ಕಾಂತಾರ. ಅದೊಂದು ಅಪರೂಪದ ಪದ. ಕನ್ನಡದ ಬಗ್ಗೆ ತುಂಬಾ ಒಳ್ಳೆಯ ಜ್ಞಾನ ಇರುವವರು ಕೇಳಿರಬಹುದಾದ ಪದ ಕಾಂತಾರ. ಡಿಕ್ಷನರಿ ನೋಡಿದರೆ ಕಾಂತಾರಾ ಅಂದರೆ ದಟ್ಟ ಕಾಡು ಅನ್ನೋ ಅರ್ಥವಿದೆ. ಅಂತಾದ್ದೊಂದು ಅಪರೂಪದ ಪದವನ್ನ ತಮ್ಮ ಚಿತ್ರಕ್ಕೆ ಟೈಟಲ್ ಮಾಡಿದ್ದಾರೆ ರಿಷಬ್ ಶೆಟ್ಟಿ.
ಇಂತಾದ್ದೊಂದು ವಿಶೇಷದೊಂದಿಗೆ ಶುರುವಾಗುವ ಚಿತ್ರದಲ್ಲಿರೋದು ಪರಿಸರದ ಕಥೆ. ಇತ್ತೀಚೆಗೆ ತಾವೊಂದು ಸಿನಿಮಾ ಮಾಡುತ್ತಿದ್ದು, ಪರಿಸರದ ಕಥೆ ಹೇಳುತ್ತೇನೆ ಎಂದಿದ್ದರು ರಿಷಬ್. ಆ ಕಥೆಗೀಗ ಹೊಂಬಾಳೆ ಫಿಲಮ್ಸ್ ಕೈಜೋಡಿಸಿದೆ.
ಹೊಂಬಾಳೆ ಎಂದರೇನೇ ಚಿಗುರು. ಪರಿಸರದ ಕಥೆಗೂ ಬ್ಯಾನರ್‍ಗೂ ಹೊಂದಿಕೆಯಾಗುತ್ತಿದೆ.
ಸದ್ಯಕ್ಕೆ ಕನ್ನಡದಲ್ಲಿ ಯಶ್, ಪುನೀತ್, ರಕ್ಷಿತ್ ಶೆಟ್ಟಿ ಜೊತೆ ಸಿನಿಮಾ ಮಾಡುತ್ತಿರೋ ಹೊಂಬಾಳೆ ಅತ್ತ ತೆಲುಗಿನಲ್ಲಿ ಪ್ರಭಾಸ್ ಜೊತೆ ಸಿನಿಮಾ ಮಾಡುತ್ತಿದೆ. ಜ್ಯೂ.ಎನ್‍ಟಿಆರ್ ಜೊತೆ ಸಿನಿಮಾ ಘೋಷಿಸಿದೆ. ಹೀಗೆ ದೇಶದ ದೊಡ್ಡ ಬ್ಯಾನರ್ ಆಗಿರುವ ಹೊಂಬಾಳೆ ಫಿಲಮ್ಸ್ ಈಗ ರಿಷಬ್ ಶೆಟ್ಟಿ ಜೊತೆ ಸಿನಿಮಾ ಮಾಡಲು ಮುಂದಾಗಿರುವುದೇ ವಿಶೇಷ.
ಅಂದಹಾಗೆ ಈ ಚಿತ್ರದಲ್ಲಿ ರಿಷಬ್ ಅವರೇ ಹೀರೋ ಮತ್ತು ರಿಷಬ್ ಅವರೇ ಡೈರೆಕ್ಟರ್. ಇದುವರೆಗೆ ರಿಷಬ್ ತಾವು
ಹೀರೋ ಆಗಿ ನಟಿಸಿರುವ ಚಿತ್ರಕ್ಕೆ ತಾವೇ ನಿರ್ದೇಶಕರಾಗಿರಲಿಲ್ಲ. ಇದು ಮತ್ತೊಂದು ವಿಶೇಷ.
ಚಿತ್ರದ ಪೋಸ್ಟರಿನಲ್ಲಿ ಕಾಡ್ಗಿಚ್ಚು, ಕಂಬಳ, ದೈವದ ಕಾಲುಗಳ ದರ್ಶನವಾಗುತ್ತಿದೆ. ಚಿತ್ರದ ಬಹುತೇಕ ಚಿತ್ರೀಕರಣ ಕುಂದಾಪುರದ ಕೆರಾಡಿಯಲ್ಲಿ ನಡೆಯಲಿದೆ. ಆಗಸ್ಟ್ 27ರಿಂದ ಶೂಟಿಂಗ್ ಸ್ಟಾರ್ಟ್ ಎಂದಿದ್ದಾರೆ ರಿಷಬ್ ಶೆಟ್ಟಿ. ಪ್ರಮೋದ್ ಶೆಟ್ಟಿ, ಕಿಶೋರ್, ಅಚ್ಯುತ್ ಕುಮಾರ್ ನಟಿಸುತ್ತಿದ್ದಾರೆ.