ನಿರ್ಭಯಾ ಪ್ರಕರಣವನ್ನು ಆಧರಿಸಿಯೇ ಸಿದ್ಧವಾದ ಕಾದಂಬರಿ ರಂಗನಾಯಕಿ. ಆ ಕಾದಂಬರಿಯನ್ನೇ ಸಿನಿಮಾ ಆಗಿಸಿದ್ದಾರೆ ನಿರ್ದೇಶಕ ದಯಾಳ್. ಎಸ್.ವಿ.ನಾರಾಯಣ್ ನಿರ್ಮಾಪಕರಾಗಿರುವ ಚಿತ್ರದಲ್ಲಿರೋದು ನಿರ್ಭಯಾ ಪ್ರಕರಣದಂತೆಯೇ ನಡೆಯುವ ಒಂದು ಅತ್ಯಾಚಾರ ಹಾಗೂ ಅದಾದ ಮೇಲೆ ಬದುಕಿದ ಯುವತಿ, ನ್ಯಾಯಕ್ಕಾಗಿ ನಡೆಸುವ ಕಾನೂನು ಹೋರಾಟದ ಕಥೆ. ಚಿತ್ರದಲ್ಲಿ ಆದಿತಿ ಪ್ರಭುದೇವ ನಾಯಕಿ.
ಚಿತ್ರದ ಬಗ್ಗೆ ಈಗಾಗಲೇ ಮೆಚ್ಚುಗೆ ವ್ಯಕ್ತವಾಗಿದೆ. ಪನೋರಾಮಾಗೂ ಆಯ್ಕೆಯಾಗಿರುವ ಸಿನಿಮಾ ಇದು. ಆದರೆ, ಅತ್ಯಾಚಾರವನ್ನು ಭಯಂಕರವಾಗಿ ತೋರಿಸಿಲ್ಲ ಎನ್ನುತ್ತಿದ್ದರೂ, ಎಲ್ಲರಿಗೂ ಪದೇ ಪದೇ ಕಾಡುತ್ತಿರುವುದು ನಿರ್ಭಯಾ ಪ್ರಕರಣದ ಭೀಕರತೆ.
ಡಿಸೆಂಬರ್ 16, 2012ರಲ್ಲಿ ನಡೆದಿದ್ದ ಪ್ರಕರಣ ಅದು. ವೈದ್ಯ ವಿದ್ಯಾರ್ಥಿನಿ ಜ್ಯೋತಿ ಸಿಂಗ್ ಎಂಬ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಆಕೆಯ ಹೆಸರನ್ನು ನಿರ್ಭಯಾ ಎಂದೇ ಕರೆಯಲಾಯಿತಾದರೂ, ಕೆಲವು ವರ್ಷಗಳ ನಂತರ ಆಕೆಯ ತಾಯಿಯೇ ತಮ್ಮ ಮಗಳ ಹೆಸರನ್ನು ಹೇಳೋಕೆ ಭಯವಿಲ್ಲ ಎಂದಿದ್ದರು. ಇಷ್ಟಾದರೂ ಇಡೀ ಪ್ರಕರಣ ನೆನಪಾಗಿರುವುದು ನಿರ್ಭಯಾ ಕೇಸ್ ಎಂದೇ.
ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್ಸಿನಲ್ಲಿ 6 ಮಂದಿ ಕಿರಾತಕರು ನಿರ್ಭಯಾ ಮೇಲೆ ಅತ್ಯಾಚಾರ ಎಸಗಿದ್ದರು. ಅತ್ಯಂತ ದಾರುಣವಾಗಿ ಗುಪ್ತಾಂಗಕ್ಕೆ ಸರಳುಗಳನ್ನು ಚುಚ್ಚಿ, ಮೈಕೈಯನ್ನೆಲ್ಲ ಕಚ್ಚಿ ಭೀಕರಾಗಿ ರೇಪ್ ಮಾಡಿದ್ದರು. ನಂತರ ಆಕೆಯನ್ನು ರಸ್ತೆಯಲ್ಲಿಯೇ ಬೆತ್ತಲೆಯಾಗಿ ಎಸೆದು ಹೋಗಿದ್ದರು. ಸತತ 13 ದಿನ ಆಸ್ಪತ್ರೆಯಲ್ಲಿ ನರಳಿದ ಯುವತಿ, ಕೊನೆಗೆ ಪ್ರಾಣಬಿಟ್ಟರು. ಆಗ ಅದು ಇಡೀ ದೇಶದಲ್ಲೇ ಸಂಚಲನ ಮೂಡಿಸಿದ್ದ ಪ್ರಕರಣ.
ಆ ಕಥೆಯಲ್ಲಿ ಆಕೆಯೇನೋ ಸತ್ತಳು. ಅಕಸ್ಮಾತ್ ಬದುಕಿದ್ದರೆ.. ಕಾನೂನಿನಲ್ಲಿ ನ್ಯಾಯಕ್ಕಾಗಿ ಹೋರಾಡಲು ಮುಂದಾಗಿದ್ದರೆ.. ಆ ಕಲ್ಪನೆಯೇ ರಂಗನಾಯಕಿ.