ಕಿಚ್ಚ ಸುದೀಪ್ ನಟರಷ್ಟೇ ಅಲ್ಲ, ಮಾತುಗಾರರೂ ಕೂಡಾ. ಅವರು ಆಡಿದ ಮಾತುಗಳು ಕೆಲವೊಮ್ಮೆ ವಿವಾದವೂ ಆಗುತ್ತವೆ. ಆದರೆ ಅವುಗಳನ್ನು ಬ್ಯಾಲೆನ್ಸ್ ಮಾಡುವುದೂ ಗೊತ್ತು. ಸುದೀಪ್ ಮತ್ತು ಅಜಯ್ ದೇವಗನ್ ನಡುವೆ ನಡೆದ ಲಾಂಗ್ವೇಜ್ ವಾರ್ ನೆನಪಿದೆ ತಾನೇ.. ಅದನ್ನು ನೆನಪಿಟ್ಟುಕೊಂಡೇ ಇತ್ತೀಚೆಗೆ ಮೀಡಿಯಾದಲ್ಲಿ ಒಂದು ಪ್ರಶ್ನೆ ಎದುರಾಯಿತು. ಹಿಂದಿ ರಾಷ್ಟ್ರೀಯ ಭಾಷೆ ಎಂದು ಅಜಯ್ ದೇವಗನ್ ಮಾಡಿದ್ದ ಟ್ವೀಟ್ ಸೃಷ್ಟಿಸಿದ್ದ ರಂಪ ರಗಳೆಯನ್ನು ಜನ ಮರೆತಿಲ್ಲ. ಹೀಗಾಗಿಯೇ ಕೆಲವು ಪ್ರಶ್ನೆಗಳು ಸುದೀಪ್ ಅವರಿಗೆ ಎದುರಾದವು.
ನೀವು ಪಠಾಣ್ ಚಿತ್ರವನ್ನು ನೋಡಿದ್ದೀರಾ? ಇದು ಸುದೀಪ್ ಅವರಿಗೆ ಎದುರಾದ ಪ್ರಶ್ನೆ. ಇಲ್ಲ, ನೋಡಿಲ್ಲ. ನೋಡುತ್ತೇನೆ ಎಂದ ಸುದೀಪ್, ನಾನು ಇತ್ತೀಚೆಗೆ ಕನ್ನಡ ಚಿತ್ರಗಳನ್ನು ನೋಡುವಲ್ಲೇ ಬ್ಯುಸಿಯಾಗಿದ್ದೆ ಎಂದರು. ಚಿತ್ರಗಳ ಪಟ್ಟಿ ಇನ್ನೂ ದೊಡ್ಡದಿದೆ. ಅವನ್ನೆಲ್ಲ ಮುಗಿಸಿ ನೋಡುತ್ತೇನೆ ಎಂದರು.
ನಿಮ್ಮ ಪ್ರಕಾರ ಬಿಗ್ಗೆಸ್ಟ್ ಸ್ಟಾರ್ ಯಾರು ಎಂಬ ಪ್ರಶ್ನೆ ಎದುರಾಯ್ತು. ಸುದೀಪ್ ಕೊಟ್ಟ ಉತ್ತರ ನಾನೇ..
ಯಾರ ಹೆಸರು ಹೇಳಿದರೂ ವಾರ್ ಶುರುವಾಗುತ್ತೆ. ನನಗೆ ನಾನೇ ದೊಡ್ಡ ಸ್ಟಾರ್ ಎಂದುಕೊಳ್ಳೋದ್ರಲ್ಲಿ ತಪ್ಪೇನಿದೆ. ಹಾಗಂತ ಬೇರೆಯವರನ್ನು ಕೆಟ್ಟದಾಗಿಯೂ ಬಿಂಬಿಸಲಿಲ್ಲ. ನನ್ನ ಜೀವನಕ್ಕೆ ನಾನೇ ಸ್ಟಾರ್. ಹಾಗಂತ ಬೇರೆಯವರ ಬಗ್ಗೆ ಗೌರವ ಇದೆ ಎಂದರು ಸುದೀಪ್.
ಫೇವರಿಟ್ ನಟಿ ಯಾರು? ಯಾರ ಜೊತೆ ನಟಿಸೋಕೆ ಇಷ್ಟ ಪಡ್ತೀರಿ ಎಂಬ ಪ್ರಶ್ನೆಗೆ ಸುದೀಪ್ ಹೇಳಿದ ಉತ್ತರ ಕಾಜೊಲ್. ನನಗೆ ಕಾಜೊಲ್ ಎಂದರೆ ಇಷ್ಟ, ಆದರೆ ಅಜಯ್ ದೇವಗನ್ ನನ್ನನ್ನು ದ್ವೇಷ ಮಾಡಬಾರದು ಎಂದ ಸುದೀಪ್, ನಗುತ್ತಲೇ ಅಜಯ್ ದೇವಗನ್ ನನ್ನ ಫೇವರಿಟ್ ನಟ ಎಂದರು.
ಸೌತ್ ಸಿನಿಮಾಗಳು ಬಾಲಿವುಡ್‍ನ್ನು ಡಾಮಿನೇಟ್ ಮಾಡುತ್ತಿವೆ ಎಂಬ ಮಾತನ್ನು ನಿರಾಕರಿಸಿದ ಸುದೀಪ್ ನಾವೇನೂ ಕತ್ತಿ ಹಿಡಿದುಕೊಂಡು ಯುದ್ಧ ಮಾಡ್ತಿಲ್ಲ. ಅವರು ಮೊದಲು ಇಡೀ ಇಂಡಿಯಾ ಸಿನಿಮಾ ರಿಲೀಸ್ ಮಾಡ್ತಿದ್ರು. ನಾವು ಕಂಪ್ಲೇಂಟ್ ಮಾಡಲಿಲ್ಲ. ನಮ್ಮ ಪಾಡಿಗೆ ಸಿನಿಮಾ ಮಾಡ್ತಾ ಎಂಜಾಯ್ ಮಾಡ್ತಿದ್ದೆವು. ದಕ್ಷಿಣ ಭಾರತದ ಯಾರೊಬ್ಬರೂ ಬೌನ್ಸ್ ಬ್ಯಾಕ್ ಮಾಡುತ್ತೇವೆ ಎಂದು ಹೇಳಿಕೆ ಕೊಡಲಿಲ್ಲ. ಈಗ ಅವರು ನಮ್ಮ ಸಿನಿಮಾ ಎಂಜಾಯ್ ಮಾಡುತ್ತಿದ್ದಾರೆ. ಇಷ್ಟಕ್ಕೂ ಸ್ಟೇಟ್ ಮೆಂಟ್ ಕೊಡುತ್ತಿರುವುದು ಚಿತ್ರರಂಗದವರಲ್ಲ. ಹಿಂದಿ ಚಿತ್ರರಂಗ ಹೆದರಿಲ್ಲ. ದಕ್ಷಿಣ ಭಾರತ ಚಿತ್ರರಂಗ ಖುಷಿಯಿಂದ ಪಾರ್ಟಿ ಮಾಡ್ತಿಲ್ಲ. ಹೇಳಿಕೆ ಕೊಡ್ತಿರೋದು 3ನ# ವ್ಯಕ್ತಿಗಳು. ಅವರು ಅವರ ಪಾಡಿಗೆ, ನಾವು ನಮ್ಮ ಪಾಡಿಗೆ ಸಿನಿಮಾ ಮಾಡ್ತಿದ್ದೇವೆ ಎಂದಿದ್ದಾರೆ ಸುದೀಪ್.
ಕಳೆದ ವರ್ಷ ವಿಕ್ರಾಂತ್ ರೋಣ ಹಿಂದಿಯಲ್ಲೂ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಮುಂದಿನ ತಿಂಗಳು ಸುದೀಪ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕಬ್ಜ ಪ್ಯಾನ್ ಇಂಡಿಯಾ ರಿಲೀಸ್ ಆಗುತ್ತಿದೆ.