` raghavendra stores, - chitraloka.com | Kannada Movie News, Reviews | Image

raghavendra stores,

  • ಅಂತೂ..ಇಂತೂ ರಾಘವೇಂದ್ರ ಸ್ಟೋರ್ಸ್ ರೆಡಿ

    ಅಂತೂ..ಇಂತೂ ರಾಘವೇಂದ್ರ ಸ್ಟೋರ್ಸ್ ರೆಡಿ

    ರಾಘವೇಂದ್ರ ಸ್ಟೋರ್ಸ್. ಹೊಂಬಾಳೆ+ಜಗ್ಗೇಶ್+ಸಂತೋಷ್ ಆನಂದರಾಮ್ ಜೊತೆಗೂಡಿದ್ದ ಸಿನಿಮಾ. ಆಗಸ್ಟ್ 5ಕ್ಕೇ ರಿಲೀಸ್ ಆಗಬೇಕಿದ್ದ ಸಿನಿಮಾ ಹಠಾತ್ ಮುಂದಕ್ಕೆ ಹೋಯ್ತು. 2022 ಕೂಡಾ ಮುಗಿದು ಹೋಯ್ತು. ಜಗ್ಗೇಶ್ ರಾಜ್ಯಸಭೆ ಸದಸ್ಯರಾದರು. ಈ ಮಧ್ಯೆ ಸಿನಿಮಾ ಒಟಿಟಿಗೆ ಮಾತ್ರ ರಿಲೀಸ್ ಆಗಲಿದೆ ಎಂಬ ಸುದ್ದಿ ಬಂತು. ಅದು ಸುಳ್ಳು ಎಂದು ನಿರ್ದೇಶಕರು ಸ್ಪಷ್ಟನೆ ಕೊಡಬೇಕಾಯ್ತು. ಇಷ್ಟೆಲ್ಲ ಆಗಿ ಇದೀಗ ಸಿನಿಮಾ ಕಂಪ್ಲೀಟ್ ಆಗಿದೆ ಎಂಬ ಸುದ್ದಿ ಬಂದಿದೆ. ಅಷ್ಟೇ ಅಲ್ಲ, ಖುದ್ದು ಜಗ್ಗೇಶ್ ಚಿತ್ರವನ್ನು ನೋಡಿ ತಮ್ಮದೇ ರೀತಿಯಲ್ಲಿ ವಿಮರ್ಶೆ ಬರೆದಿದ್ದಾರೆ.

    ರಾಘವೇಂದ್ರ ಸ್ಟೋರ್ಸ್’ ಸಿನಿಮಾ ನೋಡಿದೆ. ಅದ್ಭುತ ನಿರ್ದೇಶನ. ಅದ್ಬುತ ಸಂಗೀತ, ಅದ್ಭುತ ಸಂಕಲನ, ಅದ್ಭುತ ಛಾಯಾಗ್ರಹಣ. ಒಟ್ಟಾರೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಅದ್ಭುತ ಚಿತ್ರ. ಧನ್ಯವಾದ ಇಂತಹ ಅದ್ಬುತ ಚಿತ್ರ ಕಟ್ಟಿಕೊಟ್ಟ ಸಂತೋಷ್ ಆನಂದ್ರಾಮ್ ಅವರಿಗೆ. ನನ್ನ ಪ್ರಕಾರ ಈ ಚಿತ್ರ ಕನ್ನಡಿಗರ ಮನಗೆಲ್ಲುತ್ತದೆ. ಬಹಳ ವರ್ಷ ನೆನಪಿನಲ್ಲಿ ಉಳಿಯುತ್ತದೆ. ಅತೀ ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ‘ರಾಘವೇಂದ್ರ ಸ್ಟೋರ್ಸ್’ ಬಿಡುಗಡೆಯಾಗಲಿದೆ ಎಂದು ಬರೆದುಕೊಂಡಿದ್ದಾರೆ ನಟ ಜಗ್ಗೇಶ್.

    ರಾಘವೇಂದ್ರ ಸ್ಟೋರ್ಸ್ ಸಿನಿಮಾದಲ್ಲಿ ಜಗ್ಗೇಶ್ಗೆ ನಾಯಕಿಯಾಗಿ ಶ್ವೇತಾ ಶ್ರೀವಾತ್ಸವ್ ಅಭಿನಯಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.

    ಈ ವಿಮರ್ಶೆ ಬರೆಯುವ ಮೂಲಕ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಥಿಯೇಟರಿನಲ್ಲಿಯೇ ಬಿಡುಗಡೆಯಾಗಲಿದೆ ಎಂಬ ಸಂದೇಶವನ್ನಂತೂ ಕೊಟ್ಟಿದ್ದಾರೆ ಈಗ ರಾಜ್ಯಸಭಾ ಸದಸ್ಯರೂ ಆಗಿರುವ ನಟ ಜಗ್ಗೇಶ್.

  • ಜಗ್ಗೇಶ್ ವೃತ್ತಿ ಬದುಕಿಗೆ ಈ ಚಿತ್ರ ನವಿಲುಗರಿಯಂತೆ..!

    ಜಗ್ಗೇಶ್ ವೃತ್ತಿ ಬದುಕಿಗೆ ಈ ಚಿತ್ರ ನವಿಲುಗರಿಯಂತೆ..!

    ನವರಸ ನಾಯಕ ಅನ್ನೋ ಬಿರುದು ಹೊತ್ತಿರೋ ಜಗ್ಗೇಶ್ ಹೆಚ್ಚು ಹೆಚ್ಚಾಗಿ ಗುರುತಿಸಿಕೊಂಡಿದ್ದು ಕಾಮಿಡಿ ಚಿತ್ರಗಳಲ್ಲೇ ಆದರೂ, ಯಾವ ಪಾತ್ರಕ್ಕಾದರೂ ಸೈ ಅನ್ನೋದು ಚಿತ್ರರಂಗಕ್ಕೆ ಗೊತ್ತಿಲ್ಲದೇ ಏನಲ್ಲ. ವಿಲನ್ ಆಗಿಯೂ ಗೆದ್ದು ತೋರಿಸಿರೋ ಜಗ್ಗೇಶ್, ಬೇವು ಬೆಲ್ಲ, ಮೇಕಪ್.. ಸೇರಿದಂತೆ ಹಲವು ಚಿತ್ರಗಳಲ್ಲಿ ಸಕಲ ತಾಕತ್ತನ್ನೂ ತೋರಿಸಿರೋ ನಟ. ಇಂತಹ ಜಗ್ಗೇಶ್ ತಮ್ಮ ವೃತ್ತಿ ಬದುಕಿಗೇ ಈ ಚಿತ್ರ ನವಿಲುಗರಿಯಾಗಲಿದೆ ಎಂದಿರೋದು ರಾಘವೇಂದ್ರ ಸ್ಟೋರ್ಸ್ ಚಿತ್ರಕ್ಕೆ.

    ಹೊಂಬಾಳೆ ಬ್ಯಾನರ್‍ನಲ್ಲಿ ಇದೇ ಮೊದಲ ಬಾರಿಗೆ ನಟಿಸುತ್ತಿರೋ ಜಗ್ಗೇಶ್‍ಗೆ ನಿರ್ದೇಶನ ಮಾಡುತ್ತಿರೋದು ಹಿಟ್ ಚಿತ್ರಗಳ ಸರದಾರ ಸಂತೋಷ್ ಆನಂದರಾಮ್. ಚಿತ್ರದ ಪೋಸ್ಟರ್ ಈಗಾಗಲೇ ಇದೊಂದು ವಿಭಿನ್ನ ಕಥಾಹಂದರದ ಚಿತ್ರ ಎನ್ನೋದನ್ನು ಸಾಬೀತು ಮಾಡಿದೆ. ಇಡೀ ಚಿತ್ರದ ಚಿತ್ರೀಕರಣ ಮಲೆನಾಡಿನಲ್ಲಿ ನಡೆಯಲಿದೆಯಂತೆ. 

  • ಜಗ್ಗೇಶ್ ಸ್ಟೋರ್ಸ್‍ನಲ್ಲಿ ಸಿಂಪಲ್ ಸುಂದರಿಯ ಅನುಭವ

    ಜಗ್ಗೇಶ್ ಸ್ಟೋರ್ಸ್‍ನಲ್ಲಿ ಸಿಂಪಲ್ ಸುಂದರಿಯ ಅನುಭವ

    ರಾಘವೇಂದ್ರ ಸ್ಟೋರ್ಸ್. ರಾಜಕುಮಾರ, ಯುವರತ್ನ ಚಿತ್ರಗಳ ನಂತರ ಸಂತೋಷ್ ಆನಂದರಾಮ್ ನಿರ್ದೇಶಿಸುತ್ತಿರೋ ಸಿನಿಮಾ. ಜಗ್ಗೇಶ್ ಹೀರೋ ಆಗಿರುವ ಚಿತ್ರಕ್ಕೆ ಹೀರೋಯಿನ್ ಆಗಿ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಖ್ಯಾತಿಯ ಶ್ವೇತಾ ಶ್ರೀವಾತ್ಸವ್ ನಟಿಸುತ್ತಿದ್ದಾರೆ.

    ಒಂದು ಮಗುವಿನ ತಾಯಿಯಾದ ಮೇಲೆ ಮುಖ್ಯವಾಹಿನಿಯ ಚಿತ್ರಗಳಲ್ಲಿ ನನಗೆ ಅವಕಾಶ ಸಿಕ್ಕಿರೋ ಖುಷಿ ಇದೆ. ಸೆಟ್‍ನಲ್ಲಿ ಅದ್ಭುತ ಎನ್ನಿಸುವ ವಾತಾವರಣ ಇದೆ. ಜಗ್ಗೇಶ್ ಅವರಿಗಂತೂ ನನ್ನ ಮಗಳು ಒಳ್ಳೆಯ ಫ್ರೆಂಡ್. ಅವರಿದ್ದ ಕಡೆ ನಗು ಇರುತ್ತೆ ಎಂದು ಖುಷಿ ಹಂಚಿಕೊಂಡಿದ್ದಾರೆ ಶ್ವೇತಾ ಶ್ರೀವಾತ್ಸವ್.

    ಒಂದು ದಶಕದಿಂದ ಇಂಡಸ್ಟ್ರಿಯಲ್ಲಿದ್ದೇನೆ. ಆದರೆ ಇದು ನನಗೆ ಹೊಸ ಅನುಭವ. ಇದುವರೆಗೆ ನಟಿಸಿದ್ದು ಹೊಸಬರ ಚಿತ್ರಗಳಲ್ಲಿ. ದೊಡ್ಡ ಬ್ಯಾನರ್, ನಟ, ನಿರ್ದೇಶಕರ ಜೊತೆ ಇದು ನನಗೆ ಹೊಸ ಅನುಭವ. ಚಿತ್ರರಂಗ ಕಲಾವಿದರನ್ನು ನೋಡುವ ದೃಷ್ಟಿಕೋನವೂ ಬದಲಾಗುತ್ತಿದೆ. ತಾಯಿಯಾದ ಮೇಲೆ ನನಗೆ ಒಳ್ಳೆ ಅವಕಾಶ ಸಿಕ್ಕಿದೆ ಎಂದು ಖುಷಿಯಾಗಿದ್ದಾರೆ ಶ್ವೇತಾ. ಹೊಂಬಾಳೆ ಬ್ಯಾನರ್‍ನಲ್ಲಿ ಬರುತ್ತಿರೋ ಚಿತ್ರವಿದು.

  • ಬ್ರಹ್ಮಚಾರಿ ಅಡುಗೆ ಭಟ್ಟನ `ಆ' ಕನಸಿನ ಕಥೆ..

    ಬ್ರಹ್ಮಚಾರಿ ಅಡುಗೆ ಭಟ್ಟನ `ಆ' ಕನಸಿನ ಕಥೆ..

    ಜಗ್ಗೇಶ್ ಕೈಗೆ ಕಾಮಿಡಿ ಸಿಕ್ಕರೆ ಅದು ಚಿಂದಿ ಚಿತ್ರಾನ್ನ.. ಬೂಂದಿ ಮೊಸರನ್ನ. ಬೇರೆ ಹೇಳಬೇಕಿಲ್ಲ. ನಿರ್ದೇಶಕ ಸಂತೋಷ್ ಆನಂದರಾಮ್ ತಮ್ಮ ಹಿಂದಿನ ಆ್ಯಕ್ಷನ್, ರೊಮ್ಯಾಂಟಿಕ್ ಚಿತ್ರಗಳಲ್ಲಿ ಪುಟ್ಟ ಪುಟ್ಟ ಸನ್ನಿವೇಶಗಳಲ್ಲೇ ಎಂತಹ ಹಾಸ್ಯ ಸೃಷ್ಟಿಸಬಲ್ಲೆ ಅನ್ನೋ ಝಲಕ್ ತೋರಿಸಿದ್ದರು. ಎರಡೂ ಸಕಾಲಕ್ಕೆ ಕೂಡಿ ಬಂದಿವೆ. ರಾಘವೇಂದ್ರ ಸ್ಟೋರ್ಸ್‍ನಲ್ಲಿ.

    ಕೆಜಿಎಫ್ ಚಾಪ್ಟರ್ 2 ಜೊತೆಯಲ್ಲೇ ಬಿಡುಗಡೆಯಾದ ರಾಘವೇಂದ್ರ ಸ್ಟೋರ್ಸ್ ಟೀಸರ್ ಇರೋದು 1 ನಿಮಿಷ. 34 ಸೆಕೆಂಡು. ಅಷ್ಟೂ ಹೊತ್ತು ತುಟಿಗಳು.. ಕಣ್ಣುಗಳು.. ಮನಸ್ಸು.. ನಗುತ್ತಿರುತ್ತವೆ ಅನ್ನೋದೇ ಟೀಸರ್‍ನ ಗ್ರೇಟ್‍ನೆಸ್.

    ಹೊಂಬಾಳೆ ಪ್ರೊಡಕ್ಷನ್ಸ್‍ನಲ್ಲಿ ನಿರ್ಮಾಣವಾಗಿರೋ ಸಿನಿಮಾ ರಾಘವೇಂದ್ರ ಸ್ಟೋರ್ಸ್. 40 ವರ್ಷವಾದರೂ ಮದುವೆಯಾಗದ.. ಮದುವೆಯಾಗಬೇಕು ಅನ್ನೋ ಕನಸು ಹೊತ್ತಿರೋ.. ಹುಡುಗಿ ಸಿಕ್ಕದೆ ಪರದಾಡತ್ತಿರೋ ಬ್ರಹ್ಮಚಾರಿಯ ಕಥೆ ಇದು. ಜಗ್ಗೇಶ್ ಎದುರು ಶ್ವೇತಾ ಶ್ರೀವಾತ್ಸವ್ ನಾಯಕಿಯಾಗಿ ನಟಿಸಿದ್ದಾರೆ. ವಿಜಯ್ ಕಿರಗಂದೂರು ನಿರ್ಮಾಣದ ಚಿತ್ರ ರಿಲೀಸ್ ಆಗೋದು ಯಾವಾಗ ಅನ್ನೋದು ಗೊತ್ತಿಲ್ಲ.

  • ರಾಘವೇಂದ್ರ ಸ್ಟೋರ್ಸ್ ಚಿತ್ರೀಕರಣ ಕಂಪ್ಲೀಟ್

    ರಾಘವೇಂದ್ರ ಸ್ಟೋರ್ಸ್ ಚಿತ್ರೀಕರಣ ಕಂಪ್ಲೀಟ್

    ಹ್ಯಾಟ್ರಿಕ್ ಡೈರೆಕ್ಟರ್ ಸಂತೋಷ್ ಆನಂದರಾಮ್ ಮತ್ತು ನವರಸ ನಾಯಕ ಜಗ್ಗೇಶ್ ಹಾಗೂ ಹೊಂಬಾಳೆ ಫಿಲಮ್ಸ್ ಕಾಂಬಿನೇಷನ್‍ನಲ್ಲಿ ಸಿದ್ಧವಾಗುತ್ತಿರೋ ಚಿತ್ರ ರಾಘವೇಂದ್ರ ಸ್ಟೋರ್ಸ್ ಚಿತ್ರೀಕರಣವೇ ಮುಗಿದು ಹೋಗಿದೆ.

    ಜಗ್ಗೇಶ್ ಇದ್ದ ಮೇಲೆ ಹಾಸ್ಯ ಇರಬೇಕು. ಸಂತೋಷ್ ಇದ್ದಾರೆಂದ ಮೇಲೆ ಅಲ್ಲೊಂದು ಸಾಮಾಜಿಕ ಬದ್ಧತೆ ಮತ್ತು ಸಂದೇಶವೂ ಇರಬೇಕು. ಎಂದಿನಂತೆ ಸಂತೋಷ್ ಮನರಂಜನೆಯ ಪ್ಯಾಕೇಜ್‍ನಲ್ಲೇ ಬರುತ್ತಾರೆ. ಜೊತೆಗೆ ಜಗ್ಗೇಶ್ ಇರೋದ್ರಿಂದ ನಗುವಿಗೆ ಖಂಡಿತಾ ಬರ ಇರುವುದಿಲ್ಲ.

    ಜಗ್ಗೇಶ್ ಅವರೊಂದಿಗೆ ಶ್ವೇತಾ ಶ್ರೀವಾತ್ಸವ್ ನಾಯಕಿಯಾಗಿ ನಟಿಸಿದ್ದಾರೆ. ಜಗ್ಗೇಶ್ ಅವರಂತೂ ಯಾವ ಪರಿ ಚಿತ್ರದ ಮೇಲೆ ನಂಬಿಕೆಯಿಟ್ಟಿದ್ದಾರೆ ಎಂದರೆ ಈ ಚಿತ್ರದ ನಂತರ ಹೊಸ ಜಗ್ಗೇಶ್ ಹುಟ್ಟುತ್ತಾನೆ ಎಂದು ಹೇಳುತ್ತಿದ್ದಾರೆ. ಶೀಘ್ರದಲ್ಲೇ ಟೀಸರ್ ಬಿಡುಗಡೆ ಮಾಡಲಿದ್ದಾರಂತೆ. ಕೆಜಿಎಫ್ ಚಾಪ್ಟರ್ 2, ಏಪ್ರಿಲ್ 14ರಂದು ರಿಲೀಸ್ ಆಗುತ್ತಿದ್ದು, ಆ ದಿನವೇ ಕೆಜಿಎಫ್ ಜೊತೆಯಲ್ಲೇ ರಾಘವೇಂದ್ರ ಸ್ಟೋರ್ಸ್ ಟೀಸರ್ ಬರುತ್ತಾ.. ಕಾಯಬೇಕು.

  • ರಾಘವೇಂದ್ರ ಸ್ಟೋರ್ಸ್ ಬಿಡುಗಡೆಗೆ ಮುಹೂರ್ತ ಫಿಕ್ಸ್

    ರಾಘವೇಂದ್ರ ಸ್ಟೋರ್ಸ್ ಬಿಡುಗಡೆಗೆ ಮುಹೂರ್ತ ಫಿಕ್ಸ್

    ರಾಘವೇಂದ್ರ ಸ್ಟೋರ್ಸ್. ಹೊಂಬಾಳೆ, ಜಗ್ಗೇಶ್, ಸಂತೋಷ್ ಆನಂದರಾಮ್ ಜೋಡಿಯಾಗಿರುವ ಸಿನಿಮಾ. ಜಗ್ಗೇಶ್ ಡಿಫರೆಂಟಾಗಿದ್ದಾರೆ. ಜೊತೆಗೆ ಸಿಂಪಲ್ ಸುಂದರಿ ಶ್ವೇತಾ ಶ್ರೀವಾತ್ಸವ್ ಇದ್ದಾರೆ. ಕಳೆದ ವರ್ಷ ಕಾಂತಾರಕ್ಕೂ ಮುನ್ನ ಬಿಡುಗಡೆಯಾಗಬೇಕಿದ್ದ ರಾಘವೇಂದ್ರ ಸ್ಟೋರ್ಸ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಇದೇ ಏಪ್ರಿಲ್ 28ಕ್ಕೆ ರಿಲೀಸ್ ಆಗಲಿದೆ.

    ಸಿಂಗಲ್ ಸುಂದರ.. ಯಾವಾಗ ಹಾಕ್ತ್ಯಾ ಉಂಗುರ ಅನ್ನೋ ಲೈನು ಕೊಟ್ಟು ಮದುವೆಯಾಗದ ಬ್ರಹ್ಮಚಾರಿಗೆ ವಧು ಬೇಕಾಗಿದೆ ಎಂದು ಕಾಲೆಳೆದಿದ್ದಾರೆ ಸಂತೋಷ್ ಆನಂದರಾಮ್. ವಯಸ್ಸಾಗಿದೆ. ವಧು ಬೇಕಾಗಿದೆ ಅನ್ನೋ ಲೈನು 60ನೇ ಹುಟ್ಟುಹಬ್ಬದ ದಿನವೇ ಹಾಕ್ತ್ಯಾ ಅನ್ನೋ ಪಂಚಿಂಗ್ ಲೈನು ಜಗ್ಗೇಶ್ ಅಭಿಮಾನಿಗಳ ಕಡೆಯಿಂದ. ಅಂದಹಾಗೆ ರಾಘವೇಂದ್ರ ಸ್ಟೋರ್ಸ್ ಚಿತ್ರದಲ್ಲಿ ಜಗ್ಗೇಶ್ ಇದೇ ಮೊದಲ ಬಾರಿಗೆ ಬಾಣಸಿಗನಾಗಿ ಅಂದರೆ ಅಡುಗೆ ಭಟ್ಟನಾಗಿ ನಟಿಸಿದ್ದಾರೆ.

  • ರಾಘವೇಂದ್ರ ಸ್ಟೋರ್ಸ್ ಶೂಟಿಂಗ್ ಶುರು

    ರಾಘವೇಂದ್ರ ಸ್ಟೋರ್ಸ್ ಶೂಟಿಂಗ್ ಶುರು

    ಹೊಂಬಾಳೆ, ಸಂತೋಷ್ ಆನಂದರಾಮ್ ಮತ್ತು ಜಗ್ಗೇಶ್.. ಈ ಮೂವರು ಮೊದಲ ಬಾರಿಗೆ ಒಟ್ಟಾಗಿರುವ ಚಿತ್ರ ರಾಘವೇಂದ್ರ ಸ್ಟೋರ್ಸ್. ಪೋಸ್ಟರ್ ರಿಲೀಸ್ ಮಾಡಿದ್ದ ಚಿತ್ರತಂಡ ಈಗ ಚಿತ್ರೀಕರಣ ಆರಂಭಿಸಿದೆ.

    ರಾಯರ ಮಗನಿಗೆ ರಾಘವೇಂದ್ರ ಸ್ಟೋರ್ಸ್. ಬದುಕನ್ನು ಪರಿಪೂರ್ಣತೆಯನ್ನು ನಗಿಸುತ್ತಾ ಹೇಳುವ ಅದ್ಭುತ ಕೃತಿ. ಹೊಂಬಾಳೆ ಜೊತೆಗಿದು ಮೊದಲ ಸಿನಿಮಾ. ಹೊಸ ಪ್ರಯತ್ನ ಎಂದಿದ್ದಾರೆ ಜಗ್ಗೇಶ್.

    ಇನ್ನು ನಿರ್ದೇಶಕ ಸಂತೋಷ್ ಆನಂದರಾಮ್ ಮತ್ತು ಹೊಂಬಾಳೆ ಜೋಡಿ ಇದು 3ನೇ ಸಿನಿಮಾ. ಈ ಮೊದಲು ಹೊಂಬಾಳೆಗಾಗಿ ರಾಜಕುಮಾರ ಮತ್ತು ಯುವರತ್ನ ಎಂಬ ಎರಡು ಹಿಟ್ ಕೊಟ್ಟಿರೋ ಸಂತೋಷ್ ಆನಂದರಾಮ್, 3ನೇ ಚಿತ್ರವನ್ನು ಜಗ್ಗೇಶ್ ಜೊತೆ ಮಾಡುತ್ತಿದ್ದಾರೆ.

  • ರಾಯರ ಭಕ್ತ ಜಗ್ಗೇಶ್ ಹೊಸ ಸಿನಿಮಾ ರಾಘವೇಂದ್ರ ಸ್ಟೋರ್ಸ್

    ರಾಯರ ಭಕ್ತ ಜಗ್ಗೇಶ್ ಹೊಸ ಸಿನಿಮಾ ರಾಘವೇಂದ್ರ ಸ್ಟೋರ್ಸ್

    ಗುರುರಾಯರೆಂದರೆ ಭಕ್ತಿ ಭಾವದಿಂದಲೇ ವಂದಿಸುವ ನಟ ಜಗ್ಗೇಶ್ ಹೊಸ ಸಿನಿಮಾ ಹೆಸರು ರಾಘವೇಂದ್ರ ಸ್ಟೋರ್ಸ್. ಈ ಬಾರಿ ಜಗ್ಗೇಶ್ ಅವರನ್ನು ಡಿಫರೆಂಟ್ ಆಗಿ ತೋರಿಸೋಕೆ ಹೊರಟಿರೋದು ಸ್ಟಾರ್ ನಿರ್ದೇಶಕ ಸಂತೋಷ್ ಆನಂದರಾಮ್. ಯಶ್ ಮತ್ತು ಪುನೀತ್`ಗೆ ಸೂಪರ್ ಹಿಟ್ ಕೊಟ್ಟಿರೋ ಸಂತೋಷ್ ಆನಂದರಾಮ್, ಈ ಬಾರಿ ಜಗ್ಗೇಶ್‍ಗೆ ಬ್ಲಾಕ್ ಬಸ್ಟರ್ ಕೊಡೋ ಉತ್ಸಾಹದಲ್ಲಿದ್ದಾರೆ. ಅಂದಹಾಗೆ ಇದು ಹೊಂಬಾಳೆ ಫಿಲಮ್ಸ್ ಪ್ರೊಡಕ್ಷನ್‍ನದ್ದು.

    ರಾಘವೇಂದ್ರ ಸ್ಟೋರ್ಸ್ ಸಿನಿಮಾದ ಫಸ್ಟ್ ಲುಕ್‍ನಲ್ಲಿ ಜಗ್ಗೇಶ್ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಸಿನ್ಸ್ 1972 ಎಂದಿರೋ ಟ್ಯಾಗ್‍ಲೈನ್ ನೋಡಿದರೆ, ಇದೊಂದು ಪಕ್ಕಾ ಪ್ರಾವಿಷನ್ ಸ್ಟೋರ್ ಮಾಲೀಕನ ಕಥೆ  ಅಥವಾ ಅಡುಗೆ ಭಟ್ಟನ ಕಥೆ ಇರಬಹುದು ಎನ್ನಿಸುತ್ತಿದೆ. ಅಡುಗೆ ಮಸಾಲೆ ಬಾಕ್ಸ್‍ನಲ್ಲಿ ಜಗ್ಗೇಶ್ ವಿವಿಧ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

    ಇನ್ನೊಂದು ವಿಶೇಷವೆಂದರೆ ಇದು ಹೊಂಬಾಳೆಯವರ 12ನೇ ಸಿನಿಮಾ. ಕೆಜಿಎಫ್ ಚಾಪ್ಟರ್ 2 ರಿಲೀಸ್ ಮಾಡೋಕೆ ರೆಡಿಯಾಗಿದ್ದುಕೊಂಡೇ ಘೋಷಿಸಿರೋ 6ನೇ ಸಿನಿಮಾ. ಈಗಾಗಲೇ ಪ್ರಭಾಸ್ ಜೊತೆ ಸಲಾರ್, ಶ್ರೀಮುರಳಿ ಜೊತೆ ಬಘೀರ, ಪುನೀತ್ ಜೊತೆ ದ್ವಿತ್ವ, ರಕ್ಷಿತ್ ಶೆಟ್ಟಿ ಜೊತೆ ರಿಚರ್ಡ್ ಆಂಟನಿ, ರಿಷಬ್ ಶೆಟ್ಟಿ ಜೊತೆ ಕಾಂತಾರಾ ಮತ್ತೀಗ ಜಗ್ಗೇಶ್ ಜೊತೆ ರಾಘವೇಂದ್ರ ಸ್ಟೋರ್ಸ್.

  • ವರಮಹಾಲಕ್ಷ್ಮಿ ಹಬ್ಬಕ್ಕೆ ರಾಘವೇಂದ್ರ ಸ್ಟೋರ್ಸ್

    ವರಮಹಾಲಕ್ಷ್ಮಿ ಹಬ್ಬಕ್ಕೆ ರಾಘವೇಂದ್ರ ಸ್ಟೋರ್ಸ್

    ನವರಸನಾಯಕ ಜಗ್ಗೇಶ್, ರಾಜಕುಮಾರ ಖ್ಯಾತಿಯ ಸಂತೋಷ್ ಆನಂದರಾಮ್, ಹೊಂಬಾಳೆ ವಿಜಯ್ ಕಿರಗಂದೂರು ಸಮ್ಮಿಲನದ ಸಿನಿಮಾ ರಾಘವೇಂದ್ರ ಸ್ಟೋರ್ಸ್. ಮನರಂಜನೆಯ ಭರ್ಜರಿ ಔತಣವೇ ಇದೆ ಎನ್ನೋದು ಟ್ರೇಲರಿನಲ್ಲಿಯೇ ಗೊತ್ತಾಗಿದೆ. ಸಿನಿಮಾವನ್ನು ಆಗಸ್ಟ್ 5ರಂದು ರಿಲೀಸ್ ಮಾಡೋಕೆ ಚಿತ್ರತಂಡ ನಿರ್ಧರಿಸಿದೆ. ಅಂದು ವರಮಹಾಲಕ್ಷ್ಮಿ ಹಬ್ಬ. ದೇಶದ ಅಮೃತ ಮಹೋತ್ಸವಕ್ಕೆ ಒಂದು ವಾರ ಮೊದಲು.

    ಜಗ್ಗೇಶ್ ಅವರಂತೂ ಸಂತೋಷ್ ಆನಂದರಾಮ್ ಬಗ್ಗೆ ಖುಷಿಯಾಗಿದ್ದಾರೆ. ತನ್ನನ್ನು ಬಹಳ ಅದ್ಭುತವಾಗಿ ಬಳಸಿಕೊಂಡಿದ್ದಾನೆ ಎಂದು ಶಹಬ್ಬಾಸ್‍ಗಿರಿ ನೀಡಿದ್ದಾರೆ. ಜಗ್ಗೇಶ್ ಅವರ ಭಾಷೆಯಲ್ಲೇ ಹೇಳೋದಾದರೆ ಸಂತೋಷ್ ಆನಂದರಾಮ್, ಜಗ್ಗೇಶ್ ಅವರನ್ನ ಚೆನ್ನಾಗಿ ರುಬ್ಬಿದ್ದಾರೆ. ಜಗ್ಗೇಶ್ ಹೊಗಳಿಕೆಗೆ ಅಷ್ಟೇ ಪ್ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ ಸಂತೋಷ್ ಆನಂದರಾಮ್.

    ರಾಘವೇಂದ್ರ ಸ್ಟೋರ್ಸ್ ಹೊಂಬಾಳೆಯ 12ನೇ ಸಿನಿಮಾ. ಕಳೆದ ನವೆಂಬರ್‍ನಲ್ಲಿ ಸಿನಿಮಾ ಶುರುವಾಗಿತ್ತು. ಜಗ್ಗೇಶ್ ಎದುರು ಶ್ವೇತಾ ಶ್ರೀವಾತ್ಸವ್ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾ ರಿಲೀಸ್ ಆಗುವ ಹೊತ್ತಿಗೆ ಜಗ್ಗೇಶ್ ರಾಜ್ಯಸಭಾ ಸದಸ್ಯರಾಗಿರುತ್ತಾರೆ. ಜಗ್ಗೇಶ್ ಸಂಸದರಾದ ಮೇಲೆ ರಿಲೀಸ್ ಆಗುವ ಮೊದಲ ಸಿನಿಮಾ ರಾಘವೇಂದ್ರ ಸ್ಟೋರ್ಸ್.

  • ವರಮಹಾಲಕ್ಷ್ಮಿ ಹಬ್ಬಕ್ಕೆ ರಾಘವೇಂದ್ರ ಸ್ಟೋರ್ಸ್ ಓಪನ್ ಆಗಲ್ಲ

    ವರಮಹಾಲಕ್ಷ್ಮಿ ಹಬ್ಬಕ್ಕೆ ರಾಘವೇಂದ್ರ ಸ್ಟೋರ್ಸ್ ಓಪನ್ ಆಗಲ್ಲ

    ಆಗಸ್ಟ್ 05ಕ್ಕೆ ವರಮಹಾಲಕ್ಷ್ಮಿ. ಆ ದಿನವೇ ರಾಘವೇಂದ್ರ ಸ್ಟೋರ್ಸ್ ರಿಲೀಸ್ ಡೇಟ್ ಘೋಷಣೆಯಾಗಿತ್ತು. ಹೊಂಬಾಳೆ-ಜಗ್ಗೇಶ್-ಸಂತೋಷ್ ಆನಂದರಾಮ್ ಕಾಂಬಿನೇಷನ್ ಸಿನಿಮಾ ಎಂಬ ಕಾರಣಕ್ಕೆ ಭಾರಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ರಾಘವೇಂದ್ರ ಸ್ಟೋರ್ಸ್. ಆದರೆ ಇದ್ದಕ್ಕಿದ್ದಂತೆ ಹೊಂಬಾಳೆ ಫಿಲಮ್ಸ್ ಚಿತ್ರದ ಬಿಡುಗಡೆಯನ್ನು ಮುಂದೆ ಹಾಕಿದೆ.

    ಇದ್ದಕ್ಕಿದ್ದಂತೆ ರಿಲೀಸ್ ಡೇಟ್ ಮುಂದೆ ಹೋಗೋಕೆ ಏನು ಕಾರಣ ಅನ್ನೋದು ಗೊತ್ತಿಲ್ಲ. ಟೆಕ್ನಿಕಲ್ ಪ್ರಾಬ್ಲಂ ಕಾಣಿಸಿದ್ದರೆ ಅದು ಸರಿ ಹೋಗೋವರೆಗೆ ಹೊಂಬಾಳೆ ಕಾಯುತ್ತೆ. ಆತುರ ಮಾಡುವುದಿಲ್ಲ ಅನ್ನೋದು ಗೊತ್ತಿರೋ ವಿಷಯ. ಜೊತೆಗೆ ಜಗ್ಗೇಶ್ ಈಗ ರಾಜ್ಯಸಭಾ ಸದಸ್ಯರೂ ಹೌದು. ಸಂಸತ್ ಕಲಾಪ ಶುರುವಾಗಿರುವ ಸಂದರ್ಭದಲ್ಲಿ ಜಗ್ಗೇಶ್ ಪ್ರಚಾರಕ್ಕೆ ಲಭ್ಯರಾಗದೇ ಹೋಗಬಹುದು. ಆದರೆ.. ಇದೇ ಕಾರಣಕ್ಕಾಗಿ ರಾಘವೇಂದ್ರ ಸ್ಟೋರ್ಸ್ ರಿಲೀಸ್ ಮುಂದೆ ಹೋಗಿದೆ ಅನ್ನೊದನ್ನ ಕರಾರುವಾಕ್ ಆಗಿ ಹೇಳೋಕೆ ಸಾಧ್ಯವಾಗುತ್ತಿಲ್ಲ.