ಚುಟು ಚುಟು ಅಂತೈತಿ.. ನನಗಾ ಚುಮು ಚುಮು ಆಗತೈತಿ.. ಹಾಡು ಬಂದು 2 ವರ್ಷವೇ ಆಯ್ತು. ಱಂಬೋ 2 ಚಿತ್ರದ ಈ ಹಾಡು0, ಸಿನಿಮಾಗೆ ಅತಿ ದೊಡ್ಡ ಪ್ರಚಾರವನ್ನೂ ಕೊಟ್ಟಿತ್ತು. ಸಿನಿಮಾ ಕೂಡಾ ಸೂಪರ್ ಹಿಟ್ ಆಗಿತ್ತು. ಅದಾದ ಮೇಲೆ ಹಾಡು ಯೂಟ್ಯೂಬ್ ಒಂದರಲ್ಲೇ 10 ಕೋಟಿ ವೀಕ್ಷಣೆ ದಾಟಿ ದಾಖಲೆಯನ್ನೂ ಬರೆದಿತ್ತು. ಈಗ ಆ ದಾಖಲೆಯನ್ನೇ ಸಂಭ್ರಮಿಸಿದೆ ಱಂಬೋ 2 ಟೀಂ.
ಚಿತ್ರರಂಗದಲ್ಲಿ ಸಿನಿಮಾ 50 ದಿನ, 100 ದಿನ, 25 ವಾರ ಓಡಿದರೆ ಸಂಭ್ರಮಿಸುತ್ತಾರೆ. ಇತ್ತೀಚೆಗೆ ಅದು 25 ದಿನಕ್ಕೂ ಸಂಭ್ರಮಿಸುವ ಹಂತಕ್ಕೆ ಬಂದಿದೆ. ಆದರೆ.. ಒಂದು ಹಾಡಿನ ದಾಖಲೆಯನ್ನು ಚಿತ್ರತಂಡದೊಂದಿಗೆ ಸಂಭ್ರಮಿಸಿದೆ ಆನಂದ್ ಆಡಿಯೋ.
ಅನಿಲ್‌ಕುಮಾರ್ ನಿರ್ದೇಶನ, ಅರ್ಜುನ್ ಜನ್ಯ ಸಂಗೀತವಿದ್ದ ಹಾಡನ್ನು ಶಿವು ಬೇರ್ಗಿ ಬರೆದಿದ್ದರು.
ಈ ಹಾಡು ಅತಿ ಹೆಚ್ಚು ಜನ ವೀಕ್ಷಿಸಿದ ದಕ್ಷಿಣ ಭಾರತದ ಸಿನಿಮಾ ಹಾಡುಗಳ ಪೈಕಿ ಟಾಪ್ 25 ಲಿಸ್ಟ್ನಲ್ಲಿದೆಯಂತೆ.
ಭೂಷಣ್ ನೃತ್ಯ ನಿರ್ದೇಶಿಸಿದ್ದ ಹಾಡಿಗೆ ಕ್ಯಾಮೆರಾ ಕೆಲಸ ಮಾಡಿದ್ದವರು ಸುಧಾಕರ್ ಎಸ್. ರಾಜ್. ಮೋಹನ್ ಬಿ. ಕೆರೆ ಕಲಾ ನಿರ್ದೇಶನವಿತ್ತು. ಹಾಡಿನಲ್ಲಿದ್ದ ಜಾನಪದದ ಸೊಗಡನ್ನು ಅಷ್ಟೇ ಸ್ಟೈಲಿಷ್ ಆಗಿ ಹಾಡಿದ್ದರು ಶಮಿತಾ ಮಲ್ನಾಡ್ ಮತ್ತು ರವೀಂದ್ರ ಸೊರಗಾವಿ. ಶರಣ್, ಅಶಿಕಾ ರಂಗನಾಥ್ ನರ್ತಿಸಿರುವ ಹಾಡು ಇಂದಿಗೂ ಸ್ಕೂಲು, ಕಾಲೇಜುಗಳ ವೇದಿಕೆಯಲ್ಲಿ ಟ್ರೆಂಡಿಂಗ್ನಲ್ಲಿದೆ. ಅಂದಹಾಗೆ.. ಸಂಭ್ರಮಾಚರಣೆ ವೇಳೆ ಆನಂದ್ ಆಡಿಯೋ 25ನೇ ವರ್ಷ ತುಂಬಿದ್ದನ್ನೂ ನೆನಪಿಸಿಕೊಂಡರು ಆನಂದ್ ಮತ್ತು ಶ್ಯಾಮ್. ಮಂಡಿಚಿಪ್ಪು ನೋವು ಮರೆತು ಕುಣಿದಿದ್ದನ್ನು ನೆನಪಿಸಿಕೊಂಡರು ಶರಣ್. ಅಶಿಕಾ ತೆಳ್ಳಗಾಗಿದ್ದರು. ಎಲ್ಲರ ಶ್ರಮಕ್ಕೆ ಪ್ರತಿಫಲ ಈಗ ಸಿಕ್ಕಿದೆ. ಹಾಡು ಹಿಟ್ ಆಗಲು ಕಾರಣಕರ್ತರಾದ ಎಲ್ಲರಿಗೂ ನಟ ಶ್ರೀಮುರಳಿ ನೆನಪಿನ ಕಾಣಿಕೆ ವಿತರಿಸಿ ಹಾರೈಸಿದ್ದು ವಿಶೇಷವಾಗಿತ್ತು.