ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಿದ್ದ ಸರ್ಕಾರ, ಕೆಲವೇ ತಿಂಗಳಲ್ಲಿ ಅದನ್ನು ವಾಪಸ್ ಪಡೆದುಕೊಂಡುಬಿಟ್ಟಿದೆ. ಮತ್ತೊಮ್ಮೆ ವೀಕೆಂಡ್ ಕಫ್ರ್ಯೂ ಮತ್ತು 50:50 ರೂಲ್ಸ್ ಘೋಷಿಸಿದೆ. ನೀವೆಲ್ಲರೂ ಪಾಲಿಸಿ, ಕೊರೊನಾ ಓಡಿಸಿ ಎನ್ನುತ್ತಿದೆ ಸರ್ಕಾರ. ಅಫ್‍ಕೋರ್ಸ್.. ರಾಜಕಾರಣಿಗಳ ಯಾವುದೇ ಸಭೆ ಸಮಾರಂಭಗಳಿಗೂ ಕೊರೊನಾ ಬರಲ್ಲ ಎನ್ನುವುದು ಬೇರೆ ಮಾತು.
ಇತ್ತೀಚೆಗಷ್ಟೇ ಉಸಿರು ಬಿಡುತ್ತಿದ್ದ ಚಿತ್ರರಂಗದಲ್ಲೀಗ ಮತ್ತೆ ಸಿನಿಮಾ ರಿಲೀಸ್ ಮಾಡಬೇಕಾ? ಬೇಡವಾ? 50:50 ಪ್ರೇಕ್ಷಕರಿದ್ದಾಗ ರಿಸ್ಕ್ ಬೇಕಾ? ಎಂಬ ಚಿಂತೆ ಶುರುವಾಗಿದೆ. ಈಗಾಗಲೇ ರಿಲೀಸ್ ಮಾಡಿಯೇ ತೀರುತ್ತೇವೆ ಎನ್ನುತ್ತಿದ್ದವರು ನಿಧಾನವಾಗಿ ಹೆಜ್ಜೆ ಹಿಂದಿಡುತ್ತಿದ್ದಾರೆ. ದೊಡ್ಡ ದೊಡ್ಡ ಚಿತ್ರಗಳೂ ಹಿಂದೆ ಸರಿಯುತ್ತಿವೆ.
ಏಕ್ ಲವ್ ಟ್ರೇಲರ್ ಮುಂದಕ್ಕೆ ಹೋಗಿದೆ. ತೆಲುಗಿನ ಪ್ಯಾನ್ ಇಂಡಿಯಾ ರಾಧೇ ಶ್ಯಾಮ್ ಧೈರ್ಯವನ್ನು ಪ್ರದರ್ಶಿಸಿ ಸೈಲೆಂಟ್ ಆಗಿದೆ. ಅದು ಸಂಕ್ರಾಂತಿಗೆ ರಿಲೀಸ್ ಇಲ್ಲ. ಆರ್‍ಆರ್‍ಆರ್ ಬೆನ್ನಲ್ಲೇ ತೆಲುಗಿನ ಕೆಲವು ದೊಡ್ಡ ನಟರ ಚಿತ್ರಗಳು ಬಾಕ್ಸ್‍ನಲ್ಲಿರೋದೇ ಸದ್ಯಕ್ಕೆ ಸೇಫು ಎನ್ನುತ್ತಿವೆ. ತಮಿಳಿನಲ್ಲೂ ಪರಿಸ್ಥಿತಿ ಭಿನ್ನವಾಗಿಯೇನೂ ಇಲ್ಲ. ಅಲ್ಲಿ ಅಜಿತ್ ಚಿತ್ರ ಸಂಕ್ರಾಂತಿಗೆ ರಿಲೀಸ್ ಎಂದೇನೋ ಘೋಷಿಸಿದೆ. ಆದರೆ... ಅದೂ ಕೂಡಾ ಯಾವಾಗ ಬೇಕಾದರೂ ನಿರ್ಧಾರ ಬದಲಿಸಬಹುದು.. ಚಿತ್ರರಂಗಕ್ಕೆ ಬರೆಯ ಮೇಲೆ ಬರೆ..
ಇದರಿಂದ ಹೊರೆ ಮತ್ತು ಬರೆ ಎರಡೂ ಬೀಳುವುದು ಜನರಿಗೇ ಹೊರತು, ಸರ್ಕಾರಕ್ಕಲ್ಲ. ಸರ್ಕಾರಕ್ಕೆ ಟ್ಯಾಕ್ಸ್ ನಿಧಾನವಾಗಬಹುದು, ಕಡಿಮೆಯಾಗಲ್ಲ. ಜನರಿಂದ ವಸೂಲಿಯಾಗುವ ದಂಡ ಇನ್ನೊಂದು ಬೋನಸ್. ದುಡಿಮೆಯೂ ಇಲ್ಲದೆ, ತೆರಿಗೆಯನ್ನೂ ಕಟ್ಟುತ್ತಾ, ಜೀವನ ಹೊರೆಯಬೇಕಾದ ಹೊಣೆ ಜನರದ್ದು. ಚಿತ್ರರಂಗದ ಪರಿಸ್ಥಿತಿಯಂತೂ ಇನ್ನೂ ಸಂಕಷ್ಟಕ್ಕೆ ಸಿಲುಕಿದೆ.