ಹಿರಿಯ ನಟಿ, ಮಂಡ್ಯದ ಸೊಸೆ ಸುಮಲತಾ ಅಂಬರೀಷ್, ಹುತಾತ್ಮ ಯೋಧ ಹೆಚ್.ಗುರು ಕುಟುಂಬಕ್ಕೆ ಅರ್ಧ ಎಕರೆ ಜಮೀನು ನೀಡಲು ಮುಂದಾಗಿದ್ದಾರೆ. ಮಲೇಷ್ಯಾದಲ್ಲಿ ಸಿನಿಮಾ ಕೆಲಸದಲ್ಲಿ ತೊಡಗಿಸಿಕೊಂಡಿರುವ ಸುಮಲತಾ, ಸದ್ಯಕ್ಕೆ ಮಂಡ್ಯಕ್ಕೆ ಬರುವ ಸ್ಥಿತಿಯಲ್ಲಿಲ್ಲ. ಇದರ ನಡುವೆ ಮಂಡ್ಯದ ಯೋಧ ಹುತಾತ್ಮನಾಗಿರುವುದು ಹಾಗೂ ಅವರ ಕುಟುಂಬಕ್ಕೆ ಸಂಸ್ಕಾರ ನಡೆಸಲೂ ಜಾಗ ಇಲ್ಲದೇ ಇರುವ ಸುದ್ದಿ ತಿಳಿದ ಸುಮಲತಾ, ದೊಡ್ಡರಸಿನಕೆರೆಯಲ್ಲಿರುವ ಅರ್ಧ ಎಕರೆ ಜಮೀನನ್ನು ಯೋಧನ ಕುಟುಂಬಕ್ಕೆ ನೀಡಲು ನಿರ್ಧರಿಸಿದರು.
ಈ ಕುರಿತು ಸರ್ಕಾರ ಹಾಗೂ ಕುಟುಂಬವನ್ನು ಸಂಪರ್ಕಿಸುವ ಹೊತ್ತಿಗೆ, ಸರ್ಕಾರವೇ ಯೋಧನ ಅಂತ್ಯ ಸಂಸ್ಕಾರಕ್ಕೆ 10 ಗುಂಟೆ ಜಮೀನು ನೀಡಿತು. ಇದು ಗೊತ್ತಾದ ನಂತರವೂ ಸುಮಲತಾ ನಿರ್ಧಾರ ಬದಲಾಗಲಿಲ್ಲ.
ಕೊಡಬೇಕು ಎಂದು ಮನಸ್ಸಿನಲ್ಲಿ ನಿರ್ಧರಿಸಿದ ಮೇಲೆ, ಅದು ಅವರ ಸ್ವತ್ತು. ಅವರಿಗೇ ಸಲ್ಲಬೇಕು ಎಂದಿರುವ ಸುಮಲತಾ, ಮಲೇಷ್ಯಾದಿಂದ ವಾಪಸ್ ಬಂದ ಮೇಲೆ ಹುತಾತ್ಮ ಯೋಧನ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ. ಅಷ್ಟೇ ಅಲ್ಲ, ಆ ಅರ್ಧ ಎಕರೆ ಜಮೀನನ್ನು ಗುರು ಕುಟುಂಬದವರಿಗೆ ರಿಜಿಸ್ಟರ್ ಮಾಡಿಸಲು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ಈ ಮಣ್ಣಿನ ಮಗಳಾಗಿ, ಮಂಡ್ಯದ ಸೊಸೆಯಾಗಿ, ಅಂಬರೀಷ್ ಪತ್ನಿಯಾಗಿ ಇದು ನನ್ನ ಕರ್ತವ್ಯ ಎಂದಿದ್ದಾರೆ ಸುಮಲತಾ.