ನಾಗಮಂಡಲ ವಿಜಯಲಕ್ಷ್ಮಿ ಅವರಿಗೆ ಸಹಾಯ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕಿರುವ, ಅಸಭ್ಯ ವರ್ತನೆಯ ಆರೋಪ ಹೊತ್ತಿರುವ ನಟ ರವಿಪ್ರಕಾಶ್, ಈಗ ವಿಜಯಲಕ್ಷ್ಮೀ ವಿರುದ್ಧ ಫಿಲಂ ಚೇಂಬರ್ ಮೆಟ್ಟಿಲೇರಿದ್ದಾರೆ. `ವಿಜಯಲಕ್ಷ್ಮಿ
ಅವರ ಕಷ್ಟವನ್ನು ಮಾಧ್ಯಮಗಳ ಮೂಲಕ ತಿಳಿದು ಸಹಾಯ ಮಾಡಿದ್ದೆ. ಈಗ ಅವರು ನನ್ನ ವಿರುದ್ಧ ಅಸಭ್ಯ ವರ್ತನೆಯ ಆರೋಪ ಮಾಡಿದ್ದಾರೆ. ನನ್ನ ಹಣ ನನಗೆ ವಾಪಸ್ ಕೊಡಿಸಿ' ಎಂದು ಚೇಂಬರ್ ಅಧ್ಯಕ್ಷ ಚಿನ್ನೇಗೌಡರಿಗೆ ದೂರು ನೀಡಿದ್ದಾರೆ.
ಮಲ್ಯ ಆಸ್ಪತ್ರೆ, ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ನಟಿ ವಿಜಯಲಕ್ಷ್ಮಿ, ಈಗ ಅಪೋಲೋ ಆಸ್ಪತ್ರೆಯಲ್ಲಿದ್ದಾರೆ. ಆಸ್ಪತ್ರೆಯಲ್ಲಿದ್ಧಾಗ ನಟ ರವಿಪ್ರಕಾಶ್, ವಿಜಯಲಕ್ಷ್ಮಿ ಅವರಿಗೆ 1 ಲಕ್ಷ ರೂ. ಸಹಾಯ ಮಾಡಿದ್ದರು. ಅದಾದ ನಂತರ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದರು. ನಟ ರವಿಪ್ರಕಾಶ್ ಅಸಭ್ಯವಾಗಿ ವರ್ತಿಸುತ್ತಿದ್ಧಾರೆ ಎಂದು ವಿಜಯಲಕ್ಷ್ಮಿ ಪೊಲೀಸ್ ದೂರು ಕೊಟ್ಟಿದ್ದಾರೆ. ನಾನು ಹಾಗೆ ವರ್ತಿಸಿಲ್ಲ ಎಂದಿರುವ ರವಿಪ್ರಕಾಶ್, ವಿಜಯಲಕ್ಷ್ಮಿ ಅವರಿಗೆ ಕರೆ ಮಾಡಿರುವ, ಮೆಸೇಜ್ ಮಾಡಿರುವ ವಿವರಗಳನ್ನು, ಆಡಿಯೋ ದಾಖಲೆಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.