ಕಪೂರ್ ಕುಟುಂಬ ಬಾಲಿವುಡ್‍ಗೆ ತಲೆಮಾರಿಗೊಂದು ಸ್ಟಾರ್ ಕೊಟ್ಟಿದೆ. ಬಾಲಿವುಡ್ ವರ್ಚಸ್ಸನ್ನೇ ಬದಲಿಸಿದವರು ರಾಜ್ ಕಪೂರ್. ಅವರ ಮಗನೇ ಈ ರಿಷಿ ಕಪೂರ್. ಸುಮ್ಮನೆ ಇವರ ಕುಟುಂಬದ ಹೆಸರುಗಳನ್ನೊಮ್ಮೆ ಹೇಳಿಕೊಳ್ಳುತ್ತಾ ಹೋದರೆ, ಅಲ್ಲಿ ಬಾಲಿವುಡ್ ಇತಿಹಾಸವೇ ತೆರೆದುಕೊಳ್ಳುತ್ತೆ.
ಪೃಥ್ವಿರಾಜ್ ಕಪೂರ್, ರಾಜ್ ಕಪೂರ್, ರಣಧೀರ್ ಕಪೂರ್, ಸುರೀಂದರ್ ಕಪೂರ್, ಶಮ್ಮಿ ಕಪೂರ್, ಶಶಿ ಕಪೂರ್, ಬೋನಿ ಕಪೂರ್, ಅನಿಲ್ ಕಪೂರ್, ಸಂಜಯ್ ಕಪೂರ್, ಕರಣ್ ಕಪೂರ್, ಕುನಾಲ್ ಕಪೂರ್, ಆದಿತ್ಯ ರಾಜ್ ಕಪೂರ್, ಅರ್ಜುನ್ ಕಪೂರ್, ಜಾಹ್ನವಿ ಕಪೂರ್, ಸೋನಂ ಕಪೂರ್, ಕರಿಷ್ಮಾ ಕಪೂರ್, ಕರೀನಾ ಕಪೂರ್, ರಣ್‍ಬೀರ್ ಕಪೂರ್.. ಈಹೀಗೆ ಬೆಳೆಯುತ್ತಲೇ ಹೋಗುತ್ತೆ.. ಏಕೆಂದರೆ ಇದು 5 ತಲೆಮಾರಿನ ಕಥೆ...
ಇವರಲ್ಲಿ ರಿಷಿ ಕಪೂರ್ ರಾಜ್ ಕಪೂರ್ ಅವರ 2ನೇ ಮಗ. ಬಾಲಿವುಡ್ ಕಥೆ ಬಿಡಿ, ಇವರು ಕನ್ನಡದಲ್ಲಿ ನಟಿಸಿಲ್ಲದೇ ಇರಬಹುದು. ಆದರೆ ಕನ್ನಡದ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ರಿಷಿ ಕಪೂರ್‍ಗೆ ನಿರ್ದೇಶನ ಮಾಡಿದ್ದರು.
ಕನ್ನಡದ ನಾಗರಹಾವು ಹಿಂದಿಗೆ ರಿಮೇಕ್ ಆಗಿತ್ತು. ಕನ್ನಡದಲ್ಲಿ ವಿಷ್ಣುವರ್ಧನ್ ಮಾಡಿದ್ದ ರಾಮಾಚಾರಿ ಪಾತ್ರವನ್ನು ಹಿಂದಿಯಲ್ಲಿ ರಿಷಿ ಕಪೂರ್ ಮಾಡಿದ್ದರು. ಹಿಂದಿಯ ಜೆಹರೀಲಾ ಇನ್ಸಾನ್‍ನಲ್ಲಿ ನಮ್ಮ ಜಲೀಲ ಅಂಬಿ, ಅಲ್ಲಿಯೂ ಜಲೀಲನಾಗಿದ್ದರು. ಪುಟ್ಟಣ್ಣ ಕಣಗಾಲರೇ ಡೈರೆಕ್ಟರ್. ಸಿನಿಮಾ ಹಿಟ್ ಆಗಲಿಲ್ಲ. ಆದರೆ, ರಿಷಿ ಕಪೂರ್ ಬೆಂಗಳೂರಿಗೆ ಬಂದಾಗಲೆಲ್ಲ ಪುಟ್ಟಣ್ಣರನ್ನು ಭೇಟಿ ಮಾಡುವುದನ್ನು ಮರೆಯುತ್ತಿರಲಿಲ್ಲ.
ಇದು ಇಷ್ಟೇ ಅಲ್ಲ, ಹಿಂದಿಯ ಕರ್ಜ ಕನ್ನಡದಲ್ಲಿ ಯುಗಪುರುಷ ಆಗಿತ್ತು. ಹಿಂದಿಗಿಂತ ಅದ್ಭುತವಾಗಿ ಬಂದಿದೆ ಎಂದು ರವಿಚಂದ್ರನ್‍ರನ್ನು ಹೊಗಳಿದ್ದರು ರಿಷಿ.
ಅಷ್ಟಕ್ಕೇ ನಿಲ್ಲಲ್ಲ ಕನ್ನಡದ ನಂಟು. ರಿಷಿ, ಕಮಲ್ ಹಾಸನ್ ಜೊತೆಯಾಗಿ ನಟಿಸಿದ್ದ ಸಾಗರ್, ಕನ್ನಡದಲ್ಲಿ ಸ್ನೇಹದ ಕಡಲಲ್ಲಿ ಹೆಸರಲ್ಲಿ ರೀಮೇಕ್ ಆಗಿತ್ತು. ಅರ್ಜುನ್ ಸರ್ಜಾ, ಮಾಲಾಶ್ರೀ ಮತ್ತು ಸುನಿಲ್ ನಟಿಸಿದ್ದರು. ಈಗ ಎಲ್ಲವೂ ನೆನಪು ಮಾತ್ರ...