿಗೆ ಶಿವಣ್ಣ ನಟಿಸಿರುವ, ವಾಸು ನಿರ್ದೇಶನದ ಸಿನಿಮಾ ಅದು.
ಇದಕ್ಕೆ ಕಳಶವಿಟ್ಟಂತೆ ಶ್ರೀಮುರಳಿ ಭರಾಟೆಯೂ ಅದೇ ತಿಂಗಳು ಶುರುವಾಗಲಿದೆ. ನಿರ್ದೇಶಕ ಚೇತನ್ ಕುಮಾರ್ ಬಹದ್ದೂರ್, ಭರ್ಜರಿ ನಂತರ ಹ್ಯಾಟ್ರಿಕ್ ನಿರೀಕ್ಷೆಯಲ್ಲಿರುವ ಸಿನಿಮಾ ಭರಾಟೆ.
ಸದ್ಯಕ್ಕೆ ಆಗಸ್ಟ್ ಕ್ಯೂನಲ್ಲಿರುವ ಚಿತ್ರಗಳಿವು. ಇವುಗಳ ಜೊತೆಗೆ ಇನ್ನಷ್ಟು ಚಿತ್ರಗಳು ಜೊತೆಯಾದರೂ ಅಚ್ಚರಿಯಿಲ್ಲ.