ಹಾಯ್ ಬೆಂಗಳೂರು.. ಒಂದಾನೊಂದು ಕಾಲದಲ್ಲಿ ಕರ್ನಾಟಕ ಪತ್ರಿಕೋದ್ಯಮದಲ್ಲಿ ಸಂಚಲನ ಮೂಡಿಸಿದ್ದ ಪತ್ರಿಕೆ. ಆ ಪತ್ರಿಕೆಯ ಸೃಷ್ಟಿಕರ್ತ ರವಿ ಬೆಳಗೆರೆ. ಪತ್ರಿಕೆಯ ಯಶಸ್ಸಿನ ಜೊತೆ ಜೊತೆಯಲ್ಲಿಯೇ ರವಿ ಬೆಳಗೆರೆ ವಿವಿಧ ರಂಗಗಳಿಗೂ ಕಾಲಿಟ್ಟರು. ಪತ್ರಕರ್ತನಾಗುವ ಮುನ್ನವೇ ಸಣ್ಣ ಕಥೆಗಳನ್ನು ಅದ್ಭುತವಾಗಿ ಬರೆಯುತ್ತಿದ್ದ ರವಿ, ಕಾದಂಬರಿಗಳಿಗೂ ಕೈ ಹಾಕಿದರು. ಚೆಂದದ ಬರವಣಿಗೆಯ ಜೊತೆ ಜೊತೆಗೆ ಅನುವಾದಗಳಲ್ಲೂ ಹೆಸರು ಮಾಡಿದರು. ಟಿವಿ ಲೋಕಕ್ಕೂ ಕಾಲಿಟ್ಟರು. ಸಿನಿಮಾಗಳಲ್ಲೂ ನಟಿಸಿದರು. ಶಾಲೆಯನ್ನೂ ಕಟ್ಟಿದ್ದರು. ಹೀಗೆ.. ಕಣ್ಣಿಗೆ ಕಂಡ.. ಇಷ್ಟವಾದ ಎಲ್ಲ ರಂಗಗಳಲ್ಲೂ ಕೈ ಆಡಿಸಿದವರು ರವಿ ಬೆಳಗೆರೆ.
ಹಾಯ್ ಬೆಂಗಳೂರು, ಓ ಮನಸೇ.. ರವಿ ಬೆಳಗೆರೆಯವರ ಎರಡು ಪ್ರಸಿದ್ಧ ಪತ್ರಿಕೆಗಳು. ಹೇಳಿ ಹೋಗು ಕಾರಣ, ಮಾಂಡೋವಿ, ದಿ ಕಂಪೆನಿ ಆಫ್ ವುಮೆನ್, ಪಾಪಿಗಳ ಲೋಕದಲ್ಲಿ, ಒಮರ್ಟಾ, ಸೀರಿಯಲ್ ಕಿಲ್ಲರ್ ರವೀಂದ್ರ ಪ್ರಸಾದ್, ಭೀಮಾ ತೀರದ ಹಂತಕರು, ನೀ ಹೀಂಗ ನೋಡಬ್ಯಾಡ ನನ್ನ, ಇಂದಿರೆಯ ಮಗ ಸಂಜಯ, ಗೋಲಿಬಾರ್, ನಕ್ಷತ್ರ ಜಾರಿದಾಗ, ಖಾಸ್‍ಬಾತ್, ಲವ್‍ಲವಿಕೆ, ಆಟಗಾತಿ, ಸರ್ಪ ಸಂಬಂಧ, ಹಿಮಾಲಯನ್ ಬ್ಲಂಡರ್, 17 ದಿನಗಳ ಕಾರ್ಗಿಲ್ ಯುದ್ಧ, ಟೈಂ ಪಾಸ್, ಪಾಪದ ಹೂವು ಪೂಲನ್, ಬಾಟಂ ಐಟಂ, ರಾಜ ರಹಸ್ಯ, ಗಾಂಧಿ ಹತ್ಯೆ ಮತ್ತು ಗೋಡ್ಸೆ, ಬಾಬಾ ಬೆಡ್‍ರೂಂ ಹತ್ಯಾಕಾಂಡ, ಹಂತಕಿ ಐ ಲವ್ ಯೂ, ರೇಷ್ಮೆ ರುಮಾಲು, ದಂಗೆಯ ದಿನಗಳು, ಡಿ ಕಂಪೆನಿ, ನೀನಾ ಪಾಕಿಸ್ತಾನ, ಅವನೊಬ್ಬನಿದ್ದ ಗೋಡ್ಸೆ, ಮೇಜರ್ ಸಂದೀಪ್ ಹತ್ಯೆ, ಕಾಮರಾಜ ಮಾರ್ಗ, ಹಿಮಾಗ್ನಿ.. ಹೀಗೆ ಬರೆದ ಕಾದಂಬರಿಗಳು, ಅನುವಾದಗಳ ಸಂಖ್ಯೆ ಅಗಾಧ.
ಈಟಿವಿಗೆ ಕ್ರೈಂ ಡೈರಿ ಮತ್ತು ಎಂದೂ ಮರೆಯದ ಹಾಡುಗಳ ನಿರೂಪಣೆ ಮೂಲಕವೂ ಜನಪ್ರಿಯರಾದ ರವಿ ಬೆಳಗೆರೆ, ಕೆಲವು ಸಿನಿಮಾಗಳಲ್ಲೂ ನಟಿಸಿದರು. ಗಂಡ ಹೆಂಡತಿ, ಮಾದೇಶ, ವಾರಸ್ದಾರ ಅವರು ನಟಿಸಿದ ಕೆಲ ಸಿನಿಮಾಗಳು. ಪ್ರಾರ್ಥನಾ, ರವಿ ಬೆಳಗೆರೆ ಇಷ್ಟ ಪಟ್ಟು ಕಟ್ಟಿದ ಶಾಲೆ.
ಇವೆಲ್ಲ ಸಾಧನೆ, ಕೀರ್ತಿಗಳೊಂದಿಗೆ ಪ್ರತಿದಿನವೂ ವಿವಾದಗಳನ್ನು ಅಂಟಿಕೊಂಡೇ ಬದುಕಿದ್ದ ರವಿ ಬೆಳಗೆರೆ ರಾತ್ರಿ 12.15ರ ಸುಮಾರಿಗೆ ನಿಧನರಾಗಿದ್ದಾರೆ. ರವಿ ಬೆಳಗೆರೆ ಅಂತ್ಯಕ್ರಿಯೆ ಬನಶಂಕರಿ ಚಿತಾಗಾರದಲ್ಲಿ ನೆರವೇರಲಿದೆ.