ಅನಿಕಾ ಎಂಬ ಸುಂದರಿ ಅರೆಸ್ಟ್ ಆದ ಬೆನ್ನಲ್ಲೇ ಸ್ಯಾಂಡಲ್‍ವುಡ್ ಮತ್ತು ಡ್ರಗ್ಸ್ ಮಾಫಿಯಾ ಲಿಂಕ್ ಸುದ್ದಿ ಸಂಚಲನವನ್ನೇ ಸೃಷ್ಟಿಸಿದೆ. ಯಾರಿರಬಹುದು..? ಆ ನಟ ಯಾರು..? ಸ್ಟಾರ್ ನಟನ ಮಗ ಯಾರು..? ಆ ಸಂಗೀತ ನಿರ್ದೇಶಕರು ಯಾರ್ಯಾರು..? ಆ ನಟಿಯರು ಯಾರ್ಯಾರು..? ಹೀಗೆ ಹಲವು ಪ್ರಶ್ನೆಗಳು ಉದ್ಭವಿಸಿವೆ. ಇದರ ನಡುವೆ ಬಿರುಗಾಳಿ ಎಬ್ಬಿಸಿರೋದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಮತ್ತು ಪ್ರಶಾಂತ್ ಸಂಬರಗಿ ಹೇಳಿಕೆಗಳು.
ಇಂದ್ರಜಿತ್ ಲಂಕೇಶ್ ಪರೋಕ್ಷವಾಗಿ ಚಿರಂಜೀವಿ ಸರ್ಜಾ ಹೆಸರು ಹೇಳದೇ, ಅವರೊಬ್ಬ ಡ್ರಗ್ಸ್ ವ್ಯಸನಿ ಎಂದು ಹೇಳಿಕೆ ಕೊಟ್ಟರು. ಸರ್ಜಾ ಕುಟುಂಬದ ಆಪ್ತರಾದ ಪ್ರಶಾಂತ್ ಸಂಬರಗಿ, ಶಿವಾರ್ಜುನ್ ಇಬ್ಬರೂ ಅದನ್ನು ನಿರಾಕರಿಸಿದ್ರು. ಶ್ರೀನಗರ ಕಿಟ್ಟಿ ಮೇಲಿನ ಆರೋಪ ನಿರಾಕರಿಸಿದ್ದು ಪತ್ರಕರ್ತ ಹಾಗೂ ಶ್ರೀನಗರ ಕಿಟ್ಟಿ ಮಾವ ರವಿ ಬೆಳಗೆರೆ. ಇದೇ ವೇಳೆ ಪ್ರಶಾಂತ್ ಸಂಬರಗಿ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಹೆಸರು ಹೇಳಿದರು. ಆ ಆರೋಪವನ್ನು ಸ್ವತಃ ರಘು ದೀಕ್ಷಿತ್ ನಿರಾಕರಿಸಿದ್ರು. ಈಗ ಸ್ಟಾರ್ ನಟರೂ ಈ ಬಗ್ಗೆ ಮಾತನಾಡೋಕೆ ಶುರು ಮಾಡಿದ್ದಾರೆ.

ಶಿವರಾಜ್ ಕುಮಾರ್ : ನಾನಂತೂ ಇಂಡಸ್ಟ್ರಿಯಲ್ಲಿ ಡ್ರಗ್ಸ್ ಮಾಫಿಯಾ ನೋಡಿಲ್ಲ. ಇದ್ದರೂ ಅದನ್ನು ತಳ್ಳಿ ಹಾಕೋ ಆಗಿಲ್ಲ. ಹೀರೋ, ಲೀಡರ್ ಎಂದ ತಕ್ಷಣ ಏನೇನೋ ಮಾತನಾಡೋಕೆ ಆಗಲ್ಲ. ತಪ್ಪು ಮಾಡಿದ್ದವರನ್ನು ಪತ್ತೆ ಹಚ್ಚಿ ಕಾನೂನು ಪ್ರಕಾರ ಕೈಗೊಳ್ಳಲಿ.
ಉಪೇಂದ್ರ : ಡ್ರಗ್ಸ್ ದಂಧೆ ವಿಚಾರ ಕೇಳಿ ದಿಗ್ಭ್ರಮೆಯಾಗಿದೆ. ನಾನಂತೂ ಎಲ್ಲೂ ನೋಡಿಲ್ಲ. ಆರೋಪ ಮಾಡುತ್ತಿರುವವರೇ ಹೇಳಬೇಕು. ನನಗಂತೂ ಮಾಹಿತಿ ಇಲ್ಲ. ಯುವಜನತೆ ಡ್ರಗ್ಸ್‍ನಿಂದ ದೂರವಿರಬೇಕು. ನಶೆ ಶಾಶ್ವತ ಅಲ್ಲ.
ಜಗ್ಗೇಶ್ : ತಪ್ಪು ಮಾಡಿದ್ದವರನ್ನು ಹುಡುಕಿ ಬೆತ್ತಲೆ ಮಾಡಿ. ಯಾರು ವಾಮ ಮಾರ್ಗದಲ್ಲಿ ಗೆದ್ದಿರುತ್ತಾರೋ, ಅವರೇ ನಶೆಹಾದರದ ದಾಸರು. ಉಪ್ಪು ತಿಂದವರು ನೀರು ಕುಡಿಯಲೇಬೇಕು.
ರಚಿತಾ ರಾಮ್ : ನನಗಂತೂ ಮಾಹಿತಿ ಇಲ್ಲ. ನಾನಂತೂ ಡ್ರಗ್ಸ್ ತಗೊಳ್ಳಲ್ಲ. ಚಿತ್ರರಂಗದಲ್ಲಿ ಅಂತಹ ಮಾಫಿಯಾ ಇದ್ದರೂ ನಾನು ತಲೆಕೆಡಿಸಿಕೊಳ್ಳಲ್ಲ.
ಭಾವನಾ : ನನ್ನ ಗಮನಕ್ಕೆ ಬಂದಂತೆ ಸೆಟ್‍ನಲ್ಲಂತೂ ಯಾರೂ ಡ್ರಗ್ಸ್ ಸೇವನೆ ಮಾಡಿ ಬಂದಿದ್ದು ಇಲ್ಲ. ಇನ್ನು ಮಾಫಿಯಾ ಇದ್ದರೆ, ಅದಕ್ಕೆ ತುತ್ತಾಗಿರುವವರನ್ನು ಪತ್ತೆ ಹಚ್ಚಿ ಅವರನ್ನು ಸರಿದಾರಿಗೆ ತರುವ ಕೆಲಸ ಮಾಡಬೇಕು. ಜಗ್ಗೇಶ್ ಅವರು ಹೇಳೋ ಹಾಗೆ ಬೆತ್ತಲೆ ಮಾಡಬೇಕು ಎನ್ನುವುದು ಸಮರ್ಪಕ ಎಂದು ಅನಿಸುವುದಿಲ್ಲ.
ಶರ್ಮಿಳಾ ಮಾಂಡ್ರೆ : ನನಗೆ ಅಂತಹ ಅನುಭವಗಳಾಗಿಲ್ಲ. ನಮ್ಮ ತಾತ ಹಾಗೂ ತಂದೆ ಇಂಡಸ್ಟ್ರಿಯಲ್ಲಿದ್ದವರೇ. ನಿರ್ಮಾಪಕರು, ವಿತರಕರಾಗಿದ್ದವರು. ಹೀಗಾಗಿ ನನಗೆ ಇಂತಹ ವಿಚಾರಗಳ ಬಗ್ಗೆ ಯೋಚಿಸೋದಕ್ಕೂ ಸಮಯ ಇಲ್ಲ.
ಸುಧಾರಾಣಿ : ನಾವಂತೂ ಇಂತಹುದ್ದನ್ನು ನೋಡಿಲ್ಲ. ಕೇಳಿಯೂ ಇಲ್ಲ. ತಪ್ಪು ಮಾಡಿದವರಿದ್ದರೆ ಖಂಡಿತಾ ಶಿಕ್ಷೆ ಕೊಡಿಸಿ.
ಶ್ರೀನಗರ ಕಿಟ್ಟಿ : ಡ್ರಗ್ಸ್ ಮಾಫಿಯಾದಲ್ಲಿದ್ದವರನ್ನು ಹುಡುಕಿ, ನಾಲ್ಕು ತದುಕಿ ಜೈಲಿಗೆ ತಳ್ಳಿ. ಕಾನೂನು ಪ್ರಕಾರ ಶಿಕ್ಷೆ ಕೊಡಿ. ಸುಮ್ ಸುಮ್ನೆ ಮಾತಾಡೋದ್ರಿಂದ ಪ್ರಯೋಜನ ಇಲ್ಲ.
ವಿ.ನಾಗೇಂದ್ರ ಪ್ರಸಾದ್ : ನಾವು ಹಾಲಿನಷ್ಟು ಪವಿತ್ರರು, ಡ್ರಗ್ಸ್ ಬಳಕೆ ಇಲ್ಲವೇ ಇಲ್ಲ ಎಂದು ಹೇಳೋಕಾಗಲ್ಲ. ಆದರೆ ಒಂದಂತೂ ಸತ್ಯ. ದೊಡ್ಡ ದೊಡ್ಡ ನಟರಾಗಲೀ, ದೊಡ್ಡ ದೊಡ್ಡ ದೊಡ್ಡ ಸಂಗೀತ ನಿರ್ದೇಶಕರಾಗಲೀ ಈ ಜಾಲದಲ್ಲಿ ಇಲ್ಲ. ಸಿನಿಮಾವನ್ನೇ ಉಸಿರಾಗಿಸಿಕೊಂಡು ಬದುಕುತ್ತಿರುವವರು ಈ ಜಾಲದಲ್ಲಿ ಇಲ್ಲ.
ರೂಪಾ ಅಯ್ಯರ್ : ನಮ್ಮ ಇಂಡಸ್ಟ್ರಿಯಲ್ಲೂ ಇಂಥದ್ದೆಲ್ಲ ಇದೆಯಾ ಎಂದು ಭಯವಾಗುತ್ತಿದೆ. ಇದನ್ನು ನಿಲ್ಲಿಸಬೇಕು. ಸುಮ್ಮನಿರಬಾರದು.
ಕಾರುಣ್ಯ ರಾಮ್ : ನಾನೂ 10 ವರ್ಷದಿಂದ ಚಿತ್ರರಂಗದಲ್ಲಿದ್ದೇನೆ. ಈವರೆಗೂ ಇಂಥಾ ಆರೋಪಗಳನ್ನಾಗಲೀ, ಪ್ರಕರಣಗಳನ್ನಾಗಲೀ ನೋಡಿಲ್ಲ. ಕೇಳಿಲ್ಲ.
ದಯಾಳ್ ಪದ್ಮನಾಭನ್ : ಯಾರಿದ್ದಾರೆ ಅನ್ನೋದನ್ನು ಪತ್ತೆ ಮಾಡಿ, ಸುಮ್ಮನೆ ಚಿತ್ರರಂಗದ ಮೇಲೆ ಗೂಬೆ ಕೂರಿಸಬೇಡಿ. ಇಂದ್ರಜಿತ್ ಲಂಕೇಶ್ ಅವರಿಗೆ ಎಲ್ಲವೂ ಮೊದಲೇ ಗೊತ್ತಿದ್ದರೆ ಅವರು ಯಾಕೆ ಮೊದಲೇ ತಿಳಿಸಲಿಲ್ಲ. ಕಲೆಗೆ ಗೌರವ ಕೊಡುವವರು ಇಂತಹ ಕೆಲಸ ಮಾಡೋದಿಲ್ಲ.
ಸೋನು ಗೌಡ : ನನಗಂತೂ ಇಂತಹ ಅನುಭವಗಳಾಗಿಲ್ಲ. ಬೇರೆಯವರಿಗೆ ಇಂತಹ ಅನುಭವಗಳಾಗಿವೆಯೇನೋ.. ನನಗೆ ಗೊತ್ತಿಲ್ಲ. ಇದ್ದರೆ ಖಂಡಿತಾ ಶಿಕ್ಷೆ ಕೊಡಿಸಬೇಕು.