` movie theaters, - chitraloka.com | Kannada Movie News, Reviews | Image

movie theaters,

 • ಚಿತ್ರರಂಗದ ಒಗ್ಗಟ್ಟಿಗೆ ಮಣಿದ ಸರ್ಕಾರ : ಥಿಯೇಟರ್ 100% ಓಪನ್ - Editorial

  ಚಿತ್ರರಂಗದ ಒಗ್ಗಟ್ಟಿಗೆ ಮಣಿದ ಸರ್ಕಾರ : ಥಿಯೇಟರ್ 100% ಓಪನ್

  ಇದು ಚಿತ್ರರಂಗದ ಒಗ್ಗಟ್ಟಿನ ಗೆಲುವು. ಬಹುಶಃ ಇತ್ತೀಚೆಗೆ ಯಾವುದೇ ವಿಷಯಕ್ಕೆ ಚಿತ್ರರಂಗ ಈ ಮಟ್ಟಿಗೆ ಒಗ್ಗಟ್ಟಿನ ಪ್ರದರ್ಶನ ಮಾಡಿರಲೇ ಇಲ್ಲ. ಒಗ್ಗಟ್ಟಿನಲ್ಲಿ ಬಲವಿದೆ ಅನ್ನೋದನ್ನು ಸಾಬೀತು ಮಾಡಿದ ಗೆಲುವು ಇದು.

  ಮಾರುಕಟ್ಟೆ ಓಪನ್ ಇದೆ.. ಬಸ್ ರಶ್ ಇದೆ. ದೇವಸ್ಥಾನ, ಪ್ರವಾಸಿ ಸ್ಥಳ ಎಲ್ಲವೂ ಮುಕ್ತವಾಗಿವೆ. ಮಾಲ್ಗಳಲ್ಲಿ ನಿರ್ಬಂಧ ಇಲ್ಲ. ನಮಗೆ ಮಾತ್ರ ಯಾಕೆ ಈ ನಿರ್ಬಂಧ ಎಂದು ಮೊದಲು ಟ್ವೀಟ್ ಮಾಡಿದ್ದು  ಧ್ರುವ ಸರ್ಜಾ. ಅವರ ಪೊಗರು ಫೆಬ್ರವರಿ 19ಕ್ಕೆ ರಿಲೀಸ್ ಆಗುತ್ತಿದೆ. ಈ ವರ್ಷದ ಮೊದಲ ಸ್ಟಾರ್ ಸಿನಿಮಾ ಪೊಗರು. ಆದರೆ, ಧ್ರುವ ಸರ್ಜಾ ಟ್ವೀಟ್ ಮಾಡಿದ ಬೆನ್ನಲ್ಲೇ ಚಿತ್ರರಂಗದ ಎಲ್ಲರೂ ಒಟ್ಟುಗೂಡಿ ಬಂದಿದ್ದು ಈ ಬಾರಿಯ ವಿಶೇಷ.

  ಅಷ್ಟೇ ಅಲ್ಲ, ಚಿತ್ರರಂಗದ ಸಾಂಸ್ಥಿಕ ಶಕ್ತಿಯೂ ಆಗಿರುವ ಫಿಲಂ ಚೇಂಬರ್ ಚಿತ್ರರಂಗದ ಒಕ್ಕೊರಲ ನಾಯಕರೂ ಆಗಿರುವ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಸರ್ಕಾರದ ಎದುರು ಪ್ರಬಲವಾಗಿ ವಾದ ಮಂಡಿಸಿ ಗೆದ್ದಿದ್ದು ಈ ಬಾರಿಯ ಚಿತ್ರರಂಗದ ಒಗ್ಗಟ್ಟು.

  ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಎರಡೂ ಆಗಿರುವ ಡಿ.ಸುಧಾಕರ್, ಸಿಎಂ ಯಡಿಯೂರಪ್ಪ ಸೂಚನೆ ಮೇರೆಗೆ ಸಭೆ ನಡೆಸಿ ಚಿತ್ರರಂಗಕ್ಕೆ ಅನುಕೂಲವಾಗುವ ರೀತಿಯ ತೀರ್ಮಾನ ಹೊರಡಿಸಿದರು. ಈ ಹೋರಾಟದಲ್ಲಿ ಚಿತ್ರರಂಗವನ್ನು ಸರ್ಕಾರದಲ್ಲಿ ಪ್ರತಿನಿಧಿಸುತ್ತಿರುವ ಸಚಿವ ಬಿ.ಸಿ.ಪಾಟೀಲ್ ಕೂಡಾ ಚಿತ್ರರಂಗದೊಟ್ಟಿಗೇ ಇದ್ದರು.

  ಆ ಎಲ್ಲದರ ಪ್ರತಿಫಲ ಥಿಯೇಟರ್ 100% ಓಪನ್ ಮಾಡಲು ಆದೇಶ ಸಿಕ್ಕಿದ್ದು. ಗುರುವಾರವೇ ಆದೇಶ ಹೊರಬೀಳುವ ಸಾಧ್ಯತೆ ಇದೆ. ಶುಕ್ರವಾರದಿಂದ ಥಿಯೇಟರ್ 100% ಓಪನ್ ಆಗೋಕೆ ಯಾವುದೇ ಸಮಸ್ಯೆಗಳಿರೋದಿಲ್ಲ. ಅಫ್ಕೋರ್ಸ್.. ಥಿಯೇಟರ್ ಮಾಲೀಕರು ಮತ್ತು ಪ್ರೇಕ್ಷಕರು ಕಡ್ಡಾಯವಾಗಿ ಕೆಲವು ಕಠಿಣ ಸೂತ್ರಗಳನ್ನು ಪಾಲಿಸಲೇಬೇಕಿದೆ. ಪಾಲಿಸಿದರೆ ಆಯಿತು.

  ಥಿಯೇಟರ್ 100% ಓಪನ್ ಆಗಿದ್ದಕ್ಕಿಂತಲೂ ಹೆಚ್ಚಿನ ದೊಡ್ಡ ಖುಷಿ, ಚಿತ್ರರಂಗದ ಒಗ್ಗಟ್ಟು. ಈ ಒಗ್ಗಟ್ಟು ಹೀಗೆಯೇ ಇರಲಿ.

  ಕೆ.ಎಂ.ವೀರೇಶ್

  ಚಿತ್ರಲೋಕ ಸಂಪಾದಕರು

 • ಜೂನ್‍ನಿಂದ ಸಿನಿಮಾ ಪ್ರದರ್ಶನ ಆರಂಭ..?

  will movie screening resume from june/

  ಕೋವಿಡ್ ಲಾಕ್ ಡೌನ್ನಿಂದಾಗಿ ದೇಶದಲ್ಲಿ ಎಲ್ಲಿಯೂ ಚಿತ್ರಮಂದಿರಗಳು ಓಪನ್ ಇಲ್ಲ. ಲಾಕ್ ಡೌನ್ ಘೋಷಿಸುವುದಕ್ಕೂ ಮುನ್ನವೇ ಚಿತ್ರಮಂದಿರಗಳು ಬಾಗಿಲು ಮುಚ್ಚಿದ್ದವು. 2 ತಿಂಗಳಿಂದ ಒಂದೇ ಒಂದು ಸಿನಿಮಾ ಇಲ್ಲ. ಹಂತ ಹಂತವಾಗಿ ಲಾಕ್ ಡೌನ್ ತೆರವಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್ಗಳ ಆರಂಭಕ್ಕೆ ಒತ್ತಡ ಕೇಳಿ ಬರೋಕೆ ಶುರುವಾಗಿದೆ. ಎಲ್ಲವೂ ಅಂದುಕೊಂಡಂತೆಯೇ ನಡೆದರೆ ಜೂನ್ ಮೊದಲ ವಾರ ಚಿತ್ರಮಂದಿರಗಳ ಬಾಗಿಲು ತೆರೆಯುವ ಸಾಧ್ಯತೆಗಳಿವೆ.

  ನಿರೀಕ್ಷೆಗೆ ಕಾರಣಗಳೂ ಇವೆ. ವೈರಸ್ ಅಟ್ಟಹಾಸಕ್ಕೆ ನಲುಗಿರುವ ಅಮೆರಿಕದಲ್ಲಿ, ನಾರ್ವೆ, ಚೆಕ್ ರಿಪಬ್ಲಿಕ್ ಮೊದಲಾದೆಡೆ ಚಿತ್ರಮಂದಿರಗಳು ಓಪನ್ ಆಗಿವೆ. ‘ಹಲವು ದೇಶಗಳಲ್ಲಿ ಸಿನಿಮಾ ಪ್ರದರ್ಶನ ಆರಂಭವಾಗಿದೆ. ನಮ್ಮಲ್ಲಿ ಇನ್ನೊಂದೆರಡು ವಾರದ ನಂತರ ಶುರುವಾಗಬಹುದು. ಸರ್ಕಾರದ ಜೊತೆ ಮಾತುಕತೆಯಲ್ಲಿದ್ದೇವೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಸ್ಯಾನಿಟೈಸರ್, ಒಟ್ಟು ಸಾಮರ್ಥ್ಯದ ಅರ್ಧದಷ್ಟು ಮಾತ್ರ ಟಿಕೆಟ್ ಮಾರಾಟ, ಟಿಕೆಟ್ ಬೆಲೆ ಹೆಚ್ಚಿಸದೇ ಇರುವುದು..ಹೀಗೆ ಹಲವು ನಿರ್ಧಾರ ಕೈಗೊಳ್ಳಲು ಒಪ್ಪಿದ್ದೇವೆ. ನಿರ್ಮಾಪಕರು ಸಿನಿಮಾ ರಿಲೀಸ್ ಮಾಡೋಕೆ ಒಪ್ಪಿದರೆ ನಾವು ರೆಡಿ’ ಎನ್ನುತ್ತಾರೆ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್.

  ಇನ್ನು ಮಲ್ಟಿಪ್ಲೆಕ್ಸ್ ನವರೂ ಕೆಲವು ನಿರ್ಧಾರ ತೆಗೆದುಕೊಂಡಿದ್ದಾರೆ. 2 ಶೋಗಳ ಇಂಟರ್ವೆಲ್ ಒಟ್ಟಿಗೇ ಬರದಂತೆ ಟೈಂ ಮೈಂಟೇನ್ ಮಾಡುವುದು, ಸೀಟಿಂಗ್ ವ್ಯವಸ್ಥೆ ಬದಲಾವಣೆ, ಥರ್ಮಲ್ ಸ್ಕ್ರೀನಿಂಗ್ ಮೊದಲಾದ ಮುಂಜಾಗ್ರತೆ ವಹಿಸಲು ಸಿದ್ಧ ಎನ್ನುತ್ತಿದ್ದಾರೆ ಮಲ್ಟಿಪ್ಲೆಕ್ಸ್ ಮಾಲೀಕರು. ಮುಂದೇನು..? ಜೂನ್‍ನಿಂದ ಸಿನಿಮಾ ಪ್ರದರ್ಶನ ಶುರುವಾಗುತ್ತಾ..?

 • ತಮಿಳುನಾಡಿನಲ್ಲಿ 100% ಥಿಯೇಟರ್ ಓಪನ್

  ತಮಿಳುನಾಡಿನಲ್ಲಿ 100% ಥಿಯೇಟರ್ ಓಪನ್

  ದೇಶಾದ್ಯಂತ ಶೇ.50ರಷ್ಟು ಪ್ರೇಕ್ಷಕರಿಗೆ ಸಿನಿಮಾ ಪ್ರದರ್ಶನ ಮಾಡಬೇಕು ಎಂದು ರೂಲ್ಸ್ ನಡೆಯುತ್ತಿರುವಾಗ ತಮಿಳುನಾಡು ಧೈರ್ಯವಾಗಿ ಒಂದು ಹೆಜ್ಜೆ ಮುಂದಿಟ್ಟಿದೆ. ಅಲ್ಲಿ ಇನ್ನು ಮುಂದೆ ಶೇ.100ರಷ್ಟು ಥಿಯೇಟರ್ ಓಪನ್ ಆಗಲಿವೆ. ಅರ್ಥಾತ್, ಚಿತ್ರಮಂದಿರದ ಸಾಮಥ್ರ್ಯ ಎಷ್ಟಿದೆಯೋ, ಅಷ್ಟೂ ಪ್ರೇಕ್ಷಕರಿಗೆ ಸಿನಿಮಾ ನೋಡುವ ಅವಕಾಶ.

  ಕೊರೊನಾದಿಂದಾಗಿ ತತ್ತರಿಸಿ ಹೋಗಿದ್ದ ಚಿತ್ರರಂಗ, ಶಾಕ್‍ನಿಂದ ಇನ್ನೂ ಹೊರಬಂದಿರಲೇ ಇಲ್ಲ. ಕನ್ನಡದಲ್ಲಷ್ಟೇ ಅಲ್ಲ, ದೇಶದ ಯಾವ ಚಿತ್ರರಂಗದಲ್ಲೂ ಸ್ಟಾರ್ ನಟರ ಚಿತ್ರಗಳು ಟಾಕೀಸಿಗೆ ಬಂದಿರಲಿಲ್ಲ. ಆದರೆ ತಮಿಳುನಾಡಿನಲ್ಲಿ ಅದು ಸಾಧ್ಯವಾಗಿದೆ. ಇತ್ತೀಚೆಗೆ ತಮಿಳಿನಲ್ಲಿ ವಿಜಯ್ ಮತ್ತು ವಿಜಯ್ ಸೇತುಪತಿ ಒಟ್ಟಿಗೇ ನಟಿಸಿರುವ ಮಾಸ್ಟರ್ ಸಿನಿಮಾ, ಪೊಂಗಲ್‍ಗೆ ರಿಲೀಸ್ ಎಂದು ಘೋಷಿಸಿಕೊಂಡಿತ್ತು. ಅದಕ್ಕೂ ಮುನ್ನ ವಿಜಯ್, ತಮಿಳುನಾಡು ಸಿಎಂ ಜೊತೆ ಮಾತನಾಡಿದ್ದರು. ಆ ಮಾತುಕತೆಯೇ ಫಲಶೃತಿಯೇ ಇದು ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಇದು ತಮಿಳು ಚಿತ್ರರಂಗಕ್ಕೆ ಗುಡ್ ನ್ಯೂಸ್.

  ಅಫ್‍ಕೋರ್ಸ್, ಅಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಳ್ಳದೇ ಹೋದರೆ, ಅದು ಕರ್ನಾಟಕಕ್ಕೂ ಕಾಲಿಡಬಹುದು. ಸ್ಟಾರ್ ಚಿತ್ರಗಳು ರಿಲೀಸ್ ಆಗಬಹುದು. ಉಳಿದಂತೆ ತಮಿಳುನಾಡಿನಲ್ಲಿ 100% ಪ್ರೇಕ್ಷಕರಿಗೆ ಅವಕಾಶವಿದ್ದರೂ, ಕೊರೊನಾ ರೂಲ್ಸ್ ಮುರಿಯದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ ಅಲ್ಲಿನ ರಾಜ್ಯ ಸರ್ಕಾರ.

 • ಥಿಯೇಟರ್ ಓಪನ್ ಆದರೆ ಚಿತ್ರರಂಗದ ಭಾಗ್ಯದ ಬಾಗಿಲು ತೆರೆಯುತ್ತಾ?

  ಥಿಯೇಟರ್ ಓಪನ್ ಆದರೆ ಚಿತ್ರರಂಗದ ಭಾಗ್ಯದ ಬಾಗಿಲು ತೆರೆಯುತ್ತಾ?

  ಚಿತ್ರಮಂದಿರಗಳು ಸಡನ್ ಆಗಿ 50%ಗೆ ಕ್ಲೋಸ್ ಆದಾಗ ಪುನೀತ್ ರಾಜ್‍ಕುಮಾರ್, ಹೊಂಬಾಳೆ ಫಿಲಂಸ್‍ನ ಯುವರತ್ನ ಸಿನಿಮಾ ರಿಲೀಸ್ ಆಗಿ 2 ದಿನಗಳಷ್ಟೇ ಆಗಿತ್ತು. ಕಂಪ್ಲೀಟ್ ಕ್ಲೋಸ್ ಆದಾಗ ಅಜೇಯ್ ರಾವ್ ಅವರ ಸಿನಿಮಾ ಥಿಯೇಟರಲ್ಲಿತ್ತು. ಇದೆಲ್ಲ ಆಗಿದ್ದು ಮೇ ತಿಂಗಳಲ್ಲಿ. ಆಮೇಲೆ ಕಂಪ್ಲೀಟ್ ಲಾಕ್ ಆಗಿದ್ದ ಚಿತ್ರಮಂದಿರಗಳಿಗೆ ಜುಲೈ ಮಧ್ಯಭಾಗದಲ್ಲಿ ಸ್ವಲ್ಪ ರಿಲೀಫ್ ಸಿಕ್ಕಿತು. ವಿಶೇಷವೆಂದರೆ ಇಷ್ಟೆಲ್ಲ ಪ್ರಾಬ್ಲಮ್ಸ್‍ಗಳ ಮಧ್ಯೆ ಜುಲೈ ಮಧ್ಯಭಾಗದಿಂದ ಇದುವರೆಗೆ ಒಟ್ಟು 14 ಸಿನಿಮಾ ರಿಲೀಸ್ ಆಗಿವೆ.

  ಇದ್ದುದರಲ್ಲಿ ಯೋಗಿಯ ಲಂಕೆ ಚಿತ್ರ ಬಿಟ್ಟರೆ ಬೇರೆ ಯಾವ ಚಿತ್ರಗಳೂ ಹೇಳಿಕೊಳ್ಳುವಂತಾ ಪ್ರದರ್ಶನ ನೀಡಿಲ್ಲ. ದೊಡ್ಡ ದೊಡ್ಡ ಸ್ಟಾರ್‍ಗಳ ಚಿತ್ರಗಳು ರಿಲೀಸ್ ಡೇಟ್ ಅನೌನ್ಸ್ ಮಾಡಿ ಹಿಂದೆ ಸರಿದವು. ಈಗ ಥಿಯೇಟರ್ ಓಪನ್ ಆದರೆ ಕ್ಯೂನಲ್ಲಿ ದೊಡ್ಡವರ ಚಿತ್ರಗಳೇ ಸಾಕಷ್ಟು ಸಂಖ್ಯೆಯಲ್ಲಿವೆ. ದೊಡ್ಡ ಚಿತ್ರಗಳು ಬರದ ಹೊರತು, ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುವುದು ಕಷ್ಟದ ಮಾತು.

  ಕ್ಯೂನಲ್ಲಿರೋ ಚಿತ್ರಗಳಲ್ಲಿ ದುನಿಯಾ ವಿಜಯ್ ಅವರ ಸಲಗ, ಶಿವರಾಜ್ ಕುಮಾರ್ ಅವರ ಭಜರಂಗಿ 2, ಕಿಚ್ಚ ಸುದೀಪ್‍ರ ಕೋಟಿಗೊಬ್ಬ 3 ಕಂಪ್ಲೀಟ್ ರೆಡಿಯಾಗಿವೆ. ಅಕ್ಟೋಬರ್ ಮೊದಲ ವಾರ ಸಲಗ, ಅಕ್ಟೋಬರ್ 3ನೇ ವಾರಕ್ಕೆ ಕೋಟಿಗೊಬ್ಬ 3, ಅಕ್ಟೋಬರ್ ಅಂತ್ಯಕ್ಕೆ ಭಜರಂಗಿ 2 ರಿಲೀಸ್ ಮಾಡೋಕೆ ಪ್ಲಾನ್ ಆಗಿದೆಯಂತೆ. ನಂತರವೂ ಚಿತ್ರಗಳಿಗೆ ಬರವಿಲ್ಲ. ಶ್ರೀಮುರಳಿಯ ಮದಗಜ, ಜಗ್ಗೇಶ್`ರ ತೋತಾಪುರಿ, ಗಣೇಶ್ ಅವರ ತ್ರಿಬಲ್ ರೈಡಿಂಗ್, ಡಾಲಿ ಧನಂಜಯ್ ಅವರ ರತ್ನನ್ ಪ್ರಪಂಚ, ಬಡವ ರ್ಯಾಸ್ಕಲ್, ಜೋಗಿ ಪ್ರೇಮ್`ರ ಏಕ್ ಲವ್ ಯಾ.. ಹೀಗೆ ಸರದಿ ಸಾಲಿನಲ್ಲಿವೆ.

  ಡಿಸೆಂಬರ್ ಕೊನೆಯ ವೇಳೆಗೆ ರಕ್ಷಿತ್ ಶೆಟ್ಟಿಯವರ ಚಾರ್ಲಿ 777, ಕಿಚ್ಚ ಸುದೀಪ್‍ರ ವಿಕ್ರಾಂತ್ ರೋಣ ರಿಲೀಸ್ ಆಗಲಿವೆ. ಗ್ಯಾಪೂ ಇಲ್ಲ.. ಟೈಮೂ ಇಲ್ಲ.. ಇನ್ನು ಮುಂದಿನ ತಿಂಗಳು ಚಿತ್ರಮಂದಿರಗಳಲ್ಲಿ ಹೊಸ ಹೊಸ ಸಿನಿಮಾಗಳು ತುಂಬಿ ತುಳುಕಲಿವೆ.

 • ನಿರ್ಮಾಪಕರ ಮೀಟಿಂಗ್ ಇಂಪ್ಯಾಕ್ಟ್ : ದೊಡ್ಡ ಚಿತ್ರಗಳ ರಿಲೀಸ್‍ಗೆ  ಮುಹೂರ್ತ ಫಿಕ್ಸ್ ಆಯ್ತಾ?

  ನಿರ್ಮಾಪಕರ ಮೀಟಿಂಗ್ ಇಂಪ್ಯಾಕ್ಟ್ : ದೊಡ್ಡ ಚಿತ್ರಗಳ ರಿಲೀಸ್‍ಗೆ  ಮುಹೂರ್ತ ಫಿಕ್ಸ್ ಆಯ್ತಾ?

  ಎಲ್ಲವೂ ಪ್ಲಾನ್ ಪ್ರಕಾರವೇ ಆಗಿದ್ದರೆ, ದುನಿಯಾ ವಿಜಯ್ ನಿರ್ದೇಶನದ ಮೊದಲ ಸಿನಿಮಾ ಸಲಗ, ವರಮಹಾಲಕ್ಷ್ಮಿ ಹಬ್ಬಕ್ಕೇ ರಿಲೀಸ್ ಆಗಬೇಕಿತ್ತು. ಆಗಲಿಲ್ಲ. ಗಣೇಶ ಹಬ್ಬಕ್ಕೂ ಬರಲಿಲ್ಲ. ಆದರೀಗ ಮುಹೂರ್ತ ಫಿಕ್ಸ್ ಮಾಡಿಕೊಂಡಿರೋ ಹಾಗಿದೆ. ಜೊತೆಯಲ್ಲೋ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಕೂಡಾ ರಿಲೀಸ್ ಡೇಟ್ ಫೈನಲ್ ಮಾಡಿಕೊಂಡಿರೋ ಹಾಗಿದೆ.

  ಶುಕ್ರವಾರದ ಸಿನಿಮಾ ಜಾಹೀರಾತುಗಳಲ್ಲಿ ಎರಡೂ ಚಿತ್ರಗಳು ಈ ರೀತಿಯದ್ದೊಂದು ಹಿಂಟ್ ನೀಡಿವೆ.

  ವಿಶೇಷವೆಂದರೆ ಸಲಗ ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಕೋಟಿಗೊಬ್ಬ 3 ನಿರ್ಮಾಪಕ ಸೂರಪ್ಪ ಬಾಬು, ಭಜರಂಗಿ 2 ನಿರ್ಮಾಪಕ ಜಯಣ್ಣ ಸೇರಿದಂತೆ ಕೆಲವು ನಿರ್ಮಾಪಕರು ಸೆ.21ರಂದು ಆರೋಗ್ಯ ಸಚಿವ ಸುಧಾಕರ್ ಅವರನ್ನು ಭೇಟಿ ಮಾಡಿದ್ದರು. ಅದಾದ ನಂತರ ಇಂದು ಅಂದರೆ ಸೆ.24ರಂದು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಇಂದು ಥಿಯೇಟರ್‍ಗಳಿಗೆ 100% ಪ್ರೇಕ್ಷಕರಿಗೆ ಅವಕಾಶ ಕಲ್ಪಿಸುವ ನಿರ್ಣಯ ಹೊರಬೀಳುವ ಸಾಧ್ಯತೆ ಇದೆ.

 • ಮಹಾರಾಷ್ಟ್ರ ಹೊಸ ರೂಲ್ಸ್ : ಕನ್ನಡ ಚಿತ್ರರಂಗಕ್ಕೆ ಎಚ್ಚರಿಕೆ..!

  ಮಹಾರಾಷ್ಟ್ರ ಹೊಸ ರೂಲ್ಸ್ : ಕನ್ನಡ ಚಿತ್ರರಂಗಕ್ಕೆ ಎಚ್ಚರಿಕೆ..!

  ಕೋವಿಡ್ 19 ಬಿಕ್ಕಟ್ಟು ಮತ್ತೊಮ್ಮೆ ಶುರುವಾಗಿದೆ. ಎಂದಿನಂತೆ ಸರ್ಕಾರ ಈ ಬಾರಿಯೂ ಚಿತ್ರರಂಗಕ್ಕೇ ಮೊದಲ ಕೆಂಗಣ್ಣು ಬೀರಿದೆ. ಚಿತ್ರಮಂದಿರಗಳಲ್ಲಿ ನಾಳೆಯಿಂದ 50:50 ರೂಲ್ಸ್ ಜಾರಿಯಾಗುತ್ತಿದೆ. ಆದರೆ, ಮಹಾರಾಷ್ಟ್ರದಲ್ಲಿ ಚಿತ್ರಮಂದಿರಗಳು ಕಂಪ್ಲೀಟ್ ಬಂದ್ ಆಗಿವೆ.

  ಮಹಾರಾಷ್ಟ್ರದಲ್ಲೀಗ ವೀಕೆಂಡ್ ಲಾಕ್ ಡೌನ್ ಜಾರಿಯಾಗಿದೆ. ರಾತ್ರಿ 8 ಗಂಟೆಯಿಂದಲೇ ನೈಟ್ ಕಫ್ರ್ಯೂ ಶುರುವಾಗಿದೆ. ಹೀಗಾಗಿ ಮೊದಲ ಏಟು ಚಿತ್ರಮಂದಿರಗಳಿಗೇ ಬಿದ್ದಿದೆ. ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸುಗಳು ಬಾಗಿಲು ಮುಚ್ಚಿವೆ. ಇದರಿಂದಾಗಿ ನೋ ಪ್ರಾಬ್ಲಂ ಎಂಬ ನಂಬಿಕೆ ಮೇಲೆ ರಿಲೀಸ್ ಆಗಿದ್ದ 14 ಸಿನಿಮಾಗಳು ನೆಲಕಚ್ಚಿವೆ.

  ಇನ್ನು ಚಿತ್ರೀಕರಣಕ್ಕೂ ಹೊಸ ರೂಲ್ಸ್ ಜಾರಿಯಾಗಿದೆ. ಚಿತ್ರೀಕರಣಗಳಲ್ಲಿ ಭಾಗವಹಿಸುವವರು ಪ್ರತಿ 15 ದಿನಕ್ಕೊಮ್ಮೆ ಕೋವಿಡ್ ಟೆಸ್ಟ್ ಮಾಡಿಸಬೇಕು. ನೆಗೆಟಿವ್ ರಿಪೋರ್ಟ್ ಇರಲೇಬೇಕು. ಈ ರೂಲ್ಸ್ ಏಪ್ರಿಲ್ 30ರವರೆಗೂ ಜಾರಿಯಲ್ಲಿರಲಿದೆ.

  ಇತ್ತೀಚೆಗೆ ಅಮೀರ್ ಖಾನ್, ಅಕ್ಷಯ್ ಕುಮಾರ್, ಗೋವಿಂದ, ವಿಕ್ಕಿ ಕೌಶಲ್, ಅಲಿಯಾ ಭಟ್, ಭೂಮಿ ಪಡ್ನೆಕರ್ ಸೇರಿದಂತೆ ಹಲವರಿಗೆ ಕೋವಿಡ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಹೊಸ ರೂಲ್ಸ್ ಜಾರಿಯಾಗಿದೆ. ಇದು ಕನ್ನಡ ಚಿತ್ರರಂಗಕ್ಕೂ ಎಚ್ಚರಿಕೆ ಗಂಟೆ.

 • ಲಿಕ್ಕರ್ Shop ಓಕೆ.. ಚಿತ್ರಮಂದಿರಗಳಿಗೆ ಇಲ್ಲ ಯಾಕೆ..? - ಕೆ.ಎಂ.ವೀರೇಶ್

  Movie Theater Image

  40 ದಿನಗಳ ಸುದೀರ್ಘ ತಪಸ್ಸಿನ ನಂತರ ವೈಕುಂಠದ ಬಾಗಿಲು ತೆರೆಯುವಂತೆ ಮದ್ಯದಂಗಡಿಗಳೆಲ್ಲ ಬಾಗಿಲು ತೆರೆದವು. ಅಬ್ಬಬ್ಬಾ.. ಅದೇನು ಸಂಭ್ರಮ.. ಬಿಸಿಲು ನೆತ್ತಿ ಸುಡುತ್ತಿದ್ದರೂ, ಹೊಟ್ಟೆ ಕುಯ್ಯೋ ಮರ್ರೋ ಎನ್ನುತ್ತಿದ್ದರೂ.. ಜನ ಕದಲಲಿಲ್ಲ. ನಿಂತು.. ನಿಂತೂ.. ತಾಸುಗಟ್ಟಲೆ ನಿಂತು.. `ಎಣ್ಣೆ' ಖರೀದಿಸಿದರು.

  ಅಷ್ಟೇನಾ..? ನೋ ವೇ.. ಎಣ್ಣೆ ಖರೀದಿಸಿದ ಎಷ್ಟೋ ಜನ ರಸ್ತೆಯಲ್ಲೇ ಕುಡಿದರು. ಎಂದಿನಂತೆ ಬಿದ್ದರು. ಎದ್ದರು. ಚರಂಡಿಯನ್ನೇ ಹಾಸಿಗೆ ಮಾಡಿಕೊಂಡರು. ಅದು ಒಂದು ಕಥೆಯಾದರೆ.. ಖರೀದಿ ವೇಳೆ ಸೋಷಿಯಲ್ ಡಿಸ್ಟೆನ್ಸ್ ಮಾಡಿ ಎಂಬ ನಿಯಮ ಜನರಿಗೆ ಅರ್ಥವೇ ಆಗಲಿಲ್ಲ. ಒಬ್ಬರ ಮೈಮೇಲೊಬ್ಬರು ಬಿದ್ದು.. ನೂಕುನುಗ್ಗಲಿನಲ್ಲಿ ಗುಂಡು ಖರೀದಿಸಿ ಗುಂಡಣ್ಣರಾದರು. ಮೊದಲ ದಿನ 45 ಕೋಟಿ ಬಿಸಿನೆಸ್ ಎಂದು ಅಬಕಾರಿ ಇಲಾಖೆ ಎದೆಯುಬ್ಬಿಸಿ ಹೇಳಿತು.

  ಈಗ ಚಿತ್ರರಂಗದವರು ಕೇಳೋದ್ರಲ್ಲಿ ತಪ್ಪೇನಿದೆ. ಥಿಯೇಟರು, ಮಾಲ್‍ಗಳನ್ನೂ ಓಪನ್ ಮಾಡಿ. ಅನುಮಾನವೇ ಬೇಡ. ಪೊಲೀಸರ ಅಗತ್ಯವೇ ಇಲ್ಲದಂತೆ ಚಿತ್ರಮಂದಿರದವರು, ಮಲ್ಟಿಪ್ಲೆಕ್ಸಿನವರು ಸೋಷಿಯಲ್ ಡಿಸ್ಟೆನ್ಸಿಂಗ್ ಮೈಂಟೇನ್ ಮಾಡ್ತಾರೆ. ಇಡೀ ಚಿತ್ರಮಂದಿರಕ್ಕೆ ಸ್ಯಾನಿಟೈಸರ್ ಮಾಡೋಕೆ ಪಕ್ಕಾ ವ್ಯವಸ್ಥೆಯನ್ನೂ ಮಾಡಿಕೊಳ್ತಾರೆ. ಕೊರೊನಾ ತಡೆಗಟ್ಟಲು ಇರುವ ಕಾನೂನು, ನಿಯಮಗಳನ್ನು ಶಿರಸಾವಹಿಸಿ ಚಾಚೂತಪ್ಪದಂತೆ ಪಾಲಿಸುತ್ತಾರೆ. ದಯವಿಟ್ಟು ಚಿತ್ರಮಂದಿರಗಳೂ.. ಮಾಲ್‍ಗಳೂ ಓಪನ್ ಆಗಲಿ.

  ಚಿತ್ರರಂಗವನ್ನು ನಂಬಿಕೊಂಡು ಬದುಕಿರುವ ಸಾವಿರಾರು ಕುಟುಂಬಗಳಿವೆ. ಹೆಂಡ ಮಾರದೇ ಇದ್ದರೆ ಸರ್ಕಾರ ನಡೆಯಲ್ಲ ಎನ್ನುವುದು ಎಷ್ಟು ಸತ್ಯವೋ.. ಸಿನಿಮಾಗಳು ರನ್ ಆಗದೇ ಇದ್ದರೆ ಕಾರ್ಮಿಕರು ಬದುಕಲ್ಲ ಎನ್ನುವುದೂ ಅಷ್ಟೇ ಸತ್ಯ. ಸರ್ಕಾರಕ್ಕೇ ಸಿಗದ ಹಣ ಕಾರ್ಮಿಕರಿಗೆ ಸಿಗುವುದಾದರೂ ಹೇಗೆ..? ಸರ್ಕಾರ ನಡೆಯೋಕೆ ಅಬಕಾರಿ ಎಷ್ಟು ಮುಖ್ಯವೋ, ಚಿತ್ರರಂಗ ನಡೆಯೋಕೆ ಚಿತ್ರಮಂದಿರಗಳು ನಡೆಯುವುದು, ಶೂಟಿಂಗ್ ನಡೆಯುವುದೂ ಅಷ್ಟೇ ಮುಖ್ಯ. ಅಲ್ಲವೇ..

  2 ತಿಂಗಳ ಆರ್ಥಿಕ ಹೊಡೆತವನ್ನು ಸರ್ಕಾರವೇ ತಡೆದುಕೊಳ್ಳೋಕೆ ಅಸಾಧ್ಯವಾಗಿರುವಾಗ ಯಾವುದೇ ಉದ್ಯಮ, ಉದ್ಯಮಿ, ಕಾರ್ಮಿಕ ತಡೆದುಕೊಂಡಾನೇ..? ಮುಖ್ಯಮಂತ್ರಿಗಳೇ.. ದಯವಿಟ್ಟು ಚಿತ್ರಮಂದಿರಗಳನ್ನು ತೆರೆಯಿರಿ. ಚಿತ್ರರಂಗ ಕೆಲಸ ಮಾಡಲು ಅವಕಾಶ ಕೊಡಿ. ಮತ್ತೊಮ್ಮೆ ನೆನಪಿಸಬೇಕೆಂದರೆ ಮದ್ಯ ಮಾರಾಟದ ವೇಳೆ ಆದಂತಹ ಅನಾಹುತಗಳು ಖಂಡಿತಾ ಚಿತ್ರಮಂದಿರಗಳಲ್ಲಿ ಆಗಲ್ಲ ಎನ್ನುವ ನಂಬಿಕೆ ನಮ್ಮದು.

  ಕೆ.ಎಂ.ವೀರೇಶ್

  ಸಂಪಾದಕರು, ಚಿತ್ರಲೋಕ ಡಾಟ್ ಕಾಮ್

 • ಸಿನಿಮಾ ಓಪನ್.. ಪ್ರೇಕ್ಷಕರಿಂದ ಹೆಲ್ದಿ ರಿಪೋರ್ಟ್

  Audience Shows Healthy Response Towards Movie Releases

  ಆಕ್ಟ್ 1978 ಸಿನಿಮಾ. ಇಡೀ ದೇಶದಲ್ಲಿ ಕೊರೊನಾ ಲಾಕ್ ಡೌನ್ ನಂತರ ಥಿಯೇಟರುಗಳಲ್ಲಿ ರಿಲೀಸ್ ಆದ ಮೊಟ್ಟ ಮೊದಲ ಹೊಸ ಸಿನಿಮಾ. ಯಜ್ಞಾ ಶೆಟ್ಟಿ ಪ್ರಧಾನ ಪಾತ್ರದಲ್ಲಿ ನಟಿಸಿರುವ ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಇದು ಚಿತ್ರರಂಗ ಮತ್ತೊಮ್ಮೆ ಚೇತರಸಿಕೊಳ್ಳೋ ಸೂಚನೆ.

  ಪ್ರಮುಖ ಚಿತ್ರಮಂದಿರ ವೀರೇಶ್ ಥಿಯೇಟರ್‍ನಲ್ಲಿ ಮೊದಲ ದಿನದ ಶೋಗಳು ಹೌಸ್‍ಫುಲ್ ಆಗಿವೆ. ಹಲವು ಥಿಯೇಟರುಗಳಲ್ಲಿ ಪ್ರೇಕ್ಷಕರ ಪ್ರವೇಶ ನಿರೀಕ್ಷೆಗಿಂತಲೂ ಹೆಚ್ಚಿದೆ. ಆಕ್ಟ್ 1978 ಚಿತ್ರದಲ್ಲಿ ಯಾವುದೇ ಸ್ಟಾರ್ ಕಲಾವಿದರು ಇಲ್ಲ. ಹೀಗಿದ್ದರೂ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದಿರುವುದು, ಪ್ರೇಕ್ಷಕರು ಹೊಸ ಚಿತ್ರಕ್ಕೆ ಕಾಯುತ್ತಿದ್ದಾರೆ ಎನ್ನುವದರ ಸೂಚನೆ ಕೊಟ್ಟಿದೆ.

 • ಸಿನಿಮಾ ಲಾಕ್ : ಕಫ್ರ್ಯೂ ಹೇರಿದ ಸರ್ಕಾರ ಕೊಟ್ಟಿದ್ದಾದರೂ ಏನು..?

  ಸಿನಿಮಾ ಲಾಕ್ : ಕಫ್ರ್ಯೂ ಹೇರಿದ ಸರ್ಕಾರ ಕೊಟ್ಟಿದ್ದಾದರೂ ಏನು..?

  ಕೋವಿಡ್ 19 ಬಿಕ್ಕಟ್ಟು ಶುರುವಾದಾಗ ಮೊದಲ ಹೊಡೆತ ಬಿದ್ದಿದ್ದೇ ಚಿತ್ರರಂಗಕ್ಕೆ. ಮೊದಲು ಬಾಗಿಲು ಹಾಕಿದ ಉದ್ಯಮವೇ ಸಿನಿಮಾ. ಈಗಲೂ ಅಷ್ಟೆ.. ಉಳಿದ ಉದ್ಯಮಗಳನ್ನೆಲ್ಲ ಕೊರೊನಾ ಆಸ್ಫೋಟಿಸುವವರೆಗೂ ಕಾದು ಬಾಗಿಲು ಹಾಕಿಸಿದ ಸರ್ಕಾರ, ಸಿನಿಮಾ ಉದ್ಯಮವನ್ನು ಮಾತ್ರ ಆರಂಭದಲ್ಲೇ ಕೈ ಕಟ್.. ಬಾಯ್ಮುಚ್.. ಗಪ್‍ಚುಪ್.. ಎಂದು ಕೂರಿಸಿಬಿಟ್ಟಿತು. 2020ರ ಆರಂಭದಲ್ಲಿ ಬಾಗಿಲು ಮುಚ್ಚಿದ್ದ ಚಿತ್ರರಂಗ ಉಸಿರಾಡಿದ್ದು 2021ರಲ್ಲಿ ಒಂದೇ ಒಂದು ತಿಂಗಳು. ಈಗ ಮತ್ತೆ ಬಾಗಿಲು.

  ಇತಿಹಾಸದಲ್ಲಿ ಕಂಡು ಕೇಳರಿಯದ ಒಂದು ರೋಗ ಬಂದಾಗ ಮುನ್ನೆಚ್ಚರಿಕೆ ವಹಿಸುವುದು ತಪ್ಪೇನಲ್ಲ. ಆದರೆ.. ಅಂತಾದ್ದೊಂದು ಕಷ್ಟ ಬಂದಾಗ ಅದೇ ಉದ್ಯಮದವರು ಏನಾದರೂ ನೆರವು ಸಿಕ್ಕೀತೇನೋ ಎಂದು ಸರ್ಕಾರದ ಕಡೆ ನೋಡುವುದು ಸಾಮಾನ್ಯ. ಆದರೆ.. ಸರ್ಕಾರ ಚಿತ್ರರಂಗವನ್ನಂತೂ ಅದೊಂದು ಉದ್ಯಮವೂ ಅಲ್ಲ, ಸಮಸ್ಯೆಯೂ ಅಲ್ಲ... ಅಲ್ಲಿರುವವರು ಮನುಷ್ಯರೂ ಅಲ್ಲ ಎಂಬಂತೆ ವರ್ತಿಸುತ್ತಿರುವುದಂತೂ ಸತ್ಯ. ಚಿತ್ರರಂಗದವರು ಇದುವರೆಗೆ ಸರ್ಕಾರವನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆಯೇ ಹೊರತಾಗಿ, ಸರ್ಕಾರದಿಂದ ನಯಾಪೈಸೆ ನೆರವೂ ಸಿಕ್ಕಿಲ್ಲ. ನೆರವಿನ ಮಾತು ಬಿಡಿ, ಇರುವ ಟ್ಯಾಕ್ಸ್, ಶುಲ್ಕಗಳನ್ನೇ ಡಬಲ್ ಮಾಡಿ ಹೆಂಗೆ ನಾವು ಎನ್ನುತ್ತಿದೆ ಸರ್ಕಾರ.

  ಸರ್ಕಾರಕ್ಕೆ ಚಿತ್ರರಂಗ ಎಂದರೆ ಏನು ಎಂಬ ಪರಿಕಲ್ಪನೆಯೂ ಇದ್ದಂತಿಲ್ಲ. ಚಿತ್ರರಂಗ ಎಂದರೆ ಕೇವಲ ನಟರಷ್ಟೇ ಅಲ್ಲ, ಚಿತ್ರರಂಗವನ್ನು ನಂಬಿಕೊಂಡು ಪ್ರೊಡಕ್ಷನ್ ಹೌಸ್ ಕಾರ್ಮಿಕರು, ಕಲಾವಿದರು, ತಂತ್ರಜ್ಞರು, ಚಿತ್ರಮಂದಿರದ ಮಾಲೀಕರು ಮತ್ತು ಕಾರ್ಮಿಕರು, ಡಿಸೈನರುಗಳು, ಜ್ಯೂ. ಆರ್ಟಿಸ್ಟುಗಳು.. ಹೀಗೆ ಒಂದು ದೊಡ್ಡ ಸಮೂಹವೇ ಇದೆ. ಸುಮಾರು 20 ಸಾವಿರಕ್ಕೂ ಹೆಚ್ಚು ಕುಟುಂಬದವರನ್ನು ಸಾಕುತ್ತಿರುವ ದೊಡ್ಡ ಉದ್ಯಮ ಚಿತ್ರರಂಗ.

  ಹೊರಗಿನಿಂದ ರಂಗುರಂಗಾಗಿ ಕಾಣುತ್ತಿದೆಯೆಂದ ಮಾತ್ರಕ್ಕೆ.. ಚಿತ್ರರಂಗ ಅದ್ಭುತವಾಗಿದೆ ಎಂದರ್ಥವಲ್ಲ. ಸರ್ಕಾರ ಕನಿಷ್ಠ ಈ ಸಮಸ್ಯೆಗಳೇನು ಎನ್ನುವುದನ್ನಾದರೂ ಅರ್ಥ ಮಾಡಿಕೊಂಡರೆ.. ಏನು ಮಾಡಬಹುದು ಎಂಬ ಆಲೋಚನೆಯನ್ನಾದರೂ ಮಾಡಬಹುದು. ದುರಂತವೆಂದರೆ ಸರ್ಕಾರದ ಚುಕ್ಕಾಣಿ ಹಿಡಿದವರಿಗೆ ಮೆಷಿನ್ ಹಾಕಿಕೊಂಡರೂ ಕಿವಿ ಕೇಳಿಸೋದಿಲ್ಲ. ಕನ್ನಡಕ ಹಾಕಿಕೊಂಡರೂ ಕಣ್ಣು ಕಾಣಿಸುತ್ತಿಲ್ಲ. ಯೋಚಿಸಬೇಕಾದ ಜಾಗದಲ್ಲಿ ಯೋಚನೆ ಮಾಡುವುದನ್ನೇ ಬಿಟ್ಟಂತಿದೆ.

 • ಸಿನಿಮಾಗಳೇ ಇಲ್ಲ.. ಥಿಯೇಟರ್ ಓಪನ್ ಮಾಡೋಕ್ ಆಗುತ್ತಾ?

  ಸಿನಿಮಾಗಳೇ ಇಲ್ಲ.. ಥಿಯೇಟರ್ ಓಪನ್ ಮಾಡೋಕ್ ಆಗುತ್ತಾ?

  ಕೇಂದ್ರ ಸರ್ಕಾರ ಶೇ.50ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಿ ಸಿನಿಮಾ ಥಿಯೇಟರುಗಳನ್ನು ಓಪನ್ ಮಾಡೋಕೆ ಅನುಮತಿ ನೀಡಿದೆ. ಸೋಮವಾರದಿಂದಲೇ ಥಿಯೇಟರ್ ಓಪನ್ ಆಗಬೇಕಿತ್ತು. ಆದರೆ.. ಒಂದು ಚಿತ್ರಮಂದಿರವೂ ಬಾಗಿಲು ತೆರೆಯಲಿಲ್ಲ. ಕೆಲವು ಥಿಯೇಟರುಗಳು ಕ್ಲೀನಿಂಗ್, ಸಣ್ಣ ಪುಟ್ಟ ರಿಪೇರಿ ಕೆಲಸಗಳನ್ನು ಶುರು ಮಾಡಿದವೇ ಹೊರತು, ಒಂದು ಚಿತ್ರವೂ ಪ್ರದರ್ಶನ ಕಾಣಲಿಲ್ಲ. ಒಂದು ವಿಷಯ ಸ್ಪಷ್ಟವಾಗಿ ಗೊತ್ತಿರಲಿ, ಈಗಲ್ಲ.. ಇನ್ನೂ ಒಂದೆರಡು ವಾರ ಒಂದು ಸಿನಿಮಾ ಶೋ ಕೂಡಾ ನಡೆಯೋದು ಡೌಟು.

  ಚಿತ್ರಲೋಕದ ಜೊತೆ ಈ ಕುರಿತು ಮಾತನಾಡಿದ ಫಿಲಂ ಚೇಂಬರ್ ಅಧ್ಯಕ್ಷ ಜೈರಾಜ್ `ನಿರ್ಮಾಪಕರು ಚಿತ್ರಗಳ ಬಿಡಗಡೆಗೆ ಆಸಕ್ತಿ ತೋರಿಸುತ್ತಿಲ್ಲ. ಹೊಸ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ. ಹೀಗಾಗಿ, ಈಗ ಥಿಯೇಟರುಗಳ ಬಿಡುಗಡೆಗೆ ಎದುರಾಗಿರುವುದು ಕಂಟೆಂಟ್ ಪ್ರಾಬ್ಲಂ. ಸಿನಿಮಾಗಳೇ ಇಲ್ಲದ ಮೇಲೆ ಪ್ರದರ್ಶಕರು ಏನು ಪ್ರದರ್ಶನ ಮಾಡಬೇಕು? ಇದು ನಮ್ಮಲ್ಲಿ ಮಾತ್ರವೇ ಅಲ್ಲ, ಪಕ್ಕದ ರಾಜ್ಯಗಳಲ್ಲೂ ಇದೇ ಪರಿಸ್ಥಿತಿ' ಎಂದಿದ್ದಾರೆ.

  ಶೇ.50ರಷ್ಟು ಪ್ರೇಕ್ಷಕರ ನಿರ್ಬಂಧದಲ್ಲಿ ಹೊಸ ಸಿನಿಮಾ ಬಿಡುಗಡೆ ಮಾಡೋಕೆ ನಿರ್ಮಾಪಕರಿಗೆ ಧೈರ್ಯವಿಲ್ಲ. ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರಬಹುದು ಎಂಬ ಆತಂಕವೂ ಇದೆ. ಜೊತೆಗೆ ಎಲ್ಲಕ್ಕಿಂತ ದೊಡ್ಡ ಆತಂಕವೆಂದರೆ ಆಗಸ್ಟ್ ಅಂತ್ಯದ ವೇಳೆಗೆ 3ನೇ ಅಲೆ ಕೊರೊನಾ ಎದುರಾಗಬಹುದು ಎಂಬ ಭಯ. ಅಕಸ್ಮಾತ್ ಆಗಸ್ಟ್ ಹೊತ್ತಿಗೆ 3ನೇ ಅಲೆ ಶುರುವಾಗೇಬಿಟ್ಟರೆ.. ಮತ್ತೊಂದು ಲಾಕ್ ಡೌನ್ ಎದುರಾದರೆ.. ಈ ಎಲ್ಲ ಆತಂಕಗಳಿಂದಾಗಿ ನಿರ್ಮಾಪಕರು ತಮ್ಮ ಚಿತ್ರ ಬಿಡುಗಡೆಗೆ ಧೈರ್ಯ ಮಾಡುತ್ತಿಲ್ಲ ಎನ್ನುವುದು ಜೈರಾಜ್ ಅವರ ವಿಶ್ಲೇಷಣೆಯೂ ಹೌದು. ಸದ್ಯಕ್ಕೆ ಅಕ್ಕಪಕ್ಕದ ರಾಜ್ಯಗಳಲ್ಲಿ ಸಿನಿಮಾ ಪ್ರದರ್ಶನ ಹೇಗೆ ನಡೆಯಲಿದೆ ಎನ್ನುವುದನ್ನು ನೋಡಿಕೊಂಡು ಮುಂದಿನ ಹೆಜ್ಜೆಯಿಡುವ ತೀರ್ಮಾನಕ್ಕೆ ಬರಲಾಗಿದೆ

 • ಹೌಸ್‍ಫುಲ್ 50% ಬ್ರೇಕ್

  ಹೌಸ್‍ಫುಲ್ 50% ಬ್ರೇಕ್

  ಇನ್ನೇನು ಎಲ್ಲವೂ ಮುಕ್ತ ಮುಕ್ತ ಎಂದು ಖುಷಿಯಲ್ಲಿದ್ದ ಚಿತ್ರರಂಗಕ್ಕೆ ರಾಜ್ಯ ಸರ್ಕಾರ ಶಾಕ್ ಕೊಟ್ಟಿದೆ. ಕೇಂದ್ರ ಸರ್ಕಾರ ಓಕೆ ಎಂದಿದ್ದರೂ, ರಾಜ್ಯ ಸರ್ಕಾರ ಮಾತ್ರ ಚಿತ್ರಮಂದಿರಗಳಿಗೆ 50% ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಿ ಬ್ರೇಕ್ ಹಾಕಿದೆ.

  ಕೊರೊನಾ 2ನೇ ಅಲೆ ಭೀತಿ ಕಾರಣದಿಂದಾಗಿ ರಾಜ್ಯ ಸರ್ಕಾರ ಈ ಹೆಜ್ಜೆಯಿಟ್ಟಿದೆ. ತುಂಬಿದ ಚಿತ್ರಮಂದಿರಗಳ ಪ್ರದರ್ಶನಕ್ಕೆ ಚಿತ್ರೋದ್ಯಮಿಗಳು ಒತ್ತಾಯಿಸುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರ ವ್ಯತಿರಿಕ್ತ ನಿಲುವು ತೆಗೆದುಕೊಂಡಿದೆ.

  ಸದ್ಯಕ್ಕೆ ಇದು ಶಾಕ್ ಕೊಟ್ಟಿರುವುದು ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರಕ್ಕೆ. ರಿಲೀಸ್ ಆಗುತ್ತಿರುವ ಈ ವರ್ಷದ ಮೊದಲ ಸ್ಟಾರ್ ಸಿನಿಮಾ ಪೊಗರು. ಹೀಗಾಗಿ ಫೆಬ್ರವರಿ 19ಕ್ಕೆ ರಿಲೀಸ್ ಆಗಲಿರುವ ಪೊಗರು ಚಿತ್ರ ಕೂಡಾ 50% ಚಿತ್ರಮಂದಿರಗಳಲ್ಲೇ ಪ್ರದರ್ಶನ ಕಾಣಬೇಕಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery