ಕನಕ ಚಿತ್ರದಲ್ಲಿ ದುನಿಯಾ ವಿಜಯ್, ಹರಿಪ್ರಿಯಾ, ಮಾನ್ವಿತಾ ಹರೀಶ್ ಜೊತೆಗೆ ಚಿತ್ರದ ಖಳನಾಯಕನ ಖದರ್ ಕೂಡಾ ಎದ್ದು ಕಾಣ್ತಿದೆ. ಪಂಚಕರ್ಮಗಳನ್ನು ಭೂಮಿಗೆ ಪರಿಚಯಿಸಿದ ಆ ಭಗವಂತನ ಮಗ ಕಣೋ ನಾನು ಎನ್ನುವ ಡೈಲಾಗ್ ಕಿವಿಯಲ್ಲಿ ಮಾರ್ದನಿಸುತ್ತಿದೆ. ಅದು ಕೆ.ಪಿ.ನಂಜುಂಡಿ. ಆ ಡೈಲಾಗ್ ಹೊಡೆದು ನಾಯಕ ವಿಜಯ್ ಎದೆಗೆ ಒದೆಯುವ ಆ ದೃಶ್ಯ, ಕನಕ ಟ್ರೇಲರ್‍ನ ಹೈಲೈಟ್.
14 ವರ್ಷಗಳ ಬಳಿಕ ಬಣ್ಣ ಹಚ್ಚಿರುವ ಕೆ.ಪಿ.ನಂಜುಂಡಿ, ಒದೆಯುವ ಸೀನ್ ಬಹಳ ಕಷ್ಟವಾಗಿತ್ತು. ಏಕೆಂದರೆ, ಅದು ನನ್ನ ವ್ಯಕ್ತಿತ್ವ ಅಲ್ಲ. ನಿರ್ದೇಶಕರು ಅದಕ್ಕಾಗಿ ನನ್ನ ಮನವೊಲಿಸಬೇಕಾಯ್ತು ಎಂದು ಹೇಳಿಕೊಂಡಿದ್ದಾರೆ. ಸಿನಿಮಾದಲ್ಲಿ ನಂಜುಂಡಿ ಅವರದ್ದು ಕ್ಲಾಸ್ ವಿಲನ್ ಪಾತ್ರವಂತೆ. ಭಾಷೆಯಷ್ಟೇ ಅಲ್ಲ, ಕ್ಯಾರೆಕ್ಟರ್ ಕೂಡಾ.
ಚಿತ್ರದಲ್ಲಿ ನಂಜುಂಡಿಯವರಷ್ಟೇ ಅಲ್ಲ, ರವಿಶಂಕರ್ ಕೂಡಾ ವಿಲನ್. ರವಿಶಂಕರ್ ಮಾಸ್ ವಿಲನ್ ಆದರೆ, ನಾನು ಕ್ಲಾಸ್ ವಿಲನ್ ಅಂತಾರೆ ನಂಜುಂಡಿ. ಕೇವಲ ಸ್ನೇಹಕ್ಕಾಗಿ ಒಪ್ಪಿಕೊಂಡು ಈ ಸಿನಿಮಾದಲ್ಲಿ ನಟಿಸಿರುವ ನಂಜುಂಡಿ, ಇದಕ್ಕಾಗಿ ಎಂದಿನಂತೆ ಸಂಭಾವನೆ ಪಡೆದಿಲ್ಲ.
ಚಿನ್ನದ ಬ್ಯುಸಿನೆಸ್, ಸಮಾಜಸೇವೆ, ರಾಜಕೀಯ ಎಲ್ಲವನ್ನೂ ನಿಭಾಯಿಸುತ್ತಿರುವ ನಂಜುಂಡಿ, ಮತ್ತೊಮ್ಮೆ ಬೆಳ್ಳಿತೆರೆಯಲ್ಲಿ ಆರ್ಭಟಿಸಲು ಬರುತ್ತಿದ್ದಾರೆ. ಕನಕನಿಗೆ ವಿಲನ್ ಆಗಿ.