ಅನುಶ್ರೀ. ನಗುವಿಗೇ ಫೇಮಸ್ ಆಗಿರೋ ಆ್ಯಂಕರ್. ಅರಳು ಹುರಿದಂತೆ ಪಟಪಟನೆ ಮಾತನಾಡುತ್ತಾ.. ವೇದಿಕೆಗಳಲ್ಲಿ ಸಂಚಲನ ಸೃಷ್ಟಿಸಿರುವ ಅನುಶ್ರೀ, ಕೆಲವು ಚಿತ್ರಗಳಲ್ಲಿ ನಟಿಸಿಯೂ ಇದ್ದಾರೆ. ಆದರೂ.. ಆ್ಯಂಕರ್ ಆಗಿಯೇ ಫೇಮಸ್. ಅಂತಹ ಅನುಶ್ರೀ ಈಗ ಸುದ್ದಿ ಚಾನೆಲ್‍ಗಳ ವಿರುದ್ಧ ಗರಂ ಆಗಿದ್ದಾರೆ. ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಸ್ಟೇ ತಂದಿದ್ದಾರೆ. ಇಷ್ಟಕ್ಕೂ ಆಗಿದ್ದೇನು?
ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ಸಂಪತ್ ಎಂಬುವವರು ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವಲಿಂಗಯ್ಯ ಎಂಬ ಕೇರ್ ಟೇಕರ್ ಅವರನ್ನು ನೋಡಿಕೊಳ್ಳುತ್ತಿದ್ದಾರೆ. ಆಗ ಅವರಿಗೆ ಆ ಸಂಪತ್, ಈ ಅನುಶ್ರೀ ಅವರ ತಂದೆ ಎಂದು ಗೊತ್ತಾಗಿದೆ. ಆ ಸಂಪತ್ ಅನುಶ್ರೀ ಚಿಕ್ಕವರಿದ್ದಾಗಲೇ ಹೆಂಡತಿ, ಮಗಳನ್ನು ಬಿಟ್ಟು ಹೋಗಿದ್ದರಂತೆ. ನಂತರ ಇವರು ಹೇಗಿದ್ದಾರೆ.. ಏನು ಮಾಡುತ್ತಿದ್ದಾರೆ.. ಬದುಕಿದ್ದಾರಾ.. ಸತ್ತಿದ್ದಾರಾ.. ಎಂದು ಕೂಡಾ ನೋಡಿಲ್ಲ. ಅನುಶ್ರೀ ಅವರ ತಾಯಿಯೇ ಮಗಳನ್ನು ಕಷ್ಟಪಟ್ಟು ಸಾಕಿದ್ದಾರೆ. ಈಗ ಅನುಶ್ರೀ ಖ್ಯಾತರಾದ ನಂತರ ಈ ಸಂಪತ್‍ಗೆ ಮಗಳ ನೆನಪಾಗಿದೆ. ನಾನು ಸಾಯುವ ಮುನ್ನ ಅವಳು ಬಂದು ನನ್ನ ಮುಖ ನೋಡಬೇಕು ಎಂದು ಶಿವಲಿಂಗಯ್ಯ ಅವರ ಬಳಿ ಹೇಳಿಕೊಂಡಿದ್ದಾರೆ. ಅನುಶ್ರೀ ಅವರನ್ನು ಸಂಪರ್ಕಿಸೋದು ಹೇಗೆಂದು ಗೊತ್ತಾಗದೆ ಶಿವಲಿಂಗಯ್ಯ, ಸುದ್ದಿ ಚಾನೆಲ್‍ಗಳನ್ನು ಸಂಪರ್ಕಿಸಿದ್ದಾರೆ. ಕನ್ನಡದಲ್ಲಿ ಟಿವಿ 9, ಸುವರ್ಣ ನ್ಯೂಸ್ ಹಾಗೂ ಪಬ್ಲಿಕ್ ಟಿವಿ ಈ ಬಗ್ಗೆ ಸುದ್ದಿಯನ್ನೇ ಮಾಡಿಲ್ಲ. ಉಳಿದ ಚಾನೆಲ್ಲುಗಳು ದೊಡ್ಡದಾಗಿ ಸುದ್ದಿಯನ್ನು ಬಿತ್ತರಿಸಿವೆ. ಯಾವಾಗ ತಮ್ಮ ಪರ್ಸನಲ್ ವಿಷಯಗಳು ನ್ಯೂಸ್ ಚಾನೆಲ್ಲುಗಳಲ್ಲಿ ಬರೋಕೆ ಶುರುವಾಯಿತೋ.. ಅನುಶ್ರೀ ನೇರ ಕೋರ್ಟ್ ಮೊರೆ ಹೋಗಿದ್ದಾರೆ. ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಸ್ಟೇ ತಂದಿದ್ದಾರೆ.
ಒಬ್ಬ ವ್ಯಕ್ತಿ 8 ವರ್ಷ ಕುಟುಂಬದಿಂದ ದೂರ ಇದ್ದರೆ, ಆ ಕುಟುಂಬದ ಜೊತೆ ಸಂಬಂಧ ಇಲ್ಲ ಎನ್ನುವುದಕ್ಕೆ ಅಷ್ಟು ಸಾಕು ಎನ್ನುತ್ತದೆ ಕಾನೂನು. ಆದರೆ ಈ ವ್ಯಕ್ತಿ 22 ವರ್ಷಗಳ ಹಿಂದೆ ನಮ್ಮನ್ನು ಬಿಟ್ಟು ಹೋದವರು. ಹೇಗೆ ಒಪ್ಪಿಕೊಳ್ಳಲಿ ಅನ್ನೋದು ಅವರ ವಾದ. ಇನ್ನು ಶಿವಲಿಂಗಯ್ಯ ತಮ್ಮನ್ನು ಸಂಪರ್ಕ ಮಾಡಬಹುದಿತ್ತು. ಅದನ್ನು ಬಿಟ್ಟು ನ್ಯೂಸ್ ಚಾನೆಲ್‍ಗಳ ಬಳಿ ಹೋಗಿದ್ದು ಎಷ್ಟು ಸರಿ ಎನ್ನುವುದು ಅವರ ಪ್ರಶ್ನೆ. ಅದನ್ನು ಅವರು ಶಿವಲಿಂಗಯ್ಯ ಅವರಿಗೇ ಕೇಳಿದ್ದಾರೆ. ಸದ್ಯಕ್ಕೆ ಅನುಶ್ರೀ ಬಗ್ಗೆ ನ್ಯೂಸ್ ಚಾನೆಲ್ಲುಗಳು ಯಾವುದೇ ವರದಿ ಮಾಡುವಂತಿಲ್ಲ.
ಮಕ್ಕಳಿಗೆ ತಂದೆ ತಾಯಿಯ ಅವಶ್ಯಕತೆ ಬೀಳುವುದೇ ಬೆಳೆಯುವ ವಯಸ್ಸಿನಲ್ಲಿ. ಆ ಸಮಯದಲ್ಲಿ ಪ್ರೀತಿಯನ್ನೂ ತೋರಿಸದ.. ಕಷ್ಟಕ್ಕೂ ಸ್ಪಂದಿಸದ.. ಬದುಕಿದ್ದಾರೆ ಎಂಬುದನ್ನೇ ಮರೆತಿದ್ದವರನ್ನು ಈಗ ತಂದೆ ಎಂದು ಒಪ್ಪಿಕೊಳ್ಳೋಕೆ ಎಂಥವರಿಗೂ ಕಷ್ಟವೇ. ಇಷ್ಟೆಲ್ಲ ಆಗಿ ಅದು ಅವರವರ ವೈಯಕ್ತಿಕ ಬದುಕು. ನೋವು ತಿಂದವರು ಅವರು. ಕ್ಷಮಿಸಬೇಕೋ.. ಕರುಣೆ ತೋರಬೇಕೋ.. ನಿರ್ಧರಿಸಬೇಕಾದವರೂ ಅವರೇ. ಬೇರೆಯವರಿಗೆ ಅದರ ಬಗ್ಗೆ ಮಾತನಾಡುವ ಯಾವ ಹಕ್ಕೂ ಇಲ್ಲ.