ಆರ್.ಆರ್.ಆರ್. ಸಿನಿಮಾ ಕನ್ನಡದಲ್ಲೂ ಬರುತ್ತಿದೆ. ಈ ಚಿತ್ರಕ್ಕೆ ಕರ್ನಾಟಕದಲ್ಲಿ ತೆಲುಗರನ್ನೂ ಸೇರಿಸಿಕೊಂಡು ಈವೆಂಟ್ ಮಾಡಿದ್ದು ಬಿಟ್ಟರೆ ವಿಶೇಷ ಪ್ರಚಾರವನ್ನೇನೂ ಮಾಡಿಲ್ಲ ಚಿತ್ರತಂಡ. ಈ ಚಿತ್ರಕ್ಕೆ ರಾಮ್ ಚರಣ್ ಮತ್ತು ಎನ್‍ಟಿಆರ್ ಕನ್ನಡದಲ್ಲಿಯೇ ಡಬ್ ಮಾಡಿದ್ದಾರೆ ಅನ್ನೊದನ್ನು ಹೆಮ್ಮೆಯಿಂದ ಹೇಳಿಕೊಂಡಿತ್ತು ಚಿತ್ರತಂಡ. ಆದರೆ ಹಾಗೆ ಅವರೆಲ್ಲ ಡಬ್ ಮಾಡಿದ ಚಿತ್ರವನ್ನು ಕನ್ನಡದಲ್ಲಿ ರಿಲೀಸ್ ಮಾಡುತ್ತಿಲ್ಲ.
ಕರ್ನಾಟಕದಲ್ಲಿ ಆರ್.ಆರ್.ಆರ್. ಚಿತ್ರಕ್ಕೆ 2 ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಸಿಕ್ಕಿವೆ. ಇದರಲ್ಲಿ ಕನ್ನಡದ ಆರ್.ಆರ್.ಆರ್. ಪ್ರದರ್ಶನವಾಗುತ್ತಿರುವ ಸ್ಕ್ರಿನ್ ಸಂಖ್ಯೆ 20 ದಾಟುತ್ತಿಲ್ಲ. ವಿಶೇಷವೆಂದರೆ ಕರ್ನಾಟಕದಲ್ಲಿ ಈ ಚಿತ್ರಕ್ಕೆ ಕನ್ನಡ ವರ್ಷನ್‍ಗಿಂತ ತೆಲುಗು, ತಮಿಳು, ಹಿಂದಿ.. ಅಷ್ಟೇ ಏಕೆ ಮಲಯಾಳಂ ವರ್ಷನ್‍ಗಳಿಗೂ ಹೆಚ್ಚು ಸ್ಕ್ರೀನ್ ಇವೆ. ಇದಕ್ಕೆ ಪ್ರದರ್ಶಕರು ನೀಡೋ ಕಾರಣ ಕನ್ನಡಿಗರು ಕನ್ನಡದಲ್ಲಿ ಡಬ್ ಚಿತ್ರಗಳನ್ನು ನೋಡಲ್ಲ ಅನ್ನೋದು.
ಪ್ರದರ್ಶಕರ ವಾದವೇನು?
ಕನ್ನಡದಲ್ಲಿ ಡಬ್ ಆದ ಚಿತ್ರಗಳನ್ನು ಕನ್ನಡಿಗರು ನೋಡುತ್ತಿಲ್ಲ. ಮೂಲ ಭಾಷೆಯಲ್ಲೇ ನೋಡಲು ಇಷ್ಟಪಡುತ್ತಿದ್ದಾರೆ.
ಈ ಹಿಂದೆ ನಾವು ಅಜಿತ್, ವಿಜಯ್, ಸಲ್ಮಾನ್ ಖಾನ್ ಸೇರಿದಂತೆ ಸ್ಟಾರ್ ನಟರ ಡಬ್ಬಿಂಗ್ ಚಿತ್ರಗಳನ್ನು ಪ್ರದರ್ಶನ ಮಾಡಿ ನಷ್ಟ ಮಾಡಿಕೊಂಡಿದ್ದೇವೆ.
ಡಬ್ ಆದ ಚಿತ್ರಗಳನ್ನು ರಿಲೀಸ್ ಮಾಡಿದರೆ ಅದರಿಂದ ಚಿತ್ರಮಂದಿರದ ಬಾಡಿಗೆಯೂ ಹುಟ್ಟುತ್ತಿಲ್ಲ.
ಕೆ.ವಿ.ಎನ್. ಪ್ರೊಡಕ್ಷನ್ಸ್ ವಾದವೇನು?
ನಾವು ಇದನ್ನು ಕನ್ನಡದಲ್ಲಿಯೇ ರಿಲೀಸ್ ಮಾಡೋಕೆ ಚಿತ್ರಮಂದಿರಗಳವರ ಮನವೊಲಿಸುತ್ತಿದ್ದೇವೆ. ಎಷ್ಟು ಸ್ಕ್ರೀನ್/ಥಿಯೇಟರುಗಳಲ್ಲಿ ರಿಲೀಸ್ ಮಾಡುತ್ತೇವೆ ಅನೋದನ್ನು ಶೀಘ್ರದಲ್ಲೇ ಹೇಳ್ತೇವೆ.
ವಿಚಿತ್ರವೆಂದರೆ ಸಿನಿಮಾ ನಾಳೆಯೇ ರಿಲೀಸ್. ಇನ್ನೂವರೆಗೆ ಒಂದು ಖಚಿತ ನಿರ್ಧಾರಕ್ಕೆ ಬಂದಿಲ್ಲ. ಆರ್.ಆರ್.ಆರ್. ಕನ್ನಡದಲ್ಲಿ ಬರುತ್ತಿದೆ ಎಂದ ಮೇಲೆ ಅದಕ್ಕೆ ತಕ್ಕಂತೆ ಪ್ರಚಾರವನ್ನಾದರೂ ಮಾಡಬೇಕಿತ್ತು. ಆದರೆ ಈವೆಂಟ್ ಬಿಟ್ಟರೆ ಕನ್ನಡ ವರ್ಷನ್‍ನ ಆರ್.ಆರ್.ಆರ್. ಬಗ್ಗೆ ಪ್ರಚಾರ ಮಾಡುವ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಚಿತ್ರಕ್ಕೆ ರಾಜಮೌಳಿ ಸಿನಿಮಾ ಎಂಬ ಹೈಪ್ ಇದ್ದರೆ ಸಾಕು ಎಂಬ ನಿರ್ಧಾರಕ್ಕೆ ಬಂದಂತಿದೆ. ಈಗಲೂ ಆರ್.ಆರ್.ಆರ್. ಬಗ್ಗೆ ಪ್ರೇಕ್ಷಕರಿಗೆ ಇರುವ ಕುತೂಹಲ, ರಾಷ್ಟ್ರಮಟ್ಟದಲ್ಲಿ ಸಿಕ್ಕಿರುವ ಹೈಪ್‍ನಿಂದಲೇ ಪ್ರಚಾರ ಹೊರತು, ಕನ್ನಡದ ಆರ್.ಆರ್.ಆರ್. ಬಗ್ಗೆ ವಿಶೇಷ ಪ್ರಚಾರವನ್ನೇ ಮಾಡಿಲ್ಲ. ಕನ್ನಡಿಗರು ಕನ್ನಡದಲ್ಲಿಯೇ ನೋಡಬೇಕು ಎಂದರೆ ಹೇಗೆ?