ಶಿಕ್ಷಣ ಅನ್ನೋದು ವ್ಯಾಪಾರ ಅಲ್ಲ.. ಅದೊಂದು ಸೇವೆ.. ಒಳ್ಳೆಯ ಕಾಲೇಜು ಅನ್ನಿಸ್ಕೊಳ್ಳೋದು ಅದರ ಫೀಸು, ಡೊನೇಷನ್ನಿಂದ ಅಲ್ಲ.. ಆ ಸಂಸ್ಥೆಯ ಸ್ಟೂಡೆಂಟ್ಸ್ಗಳಿಂದ..
ಇಂಥಾದ್ದೊಂದು ಚೆಂದದ ಡೈಲಾಗ್ನೊಂದಿಗೇ ಶುರುವಾಗುವ ಟ್ರೇಲರ್ ಯುವರತ್ನ. ಟ್ರೇಲರ್ನಲ್ಲಿ ಶಿಕ್ಷಣ ವ್ಯವಸ್ಥೆಯ ಬಗ್ಗೆ ಇರೋ ಸಂಭಾಷಣೆಗಳೇ ಚಿತ್ರದಲ್ಲಿ ಒಂದು ಗಟ್ಟಿ ಕಥೆ ಮತ್ತು ಮನಮುಟ್ಟುವ ಸಂದೇಶ ಇದೆ ಅನ್ನೋದನ್ನ ಸಾರಿಬಿಡುತ್ವೆ.
ವಿದ್ಯೆಯನ್ನು ವ್ಯಾಪಾರ ಮಾಡೋಕೆ ಹೊರಟರೆ, ಪ್ರತಿ ಅಕ್ಷರಕ್ಕೂ ಅದು ಬೆಲೆ ಕಟ್ಟುತ್ತೆ. ವಿದ್ಯೆ ಕಲಿತನಿಗಲ್ಲ.. 2 ನಿಮಿಷ 17 ಸೆಕೆಂಡ್ನ ಟ್ರೇಲರ್ನಲ್ಲಿ ಇಂತಹ ಡೈಲಾಗುಗಳ ಜೊತೆ ಅಭಿಮಾನಿಗಳನ್ನು ಖುಷಿ ಪಡಿಸೋ ಸಂಭಾಷಣೆಗಳೂ ಇವೆ.
ಓಂ ಫಿಲಂ ನೋಡಿದ್ದೀಯಾ ಅನ್ನೋ ವಿಲನ್ ಡೈಲಾಗ್ಗೆ ಅಪ್ಪು ಕೊಡೋ ಉತ್ತರ.. ನಾವೇ ಪ್ರೊಡ್ಯೂಸ್ ಮಾಡಿದ್ದು. ಶಿಳ್ಳೆ ಹಾಕೋಕೆ ಆ ಡೈಲಾಗ್ ಸಾಕು.
ಅಂದವಾದ ಹೀರೋಯಿನ್, ಟ್ರೇಲರಿನದ್ದಕ್ಕೂ ಕಾಣಿಸಿಕೊಳ್ಳೋ ಪ್ರಕಾಶ್ ರೈ, ಮೈ ನವಿರೇಳಿಸುವ ಸ್ಟಂಟ್ಸ್.. ಜೊತೆಗೆ ಯುವರತ್ನ ಚಿತ್ರದಲ್ಲಿ ಈಗ ಪೆಡಂಭೂತವಾಗಿ ಕಾಡುತ್ತಿರೋ ಡ್ರಗ್ಸ್ ಕಥೆಯೂ ಇರುವ ಸುಳಿವಿದೆ.
ಚಿತ್ರದ ಕಥೆ ಏನಿರಬಹುದು ಅನ್ನೋದರ ಸುಳಿವನ್ನು ಅಲ್ಲಿ ಕೊಟ್ಟಿದ್ದಾರೆ ಸಂತೋಷ್ ಆನಂದರಾಮ್. 30ಕ್ಕೂ ಹೆಚ್ಚು ಕಲಾವಿದರ ದಂಡನ್ನೇ ಇಟ್ಟುಕೊಂಡು ಒಂದೊಳ್ಳೆ ಮೆಸೇಜ್ ಇರುವ ಸಿನಿಮಾ ಮಾಡಿದ್ದೇವೆ ಎಂದು ಹೆಮ್ಮೆಯಿಂದ ಹೇಳುತ್ತಿದ್ದಾರೆ ವಿಜಯ್ ಕಿರಗಂದೂರು.
ಇಡೀ ಚಿತ್ರತಂಡ ಚಿತ್ರದಲ್ಲಿರೋ ಕಥೆ ಮತ್ತು ಚಿತ್ರ ಅಂತಿಮವಾಗಿ ಕೊಡಲಿರೋ ಸಂದೇಶದ ಬಗ್ಗೆಯೇ ಪ್ರೀತಿಯಿಂದ ಮಾತನಾಡುತ್ತಿದೆ. ಹಾಗಂತ.. ಅಭಿಮಾನಿಗಳಿಗೆ ಇಷ್ಟವಾಗದಂತೇನೂ ಇಲ್ಲ. ಈಗಾಗಲೇ ಟ್ರೇಲರ್ ನೋಡಿದವರ ಸಂಖ್ಯೆ ಮಿಲಿಯನ್ ಮಿಲಿಯನ್ ಮಿಲಿಯನ್ ದಾಟಿದೆ. ಏಪ್ರಿಲ್ 1ಕ್ಕೆ ಯುವರತ್ನ ಪ್ರೇಕ್ಷಕರಿಗೆ ಭರ್ಜರಿ ಔತಣ ಫಿಕ್ಸ್.