ಕೆಜಿಎಫ್ ಬರುವುದಕ್ಕೂ ಮೊದಲೇ ಯಶ್ ಕರ್ನಾಟಕದಲ್ಲಿ ರಾಕಿಂಗ್ ಸ್ಟಾರ್ ಆಗಿದ್ದರು. ಸಂಜಯ್ ದತ್ ಆಗಲೀ, ರವೀನಾ ಟಂಡನ್ ಆಗಲೀ ಹೊಸದಾಗಿ ಉದಯಿಸಿದ ಸ್ಟಾರ್‍ಗಳಲ್ಲ. ಹೊಂಬಾಳೆ ಪ್ರೊಡಕ್ಷನ್ಸ್ ಸಂಸ್ಥೆ ಸ್ಟಾರ್ ನಿರ್ಮಾಣ ಸಂಸ್ಥೆಯೇನೋ ಹೌದು. ಹೊಂಬಾಳೆಯ ಬ್ಯಾಕ್ ಬೋನ್ ವಿಜಯ್ ಕಿರಗಂದೂರು ಅನುಮಾನವೇ ಇಲ್ಲದಂತೆ ಚಿತ್ರರಂಗದ ಶಕ್ತಿ ಎನ್ನಬಹುದು. ಆದರೆ, ಕೆಜಿಎಫ್ ಚಾಪ್ಟರ್ 2ನಿಂದ ಹುಟ್ಟಿಕೊಂಡ ಹೊಸ ಸ್ಟಾರ್ ಯಾರು ಗೊತ್ತೇ.. ಪ್ರಶಾಂತ್ ನೀಲ್.
ಒಂದು ಚಿತ್ರ ಹಿಟ್ ಆದಾಗ.. ಸೂಪರ್ ಹಿಟ್ ಎನ್ನಿಸಿಕೊಂಡಾಗ.. ಬ್ಲಾಕ್ ಬಸ್ಟರ್ ಹಿಟ್ ಲಿಸ್ಟಿಗೆ ಸೇರಿದಾಗ.. ಚರಿತ್ರೆಯನ್ನೇ ಸೃಷ್ಟಿಸಿದಾಗ.. ಸಾಮಾನ್ಯವಾಗಿ ಸ್ಟಾರ್ ಪಟ್ಟ ದಕ್ಕುವುದು ಹೀರೋಗೆ. ತೀರಾ ಇತ್ತೀಚಿನವರೆಗೆ ಆಗುತ್ತಿದ್ದುದೇ ಅದು. ತಪ್ಪೇನಿಲ್ಲ.
ಆದರೆ ಅದನ್ನು ಮೀರಿ ನಿರ್ದೇಶಕರ ಹೆಸರಿನಿಂದಲೇ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆದು ತರುವ ಶಕ್ತಿ ಕೆಲವೇ ಕೆಲವರಿಗೆ ಮಾತ್ರ ಇದೆ. ಕನ್ನಡದಲ್ಲಿ ಆ ಖ್ಯಾತಿ ಪಡೆದ ಮೊದಲ ನಿರ್ದೇಶಕ ಉಪೇಂದ್ರ. ನಂತರ ಯೋಗರಾಜ್ ಭಟ್, ಪ್ರೇಮ್, ಸೂರಿ ಮೊದಲಾದವರಿಗೆ ಆ ಪಟ್ಟ ಸಿಕ್ಕಿತಾದರೂ.. ಅದು ಆಗಾಗ್ಗೆ ಅಲುಗಾಡುತ್ತಲೇ ಇರುತ್ತೆ.
ಬೇರೆ ಭಾಷೆಗೆ ಹೋದರೆ ನಿರ್ದೇಶಕನ ಹೆಸರಲ್ಲೇ ಸಿನಿಮಾ ಮಾರ್ಕೆಟಿಂಗ್ ನಡೆಯೋದು ಹೊಸದೇನಲ್ಲ. ಸದ್ಯಕ್ಕೆ ಇಂಡಿಯಾದ ನಂ.1 ಸ್ಥಾನದಲ್ಲಿರೋದು ಒನ್ & ಓನ್ಲಿ ರಾಜಮೌಳಿ. ಅದು ಏಕಾಏಕಿ ಬಂದಿದ್ದಲ್ಲ. 12 ಚಿತ್ರಗಳನ್ನು ನಿರ್ದೇಶಿಸಿರೋ ರಾಜಮೌಳಿ, ಅಷ್ಟೂ ಚಿತ್ರಗಳನ್ನು ಬ್ಲಾಕ್ ಬಸ್ಟರ್ ಮಾಡಿದ ಮೇಲೆ ಬಂದಿರೋದು. ಉಳಿದಂತೆ ತೆಲುಗಿನಲ್ಲಿ ಸುಕುಮಾರ್, ತ್ರಿವಿಕ್ರಮ್ ಮೊದಲಾದವರಿಗೆ ಆ ಖ್ಯಾತಿ ಇದೆ. ತಮಿಳಿನಲ್ಲಿ ಮಣಿರತ್ನಂ, ಮುರುಗದಾಸ್, ಶಂಕರ್.. ಮೊದಲಾದವರಿದ್ದಾರೆ. ಸದ್ಯಕ್ಕೆ ಸ್ಟಾರ್ ನಿರ್ದೇಶಕರ ಕೊರತೆ ಕಾಡುತ್ತಿರೋದು ಹಿಂದಿಯಲ್ಲೇ. ಹಿಂದಿಯಲ್ಲಿ ಸ್ಟಾರ್ ಡೈರೆಕ್ಟರ್ ಪಟ್ಟ ಪಡೆದಿದ್ದವರ ಪಟ್ಟಗಳೆಲ್ಲ ಸೌತ್ ನಿರ್ದೇಶಕರ ಎದುರು ಅಲುಗಾಡುತ್ತಿವೆ.
ಹೀಗಿರುವಾಗಲೇ ಕನ್ನಡದ ನೆಲದಲ್ಲೊಬ್ಬ ಹೊಸ ಸ್ಟಾರ್ ಡೈರೆಕ್ಟರ್ ಆಗಿ ಉದ್ಭವವಾಗಿದ್ದಾರೆ ಪ್ರಶಾಂತ್ ನೀಲ್. ಏಕಾಏಕಿ ಆಗಿದ್ದೇನಲ್ಲ. ಮೊದಲ ಚಿತ್ರ ಉಗ್ರಂ, ಶ್ರೀಮುರಳಿಗೆ ಪುನರ್ಜನ್ಮ ನೀಡಿದ ಚಿತ್ರ ಎನ್ನೋಕೆ ಅಡ್ಡಿಯಿಲ್ಲ. ಜೊತೆಗೆ ಅದು ಹೊಸ ಶೈಲಿಯ ಕಥೆ ಹೇಳುವ ಮೂಲಕ ಟ್ರೆಂಡ್ ಬದಲಿಸಿತು. ನಂತರ ಪ್ರಶಾಂತ್ ನೀಲ್ ಕೆಜಿಎಫ್ ಮೂಲಕ ಚರಿತ್ರೆ ಬರೆದರು. ಈಗ ಚಾಪ್ಟರ್ 2 ಮೂಲಕ.. ಹಿಂದಿನ ಎರಡೂ ಹಿಟ್ ಫ್ಲೂಕ್ ಅಲ್ಲ. ಆಕಸ್ಮಿಕ ಅಲ್ಲ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ಹೊಸ ಸ್ಟಾರ್ ಉದಯಿಸಿದ್ದಾರೆ.
ಅಂದಹಾಗೆ ಪ್ರಶಾಂತ್ ನೀಲ್ ಈಗಾಗಲೇ ಬಾಹುಬಲಿ ಪ್ರಭಾಸ್ ಜೊತೆ ಸಲಾರ್ ಮಾಡುತ್ತಿದ್ದಾರೆ. ನಂತರದ ಸಿನಿಮಾ ಎನ್.ಟಿ.ಆರ್. ಜೊತೆ ಎನ್ನಲಾಗುತ್ತಿದೆ. ಪ್ರಶಾಂತ್ ನೀಲ್ ಮೂಲಕ ಕನ್ನಡದ ಇನ್ನಷ್ಟು ಸ್ಟಾರ್‍ಗಳು ಇಂಡಿಯಾ ಸ್ಟಾರ್‍ಗಳಾಗಲಿ. ಏಕೆಂದರೆ ಸ್ಟಾರ್`ಗಳನ್ನು ಹುಟ್ಟು ಹಾಕುವ ತಾಕತ್ತಿರೋದು ನಿರ್ದೇಶಕರಿಗೆ ಮಾತ್ರ.