ಖ್ಯಾತ ಉದ್ಯಮಿ ದೇವೇಂದ್ರ ರೆಡ್ಡಿ, ಎ.ಪ್ರಕಾಶ್ ಅರ್ಪಿಸಿ, ಉಪ್ಪಿ ಎಂಟರ್‌ಟೈನರ್ಸ್ ಬ್ಯಾನರ್‌ನಲ್ಲಿ ಸಿಲ್ಕ್ ಮಂಜು ನಿರ್ಮಿಸುತ್ತಿರುವ ಹೊಸ ಚಿತ್ ಸೆಟ್ಟೇರಲು ಸಜ್ಜಾಗಿದೆ. ವಿನಾಯಕ ಕೋಡ್ಸರ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ದಿಗಂತ್ ಮತ್ತು ಐಂದ್ರಿತಾ ಮತ್ತೆ ಜೊತೆಯಾಗಿ ಕಾಣಿಸುತ್ತಿದ್ದಾರೆ. ಫೆ.27ರಂದು ಸಂಜೆ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಸರಳವಾಗಿ ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದ್ದು, ಮಾ. 14ರಿಂದ ಸಿಗಂದೂರು, ನಿಟ್ಟೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.
‘ಮಲೆನಾಡಿನ ಬದುಕನ್ನು ಬಿಂಬಿಸುವ ಚಿತ್ರದಲ್ಲಿ ಮೊದಲ ಸಲ ದಿಗಂತ್ ಅಡಿಕೆ ಬೆಳೆಗಾರನಾಗಿ, ಗೊಬ್ಬರದ ಅಂಗಡಿ ಮಾಲೀಕರಾಗಿ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂಪೂರ್ಣ ಹಾಸ್ಯಮಯ ಚಿತ್ರವಿದು. ನಮ್ಮೆಲ್ಲರ ಬದುಕಿಗೆ ಬೆಸೆದುಕೊಳ್ಳುವ ಸಹಜ ಕಥೆಯಾಗಿರುವುದರಿಂದ ಇಲ್ಲಿ ನಾಯಕ-ನಾಯಕಿ ಎಂಬ ಪರಿಕಲ್ಪನೆ ಇಲ್ಲ. ಆದಾಗ್ಯೂ ದಿಗಂತ್, ಐಂದ್ರಿತಾ, ಪುಟ್ಟಗೌರಿ ಖ್ಯಾತಿಯ ರಂಜನಿ ರಾಘವನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ' ಎನ್ನುತ್ತಾರೆ ನಿರ್ದೇಶಕ ವಿನಾಯಕ ಕೋಡ್ಸರ. ರವೀಂದ್ರ ಜೋಶಿ ಕಾರ್ಯಕಾರಿ ನಿರ್ಮಾಪಕರು. 25 ದಿನಗಳ ಕಾಲ ಮಲೆನಾಡು ಮತ್ತು ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಮಂಜುನಾಥ್ ಹೆಗಡೆ ಸೇರಿದಂತೆ ಹಲವಾರು ಖ್ಯಾತ ನಟರು, ಸ್ಥಳೀಯ ಕಲಾವಿದರು ಚಿತ್ರದಲ್ಲಿದ್ದಾರೆ.
ಪ್ರಜ್ವಲ್ ಪೈ ಸಂಗೀತ ನಿರ್ದೇಶನವಿದ್ದು ಚಿತ್ರದಲ್ಲಿ ಮೂರು ಹಾಡುಗಳಿವೆ. ನಂದಕಿಶೋರ್ ಛಾಯಾಗ್ರಹಣವಿದೆ. ವೇಣು ಹಸ್ರಾಳಿ ಚಿತ್ರಕಥೆ-ಸಂಭಾಷಣೆ ಬರೆದಿದ್ದಾರೆ. ವಿಶ್ವಜಿತ್ ರಾವ್ 2 ಹಾಡುಗಳನ್ನು ಬರೆದಿದ್ದಾರೆ. ಪತ್ರಕರ್ತರಾಗಿ, ಟಿವಿ-ಧಾರಾವಾಹಿ ಬರವಣಿಗೆ ಮೂಲಕ ಚಿರಪರಿಚಿತರಾಗಿರುವ ವಿನಾಯಕ ಕೋಡ್ಸರ ತಮ್ಮದೇ ಸ್ವಂತ ಕಥೆಯೊಂದಿಗೆ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿದ್ದಾರೆ.