ಚಿತ್ರದ ಹೆಸರೇ ರತ್ನನ್ ಪ್ರಪಂಚ. ರಾಜರತ್ನಂ ಪದ್ಯ ನೆನಪಾದರೆ ಬೋನಸ್ಸು. ರೋಹಿತ್ ಪದಕಿ ಚೆಂದದೊಂದು ಪ್ರಪಂಚ ಕಟ್ಟಿಕೊಟ್ಟಿರುವ ಸುಳಿವನ್ನಂತೂ ಕೊಟ್ಟಿದ್ದಾರೆ. ಇತ್ತೀಚೆಗೆ ವಿಲನ್ ಶೇಡ್ ಪಾತ್ರಗಳಲ್ಲೇ ಭಯ ಹುಟ್ಟಿಸಿದ್ದ ಡಾಲಿ ಧನಂಜಯ್, ಇಲ್ಲಿ ಬೇರೆಯದ್ದೇ ಅವತಾರ ಎತ್ತಿದ್ದಾರೆ. ನಟನೆಗೆ ವಾಪಸ್ ಬಂದಿರೋ ಉಮಾಶ್ರೀ ಖದರ್ ಸ್ವಲ್ಪವೂ ಮುಕ್ಕಾಗಿಲ್ಲ. ರೆಬಾ ಜಾನ್, ಅನು ಪ್ರಭಾಕರ್, ಶೃತಿ, ಪ್ರಮೋದ್, ಅಚ್ಯುತ್ ಕುಮಾರ್.. ಎಲ್ಲರೂ ಟ್ರೇಲರ್ನಲ್ಲಿ ಬರೋ ಸೆಕೆಂಡುಗಳಲ್ಲೇ ಬೆರಗು ಹುಟ್ಟಿಸಿ ಬಿಡುತ್ತಾರೆ.
ಇದು ಬರಿ ರತ್ನಾಕರನ ಜರ್ನಿ ಅಲ್ಲ. ನನಗೂ ಬೇರೆ ಬೇರೆ ಹಂತದಲ್ಲಿ ಬೇರೆ ಬೇರೆ ಅದ್ಭುತ ಅನುಭವಗಳನ್ನ ಕೊಟ್ಟು ಹೊಸ ಪಾಠಗಳನ್ನ ಕಲಿಸಿರೋ ಜರ್ನಿ. ಈ ಚಿತ್ರ ಬರೀ ಭಾಷೆ ಅಷ್ಟೇ ಅಲ್ಲ, ಭಾವವೂ ಕನ್ನಡದದ್ದೇ. ಸದ್ಯಕ್ಕೆ ಟ್ರೇಲರ್ ಎಂಜಾಯ್ ಮಾಡಿ ಅಂತಾರೆ ದಯವಿಟ್ಟು ಗಮನಿಸಿ ಖ್ಯಾತಿಯ ರೋಹಿತ್ ಪದಕಿ.
ಧನಂಜಯ್ ಅವರಂತೂ ಇದು ನನಗೆ ಹೊಸದೇ ಅನುಭವ ನೀಡಿದ ಚಿತ್ರ ಎನ್ನುವ ಮೂಲಕ, ಎಲ್ಲರೂ ಈ ಅನುಭವವನ್ನು ಆಸ್ವಾದಿಸಿ ಎನ್ನುತ್ತಿದ್ದಾರೆ. ಕೆಆರ್ಜಿ ಸ್ಟುಡಿಯೋಸ್ನ ಕಾರ್ತಿಕ್ ಗೌಡ ಮತ್ತು ಯೋಗಿ ಬಿ.ರಾಜ್ ನಿರ್ಮಾಣದ ಚಿತ್ರವಿದು. ಟ್ರೇಲರ್ನಲ್ಲಿ ಬರುವ ಒಂದಿಷ್ಟು ಬೈಗುಳಗಳು ಕಚಗುಳಿಯಿಡುತ್ತಿವೆ.