2022 ಕನ್ನಡಕ್ಕೆ ಅದ್ಭುತ ಎನ್ನಿಸುವ ವರ್ಷ ಎನ್ನಬಹುದು. ಈ ವರ್ಷ ಕನ್ನಡದ 5 ಚಿತ್ರಗಳು 100 ಕೋಟಿ ಕ್ಲಬ್ ಸೇರಿದರೆ, ಎರಡು ಚಿತ್ರಗಳು ದೇಶದಾದ್ಯಂತ ಸಂಚಲನವನ್ನೇ ಸೃಷ್ಟಿಸಿದವು. ಈಗ IMDB TOP 10 10ನಲ್ಲೂ ಕನ್ನಡದ್ದೇ ಹವಾ. ಐಎಂಡಿಬಿ ಪಟ್ಟಿಯಲ್ಲಿ ಸೆಲೆಕ್ಟ್ ಆಗಿರುವ 10 ಚಿತ್ರಗಳಲ್ಲಿ 3 ಕನ್ನಡದ್ದೇ. ಇನ್ನೊಂದು ತೆಲುಗು.
ಐಎಂಡಿಬಿ ಟಾಪ್ 1 ರ್ಯಾಂಕಿಂಗ್‍ನಲ್ಲಿ ಆರ್.ಆರ್.ಆರ್. ಇದೆ. ಅದು ರಾಜಮೌಳಿ ಸೃಷ್ಟಿಸಿದ ದೃಶ್ಯ ವೈಭವ. ಪ್ರೇಕ್ಷಕರೇ ಕೊಟ್ಟ ರೇಟಿಂಗ್ ಪ್ರಕಾರ ಆರ್.ಆರ್.ಆರ್. ಅತೀ ಹೆಚ್ಚು ರೇಟಿಂಗ್ ಪಡೆದಿದ್ದರೆ, 2ನೇ ಸ್ಥಾನದಲ್ಲಿರೋದು ಹಿಂದಿಯ ಕಾಶ್ಮೀರ್ ಫೈಲ್ಸ್. ಕೇವಲ ವಿವಾದದಿಂದಷ್ಟೇ ಅಲ್ಲ, ಮುಚ್ಚಿಟ್ಟಿದ್ದ ಸತ್ಯವೊಂದನ್ನು ಅನಾವರಣಗೊಳಿಸಿದ ಖ್ಯತಿಯೂ ಇದ್ದ ಕಾಶ್ಮೀರ್ ಫೈಲ್ಸ್ ಉತ್ತಮ ಆಯ್ಕೆ ಎನ್ನಬಹುದು. 3ನೇ ಸ್ಥಾನದಲ್ಲಿ ಹೊಂಬಾಳೆಯವರ ಕೆಜಿಎಫ್ ಚಾಪ್ಟರ್ 2 ಇದೆ. ಈ ವರ್ಷದ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ನಂ.1 ಆಗಿರುವ ಬಾಕ್ಸಾಫೀಸ್ ಕಿಂಗ್ ಎನಿಸಿಕೊಂಡ ಕೆಜಿಎಫ್, ಐಎಂಡಿಬಿ ರೇಟಿಂಗ್‍ನಲ್ಲಿ 3ನೇ ಸ್ಥಾನ ಪಡೆದಿದೆ.
ತಮಿಳಿನಲ್ಲಿ ಕಮಲ್ ಹಾಸನ್, ವಿಜಯ್ ಸೇತುಪತಿ, ಫಹಾದ್ ಫಾಸಿಲ್ ಹಾಗೂ ಸೂರ್ಯ ನಟಿಸಿದ್ದ ವಿಕ್ರಂ 4ನೇ ಸ್ಥಾನ ಪಡೆದಿದೆ. 5ನೇ ಸ್ಥಾನದಲ್ಲಿರುವುದೇ ನಮ್ಮ ಕಾಂತಾರ. ರಿಷಬ್ ಶೆಟ್ಟಿ ಸೃಷ್ಟಿಯ ಅದ್ಭುತ ಲೋಕ ಪವಾಡಗಳನ್ನೇ ಸೃಷ್ಟಿಸಿದೆ.
6ನೇ ಸ್ಥಾನದಲ್ಲಿ ರಾಕೆಟ್ರಿ : ದಿ ನಂಬಿ ಎಫೆಕ್ಟ್ ಅನ್ನೋ ತಮಿಳು ಚಿತ್ರವಿದೆ. ಇದು ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ್ದ ವಿಜ್ಞಾನಿ ನಂಬಿಯಾರ್‍ರನ್ನು ಸಂಚು ಮಾಡಿ ದೇಶದ್ರೋಹದ ಆರೋಪ ಹೊರಿಸಿ ಹಿಂಸೆ ಕೊಟ್ಟಿದ್ದ ವಿಜ್ಞಾನಿಯ ಕಥೆ. ಮಾಧವನ್ ನಟಿಸಿದ್ದ ಚಿತ್ರ ಅದ್ಭುತ ಯಶಸ್ಸು ಕಂಡಿತ್ತು.
ಸಂದೀಪ್ ಉನ್ನಿ ಕೃಷ್ಣನ್ ಬಯೋಪಿಕ್ ಆಗಿದ್ದ ತೆಲುಗಿನ ಮೇಜರ್ ಸಿನಿಮಾಗೆ 7ನೇ ಸ್ಥಾನ ಸಿಕ್ಕಿದ್ದರೆ, ದುಲ್ಕರ್ ಸಲ್ಮಾನ್, ಮೃಣಾಲ್ ಠಾಕೂರ್ ನಟನೆಯ ಸೀತಾರಾಮನ್ ಎಂಬ ಕಾಲ್ಪನಿಕ ಪ್ರೇಮಕಥೆಗೆ 8ನೇ ಸ್ಥಾನ ಸಿಕ್ಕಿದೆ. ಮಣಿರತ್ನಂ, ಐಶ್ವರ್ಯಾ ರೈ, ವಿಕ್ರಂ, ಕಾರ್ತಿ..ಯಂತಹ ದಿಗ್ಗಜರೇ ಇದ್ದ ಪೊನ್ನಿಯನ್ ಸೆಲ್ವನ್ ಚಿತ್ರಕ್ಕೆ 9ನೇ ರ್ಯಾಂಕ್ ಸಿಕ್ಕಿದೆ. 10ನೇ ಸ್ಥಾನದಲ್ಲಿ ಮತ್ತೊಮ್ಮೆ ಕನ್ನಡದ ಕಹಳೆ ಮೊಳಗಿದ್ದು 777 ಚಾರ್ಲಿ ಚಿತ್ರಕ್ಕೆ 10ನೇ ಸ್ಥಾನ ಸಿಕ್ಕಿದೆ.
ಅಂದಹಾಗೆ ಈ ಟಾಪ್ 10 ಚಿತ್ರಗಳಲ್ಲಿ 3 ಕನ್ನಡದ ಚಿತ್ರಗಳು. ಕೆಜಿಎಫ್ ಚಾಪ್ಟರ್ 2, ಕಾಂತಾರ ಮತ್ತು 777 ಚಾರ್ಲಿ.
ತಮಿಳಿನ ಚಿತ್ರಗಳು 3. ವಿಕ್ರಂ, ಪೊನ್ನಿಯನ್ ಸೆಲ್ವನ್. ರಾಕೆಟ್ರಿ ನಂಬಿ ಎಫೆಕ್ಟ್.
ತೆಲುಗಿನವು 3. ಆರ್.ಆರ್.ಆರ್., ಸೀತಾರಾಮನ್ ಹಾಗೂ ಮೇಜರ್.
ಹಿಂದಿಯದ್ದು ಕೇವಲ 1. ಕಾಶ್ಮೀರ್ ಫೈಲ್ಸ್. ಅದೂ ಕೂಡಾ ಹಿಂದಿಯ ರೆಗ್ಯುಲರ್ ಫಾರ್ಮಾಟ್ ಬಿಟ್ಟು ರೂಪಿಸಿದ ಸಿನಿಮಾ. ಈ ಟಾಪ್ 10 ಚಿತ್ರಗಳಲ್ಲಿ ಬಹುತೇಕ ಸಿನಿಮಾಗಳು ಸತ್ಯಘಟನೆ ಆಧರಿತ ಚಿತ್ರಗಳು ಎಂಬುದು ಗಮನಾರ್ಹ.
ಆರ್.ಆರ್.ಆರ್. ಕಥೆಗೆ ಮೂಲ ಸತ್ಯಕಥೆಯೇ ಆಗಿದ್ದರೂ, ಕಾಲ್ಪನಿಕ ವೈಭವದ ಕಥಾ ಹಂದರವೂ ಚಿತ್ರದಲ್ಲಿತ್ತು. ಕಾಶ್ಮೀರ್ ಫೈಲ್ಸ್.. ಕಲ್ಪನೆಯನ್ನೂ ಮಾಡಿಕೊಳ್ಳಲಾಗದ ಸತ್ಯ ಕಥೆಯನ್ನು ಇದ್ದದ್ದು ಇದ್ದಿದ್ದಂತೆ ತೋರಿಸಲಾಗಿತ್ತು. ಪೊನ್ನಿಯನ್ ಸೆಲ್ವನ್, ಸೀತಾರಾಮನ್, ಮೇಜರ್, ರಾಕೆಟ್ರಿ : ದಿ ನಂಬಿ ಎಫೆಕ್ಟ್ ಎಲ್ಲವೂ ಸತ್ಯ ಕಥೆ ಆಧರಿತ ಚಿತ್ರಗಳೇ.
ಕೆಜಿಎಫ್, ಕಾಂತಾರ, 777 ಚಾರ್ಲಿ, ವಿಕ್ರಂ ಚಿತ್ರಗಳಷ್ಟೇ ಸಂಪೂರ್ಣ ಕಾಲ್ಪನಿಕ ಚಿತ್ರಗಳು. ಒಟ್ಟಿನಲ್ಲಿ ಜನ ಸಿನಿಮಾ ನೋಡುವ ಟ್ರೆಂಡ್ ಬದಲಾಗಿದೆ.