` laal singh chadha, - chitraloka.com | Kannada Movie News, Reviews | Image

laal singh chadha,

 • ಐ ಲವ್ ಇಂಡಿಯಾ. ನನ್ನ ಚಿತ್ರಕ್ಕೆ ಬಾಯ್ಕಾಟ್ ಬೇಡ : ಅಮೀರ್ ಖಾನ್

  ಐ ಲವ್ ಇಂಡಿಯಾ. ನನ್ನ ಚಿತ್ರಕ್ಕೆ ಬಾಯ್ಕಾಟ್ ಬೇಡ : ಅಮೀರ್ ಖಾನ್

  ನಾನು ಭಾರತವನ್ನು ಪ್ರೀತಿಸುತ್ತೇನೆ. ಕೆಲವರು ನಾನು ಭಾರತವನ್ನು ಇಷ್ಟಪಡದ ವ್ಯಕ್ತಿ ಎಂದು ನಂಬಿದ್ದಾರೆ. ಅದು ಅವರ ನಂಬಿಕೆ ಅಷ್ಟೆ. ವಾಸ್ತವ ಅಲ್ಲ. ನಾನು ಭಾರತವನ್ನು ಇಷ್ಟಪಡಲ್ಲ ಅನ್ನೊದೆಲ್ಲ ಸುಳ್ಳು. ನಾನು ಭಾರತವನ್ನು ಪ್ರೀತಿಸುತ್ತೇನೆ. ದಯವಿಟ್ಟು ನನ್ನ ಚಿತ್ರವನ್ನು ಬಾಯ್ಕಾಟ್ ಮಾಡಬೇಡಿ. ನನ್ನ ಸಿನಿಮಾಗಳನ್ನು ನೋಡಿ.

  ಇದು ಅಮೀರ್ ಖಾನ್ ಮಾಡಿಕೊಂಡಿರುವ ಬಹಿರಂಗ ಮನವಿ. ಅಮೀರ್ ಖಾನ್ ಚಿತ್ರ ಲಾಲ್ ಸಿಂಗ್ ಚಡ್ಡಾ ಇದೇ ವಾರ ರಿಲೀಸ್ ಆಗಬೇಕಿದೆ. ಅದಕ್ಕೆ ಮೊದಲೇ ಈ ಚಿತ್ರನ್ನು ನೋಡಬೇಡಿ.  ಬಾಯ್ಕಾಟ್ ಮಾಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. ಈ ಹಿನ್ನೆಲೆಯಲ್ಲಿ ಅಮೀರ್ ಖಾನ್ ಬಹಿರಂಗವಾಗಿ ಈ ಮಾತು ಹೇಳಿದ್ದಾರೆ.

  ಬಾಯ್ಕಾಟ್ ಅಭಿಯಾನಕ್ಕೆ ಏನು ಕಾರಣ?

  ಅಮೀರ್ ಖಾನ್ ಕೆಲವು ವರ್ಷಗಳ ಹಿಂದೆ ಭಾರತದಲ್ಲಿ ಅಸಹಿಷ್ಣುತೆ ಇದೆ. ಈ ದೇಶದಲ್ಲಿ ಇರಲು ಭಯವಾಗುತ್ತಿದೆ ಎಂದು ನನ್ನ ಹೆಂಡತಿ ಹೇಳುತ್ತಾಳೆ. ಆಕೆಯ ಮಾತಿನಲ್ಲಿ ಸತ್ಯವಿದೆ ಎನಿಸುತ್ತಿದೆ ಎಂದು ಹೇಳಿಕೆ ನೀಡಿದ್ದರು. ಅದು ಪ್ರಧಾನಿ ಮೋದಿ ವಿರುದ್ಧ ಸಾಹಿತಿಗಳು, ಸೆಲಬ್ರಿಟಿಗಳು ಅಸಹಿಷ್ಣುತೆ ಕಾರಣ ಹೇಳಿ ಪ್ರಶಸ್ತಿಗಳನ್ನೆಲ್ಲ ಹಿಂದಿರುಗಿಸಿ ಹೋರಾಟ ನಡೆಸುತ್ತಿದ್ದ ಕಾಲ. ಆಗ ಅಮೀರ್ ಖಾನ್ ಮಾತಿಗೆ ದೊಡ್ಡ ಪ್ರಚಾರವೂ ಸಿಕ್ಕಿತ್ತು. ಆಗಲೂ ಅಮೀರ್ ಖಾನ್ ಟೀಕೆಗಳನ್ನೆದುರಿಸಿದ್ದರು. ಆದರೆ.. ಅದೊಂದು ವ್ಯವಸ್ಥಿತ ಅಭಿಯಾನ ಎಂಬುದು ಆಮೇಲೆ ಗೊತ್ತಾಗಿತ್ತು.

  ಆನಂತರ ಅದೇ ಬಿಸಿಯಲ್ಲಿ ಪಿಕೆ ಚಿತ್ರದಲ್ಲಿ ಹಿಂದೂ ದೇವರುಗಳಿಗೆ ಅವಮಾನ ಮಾಡಿದ್ದಾರೆ ಎಂಬ ವಿವಾದವೂ ಭುಗಿಲೆದ್ದಿತ್ತು. ಪಿಕೆ ಚಿತ್ರದಲ್ಲಿ ಹಿಂದೂ ಧರ್ಮದ ಮೂಢನಂಬಿಕೆಗಳು, ದೇವರನ್ನು ಲೇವಡಿ ಮಾಡುವ ಅಮೀರ್ ಪಾತ್ರ ಇತರೆ ಧರ್ಮದ ವಿಷಯಗಳನ್ನು ನೆಪಕ್ಕೂ ಮಾತನಾಡುವುದಿಲ್ಲ. ಹಿಂದೂಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಕೂಗು ಕೇಳಿ ಬಂದಿತ್ತು.

  ಬೆನ್ನಲ್ಲೇ ಸತ್ಯಮೇವಜಯತೆ ಶೋನಲ್ಲಿ ದೇವರಿಗೆ ಹಾಲಿನ ಅಭಿಷೇಕ ಮಾಡುವ ಬದಲು ಅದನ್ನು ಬಡ ಮಕ್ಕಳಿಗೆ ನೀಡಿ. ಹಾಲನ್ನು ವೇಸ್ಟ್ ಮಾಡಬೇಡಿ ಎಂದು ಕರೆಕೊಟ್ಟಿದ್ದರು. ದೇವರಿಗೆ ಅಭಿಷೇಕ ಮಾಡುವುದರಿಂದ ಯಾವ ಪ್ರಯೋಜನವೂ ಇಲ್ಲ ಎಂದು ಹೇಳಿಕೆ ನೀಡಿದ್ದರು.

  ಇವೆಲ್ಲವೂ ಒಟ್ಟಾಗಿ ಈಗ ಕಾಡೋಕೆ ಶುರುವಾಗಿವೆ. ಅಮೀರ್ ಖಾನ್ ಚಿತ್ರ ನೋಡುವ ಬದಲು ಆ ಹಣದಲ್ಲಿ ಯಾರಾದರೂ ಬಡವರಿಗೆ ಸಹಾಯ ಮಾಡಿ. ಹಿಂದೂ ವಿರೋಧಿಯ ಚಿತ್ರವನ್ನು ಬಹಿಷ್ಕರಿಸಿ ಎಂಬ ಕೂಗು ಬಲವಾಗಿ ಎದ್ದಿದೆ.

 • ಥಿಯೇಟರ್ ಬಾಡಿಗೆಯೂ ಹುಟ್ಟಲಿಲ್ಲ : ಲಾಲ್ ಸಿಂಗ್ ಚಡ್ಡಾ, ರಕ್ಷಾಬಂಧನ್ ಢಮಾರ್

  ಥಿಯೇಟರ್ ಬಾಡಿಗೆಯೂ ಹುಟ್ಟಲಿಲ್ಲ : ಲಾಲ್ ಸಿಂಗ್ ಚಡ್ಡಾ, ರಕ್ಷಾಬಂಧನ್ ಢಮಾರ್

  ಕಳೆದ ವಾರ ರಿಲೀಸ್ ಆದ ಎರಡು ಬಾಲಿವುಡ್ ಚಿತ್ರಗಳು ಭಯಂಕರ ನಿರೀಕ್ಷೆ ಹುಟ್ಟುಹಾಕಿದ್ದವು. ಅಮೀರ್ ಖಾನ್ ಮತ್ತು ಕರೀನಾ ಕಪೂರ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಹಾಗೂ ಅಕ್ಷಯ್ ಕುಮಾರ್ ಅಭಿನಯದ ರಕ್ಷಾಬಂಧನ್. ಅಮೀರ್ ಈ ಹಿಂದೆ ಭಾರತ ಸುರಕ್ಷಿತ ರಾಷ್ಟ್ರವಲ್ಲ ಎಂದು ಹೇಳಿದ್ದದ್ದು ಹಾಗೂ ಹಿಂದೂಗಳ ಧಾರ್ಮಿಕ ಆಚರಣೆಗಳನ್ನು ಸಿನಿಮಾಗಳಲ್ಲಿ ಟೀಕಿಸಿದ್ದರು. ಇತ್ತ ರಕ್ಷಾಬಂಧನ್ ಚಿತ್ರದ ಕತೆಗಾರ್ತಿ ಹಿಂದೂ ಧರ್ಮದ ನಂಬಿಕೆಗಳನ್ನು ಲೇವಡಿ ಮಾಡಿದ್ದರು. ಹೀಗಾಗಿ ಎರಡೂ ಚಿತ್ರಗಳ ವಿರುದ್ಧ ಬಾಯ್ಕಾಟ್ ಅಭಿಯಾನ ಶುರುವಾಗಿತ್ತು. ಈಗ ಒಂದು ವಾರ ಕಳೆದಿದೆ. ಪಕ್ಕಾ ರಿಸಲ್ಟ್ ಹೊರಬಿದ್ದಿದೆ.

  ಮೊದಲ ದಿನ ಲಾಲ್ ಸಿಂಗ್ ಚಡ್ಡಾ 11 ಕೋಟಿ ಬಿಸಿನೆಸ್ ಮಾಡಿದ್ದರೆ, ರಕ್ಷಾ ಬಂಧನ್ 8 ಕೋಟಿ ಕಲೆಕ್ಷನ್ ಗಳಿಸುವಷ್ಟರಲ್ಲಿ ಸುಸ್ತಾಗಿತ್ತು. ಅದಾದ ಮೇಲೆ ಎರಡೂ ಚಿತ್ರಗಳು ಚೇತರಿಸಿಕೊಳ್ಳಲೇ ಇಲ್ಲ. ಲಾಲ್ ಸಿಂಗ್ ಚಡ್ಡಾ ಮತ್ತು ರಕ್ಷಾಬಂಧನ್ ಚಿತ್ರಗಳ ಬಗ್ಗೆ ವಿಮರ್ಶಕರಲ್ಲಿಯೂ ಮಿಶ್ರ ಪ್ರತಿಕ್ರಿಯೆ ಬಂದಿತ್ತು. ಕೆಲವರು ಅದ್ಭುತ ಎಂದರೆ, ಇನ್ನೂ ಕೆಲವರು ಡಬ್ಬಾ ಎಂದರು.

  ಈಗ ವಾರ ಕಳೆಯುವ ಹೊತ್ತಿಗೆ ಲಾಲ್ ಸಿಂಗ್ ಚಡ್ಡಾ 50 ಕೋಟಿ ಬಿಸಿನೆಸ್ ಮಾಡುವಷ್ಟರಲ್ಲಿ ಏದುಸಿರು ಬಿಡುತ್ತಿದ್ದರೆ, ರಕ್ಷಾಬಂಧನ್ 40-45 ಕೋಟಿಯ ಆಸುಪಾಸಿನಲ್ಲಿ ಸುಸ್ತಾಗಿದೆ. ಅಮೀರ್ ಖಾನ್ ಮತ್ತು ಕರೀನಾ ಕಪೂರ್ ಕ್ಷಮೆ ಯಾಚಿಸಿದ್ದು ಚಡ್ಡಾಗೆ ವರ್ಕೌಟ್ ಆಗಲಿಲ್ಲ. ಅಕ್ಷಯ್ ಕುಮಾರ್ ಅವರಿಗೆ ಇರೋ ಇಮೇಜ್ ರಕ್ಷಾಬಂಧನ್‍ಗೆ ಮ್ಯಾಜಿಕ್ ಮಾಡಲಿಲ್ಲ.

  ಸಿನಿಮಾ ವಾರದ ಕೊನೆಯ ದಿನ ಲಾಲ್ ಸಿಂಗ್ ಚಡ್ಡಾ 1.5 ಕೋಟಿ ಗಳಿಸಿದೆ. ರಕ್ಷಾಬಂಧನ್ ಕೂಡಾ 1 ಕೋಟಿ ತಲುಪೋಕೂ ತಿಣುಕಿದೆ. ಎರಡೂ ಚಿತ್ರಗಳು ಪ್ರದರ್ಶನವಾಗುತ್ತಿರೋ ಸ್ಕ್ರೀನ್ ಮತ್ತು ಥಿಯೇಟರುಗಳ ಲೆಕ್ಕ ಗಣನೆಗೆ ತೆಗೆದುಕೊಂಡರೆ ಬಾಡಿಗೆಯೂ ಹುಟ್ಟದಂತಾ ಪರಿಸ್ಥಿತಿ. ಸರಾಸರಿ ಪ್ರಕಾರ ಎರಡೂ ಚಿತ್ರತಂಡಗಳಿಗೆ ಸಿಗುವುದು ಒಂದೊಂದು ಶೋನಿಂದ 3 ಸಾವಿರ ಚಿಲ್ಲರೆ ಹಣವಷ್ಟೆ. ಹೀಗಾಗಿ ಸಿನಿಮಾ ವಾರದ 2ನೇ ವಾರವೇ ಎರಡೂ ಚಿತ್ರಗಳ ಸ್ಕ್ರೀನ್‍ಗಳ ಸಂಖ್ಯೆ ಶೇ.85ರಷ್ಟು ಕಡಿಮೆಯಾಗಿವೆ. ಈಗ ಮತ್ತೊಮ್ಮೆ ವೀಕೆಂಡ್ ಇದ್ದರೂ, ರಜಾ ಇದ್ದರೂ ಚೇತರಿಸಿಕೊಳ್ಳೋ ಯಾವುದೇ ಸೂಚನೆಗಳೂ ಇಲ್ಲ.

  ಇದರ ಮಧ್ಯೆ ಕನ್ನಡದಲ್ಲಿ ಗಾಳಿಪಟ 2 ಬೊಂಬಾಟ್ ಆಗಿ ಗೆದ್ದಿದೆ. ತೆಲುಗಿನಲ್ಲಿ ಸೀತಾರಾಮನ್ ಹಾಗೂ ಕಾರ್ತಿಕೇಯ 2 ಚಿತ್ರಗಳು ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಿವೆ. ತಮಿಳಿನಲ್ಲಿ ಧನುಷ್ ಚಿತ್ರ ಮೋಡಿ ಮಾಡುತ್ತಿದೆ.

 • ಬಾಯ್ಕಾಟ್ ಬಿಸಿ : ಅಮೀರ್ ಸಿನಿಮಾ ವಿರುದ್ಧ ಇವರು.. ಅಕ್ಷಯ್ ಸಿನಿಮಾ ವಿರುದ್ಧ ಅವರು..

  ಬಾಯ್ಕಾಟ್ ಬಿಸಿ : ಅಮೀರ್ ಸಿನಿಮಾ ವಿರುದ್ಧ ಇವರು.. ಅಕ್ಷಯ್ ಸಿನಿಮಾ ವಿರುದ್ಧ ಅವರು..

  ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಇದೇ ಆಗಸ್ಟ್ 11ಕ್ಕೆ ರಿಲೀಸ್. ಅಕ್ಷಯ್ ಕುಮಾರ್ ಅಭಿನಯದ ರಕ್ಷಾ ಬಂಧನ್ ಕೂಡಾ ಇದೇ ಆಗಸ್ಟ್ 11ಕ್ಕೆ ರಿಲೀಸ್.

  ಅಮೀರ್ ಖಾನ್ ಹಿಂದೂಗಳ ಧಾರ್ಮಿಕ ಭಾವನೆ, ನಂಬಿಕೆಗಳಿಗೆ ಅವಮಾನ ಮಾಡಿದ್ದಾರೆ. ಮಾಡುತ್ತಿದ್ದಾರೆ. ಜೊತೆಗೆ ಭಾರತ ಸುರಕ್ಷಿತ ರಾಷ್ಟ್ರವಲ್ಲ ಎನ್ನುವ ಮೂಲಕ ಭಾರತದ ಬಗ್ಗೆ ವಿದೇಶಗಳಲ್ಲಿ ಕೆಟ್ಟ ಇಮೇಜ್ ಸೃಷ್ಟಿಸಿದವರು. ನಮ್ಮ ನೆಲದ ಸಂಸ್ಕøತಿ ಗೌರವಿಸದ ಈತನ ಚಿತ್ರವನ್ನು ನಾವೇಕೆ ನೋಡಬೇಕು ಎನ್ನುವುದು ಎನ್ನುವುದು ಕೆಲವರ ವಾದ. ಹೀಗಾಗಿ ಬಾಯ್ಕಾಟ್ ಲಾಲ್ ಸಿಂಗ್ ಚಡ್ಡಾ ಎಂದು ಅಭಿಯಾನವೇ ಶುರುವಾಗಿದೆ. ಸ್ವತಃ ಅಮೀರ್ ಖಾನ್ ನಾನು ಭಾರತವನ್ನು ಪ್ರೀತಿಸುತ್ತೇನೆ. ದಯವಿಟ್ಟು ನನ್ನ ಸಿನಿಮಾ ಬಾಯ್ಕಾಟ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಆದರೆ.. ಈ ಹಿಂದೆ ಅಮೀರ್ ಖಾನ್ ಹಾಗೂ ಕರೀನ ಕಪೂರ್ ನಮ್ಮ ಸಿನಿಮ ಇಷ್ಟವಿಲ್ಲದೇ ಹೋದರೆ ನೋಡಲೇಬೇಡಿ ಎಂದು ಹೇಳಿದ್ದನ್ನು ನೆನಪಿಸಿಕೊಂಡು ಬಾಯ್ಕಾಟ್ ಅಭಿಯಾನವನ್ನು ಇನ್ನೂ ದೊಡ್ಡ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಹಾಗಂತ ಇದು ಅಮೀರ್ ಖಾನ್ ಅವರಿಗಷ್ಟೇ ತಟ್ಟುತ್ತಿರುವ ಬಿಸಿ ಅಲ್ಲ.

  ಇದೇ ವೇಳೆ ರಿಲೀಸ್ ಆಗುತ್ತಿರುವ ಅಕ್ಷಯ್ ಕುಮಾರ್ ಅವರ ರಕ್ಷಾ ಬಂಧನ್ ಚಿತ್ರಕ್ಕೂ ಇದೇ ರೀತಿ ಬಾಯ್ಕಾಟ್ ಅಭಿಯಾನ ನಡೆಯುತ್ತಿದೆ. ಹಾಗಂತ ಅಕ್ಷಯ್ ಕುಮಾರ್ ಯಾರದ್ದಾದರೂ ಧಾರ್ಮಿಕ ಭಾವನೆಗಳಿಗೆ ತಂದರಾ ಎಂದರೆ ವಿಷಯ ಅದಲ್ಲ. ಅಕ್ಷಯ್ ಕುಮಾರ್ ಬಹಿರಂಗವಾಗಿ ನರೇಂದ್ರ ಮೋದಿಯನ್ನು ಹೊಗಳಿದವರು. ಜೊತೆಗೆ ಅಕ್ಷಯ್ ಚಿತ್ರಗಳ ಕಥೆಗಳು ಮೋದಿ ಸರ್ಕಾರದ ಯೋಜನೆಗಳಿಗೆ ಪೂರಕವಾಗಿದ್ದವು. ಹಿಂದೂ ರಾಜರ ಹಾಗೂ ಭಾರತದ ಗೂಢಚಾರರ ಕಥೆ ಹೇಳಿದ ಚಿತ್ರಗಳು. ಇದರ ಹೊರತಾಗಿ ಅವರೇನು ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದವರಲ್ಲ. ಅಕ್ಷಯ್ ಕುಮಾರ್ ಅವರಿಗೆ ಮೋದಿ ಬೆಂಬಲಿಗ ಎಂಬ ಇಮೇಜ್, ರಕ್ಷಾ ಬಂಧನ್ ಚಿತ್ರದ ವಿರುದ್ಧ ಅಭಿಯಾನಕ್ಕೆ ಕಾರಣವಾಗಿದೆ.

  ಇತ್ತೀಚೆಗೆ ರಾಣಾ ಪ್ರತಾಪ್ ಚಿತ್ರದ ಹೀನಾಯ ಸೋಲಿನ ನಂತರ ಅಕ್ಷಯ್ ಕುಮಾರ್ ಅವರಿಗೂ ಗೆಲುವು ಬೇಕಿದೆ. ಎಂದಿನಂತೆ ವರ್ಷಗಳ ಗ್ಯಾಪ್ ನಂತರ ಬರುತ್ತಿರುವ ಅಮೀರ್ ಖಾನ್ ಅವರಿಗೂ ಗೆಲುವು ಬೇಕಿದೆ. ಇದರ ನಡುವೆ ಬಾಯ್ಕಾಟ್ ಅಭಿಯಾನಗಳು.. ಯಾರ ಬಾಯ್ಕಾಟ್ ಗೆಲ್ಲುತ್ತೋ.. ಕಾದು ನೋಡಬೇಕು.

 • ಬಾಯ್ಕಾಟ್ ಬಿಸಿಗೆ ಡುಮ್ಕಿ ಹೊಡೆದ ಚಡ್ಡಾ ಮತ್ತೊಂದು ವಿವಾದ

  ಬಾಯ್ಕಾಟ್ ಬಿಸಿಗೆ ಡುಮ್ಕಿ ಹೊಡೆದ ಚಡ್ಡಾ ಮತ್ತೊಂದು ವಿವಾದ

  ಅಮೀರ್ ಖಾನ್ ವೃತ್ತಿ ಜೀವನದ ಕಳೆದ 13 ವರ್ಷಗಳಲ್ಲಿ ಅತ್ಯಂತ ಕಡಿಮೆ ಗಳಿಕೆಯ ಓಪನಿಂಗ್ ಕಂಡ ಚಿತ್ರ ಲಾಲ್ ಸಿಂಗ್ ಚಡ್ಡಾ. ಮೊದಲ ದಿನದ ಗಳಿಕೆ 11 ಕೋಟಿಯ ಆಸುಪಾಸು.

  2ನೇ ದಿನ 1300ಕ್ಕೂ ಹೆಚ್ಚು ಶೋಗಳೇ ಕ್ಯಾನ್ಸಲ್. ಜನರಿಲ್ಲ. ಬುಕ್ಕಿಂಗ್ ಇಲ್ಲ.

  ಅಮೀರ್ ಚಿತ್ರಗಳೆಂದರೆ ಒಂದೆರಡು ದಿನದಲ್ಲಿ 100 ಕೋಟಿ ಕಲೆಕ್ಷನ್‍ನ್ನು ಸಲೀಸಾಗಿ ದಾಟುತ್ತಿದ್ದವು. ಅಮೀರ್`ರ ಹಿಂದಿನ ಚಿತ್ರ ಥಗ್ಸ್ ಆಫ್ ಹಿಂದೂಸ್ತಾನ್‍ನಂತ ಚಿತ್ರವೂ (ವಿಮರ್ಶಕರ ಪ್ರಕಾರ ಇದು ಅಮೀರ್ ಚಿತ್ರಗಳಲ್ಲೇ ಅತ್ಯಂತ ಡಬ್ಬಾ ಸಿನಿಮಾ) ಮೊದಲ ದಿನ 50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಆದರೆ, ಲಾಲ್ ಸಿಂಗ್ ಚಡ್ಡಾ ದಬ್ಬಾಕ್ಕೊಂಡಿದೆ.

  ಇದರ ಮಧ್ಯೆ ಚಡ್ಡಾ ಚಿತ್ರದಲ್ಲೂ ಧಾರ್ಮಿಕ ಭಾವನೆಗೆ ಧಕ್ಕೆ ತರುವ ದೃಶ್ಯಗಳಿವೆ ಎಂಬ ಆರೋಪ ಕೇಳಿ ಬಂದಿವೆ. ಚಿತ್ರದಲ್ಲಿ ದೇವರ ಪೂಜೆ, ಪಾಠ ಮಾಡೋದ್ರಿಂದ ಮಲೇರಿಯಾ ಬರುತ್ತೆ ಅಂತಾ ತಾಯಿ ಮಗನಿಗೆ ಹೇಳೋ  ದೃಶ್ಯವಿದೆಯಂತೆ. ಅಮೀರ್ ಖಾನ್ ಸಿಖ್ ಪಾತ್ರದಲ್ಲಿ ನಟಿಸಿರೋದ್ರಿಂದ ಇದು ಸಿಖ್ಖರು ಮತ್ತು ಹಿಂದೂಗಳು ಇಬ್ಬರ ಧಾರ್ಮಿಕ ಭಾವನೆಗೂ ಧಕ್ಕೆಯಾಗಿದೆ ಎನ್ನಲಾಗುತ್ತಿದೆ.

  ಇದರ ಜೊತೆಗೆ ಭಾರತೀಯ ಸೈನ್ಯದಲ್ಲಿ ಮಾನಸಿಕ ಅಸ್ವಸ್ಥರನ್ನೇ ಆಗಲೀ, ಮಾನಸಿಕ ಬೆಳವಣಿಗೆಯಾಗದ ವ್ಯಕ್ತಿಗಳನ್ನೇ ಆಗಲಿ ಸೇರಿಸಿಕೊಳ್ಳಲ್ಲ. ಜೊತೆಗೆ ಸೈನ್ಯದಲ್ಲಿ ಸಿಖ್ಖರಿಗೆ  ಗಡ್ಡ ಬಿಡುವ, ಪೇಟಾ ಧರಿಸಲು ಅವಕಾಶವಿದೆ. ಹೀಗಾಗಿ ಚಡ್ಡಾ ಚಿತ್ರ ಭಾರತೀಯ ಸೇನೆಗೂ ಮಾಡಿದ ಅವಮಾನ ಎಂದು ಇಂಗ್ಲೆಂಡ್ ಕ್ರಿಕೆಟಿಗ ಮಾಂಟಿ ಪನೇಸರ್ ಸೇರಿದಂತೆ ಹಲವರು ಕಿಡಿ ಕಾರಿದ್ದಾರೆ.

  ಇನ್ನು ಚಿತ್ರದಲ್ಲಿ ಪಾಕಿಸ್ತಾನೀಯರನ್ನೂ ಹೊಗಳುವ ದೃಶ್ಯವಿದ್ದು ಅದು ಹಿಂದೂಗಳನ್ನು ಇನ್ನಷ್ಟು ಕೆರಳಿಸಿದೆ.

  ಕೆಜಿಎಫ್ ಚಾಪ್ಟರ್ 2 ಚಿತ್ರದ ಪಾರ್ಕಿಂಗ್ ಶುಲ್ಕದ ಬಿಸಿನೆಸ್‍ನ್ನು ಚಡ್ಡಾ ಮುರಿಯಬಹುದು ಎಂಬ ಕಾಮಿಡಿಗಳೂ ಕೇಳಿಬರುತ್ತಿವೆ.

  ಅತ್ತ ರಕ್ಷಾಬಂಧನ್ ಚಿತ್ರವೂ ಇದಕ್ಕೆ ಹೊರತಾಗಿಲ್ಲ. ಅಕ್ಷಯ್ ಕುಮಾರ್ ಚಿತ್ರಕ್ಕೆ ಕಥೆ ಬರೆದಿರುವ ಕನ್ನಿಕಾ ಧಿಲ್ಲೋನ್, ಹಿಂದೂ ದೇವರ ಪೂಜೆ, ಧಾರ್ಮಿಕ ಆಚರಣೆಗಳನ್ನು ಈ ಹಿಂದೆ ಲೇವಡಿ ಮಾಡಿದ್ದವರು. ಹೀಗಾಗಿ ರಕ್ಷಾಬಂಧನ್ ಚಿತ್ರಕ್ಕೂ ಬಿಸಿ ತಟ್ಟಿದ್ದು ಮೊದಲ ದಿನದ ಕಲೆಕ್ಷನ್ 8 ಕೋಟಿ ಸಮೀಪ ಇದೆ. ಇದು ಅಕ್ಷಯ್ ವೃತ್ತಿ ಜೀವನದಲ್ಲಿ ಇತ್ತೀಚೆಗೆ ಸಿಕ್ಕಿರುವ ಅತ್ಯಂತ ಡಲ್ ಓಪನಿಂಗ್.

 • ರಾಕಿ ಭಾಯ್ಗೆ ಅಮೀರ್ ಭಾಯ್ ಚಾಲೆಂಜ್

  ರಾಕಿ ಭಾಯ್ಗೆ ಅಮೀರ್ ಭಾಯ್ ಚಾಲೆಂಜ್

  ಕೆಜಿಎಫ್ ಚಾಪ್ಟರ್ 2. 2021ರಲ್ಲೇ ರಿಲೀಸ್ ಆಗಬೇಕಿದ್ದ ಸಿನಿಮಾ. ಇಡೀ ದೇಶದ ಬಹುನಿರೀಕ್ಷಿತ ಚಿತ್ರಗಳಲ್ಲಿ ಕೆಜಿಎಫ್ ಚಾಪ್ಟರ್ ನಂ.1 ಸ್ಥಾನದಲ್ಲಿದೆ. ಯಶ್, ಸಂಜಯ್ ದತ್, ರವೀನಾ ಟಂಡನ್ ನಟಿಸಿರುವ ಕೆಜಿಎಫ್, 2022ರ ಏಪ್ರಿಲ್ 14ರಂದು ರಿಲೀಸ್ ಆಗುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನದ ಹೊಂಬಾಳೆ ಬ್ಯಾನರಿನ ಚಿತ್ರಕ್ಕೆ ಈ ಬಾರಿ ಚಾಲೆಂಜ್ ಹಾಕಿರೋದು ಅಮೀರ್ ಖಾನ್.

  ಅದೇ ದಿನ ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ರಿಲೀಸ್ ಆಗುತ್ತಿದೆ. ಫಾರೆಸ್ಟ್ ಗಂಪ್ ಅನ್ನೋ ಇಂಗ್ಲಿಷ್ ಸಿನಿಮಾದ ಸ್ಫೂರ್ತಿಯಲ್ಲಿ ಬರುತ್ತಿರೋ ಲಾಲ್ ಸಿಂಗ್ ಚಡ್ಡಾಗೆ ಅಮೀರ್ ಖಾನ್ ಹೀರೋ ಮತ್ತು ನಿರ್ಮಾಪಕ. ಕರೀನಾ ಕಪೂರ್ ಆ ಚಿತ್ರದ ನಾಯಕಿ. ಇದೇ ಚಿತ್ರದ ಮೂಲಕ ತೆಲುಗಿನ ನಾಗಚೈತನ್ಯ ಬಾಲಿವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಚಿತ್ರವನ್ನು ಏಪ್ರಿಲ್ 14ರಂದೇ ರಿಲೀಸ್ ಮಾಡೋದಾಗಿ ಚಿತ್ರತಂಡ ಘೋಷಿಸಿದೆ.

  ಅಂದಹಾಗೆ ಕೆಜಿಎಫ್ ಚಾಪ್ಟರ್ 1 ರಿಲೀಸ್ ಆದಾಗ, ಶಾರೂಕ್ ಖಾನ್ ಅಭಿನಯದ ಝೀರೋ ರಿಲೀಸ್ ಆಗಿತ್ತು. ಕೆಜಿಎಫ್ ಎದುರು ಪಲ್ಟಿ ಹೊಡೆದಿತ್ತು. ಈಗ ಅಮೀರ್ ಖಾನ್ ಸಿನಿಮಾ. ರಿಸಲ್ಟ್ ನೋಡೋಕೆ ಇನ್ನೂ 5 ತಿಂಗಳು ಕಾಯಬೇಕು.