ಕೊರೊನಾ, ಲಾಕ್‍ಡೌನ್, 50:50 ರೂಲ್ಸ್.. ಇಂತಹವೆಲ್ಲ ಬಂದಾಗ ಇನ್ನು ಚಿತ್ರಮಂದಿರಗಳ ಕಥೆ ಮುಗೀತು. ಜನ ಥಿಯೇಟರಿಗೆ ಬರಲ್ಲ. ಮೊಬೈಲಿನಲ್ಲೇ ಸಿನಿಮಾ ನೋಡ್ತಾರೆ. ಇನ್ನೇನಿದ್ದರೂ ಒಟಿಟಿಗಳದ್ದೇ ಕಾಲ ಎಂದು ಷರಾ ಬರೆದವರಿಗೆ ಥಿಯೇಟರುಗಳ ಲೆಕ್ಕ ಬೇರೆಯದೇ ಕಥೆ ಹೇಳಿದೆ. ಚಿತ್ರರಂಗವನ್ನು ಗೆಲ್ಲಿಸಿರುವುದು ಚಿತ್ರಮಂದಿರಗಳೇ ಹೊರತು, ಒಟಿಟಿಗಳಲ್ಲ ಎಂದು ಸಾರಿ ಸಾರಿ ಹೇಳಿದೆ ಹೊಸ ಬಾಕ್ಸಾಫೀಸ್ ಮತ್ತು ಒಟಿಟಿ ರಿಪೋರ್ಟ್. ಅಂದಹಾಗೆ ಇದು ಕೇವಲ ಥಿಯೇಟರ್ ಫೀಲಿಂಗ್, ಸೆಂಟಿಮೆಂಟ್ ಕಥೆಯಂತೂ ಖಂಡಿತಾ ಅಲ್ಲ.
ಕನ್ನಡದಲ್ಲಿ ಗೆದ್ದ ಚಿತ್ರಗಳಿಗೆ ದೊಡ್ಡ ಲಾಭ ತಂದುಕೊಟ್ಟಿರುವುದು ಚಿತ್ರಮಂದಿರಗಳೇ. 2021ರಲ್ಲಿ ಹಿಟ್ ಆದ ಸಲಗ, ಭಜರಂಗಿ 2, ಬಡವ ರಾಸ್ಕಲ್, ಗರುಡ ಗಮನ ವೃಷಭ ವಾಹನ, ಯುವರತ್ನ, ಮದಗಜ.. ಈ ಎಲ್ಲ ಚಿತ್ರಗಳಿಗೂ ಚಿತ್ರಮಂದಿರದಲ್ಲಿ ದೊಡ್ಡ ಮಟ್ಟದ ಲಾಭ ಸಿಕ್ಕಿದೆ. ಒಟಿಟಿಯಲ್ಲಿ ಸಿಕ್ಕಿರುವುದು ಬೋನಸ್ ಹಣವೇ ಹೊರತು, ಅದೇ ಲಾಭವಲ್ಲ. ಏಕೆಂದರೆ ಒಟಿಟಿಗಳ ಲೆಕ್ಕಾಚಾರವೇ ಬೇರೆ.
20-30 ಕೋಟಿ ಹಾಕಿ ಸಿನಿಮಾ ಮಾಡುವವರಿಗೆ ಒಟಿಟಿಗಳವರು ಕೊಡುವುದು 5 ರಿಂದ 10 ಕೋಟಿ. ಆ ಚಿತ್ರಗಳ ರೇಟ್ ಏರಬೇಕೆಂದರೆ ಅವು ಮೊದಲೇ ಥಿಯೇಟರಿನಲ್ಲಿ ರಿಲೀಸ್ ಆಗಿ ಒಳ್ಳೆಯ ಲಾಭ ಮತ್ತು ಹೆಸರು ಗಳಿಸಿರಬೇಕು. ಇಲ್ಲದೇ ಹೋದರೆ ಒಟಿಟಿಗಳವರು ಕೊಡೋದು ವೀಕ್ಷಕರ ಸಂಖ್ಯೆ ಆಧರಿಸಿದ ಹಣ. ಅಂದರೆ ಒಟಿಟಿಗಳವರು ಸಿನಿಮಾ ತೆಗೆದುಕೊಳ್ತಾರೆ. ಕೇವಲ ವೇದಿಕೆ ಕೊಡ್ತಾರೆ. ಜನ ನೋಡಿದರೆ ಅದರಿಂದ ಬರೋ ಹಣದಲ್ಲಿ ಒಂದಿಷ್ಟು ನಿರ್ಮಾಪಕರಿಗೆ, ಇನ್ನೊಂದಿಷ್ಟು ಅವರಿಗೆ.. ಅರ್ಥಾತ್ ಒಟಿಟಿಯವರಿಗೆ. ಅವರು ಕೊಡೋದು ವೇದಿಕೆ ಮಾತ್ರ.. ಮಿಕ್ಕಿದ್ದು ಎಂದಿನಂತೆ ನಿರ್ಮಾಪಕರ ರಿಸ್ಕು. ಆ ರಿಸ್ಕ್‍ಗೆ ಹೋಲಿಸಿದರೆ ಚಿತ್ರಮಂದಿರಗಳಲ್ಲಿ ತೆಗೆದುಕೊಳ್ಳೋ ರಿಸ್ಕ್ ಏನೇನೂ ಅಲ್ಲ ಎನ್ನುತ್ತಾರೆ ಒಟಿಟಿಗಳ ಜೊತೆ ಮಾತನಾಡಿ ಕೈ ಸುಟ್ಟುಕೊಂಡಿರೋ ನಿರ್ಮಾಪಕರು. ಏಕೆಂದರೆ ಒಟಿಟಿಗೆ ಹೋದ ಮೇಲೆ ವಾಪಸ್ ಚಿತ್ರಮಂದಿರಗಳಿಗೆ ಬರುವ ಅವಕಾಶ ಇರಲ್ಲ. ಜೊತೆಗೆ ಒಟಿಟಿಗಳಲ್ಲಿ ಅವರು ಏನೇ ಹೇಳಿಕೊಂಡರೂ ಪೈರಸಿ ಸುಲಭ.
ಇದು ಕೇವಲ ಕನ್ನಡ ಚಿತ್ರರಂಗದ ಕಥೆ ಅಷ್ಟೇ ಅಲ್ಲ. 300 ಕೋಟಿ ಬಿಸಿನೆಸ್ ಮಾಡಿದ ತೆಲುಗಿನ ಪುಷ್ಪ, ಸಾವಿರ ಕೋಟಿ ಬಿಸಿನೆಸ್ ಮಾಡಿದ ಹಾಲಿವುಡ್‍ನ ಸ್ಪೈಡರ್‍ಮ್ಯಾನ್ ನೋ ವೇ ಹೋಮ್ ಚಿತ್ರಗಳೂ ಅಷ್ಟೆ. ಚಿತ್ರಮಂದಿರಗಳ ಭವಿಷ್ಯ ಮುಗೀತು ಎಂದುಕೊಂಡು ಒಟಿಟಿಗೆ ಬಂದಿದ್ದರೆ
ದೊಡ್ಡ ಮಾರುಕಟ್ಟೆಯನ್ನೇ ಕಳೆದುಕೊಳ್ಳುತ್ತಿದ್ದವು. ಅದರಲ್ಲಂತೂ ಯಾವುದೇ ಅನುಮಾನವಿಲ್ಲ. ಒಟಿಟಿ ಕೇವಲ ಭ್ರಮೆ ಸೃಷ್ಟಿಸುತ್ತೆ. ಜೊತೆಗೆ ಭಯವನ್ನೂ ಹುಟ್ಟಿಸುತ್ತೆ. ಕಳೆದುಕೊಳ್ಳೋದು ನಿರ್ಮಾಪಕರೇ. ಹಾಗಂತ ಒಟಿಟಿ ಏನನ್ನೋ ಮಾಡಬಾರದ್ದು ಮಾಡುತ್ತಿದೆ ಎಂದಲ್ಲ. ಒಟಿಟಿ ಕೂಡಾ ಒಂದು ಹೊಸ ವೇದಿಕೆ. ಅಲ್ಲಿ ಗೆದ್ದು ಇಲ್ಲಿ ಬಂದರೆ ಇದು ಬೋನಸ್.
ಇತ್ತೀಚೆಗೆ ವಿಕ್ರಾಂತ್ ರೋಣ ಚಿತ್ರಕ್ಕೆ 100 ಕೋಟಿಯ ಆಫರ್ ಬಂದಿತ್ತಂತೆ. ಆದರೆ ಚಿತ್ರಮಂದಿರಗಳನ್ನೇ ದೃಷ್ಟಿಯಲ್ಲಿಟ್ಟುಕೊಂಡು 3ಡಿಯಲ್ಲಿ ಸಿನಿಮಾ ಮಾಡಿರುವ ನಿರ್ಮಾಪಕರು ಒಟಿಟಿಗೇ ಡೈರೆಕ್ಟ್ ಆಗಿ ಕೊಟ್ಟರೆ, ಶ್ರಮ, ಪ್ರತಿಭೆ, ಹಣ... ಎಲ್ಲವೂ ವೇಸ್ಟ್. ಆರ್‍ಆರ್‍ಆರ್ ಚಿತ್ರಕ್ಕೂ ಕೂಡಾ ದೊಡ್ಡ ಮೊತ್ತದ ಆಫರ್ ಹೋಗಿತ್ತಂತೆ.
ಈ ಚಿತ್ರಕ್ಕೆ 3 ವರ್ಷದ ಶ್ರಮ ಹಾಕಿದ್ದೇವೆ. ಆತುರವೇಕೆ.. ಕಾಯೋಣ. ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿ ಪ್ರೇಕ್ಷಕ ಮೆಚ್ಚಿದರೇನೇ ನಮ್ಮ ಪ್ರತಿಭೆ ಮತ್ತು ಶ್ರಮಕ್ಕೆ ಬೆಲೆ ಎನ್ನುವುದು ಸುದೀಪ್ ಮಾತು.
ಚಿತ್ರಮಂದಿರಗಳು ಕೊಡುವ ಲಾಭ ಮತ್ತು ಯಶಸ್ಸು ಕೊಡುವ ಖುಷಿಯ ಮುಂದೆ ಒಟಿಟಿ ಏನೇನೂ ಅಲ್ಲ. ಹಣ ಬರಬಹುದೇನೋ.. ಆದರೆ ಥಿಯೇಟರ್‍ಗಳು ಕೊಡುವ ಶಕ್ತಿಯೇ ಬೇರೆ ಎಂದಿದ್ದಾರಂತೆ ರಾಜಮೌಳಿ.
ಟೋಟಲ್ ತಾತ್ಪರ್ಯ ಇಷ್ಟೆ. ಒಟಿಟಿಗಳು ಬೋನಸ್ಸೇ ಹೊರತು.. ಬಾಕ್ಸಾಫೀಸ್ ಅಲ್ಲ. ಥಿಯೇಟರುಗಳು ಊಟವಾದರೆ, ಒಟಿಟಿ ಉಪ್ಪಿನಕಾಯಿ.