ಕೆಜಿಎಫ್ 2 ಟ್ರೇಲರ್ ರಿಲೀಸ್ ಆಯ್ತು. ಅದು ಹಬ್ಬವೇ ಸರಿ. ಕನ್ನಡದ ಒಂದು ಸಿನಿಮಾ ಈ ಮಟ್ಟಿಗೆ ಸಂಚಲನ ಸೃಷ್ಟಿಸಬೇಕು ಅನ್ನೋ ಕನಸು ನನಸಾದ ಕ್ಷಣವದು. ಆ ಒಟ್ಟಾರೆ ಸಂಚಲನವನ್ನು ಕಣ್ಣಲ್ಲಿ ನೋಡೋಕೂ ಹಬ್ಬ. ಕಿವಿಯಲ್ಲಿ ಕೇಳೋಕೆ ಆನಂದ. ಆ ಸಂಭ್ರಮದ ಹೈಲೈಟ್ಸ್ ಇಲ್ಲಿವೆ.
ಸ್ಟಾರ್ ಆ್ಯಂಕರಿಂಗ್ :
ಕೆಜಿಎಫ್ ಚಾಪ್ಟರ್ 2 ಕನ್ನಡದ ಸಿನಿಮಾ. ಕಾರ್ಯಕ್ರಮದ ನಿರೂಪಣೆ ಮಾಡಿದ್ದು ಬಾಲಿವುಡ್‍ನ ಸ್ಟಾರ್ ಡೈರೆಕ್ಟರ್, ಪ್ರೊಡ್ಯೂಸರ್ ಕರಣ್ ಜೋಹರ್. ಅನುಶ್ರೀ ಕನ್ನಡ ನಿರೂಪಕಿಯಾಗಿದ್ದರು.
ಭಾಷೆಗೊಬ್ಬ ರಾಯಭಾರಿ :
ಕನ್ನಡಕ್ಕೆ ಶಿವಣ್ಣ, ತೆಲುಗಿಗೆ ರಾಮ್ ಚರಣ್ ತೇಜ, ತಮಿಳಿಗೆ ಸೂರ್ಯ, ಮಲಯಾಳಂಗೆ ಪೃಥ್ವಿರಾಜ್ ಹಾಗೂ ಹಿಂದಿ ಟ್ರೇಲರ್ ಬಿಡುಗಡೆಗೆ ಇದ್ದವರು ಫರ್ಹಾನ್ ಅಖ್ತರ್.
ಮೀಡಿಯಾದವರ ಕಣ್ಣೆಲ್ಲ..
ದೇಶದ ಬಹುತೇಕ ಪ್ರಮುಖ ಪತ್ರಿಕೆ, ಟಿವಿ ಚಾನೆಲ್ಲುಗಳು ಅಲ್ಲಿದ್ದವು. ಅವುಗಳ ಸಂಖ್ಯೆಯೇ 200ಕ್ಕೂ ಹೆಚ್ಚು.
ಪುನೀತ್ ನೆನಪು..
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರತಿಯೊಬ್ಬರೂ ನೆನಪಿಸಿಕೊಂಡಿದ್ದು ಪುನೀತ್ ರಾಜಕುಮಾರ್ ಅವರನ್ನು. ನಾನು ಪುನೀತ್ ಸರ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವರು ನಮ್ಮ ಜೊತೆ ಸದಾ ಇರುತ್ತಾರೆ ಎಂದವರು ಯಶ್. ಸಂಜಯ್ ದತ್ ಟ್ರೇಲರ್ ಬಿಡುಗಡೆಗೂ ಮುನ್ನ ಅಶ್ವಿನಿ ಪುನೀತ್ ಮನೆಗೆ ಹೋಗಿ ಬಂದರು. ಈ ಚಿತ್ರ ಅಪ್ಪುಗೆ ಅರ್ಪಣೆ ಎಂದರು ಪ್ರಶಾಂತ್ ನೀಲ್. ಶಿವಣ್ಣ ಭಾವುಕರಾದರು. ಯಶ್ ನನ್ನ ತಮ್ಮನಿದ್ದಂತೆ ಎಂದರು. ನೀವು ಹಾಗೆಲ್ಲ ಮಾಡಬೇಡಿ ಶಿವಣ್ಣ. ನೀವು ಅತ್ತರೆ ನೋಡೋಕಾಗಲ್ಲ ಎಂದರು ಯಶ್.
ಕನ್ನಡ ಸಿನಿಮಾ ಎಲ್ಲರ ಹೆಮ್ಮೆ.. :
ಕನ್ನಡದ ಚಿತ್ರವೊಂದನ್ನು ವಿತರಣೆಗೆ ಪಡೆದಿದ್ದೇ ಭಾಗ್ಯ ಎಂಬಂತೆ ಮಾತನಾಡಿದ್ದು ವಿತರಕರು. ವೇದಿಕೆಯಲ್ಲಿದ್ದ ತಮಿಳು ವಿತರಕ ಎಸ್.ಆರ್. ಪ್ರಭು, ಮಲಯಾಳಂನ ಪೃಥ್ವಿರಾಜ್ ಸುಕುಮಾರನ್, ಹಿಂದಿಯ ಫರಾನ್ ಅಖ್ತರ್.. ಎಲ್ಲರೂ ಈ ಚಿತ್ರದ ಡಿಸ್ಟ್ರಿಬ್ಯೂಷನ್ ನಮ್ಮದು ಎಂದು ಹೆಮ್ಮೆಯಿಂದ ಹೇಳಿಕೊಂಡರು.
ವೇದಿಕೆಯಲ್ಲಿದ್ದವರೆಲ್ಲ ಸ್ಟಾರ್ಸ್..:
ಟ್ರೇಲರ್ ರಿಲೀಸ್ ಮಾಡುವಾಗ ಇಡೀ ವೇದಿಕೆಯಲ್ಲಿದ್ದವರು ಸ್ಟಾರ್ಸ್. ಆ ಪಟ್ಟಿಯೇ ಇಷ್ಟುದ್ದ. ಅಷ್ಟೊಂದು ಸ್ಟಾರ್‍ಗಳು ಒಂದೆಡೆ ಸೇರಿ ಮಾತನಾಡಿದ್ದು ಕೆಜಿಎಫ್ ಚಾಪ್ಟರ್ 2 ಟ್ರೇಲರ್ ರಿಲೀಸ್ ಬಗ್ಗೆ. ಸಿನಿಮಾ ಸೃಷ್ಟಿಸುವ ಹೊಸ ಹೊಸ ದಾಖಲೆಗಳ ಬಗ್ಗೆ..
ಆರ್.ಆರ್.ಆರ್. ಮೀರಿಸಿದ ಶರವೇಗದ ಹಿಟ್ಸ್:
ಆರ್.ಆರ್.ಆರ್.. ಇತ್ತೀಚೆಗಷ್ಟೇ ರಿಲೀಸ್ ಆಗಿರೋ ಪ್ಯಾನ್ ಇಂಡಿಯಾ ಸಿನಿಮಾ. ಸೂಪರ್ ಹಿಟ್. ಆದರೆ ಆ ಚಿತ್ರವನ್ನೂ ಮೀರಿಸಿದ್ದು ಕೆಜಿಎಫ್. ಆರ್.ಆರ್.ಆರ್. ಟ್ರೇಲರ್ ಬಂದಾಗ ಒಂದು ಮಿಲಿಯನ್ ವೀಕ್ಷಣೆ ಪಡೆಯೋಕೆ 45 ನಿಮಿಷ ಪಡೆದುಕೊಂಡಿತ್ತು. ಅದನ್ನೂ ಮೀರಿಸಿದ ಕೆಜಿಎಫ್ ಟ್ರೇಲರ್ ಕೇವಲ 30 ನಿಮಿಷದಲ್ಲಿ ಒಂದು ಮಿಲಿಯನ್ ವೀಕ್ಷಣೆ ಪಡೆಯಿತು.
ರವೀನಾ ಟಂಡನ್ ಮಕ್ಕಳಿಗೂ ಯಶ್ ಇಷ್ಟ..
ಇದನ್ನು ವೇದಿಕೆಯಲ್ಲೇ ಹೆಮ್ಮೆಯಿಂದ ಹೇಳಿಕೊಂಡವರು ರವೀನಾ ಟಂಡನ್. ಕನ್ನಡದ ಒಬ್ಬ ನಟರ ಬಗ್ಗೆ ಹಿಂದಿ ಚಿತ್ರರಂಗದವರು ಓಪನ್ ವೇದಿಕೆಯಲ್ಲಿ ಮೆಚ್ಚಿ ಮಾತನಾಡಿದ್ದರೆ ಡಾ.ರಾಜ್ ನಂತರ ಯಶ್ ಬಗ್ಗೆಯೇ ಇರಬೇಕು.
ದೇವರಿಗೆ ಪೂಜೆ.. ಈಡುಗಾಯಿ..
ರಾಜ್ಯದ ಹಲವೆಡೆ ಯಶ್ ಫ್ಯಾನ್ಸ್ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈಡುಗಾಯಿ ಒಡೆದರು. ದೀಢ ನಮಸ್ಕಾರ ಹಾಕಿದರು. ಸಿಹಿ ಹಂಚಿದರು. ಒಂದು ಸಿನಿಮಾ ಟ್ರೇಲರ್ ಈ ಮಟ್ಟಿಗೆ ಸಂಚಲನ ಸೃಷ್ಟಿಸಿದ್ದು ಇದೇ ಮೊದಲು.
ನಿರ್ಮಾಪಕ, ನಿರ್ದೇಶಕರೇ ಹೀರೋ :
ಒಂದು ಚಿತ್ರದ ಬಗ್ಗೆ 8 ವರ್ಷ ಕನಸು ಕಂಡ ಪ್ರಶಾಂತ್ ನೀಲ್, ಆ ಅದ್ಧೂರಿತನ ಕೊಟ್ಟ ನಿರ್ಮಾಪಕ ವಿಜಯ್ ಕಿರಗಂದೂರು ಅವರು ರಿಯಲ್ ಹೀರೋಗಳು. ಈ ಮಾತನ್ನು ಯಶ್ ಸೇರಿದಂತೆ ವೇದಿಕೆಯಲ್ಲಿದ್ದವರೆಲ್ಲರೂ ಹೇಳಿದರು. ಒಂದು ಚಿತ್ರಕ್ಕೆ ಡೈರೆಕ್ಟರ್ ಮತ್ತು ಪ್ರೊಡ್ಯೂಸರ್ ಎಷ್ಟು ಮುಖ್ಯ ಅನ್ನೋದನ್ನು ಅದು ಪದೇ ಪದೇ ಸಾರಿ ಸಾರಿ ಹೇಳುತ್ತಿತ್ತು.