ಅಮರ್. ಅಂಬರೀಷ್ ಪುತ್ರನ ಮೊತ್ತ ಮೊದಲ ಸಿನಿಮಾ. ರೆಬಲ್‍ಸ್ಟಾರ್ ಪುತ್ರನ ಸಿನಿಮಾ ನಿರ್ದೇಶನದ ಅದೃಷ್ಟ ಸಿಕ್ಕಿರುವುದು ನಾಗಶೇಖರ್‍ಗೆ. ನಾಗಶೇಖರ್, ಸಂಜು ಮತ್ತು ಗೀತಾ, ಮೈನಾದಂತಹ ಸೂಪರ್ ಹಿಟ್ ಸಿನಿಮಾ ಕೊಟ್ಟವರು. ಅಂಬರೀಷ್ ಪುತ್ರನ ಸಿನಿಮಾ ನಿರ್ದೇಶನದ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದೇ ಖುಷಿಯಾಗುತ್ತಾರೆ ನಾಗಶೇಖರ್. ಈ ಅದೃಷ್ಟ ಅವರಿಗೆ ಒಲಿದಿದ್ದು 2ನೇ ಬಾರಿ. ಮೊದಲ ಬಾರಿಗೆ ಅದು ಮಿಸ್ಸಾಗಿ ಹೋಗಿತ್ತು.
ನಾಗಶೇಖರ್‍ಗೆ ತೆಲುಗಿನ ರಾಜಶೇಖರ್ ಪುತ್ರಿಯ ಸಿನಿಮಾ ನಿರ್ದೇಶನದ ಆಫರ್ ಸಿಕ್ಕಿತ್ತು. ರಾಜಶೇಖರ್ ಹಾಗೂ ಅವರ ಮಗಳ ಜೊತೆ ಮಾತನಾಡಿ, ಕಥೆ ಸಿದ್ಧಪಡಿಸುತ್ತಿರುವಾಗ ಒಂದು ದಿನ ನಾಗಶೇಖರ್‍ಗೆ ಸಂದೇಶ್ ನಾಗರಾಜ್ ಫೋನ್ ಬಂತಂತೆ. ಅದೂ ರಾತ್ರಿ 12 ಗಂಟೆಗೆ. ನಾಗಶೇಖರ್ ಫೋನ್ ರಿಸೀವ್ ಮಾಡಲಿಲ್ಲ. ಬೆಳಗ್ಗೆ ಮಾಡ್ತೀನಿ ಅಂತಾ ಮೆಸೇಜ್ ಮಾಡಿದ್ದೆ. ಅಮರ್ ಚಿತ್ರಕ್ಕೆ ನೀವು ಡೈರೆಕ್ಟರ್. ನಾಳೆ ಬನ್ನಿ ಮಾತನಾಡೋಣ ಎಂದು ಮೆಸೇಜ್ ಬಂತು. ಹೈದರಾಬಾದ್‍ನಿಂದ ಬಂದಿಳಿದವನು, ಏರ್‍ಪೋರ್ಟ್‍ನಿಮದ ಸೀದಾ ಹೋಗಿದ್ದು ಸಂದೇಶ್ ನಾಗರಾಜ್ ಆಫೀಸ್‍ಗೆ. ಅಲ್ಲಿ ಹೋಗಿ ಬರಲಿಕ್ಕೆ ಹೇಳಿದ್ರಂತೆ ಅಂದ್ರೆ, ನಾನೇನು ಹೇಳಿಲ್ಲವಲ್ಲ ಎಂದರು. ಮತ್ತೊಬ್ಬ ನಿರ್ದೇಶಕರ ಹೆಸರು ಫಿಕ್ಸ್ ಆಗಿತ್ತು. ಹಣೆಬರಹ ಹಳಿದುಕೊಂಡು ವಾಪಸ್ ಹೋದೆ.
ಆದರೆ, ಹತ್ತಿಪ್ಪತ್ತು ದಿನದ ನಂತರ ಸಂದೇಶ್ ನಾಗರಾಜ್ ಮತ್ತೊಮ್ಮೆ ಫೋನ್ ಮಾಡಿದ್ರು. ಅಮರ್ ಅಂತಾ ಟೈಟಲ್. ಅದಕ್ಕೆ ತಕ್ಕಂತೆ ಕಥೆ ಬರೆಯಬೇಕು ಅಂದ್ರು. ನೀವೇ ಡೈರೆಕ್ಷನ್ ಮಾಡಬೇಕು ಅಂದ್ರು. ನೇರವಾಗಿ ಅಂಬರೀಷ್ ಅಣ್ಣನ ಮನೆಗೆ ಕರೆದುಕೊಂಡು ಹೋಗಿ, ಸುಮಲತಾ ಮೇಡಂ ಮುಂದೆ ಕೂರಿಸಿದ್ರು. ಒಳ್ಳೆ ಸಿನಿಮಾ ಮಾಡಲು ಹೇಳಿದ್ರು.
ಅದಾದ ಮೇಲೆ ರಾಜಶೇಖರ್ ಅವರಿಗೆ ಹೇಳಿದೆ. ಅಂಬರೀಷ್ ಮಗನ ಸಿನಿಮಾ ಅಂದೆ. ಅವರಿಬ್ಬರೂ ಫ್ರೆಂಡ್ಸ್. ಮೊದಲು ಆ ಸಿನಿಮಾ ಮಾಡು ಅಂದ್ರು. ಅವರು ಒಪ್ಪಿದ್ದು ನನ್ನ ಪುಣ್ಯ ಅಂತಾರೆ ರಾಜಶೇಖರ್.