ಸಾಹಸಸಿಂಹ ವಿಷ್ಣುವರ್ಧನ್ ಅವರ ಪ್ರತಿ ಹುಟ್ಟುಹಬ್ಬವನ್ನೂ ವಿಶೇಷವಾಗಿ ಸ್ಮರಣೀಯವಾಗಿ ಆಚರಿಸುವ ವಿಷ್ಣು ಸೇನಾ ಸಮಿತಿ, ಈ ಬಾರಿಯೂ ಬೇರೆಯದ್ದೇ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆಗಸ್ಟ್ 17ರಿಂದಲೇ ಕೆಲವು ಕಾರ್ಯಕ್ರಮಗಳು ಶುರುವಾಗಿವೆ. ಏಕೆಂದರೆ ಈ ಬಾರಿ ವಿಷ್ಣು ಅವರದ್ದು 70ನೇ ಹುಟ್ಟುಹಬ್ಬ. ಹೀಗಾಗಿ ಒಂದಿಡೀ ತಿಂಗಳು ವಿಷ್ಣು ಹುಟ್ಟುಹಬ್ಬ ಆಚರಿಸಲು ನಿರ್ಧರಿಸಿದೆ ವಿಷ್ಣು ಸೇನಾ ಸಮಿತಿ. ಕೊರೊನಾ ಕಾರಣದಿಂದಾಗಿ,ಈ ಬಾರಿ ಅದ್ದೂರಿತನ, ಸಮಾರಂಭಗಳಿಗೆ ಕಡಿವಾಣ ಬಿದ್ದಿದೆ. ಹೀಗಾಗಿ ವಿಶಿಷ್ಟವಾಗಿ ಹಾಗೂ ಅರ್ಥ ಪೂರ್ಣವಾಗಿ ಹಬ್ಬ ಮಾಡಲು ಮುಂದಾಗಿದ್ದೇವೆ ಎಂದಿದ್ದಾರೆ ವಿಎಸ್ಎಸ್ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್.
ಯಾವುದೋ ಅಪರಾಧದಲ್ಲಿ ಜೈಲು ಸೇರಿ, ಶಿಕ್ಷೆಯನ್ನೂ ಮುಗಿಸಿರುವ ಖೈದಿಗಳು ದಂಡ ಕಟ್ಟಲಾಗದೆ ಜೈಲಿನಲ್ಲೇ ಇರುತ್ತಾರೆ. ಅಂತಹ 10 ಖೈದಿಗಳನ್ನು ಗುರುತಿಸಿ ಬಿಡುಗಡೆಗೆ ವ್ಯವಸ್ಥೆ ಮಾಡುವುದು ಮೊದಲ ಹೆಜ್ಜೆ.

ಇನ್ನು ಈ ತಿಂಗಳಲ್ಲಿ ವಿಷ್ಣು ಅಭಿಮಾನಿಗಳು ರಾಜ್ಯಾದ್ಯಂತ 70ನೇ ಹುಟ್ಟುಹಬ್ಬದ ಪ್ರಯುಕ್ತ 70 ಸಾವಿರ ಸಸಿ ನೆಡುತ್ತಿದ್ದಾರೆ. ಅಷ್ಟೇ ಅಲ್ಲ, ಹಾಗೆ ನೆಟ್ಟ ಗಿಡಗಳ ಪೋಷಣೆ ಮತ್ತು ರಕ್ಷಣೆಯೂ ಅವರದ್ದೇ.
ಇನ್ನು 1 ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ವಿಷ್ಣು ವೇಷಭೂಷಣ, ಅಭಿನಯ, ಗಾಯನ ಸ್ಪರ್ಧೆಯೂ ಇದೆ. ಆ ಮಕ್ಕಳು ವಿಷ್ಣುವರ್ಧನ್ ವೇಷ ತೊಟ್ಟು ನಟಿಸಿ ಅಥವಾ ಹಾಡಿ.. ಆ ವಿಡಿಯೋವನ್ನು 9972219267ಗೆ ಕಳಿಸಬೇಕು. ಸೆ.10ರೊಳಗೆ ಕಳಿಸಬೇಕು. ಅವರಲ್ಲಿ ಮೂರು ಮಕ್ಕಳನ್ನು ಆಯ್ಕೆ ಮಾಡಿ 20 ಸಾವಿರ, 15 ಸಾವಿರ ಹಾಗೂ 10 ಸಾವಿರ ಬಹುಮಾನ ನೀಡುವ ಯೋಜನೆ ಇದೆ.
ಇನ್ನು ವಿಷ್ಣು ಅಭಿಮಾನಿಗಳು ಕನಿಷ್ಠ 700 ಯುನಿಟ್ನಿಂದ 7 ಸಾವಿರ ಯುನಿಟ್ ರಕ್ತದಾನ ಮಾಡಲು ಪ್ಲಾನ್ ಮಾಡಿದ್ದಾರೆ.
ಡಾ.ವಿಷ್ಣುವರ್ಧನ್ ಹೆಸರನ್ನು ಪದ್ಮಭೂಷಣ ಪ್ರಶಸ್ತಿಗೆ ಸೂಚಿಸಲು ಆ.19ರಿಂದ ಅಭಿಯಾನ ಶುರುವಾಗುತ್ತಿದೆ.