` rajashekar, - chitraloka.com | Kannada Movie News, Reviews | Image

rajashekar,

  • ಚಿರಂಜೀವಿ ರಕ್ತನಿಧಿ ವಿರುದ್ಧ ಟೀಕೆ : ನಟ ರಾಜಶೇಖರ್ ದಂಪತಿಗೆ ಜೈಲು ಶಿಕ್ಷೆ

    ಚಿರಂಜೀವಿ ರಕ್ತನಿಧಿ ವಿರುದ್ಧ ಟೀಕೆ : ನಟ ರಾಜಶೇಖರ್ ದಂಪತಿಗೆ ಜೈಲು ಶಿಕ್ಷೆ

    ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರ ಬ್ಲಡ್ ಬ್ಯಾಂಕ್ ಸೇವೆ ಅತೀ ದೊಡ್ಡ ಬ್ಲಡ್ ಬ್ಯಾಂಕ್ ಆಗಿದೆ. ಅದು ಚಿರಂಜೀವಿ ಅಭಿಮಾನಿಗಳಿಂದಲೇ ಶುರುವಾಗಿ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ. ಇತ್ತ ನಟ ರಾಜಶೇಖರ್ ಕೂಡಾ ಸಣ್ಣ ನಟರಲ್ಲ. ಆದರೆ ರಾಜಶೇಖರ್ ಮತ್ತು ಅವರ ಪತ್ನಿ ನಟಿಯೂ ಆಗಿರುವ ಜೀವಿತಾ ಅವರಿಗೂ ಹಾವು ಮುಂಗುಸಿ ಸಂಬಂಧ. ರಾಜಶೇಖರ್, ರಾಜಕೀಯದಲ್ಲೂ ಆಕ್ಟಿವ್ ಆಗಿದ್ದಾರೆ.  2011ರಲ್ಲಿ ಚಿರಂಜೀವಿ ರಾಜಕೀಯದಲ್ಲಿದ್ದರು. ಆಗ ರಾಜಶೇಖರ್ ಮಾಡಿದ್ದ ಹೇಳಿಕೆ, ಈಗ ಜೈಲು ಶಿಕ್ಷೆಯಾಗುವಂತೆ ಮಾಡಿದೆ.

    ಚಿರಂಜೀವಿ ಅವರ ರಕ್ತ ನಿಧಿ ಕೇಂದ್ರದಲ್ಲಿ ರಕ್ತವನ್ನು ಪಡೆದುಕೊಂಡು, ಅದನ್ನು ಬ್ಲಾಕ್ ಮಾರ್ಕೆಟ್ನಲ್ಲಿ ಮಾರಾಟ ಮಾಡಲಾಗುತ್ತಿದೆ. ಚಿರಂಜೀವಿ ಅವರ ರಕ್ತ ನಿಧಿಯಲ್ಲಿ ಸಂಗ್ರಹವಾಗುವ ರಕ್ತವನ್ನು ನಿರ್ಮಾಪಕ ಅಲ್ಲು ಅರವಿಂದ್ ಅಕ್ರಮವಾಗಿ ಬ್ಲಾಕ್ ಮಾರ್ಕೆಟ್ನಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ರಾಜಶೇಖರ್ ಮತ್ತು ಜೀವಿತಾ ರಾಜಶೇಖರ್ ಹೇಳಿಕೆ ನೀಡಿದ್ದರು. ಆರೋಪವನ್ನು ತಳ್ಳಿ ಹಾಕಿದ್ದ ಅಲ್ಲು ಅರವಿಂದ್, ಇದೆಲ್ಲವೂ ಶುದ್ಧ ಸುಳ್ಳು, ಇದು ರಾಜಕೀಯ ಪ್ರೇರಿತ ಹೇಳಿಕೆ ಎಂದು ಅಲ್ಲಗಳೆದಿದ್ದರು. ರಾಜಶೇಖರ್ ದಂಪತಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇದೀಗ ರಾಜಶೇಖರ್ ಮತ್ತು ಜೀವಿತಾ ಅವರಿಗೆ 1 ವರ್ಷ ಜೈಲು ಶಿಕ್ಷೆ ಮತ್ತು ಮಾನಹಾನಿ ಹೇಳಿಕೆ ನೀಡಿದ್ದಕ್ಕಾಗಿ 5 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಲಾಗಿದೆ.

    ರಾಜಶೇಖರ್ ದಂಪತಿ ಹೈಕೋರ್ಟಿಗೆ ಮೇಲ್ಮನವಿ ಹೋಗಿದ್ದು, ಜಾಮೀನಿಗೆ ಅರ್ಜಿ ಹಾಕಿದ್ದಾರೆ. 2003ರಲ್ಲಿ ಚಿರಂಜೀವಿ ಬ್ಲಡ್ ಬ್ಯಾಂಕ್ ಸ್ಥಾಪನೆ ಮಾಡಿದ್ದು, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ದೊಡ್ಡ ಮಟ್ಟದ ನೆಟ್`ವರ್ಕ್ ಹೊಂದಿದೆ. ಚಿರಂಜೀವಿ ವಿರುದ್ಧ ನಟ ರಾಜಶೇಖರ್ ಈ ರೀತಿ ಆರೋಪ ಮಾಡುತ್ತಿರುವುದು ಇದೇ ಮೊದಲಲ್ಲ. ಯಾವುದೆ ವೇದಿಕೆಯಲ್ಲಿ ಜಾಗ ಸಿಕ್ಕರೂ, ರಾಜಶೇಖರ್ ಚಿರಂಜೀವಿ ಫ್ಯಾಮಿಲಿ ವಿರುದ್ಧ ಮುಗಿಬೀಳುತ್ತಾರೆ.

  • ಚಿರಂಜೀವಿ, ರಾಜಶೇಖರ್ ವೇದಿಕೆಯಲ್ಲೇ ಮಾತಿನ ಚಕಮಕಿ : ಕಾರಣ ಕನ್ನಡ ಕಲಾವಿದರ ಭವನ

    Tollywood Stars Clash Regarding Movie Artist Association Building

    ಮೆಗಾಸ್ಟಾರ್ ಚಿರಂಜೀವಿ, ತೆಲುಗು ಚಿತ್ರರಂಗದ ಸೂಪರ್ ಸ್ಟಾರ್. ರಾಜಶೇಖರ್ ಕೂಡಾ ತೆಲುಗು ಇಂಡಸ್ಟ್ರಿಯ ಸ್ಟಾರ್ ನಟ. ಇವರಿಬ್ಬರ ಮಧ್ಯೆ ಮಾ ವೇದಿಕೆಯಲ್ಲಿ ದೊಡ್ಡ ಗಲಾಟೆಯೇ ನಡೆದು ಹೋಗಿದೆ. ಮಾ ಎಂದರೆ, ಕರ್ನಾಟಕದಲ್ಲಿ ಕನ್ನಡ ಚಲನಚಿತ್ರ ಕಲಾವಿದರ ಸಂಘ ಇದೆಯಲ್ಲ.. ಹಾಗೆ. ತೆಲುಗು ಚಿತ್ರರಂಗದ ಕಲಾವಿದರ ಸಂಘಟನೆ. ಈ ಇಬ್ಬರು ಸ್ಟಾರ್ಗಳ ಗಲಾಟೆಗೆ ಕಾರಣವಾಗಿದ್ದು ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಕಟ್ಟಡ ಎಂದರೆ ರಾಜ್ಕುಮಾರ್ ಭವನ ಎಂದರೆ ನಂಬಲೇಬೇಕು.

    ಆಗಿದ್ದು ಇಷ್ಟು, ಮಾ ಸಂಘಟನೆಯ ಡೈರಿ ಬಿಡುಗಡೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಚಿರಂಜೀವಿ, ಡಾ.ರಾಜ್ಕುಮಾರ್ ಭವನದ ಬಗ್ಗೆ ಪ್ರಸ್ತಾಪಿಸಿದ್ದಾರೆ. ನಾವೂ ಕೂಡಾ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ ಕಟ್ಟಿರುವ ಕಟ್ಟಡದ ಮಾದರಿಯಲ್ಲಿ ಒಂದು ಭವ್ಯ ಕಟ್ಟಡ ಕಟ್ಟೋಣ. ಮಾ ಸಂಘದಲ್ಲಿನ ಸಣ್ಣ ಪುಟ್ಟ ಸಮಸ್ಯೆಗಳನ್ನು ಬದಿಗಿಟ್ಟು, ಕರ್ನಾಟಕ ಚಲನಚಿತ್ರ ಕಲಾವಿದರಂತೆ ಬೆಳೆಯೋಣ ಎಂದಿದ್ದಾರೆ.

    ಇಷ್ಟು ಹೊತ್ತಿಗೆ ಮಾ ಸಂಘಟನೆಯ ಉಪಾಧ್ಯಕ್ಷ ನಟ ಡಾ.ರಾಜಶೇಖರ್ ಬಂದು ಚಿರಂಜೀವಿ ಕೈಲಿದ್ದ ಮೈಕ್ ಕಿತ್ತುಕೊಂಡು ಸಂಘಟನೆಯಲ್ಲಿರುವ ಸಮಸ್ಯೆ, ತಮ್ಮ ವೈಯಕ್ತಿಕ ಸಮಸ್ಯೆ, ಕಲಾವಿದರ ನಡುವಿನ ವೈಮನಸ್ಯಗಳ ಬಗ್ಗೆಯೆಲ್ಲ ಮಾತನಾಡಲು ಶುರು ಮಾಡಿದ್ದಾರೆ. ಚಿರಂಜೀವಿ, ಕೃಷ್ಣಂ ರಾಜು, ಮೋಹನ್ ಬಾಬು, ಜಯಸುಧಾ ಸೇರಿದಂತೆ ಹಲವರು ರಾಜಶೇಖರ್ ಅವರನ್ನು ಸಮಾಧಾನಿಸಲು ಯತ್ನಿಸಿದರೂ, ರಾಜಶೇಖರ್ ಮಾತು ನಿಲ್ಲಿಸಿಲ್ಲ. ಟೀಕೆಗಳನ್ನೂ ನಿಲ್ಲಿಸಿಲ್ಲ. ಇದು ಚಿರಂಜೀವಿಯವರನ್ನು ಕೆರಳಿಸಿಬಿಟ್ಟಿದೆ.

    ಎಲ್ಲ ಮುಗಿದ ಮೇಲೆ ರಾಜಶೇಖರ್ ವರ್ತನೆ ಸರಿಯಿಲ್ಲ, ಅವರ ವಿರುದ್ಧ ಮಾ ಸಮಘಟನೆ ಕ್ರಮ ತೆಗೆದುಕೊಳ್ಳಲೇಬೇಕು ಎಂದು ಆಗ್ರಹಿಸಿದ್ದಾರೆ ಚಿರಂಜೀವಿ. ರಾಜಶೇಖರ್ ಅವರನ್ನು ಮಾ ಸಂಘಟನೆ ಉಪಾಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಲಾಗಿದೆ. ಇದು ಟಾಲಿವುಡ್ ಸುದ್ದಿ. ಸದ್ಯಕ್ಕೆ ಟಾಲಿವುಡ್ ಈ ವಿಚಾರಕ್ಕೆ ಇಬ್ಭಾಗವಾಗಿದೆ.