ಕಿಚ್ಚ ಸುದೀಪ ತಮ್ಮ ಟ್ವಿಟರ್ ಖಾತೆಯಲ್ಲಿ "ಮೋಕ್ಷ" ಚಿತ್ರದ ಟ್ರೇಲರ್ ಗೆ ಶುಭಾಶಯ ಕೋರಿ, ಪ್ರೋತ್ಸಾಹ ನೀಡಿದ್ದಾರೆ.
ಚಿತ್ರದ ಟ್ರೇಲರ್ ಇಂಟ್ರಸ್ಟಿಂಗ್ ಆಗಿ ಮೂಡಿ ಬಂದಿದ್ದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಕಳೆದ ವರ್ಷ ಟೀಸರ್ ಬಿಡುಗಡೆ ಮಾಡಿ ಚಿತ್ರದ ಬಗ್ಗೆ ಗಮನ ಸೆಳೆದಿದ್ದ `ಮೋಕ್ಷ’ ಚಿತ್ರತಂಡ ಇದೀಗ ಕುತೂಹಲ ಭರಿತ ಟ್ರೇಲರ್ ಮೂಲಕ ಎಲ್ಲರ ಚಿತ್ತ ಸೆಳೆದಿದೆ. ಸೈಕಲಾಜಿಕಲ್ ಸಸ್ಪೆನ್ಸ್, ಥ್ರಿಲ್ಲರ್ ಕಥಾನಕ ಹೊಂದಿರುವ ಈ ಸಿನಿಮಾವನ್ನು ಸಮರ್ಥ್ ನಾಯಕ್ ನಿರ್ದೇಶನ ಮಾಡಿದ್ದಾರೆ. ಐಟಿ ಕ್ಷೇತ್ರದ ಸಮರ್ಥ್ ನಾಯಕ್ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದ್ದು ತಾವೇ ಕಥೆ ಬರೆದು ನಿರ್ದೇಶನ ಮಾಡಿದ್ದು, ತಾಂತ್ರಿಕವಾಗಿಯೂ ಚೆಂದವಾಗಿ ಮೂಡಿ ಬಂದಿರುವ `ಮೋಕ್ಷ’ ಸಿನಿಮಾ ಏಪ್ರಿಲ್ 16ರಂದು ಬಿಡುಗಡೆಯಾಗುತ್ತಿದೆ.
ಕನ್ನಡದಲ್ಲಿ ಸಾಕಷ್ಟು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳು ಬಂದಿವೆ. ಆದರೆ ವಿಭಿನ್ನ ಕಥೆ ಒಳಗೊಂಡಿರುವ "ಮೋಕ್ಷ" ಚಿತ್ರದ ಟ್ರೇಲರ್ ಡಿ ಬೀಟ್ಸ್ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಿದೆ.
ಎಸ್ ಆರ್ ವಿ ಸಭಾಂಗಣದಲ್ಲಿ ನಡೆದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕ ಸಮರ್ಥ್ ನಾಯಕ್, ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ನಮ್ಮ ಚಿತ್ರ ತಾಂತ್ರಿಕವಾಗಿ ಅದ್ದೂರಿತನದಿಂದ ಮೂಡಿಬಂದಿದೆ. ಅದಕ್ಕೆ ಕಾರಣ ನಮ್ಮ ಚಿತ್ರದ ತಂತ್ರಜ್ಞರು. ಟ್ರೇಲರ್ ಇಂದು ಬಿಡುಗಡೆಯಾಗಿದ್ದು, ಚಿತ್ರರಂಗದ ಗಣ್ಯರು ಹಾಗೂ ನೋಡುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಏಪ್ರಿಲ್ 16 ಮೋಕ್ಷ ಕರ್ನಾಟಕದಾದ್ಯಂತ ಬಿಡುಗಡೆಯಾಗುತ್ತಿದೆ. ಕನ್ನಡ ಸಿನಿರಸಿಕರು ನಮ್ಮ ಚಿತ್ರ ವೀಕ್ಷಿಸಿ, ಪ್ರೋತ್ಸಾಹಿಸಿ ಎಂದರು. ಸಮರ್ಥ್ ನಾಯಕ್ ಈ ಚಿತ್ರದ ನಿರ್ಮಾಪಕರೂ ಹೌದು.
ಬಾಲಿವುಡ್ ನಲ್ಲಿ ಗುರುತಿಸಿಕೊಂಡಿರುವ ನಾಯಕ ಮೋಹನ್ ಧನರಾಜ್ ಅವರಿಗೆ ಇದು ಕನ್ನಡದಲ್ಲಿ ಚೊಚ್ಚಲ ಚಿತ್ರ. ಸಸ್ಪೆನ್ಸ್ ಚಿತ್ರವಾಗಿರುವುದರಿಂದ ಚಿತ್ರ ನೋಡಿದಮೇಲೆ ಕಥೆ ಏನು? ಎಂದು ತಿಳಿಯುವುದು. ನಮ್ಮ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು ಮೋಹನ್ ಧನರಾಜ್.
ನಾಯಕಿಯಾಗಿ ಕಾಣಿಸಿಕೊಂಡಿರುವ ಆರಾಧ್ಯ ಲಕ್ಷ್ಮಣ್ ಅವರು ತಮ್ಮ ಪಾತ್ರದ ಬಗ್ಗೆ ಮೆಚ್ಚುಗೆ ಮಾತುಗಳಾಡಿದರು.
ಈಗಾಗಲೇ ಕೆಲವು ಚಿತ್ರಗಳಲ್ಲಿ ಅಭಿನಯಿಸಿರುವ, ಮೋಕ್ಷ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ತಾರಕ್ ಪೊನ್ನಪ್ಪ, ಚಿತ್ರವನ್ನು ಕರುನಾಡ ಹಾಗೂ ಗೋವಾದ ಸುಂದರಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ಹೇಳುತ್ತಾ, ಈ ಚಿತ್ರದಲ್ಲಿ ಮಾಸ್ಕ್ ಮ್ಯಾನ್ ಎಂಬ ಪಾತ್ರವೊಂದಿದೆ. ಮಾಸ್ಕ್ ಮ್ಯಾನ್ ನಿಂದ ನಾಯಕ, ನಾಯಕಿ ಬಹಳ ತೊಂದರೆ ಅನುಭವಿಸುತ್ತಿರುತ್ತಾರೆ.
ಈ ವಿಷಯ ತಿಳಿದು ಪೊಲೀಸ್ ಅಧಿಕಾರಿ ಪಾತ್ರಧಾರಿಯಾದ ನಾನು ಏನು ಮಾಡುತ್ತೇನೆ ಎಂಬುದನ್ನು ಚಿತ್ರದಲ್ಲಿ ವೀಕ್ಷಿಸಿ ಎಂದರು.
ಛಾಯಾಗ್ರಾಹಕರ ಪರವಾಗಿ ಜೋಮ್ ಜೋಸಫ್ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಜಯಂತ್ ಕಾಯ್ಕಿಣಿ, ಕುಮಾರ್ ದತ್ ಅವರು ಬರೆದಿರುವ ಎರಡು ಹಾಡುಗಳಿಗೆ ಕಿಶನ್ ಮೋಹನ್ ಹಾಗೂ ಸಚಿನ್ ಬಾಲು ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ಕಿಶನ್ ಮೋಹನ್ ಅವರದು.
ಗುರುಪ್ರಶಾಂತ್ ರೈ, ಜೋಮ್ ಜೋಸಫ್, ಕಿರಣ್ ಹಂಪಾಪುರ ಛಾಯಾಗ್ರಹಣ ಹಾಗೂ ವರುಣ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ.
ಮೋಹನ್ ಧನರಾಜ್ ಮತ್ತು ಆರಾಧ್ಯ ಲಕ್ಷ್ಮಣ್ ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ತಾರಕ್ ಪೊನ್ನಪ್ಪ, ಭೂಮಿ ಅಜ್ಞಾನಿ, ಪ್ರಶಾಂತ್ ನಟನ ಮುಂತಾದ ವರು ಚಿತ್ರದ ತಾರಾಬಳಗದಲ್ಲಿದ್ದಾರೆ.