ಮತ್ತೊಮ್ಮೆ ಲಾಕ್ ಡೌನ್, ಕಠಿಣ ನಿರ್ಬಂಧ ಜಾರಿಯ ಗುಮ್ಮವನ್ನು ಸರ್ಕಾರ ಬಿಟ್ಟಿದೆ. ಜನರ ಕೈಲೇ ಎಲ್ಲವೂ ಇದೆ ಎನ್ನುವುದು ಸರ್ಕಾರದ ಎಚ್ಚರಿಕೆ. ಈಗಾಗಲೇ ಆಸ್ಪತ್ರೆಗಳ ಬುಕ್ಕಿಂಗು, ಔಷಧಿಗಳ ಬುಕ್ಕಿಂಗು ಶುರುವಾಗಿದೆ. ಆದರೆ.. ಸರ್ಕಾರ ಈ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾ?
ಸರ್ಕಾರ : ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಂಡು ಇರಬೇಕು
ಪ್ರಶ್ನೆ : ಇದು ಕೇವಲ ಜನರಿಗೆ ಮಾತ್ರನಾ? ರಾಮನಗರದಲ್ಲಿ ನಡೆದ ಸಭೆಗಳಲ್ಲಾಗಲೀ, ನಿಮ್ಮ ಎಲೆಕ್ಷನ್ ಪ್ರಚಾರದಲ್ಲಾಗಲೀ ಸರ್ಕಾರದ ಸಚಿವರು, ಮುಖ್ಯಮಂತ್ರಿಗಳೇ ಈ ರೂಲ್ಸ್ ಪಾಲಿಸುತ್ತಿಲ್ಲ. ಜನರ ಮೇಲೆ ಹೇರೋಕೆ ಸರ್ಕಾರಕ್ಕೆ ನೈತಿಕತೆ ಎಲ್ಲಿದೆ?
ಸರ್ಕಾರ : ಮತ್ತೆ ಲಾಕ್ ಡೌನ್ ಮಾಡಬೇಕಾಗಿ ಬರಬಹುದು.
ಪ್ರಶ್ನೆ : ಸರ್ಕಾರ ಜನರ ಕಷ್ಟಕ್ಕೆ ಸ್ಪಂದಿಸಲ್ಲ. ಜನ ಅವರ ಹೊಟ್ಟೆ ಬಟ್ಟೆಗೆ ಏನು ಮಾಡಬೇಕು? ಹೋಗಲಿ, ರೋಗ ಬಂದರೆ ಆಸ್ಪತ್ರೆ ಬಿಲ್ಲನ್ನೂ ಜನರೇ ಕಟ್ಟಬೇಕು. ಏನನ್ನೂ ಮಾಡೋಕೆ ಸಾಧ್ಯವಾಗದ ಸರ್ಕಾರಗಳಿಗೆ ಜನರನ್ನು ಮನೆಯಲ್ಲೇ ಇರಿ ಅನ್ನೋಕೆ ಯಾವ ಹಕ್ಕಿದೆ?
ಸರ್ಕಾರ : ರೋಗ ಮಿತಿಮೀರಿದರೆ ಲಾಕ್ ಡೌನ್ ಅನಿವಾರ್ಯ
ಪ್ರಶ್ನೆ : ರೋಗ ಹುಟ್ಟಿದ್ದು ಚೀನಾದಲ್ಲಿ. ಚೀನಾದವರೇ ಇಡೀ ದೇಶವನ್ನು ಲಾಕ್ ಡೌನ್ ಮಾಡಲಿಲ್ಲ. ಮಾಡಿದ್ದು ವುಹಾನ್‍ನಲ್ಲಿ ಮಾತ್ರ. ಜಗತ್ತಿನಲ್ಲಿರುವ ತಜ್ಞರೆಲ್ಲ ಮಾಸ್ಕ್, ಸ್ಯಾನಿಟೈಸರ್, ಲಾಕ್ ಡೌನ್ ಪರಿಹಾರ ಎಂದು ಹೇಳುತ್ತಾ ಹೋದರು. ಪರ್ಯಾಯ ಯೋಚಿಸೋಕೂ ಸಮಯ ಕೊಡಲಿಲ್ಲ. ಪರಿಹಾರ ಅಲ್ಲದ ಸೂತ್ರವನ್ನೇ ಹಿಡಿದುಕೊಂಡಿರುವ ತಜ್ಞರು, ಇನ್ನಾದರೂ ಹೊಸ ಮಾರ್ಗ ಹುಡುಕಬೇಕಲ್ಲವೇ? ತಜ್ಞರು ಎಂದು ಕರೆಸಿಕೊಳ್ಳುವವರು ಅದಕ್ಕೆ ಗೌರವವಾಗಿ ನಡೆದುಕೊಳ್ಳಬೇಕಲ್ಲವೇ?
ಸರ್ಕಾರ : ಒಮಿಕ್ರಾನ್ ಅಪಾಯಕಾರಿ ಹೌದೇ ಅಲ್ಲವೇ ಗೊತ್ತಿಲ್ಲ
ಪ್ರಶ್ನೆ : ಇದು ವಿಶ್ವಸಂಸ್ಥೆಗೂ ಗೊತ್ತಿಲ್ಲ. ಅಲ್ಲಿರುವ ತಜ್ಞರೇ ಒಬ್ಬೊಬ್ಬರು ಒಂದೊಂದು ಹೇಳುತ್ತಾರೆ. ಯಾರ ಮಾತು ನಂಬೋಣ.
ಸರ್ಕಾರ : ದಯವಿಟ್ಟು ವ್ಯಾಕ್ಸಿನ್ ಹಾಕಿಸಿಕೊಳ್ಳಿ
ಪ್ರಶ್ನೆ : ಇದೊಂದು ವಿಚಾರ ಓಕೆ. ಆದರೆ ಇಲ್ಲಿಯೂ ಪ್ರಶ್ನೆ ಇದೆ. ವ್ಯಾಕ್ಸಿನ್ ಹಾಕಿಸಿಕೊಂಡ ನಂತರವೂ ಲಾಕ್ ಡೌನ್ ಏಕೆ? ನಿಮ್ಮ ಔಷಧಿ ಮೇಲೆ ನಿಮಗೇ ನಂಬಿಕೆ ಇಲ್ಲವೇ? ಇಂತಹ ಡಬಲ್ ಸ್ಟಾಂಡರ್ಡ್ ನೀವೇ ಕೊಡುವ ವ್ಯಾಕ್ಸಿನ್ ಮೇಲೆ ಜನ ನಂಬಿಕೆ ಕಳೆದುಕೊಳ್ಳೋ ಹಾಗೆ ಮಾಡುವುದಿಲ್ಲವೇ?
ಒಟ್ಟಿನಲ್ಲಿ ಸರ್ಕಾರಗಳಿಗೆ, ಸಚಿವರಿಗೆ ಲಾಕ್ ಡೌನ್ ಬೇಕಿದೆ. ಸಾವಿರಗಟ್ಟಲೆ ಕೇಸ್ ಇದ್ದಾಗ ಲಾಕ್ ಡೌನ್ ಮಾಡಿ, ಲಕ್ಷಗಟ್ಟಲೆ ಕೇಸ್ ಇದ್ದಾಗ ಲಾಕ್ ಡೌನ್ ತೆರವು ಮಾಡಿದ ಸರ್ಕಾರಕ್ಕೆ ತಜ್ಞರು ಯಾರೋ.. ಸಂತ್ರಸ್ತರು ಯಾರೋ ಗೊತ್ತಾಗುತ್ತಿಲ್ಲ. ಜನ ಬೀದಿಗೆ ಬರುತ್ತಿದ್ದಾರೆ. ಕುಟುಂಬಗಳು ದಿಕ್ಕು ತಪ್ಪುತ್ತಿವೆ. ಚಳಿಗಾಲ ಇದ್ದಾಗ ಜ್ವರ, ತಲೆನೋವು, ಕೆಮ್ಮು, ನೆಗಡಿ ಸಾಮಾನ್ಯ. ಆರೋಗ್ಯವಂತರೂ ಹದ ತಪ್ಪುವ ಚಳಿಗಾಲ ಇದು. ಕೊರೊನಾದ ಲಕ್ಷಣಗಳೂ ಇವೇ.. ಇದನ್ನು ದೇಶಕ್ಕೆ ಅಂಟಿಕೊಂಡ ಕ್ಯಾನ್ಸರ್ ಏನೋ ಎಂಬಂತೆ ಬಿಂಬಿಸಿ ಜನರನ್ನು ಹೆದರಿಸುವುದೇಕೆ?