` anika, - chitraloka.com | Kannada Movie News, Reviews | Image

anika,

  • ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ದಂಧೆಯಂತೆ.. ಅದು ಬಿಟ್ಹಾಕಿ.. ಆಕೆ ಬಾಯ್ಬಿಟ್ಟ ಕಾಲೇಜು ಡ್ರಗ್ಸ್ ಮಾರ್ಕೆಟ್ ಬಗ್ಗೆ ಅಲರ್ಟ್ ಆಗಿ..!

    meet the prime suspect behind bangalore drug mafia

     ಅನಿಕಾ ಎಂಬ ಡ್ರಗ್ಸ್ ದಂಧೆಯ ಜಾಲದ ಯುವತಿಯ ಅರೆಸ್ಟ್, ಈಗ ಇಡೀ ಸ್ಯಾಂಡಲ್‍ವುಡ್‍ನ್ನೇ ಬೆಚ್ಚಿಬೀಳಿಸಿದೆ. ನನಗೆ ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕರು ಹಾಗೂ ಕೆಲವು ನಟರು ಗಿರಾಕಿಗಳು. ಅವರಿಗೆ ನಾನು ಮಾದಕ ವಸ್ತು ಪೂರೈಸುತ್ತಿದ್ದೆ ಎಂದು ಹೇಳಿದ್ದೇ ತಡ, ಇಡೀ ಗಾಂಧಿನಗರ ಬೆಚ್ಚಿಬಿದ್ದಿದೆ.

    ಡ್ರಗ್ಸ್ ಜಾಲ, ಚಿತ್ರರಂಗಕ್ಕೆ ಹೊಸ ವಿಷಯವೇನಲ್ಲ. ಡ್ರಗ್ಸ್ ದಂಧೆ ಬೀಡುಬೀಸಾಗಿ ನಡೆಯೋದು ಬಾಲಿವುಡ್‍ನಲ್ಲಿ. ಬಾಲಿವುಡ್ ಪಾರ್ಟಿಗಳಲ್ಲಿ ನಶೆಯೇರಿಸುವ ಗಾಂಜಾ, ಚರಸ್, ಹೆರಾಯಿನ್ ಸೇರಿದಂತೆ ಹಲವು ಡ್ರಗ್ಸ್ ಈಸಿಯಾಗಿ ಸಿಗುತ್ತವೆ. ಎರಡು ವರ್ಷಗಳ ಹಿಂದೆ ತೆಲುಗು ಚಿತ್ರರಂಗದಲ್ಲೂ ಇದು ಬಿರುಗಾಳಿ ಸೃಷ್ಟಿಸಿತ್ತು. ತೆಲುಗು ಚಿತ್ರರಂಗದ ಸಿ ಮತ್ತು ಡಿ ಗ್ರೇಡ್‍ನ ಕೆಲವು ನಟ, ನಟಿಯರು ಅರೆಸ್ಟ್ ಆಗಿದ್ದೂ ಆಯ್ತು. ಆದರೆ.. ಮುಂದೇನಾಯ್ತು..? ಗೊತ್ತಿಲ್ಲ.

    ಹಿಂದಿ ಚಿತ್ರರಂಗದಲ್ಲಿ ಸಿನಿಮಾ ಮತ್ತು ಮಾಡೆಲಿಂಗ್ ಪಾರ್ಟಿಗಳಲ್ಲಿ ಡ್ರಗ್ಸ್ ದಂಧೆ ನಡೆಯುತ್ತದಾದರೂ, ಇದುವರೆಗೆ ಸ್ಟಾರ್‍ಗಳ್ಯಾರೂ ಸಿಕ್ಕಿಬಿದ್ದಿಲ್ಲ. ಬಾಲಿವುಡ್ ಪಾರ್ಟಿಗಳಲ್ಲಿ ಡ್ರಗ್ಸ್ ಕಾಮನ್ ಇದೀಗ ತಾನೆ ಕಾಂಟ್ರವರ್ಸಿ ಕ್ವೀನ್ ಕಂಗನಾ ರಾವತ್ ಸ್ಫೋಟಿಸಿದ್ದಾರೆ. ಆದರೆ.. ಇಂತಾದ್ದೊಂದು ದಂಧೆ ಸ್ಯಾಂಡಲ್‍ವುಡ್‍ನಲ್ಲೂ ಇದೆಯಾ..?

    ಮಾದಕ ವಸ್ತು ತನಿಖಾ ವಿಭಾಗವೇ ಹೇಳಿರೋದ್ರಿಂದ ಸಂಗೀತ ನಿರ್ದೇಶಕ ಹಾಗೂ ನಟ, ನಟಿಯರು ಡ್ರಗ್ಸ್ ಜಾಲದಲ್ಲಿ ಇದ್ದರೂ ಇರಬಹುದೇನೋ.. ಯಾರು ಅನ್ನೋದನ್ನು ತನಿಖೆ ಒಂದು ಹಂತಕ್ಕೆ ಬಂದು ಸಾಕ್ಷ್ಯ ಸಿಗುವವರೆಗೆ ಹೇಳೋಕಾಗಲ್ಲ.

    ಈಗಾಗಲೇ ಚಿತ್ರರಂಗದ ಗಣ್ಯರು, ನಟ, ನಟಿಯರು ಶಾಕ್ ಆಗಿದ್ದಾರೆ. ಅಂತಹುದ್ದೇನೂ ಕನ್ನಡ ಚಿತ್ರರಂಗದಲ್ಲಿ ನಡೆಯಲ್ಲ ಅನ್ನೋದು ಅವರೆಲ್ಲರ ಒಕ್ಕೊರಲ ಮಾತು. ಕನ್ನಡ ಚಿತ್ರರಂಗದ ಜರ್ನಿಯ ಅರ್ಧ ಹಾದಿಯಲ್ಲಿ ಚಿತ್ರಲೋಕವೂ ಜೊತೆ ಜೊತೆಯಾಗಿಯೇ ಸಾಗಿ ಬಂದಿದೆ.

    ಸ್ಯಾಂಡಲ್‍ವುಡ್‍ನಲ್ಲಿ ಪಾರ್ಟಿಗಳು ನಡೆಯುತ್ತವೆ. ಗುಂಡು, ತುಂಡು, ಡ್ಯಾನ್ಸ್ ಕಾಮನ್. ಆದರೆ ಅಂತಹ ಪಾರ್ಟಿಗಳೂ ಎಲ್ಲಿಯೂ ಎಲ್ಲೆ ಮೀರೋದಿಲ್ಲ. ಸಭ್ಯತೆಯ ಗಡಿ ದಾಟೋದಿಲ್ಲ ಅನ್ನೋದು ಚಿತ್ರಲೋಕದ ಕಣ್ಣಿಗೆ ಬಿದ್ದಿರೋ ಸತ್ಯ. ಮಾತುಗಳು ಭರ್ಜರಿಯಾಗಿರುತ್ತವೆ.. ಕೂಗಾಟ.. ಚೀರಾಟಗಳೂ ನಡೆಯುತ್ತವೆ. ಇಂತಹ ಪಾರ್ಟಿಗಳಲ್ಲಿ ನಗು.. ಅಳು.. ತಪ್ಪೊಪ್ಪಿಗೆ.. ಎಲ್ಲಕ್ಕೂ ಸಾಕ್ಷಿಯಾಗಿದೆ ಚಿತ್ರಲೋಕ. ಆದರೆ.. ಡ್ರಗ್ಸ್ ದಂಧೆ ಕಂಡಿಲ್ಲ. ಇನ್ನು ಚಿತ್ರರಂಗ ಈಗ ಹರಡಿ ಹಂಚಿ ಹೋಗಿರೋದ್ರಿಂದ.. ಯಾರ್ಯಾರೋ ಬರ್ತಿರೋದ್ರಿಂದ.. ಇನ್ಯಾವುದೋ ಮೂಲೆಯಲ್ಲಿ ಇದ್ದರೂ ಆಶ್ಚರ್ಯವಿಲ್ಲ. ಮುಖ್ಯವಾಹಿನಿಯಲ್ಲಿರೋ ಕಲಾವಿದರು, ತಂತ್ರಜ್ಞರಂತೂ ಈ ದಂಧೆಯಲ್ಲಿಲ್ಲ. ಇನ್ನು ಅಂತಹವರಿದ್ದರೆ, ಸಾಕ್ಷಿ ಸಿಕ್ಕರೆ ಹೆಡೆಮುರಿ ಕಟ್ಟೋದೇ ಒಳ್ಳೆಯದು.

    ಏಕೆಂದರೆ ಎಲ್ಲರೂ ಮರೆತಿರೋ ಒಂದು ವಿಷಯವೇನಿದೆ ಗೊತ್ತೇ.. ಎಲ್ಲರೂ ಅನಿಕಾ ಹೇಳಿರೋ ಯಾರೋ ಇಬ್ಬರು ಸಂಗೀತ ನಿರ್ದೇಶಕರು, ನಟ, ನಟಿಯರ ಬಗ್ಗೆಯೇ ಯೋಚಿಸುತ್ತಿದ್ದಾರೆ. ಆದರೆ.. ಅನಿಕಾ ಬಾಯ್ಬಿಟ್ಟಿರೋ ಸತ್ಯದಲ್ಲಿ ಅದಕ್ಕಿಂತಲೂ ಭಯಾನಕವಾದ ವಿಷಯವೊಂದಿದೆ. ಬೆಂಗಳೂರಿನಲ್ಲಿ ಆಕ್ಟಿವ್ ಆಗಿರೋ ಡ್ರಗ್ಸ್ ಜಾಲ, ಬೆಂಗಳೂರಿನ ಪ್ರತಿಯೊಂದು ಕಾಲೇಜುಗಳನ್ನೂ ರೀಚ್ ಆಗಿದೆ. ವಿದ್ಯಾರ್ಥಿಗಳು ಡ್ರಗ್ಸ್ ದಾಸರಾಗಿದ್ದಾರೆ.

    ಚಿತ್ರರಂಗದ ಒಬ್ಬರೋ ಇಬ್ಬರೋ ಡ್ರಗ್ಸ್ ಚಟಕ್ಕೆ ಬಿದ್ದಿದ್ದರೆ ಹಾಳಾಗಿ ಹೋಗಲಿ. ಶಿಕ್ಷೆಯೂ ಆಗಲಿ. ಆದರೆ ನಟ, ನಟಿಯರ ಗ್ಲಾಮರ್ ಮತ್ತು ಡ್ರಗ್ಸ್ ದಂಧೆಯ ಕುತೂಹಲದ ಮಧ್ಯೆ ಎಲ್ಲರೂ ಮರೆಯುತ್ತಿರೋದು ಏನು ಗೊತ್ತೇ..? ಕಾಲೇಜುಗಳಲ್ಲಿ ಡ್ರಗ್ಸ್ ದಂಧೆಕೋರರು ಬೇರು ಬಿಟ್ಟಿರೋದು. ಇನ್ನೂ ನಾವು ನಟ, ನಟಿಯರ ವಿಷಯಕ್ಕೇ ತಲೆಕೆಡಿಸಿಕೊಂಡು ಕೂತರೆ, ನಮ್ಮ ಮಕ್ಕಳ ಭವಿಷ್ಯದ ಬಗ್ಗೆ ತಲೆಕೆಡಿಸಿಕೊಳ್ಳೋದು ಯಾರು..? ಸ್ಸೋ.. ವಿಷಯ ಇಷ್ಟೆ.. ನಿಜಕ್ಕೂ ತಲೆಕೆಡಿಸಿಕೊಳ್ಳಬೇಕಿರೋದು ಡ್ರಗ್ಸ್ ಗ್ಯಾಂಗ್, ಕಾಲೇಜುಗಳಲ್ಲಿ ಕಾಲಿಟ್ಟಿರೋದ್ರ ಬಗ್ಗೆ. ಬಿ ಕೇರ್‍ಫುಲ್. ಚಿತ್ರರಂಗದ ಗಣ್ಯರೂ ಅಷ್ಟೆ, ಈ ವಿಷಯದಲ್ಲಿ ಮಾತನಾಡಿ ಜಾಗೃತಿ ಮೂಡಿಸಿದರೆ ಒಳ್ಳೆಯದು.

    ಕೆ.ಎಂ.ವೀರೇಶ್,

    ಸಂಪಾದಕರು

    ಚಿತ್ರಲೋಕ.ಕಾಮ್